ADVERTISEMENT

ಕಿಡ್ನ್ಯಾಪ್‌ ಕಥೆಯಿಂದ ಕಿರುತೆರೆ ಯಾನದವರೆಗೂ...

ಸುಬ್ರಹ್ಮಣ್ಯ ಎಚ್.ಎಂ
Published 31 ಜನವರಿ 2019, 19:30 IST
Last Updated 31 ಜನವರಿ 2019, 19:30 IST
ರಶ್ಮಿ ಜಯರಾಮ್
ರಶ್ಮಿ ಜಯರಾಮ್   

‘ನನ್ನೂರು ಮೈಸೂರೇ ಚೆಂದ’. ಅಲ್ಲಿನ ಸೆಂಟ್‌ ಮೇರಿಸ್‌ ಸ್ಕೂಲ್ ಸನಿಹದಲ್ಲೇ ಚಾಮುಂಡಿ ಬೆಟ್ಟ. ನೋಡಲು ಮನ ತಣಿಸುವಷ್ಟು ಪ್ರವಾಸಿ ತಾಣಗಳು. ಸುಂದರ ‍ಪರಿಸರ, ಟ್ರಾಫಿಕ್ ಕಿರಿಕಿರಿ ಇಲ್ಲದ ಊರು ಯಾರಿಗೆ ತಾನೇ ಇಷ್ಟ ಆಗೋದಿಲ್ಲ? ಎಂದು ಮಾತಿಗಿಳಿದರು ಕಿರುತೆರೆ ನಟಿ ರಶ್ಮಿ ಜಯರಾಮ್.

ಸ್ನೇಹಿತೆ ಜತೆಗೂಡಿ ಸೋದರನ ನೋಟ್‌ ಪುಸ್ತಕಗಳನ್ನು ಪೇಪರ್ ಅಂಗಡಿಗೆ ಮಾರಿ ಚುರುಮರಿ ತಿಂದ ಪ್ರಸಂಗ, ಪಿಯುಸಿ ಸೈನ್ಸ್‌ ವಿಭಾಗದಲ್ಲಿ ಓದುತ್ತಿದ್ದಾಗ ಕೆಮಿಸ್ಟ್ರಿ ಕಿರುಪರೀಕ್ಷೆಯಲ್ಲಿ ಬರೀ ಪ್ರಶ್ನೆಗಳನ್ನಷ್ಟೇ ಬರೆದು ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗಿದ್ದೆ. ಪೋಷಕರಿಗೆ ಕಾಲೇಜಿನಿಂದ ಬುಲಾವ್ ಹೋಯಿತು. ಇದರಿಂದ ತಪ್ಪಿಕೊಳ್ಳಲು ಒಂದು ಉಪಾಯ ಹೂಡಿದೆ. ಗೆಳತಿ ಜತೆ ಸ್ಕೂಟಿ ಏರಿ ಗುಂಡ್ಲುಪೇಟೆವರೆಗೂ ಡ್ರೈವ್‌ ಮಾಡಿಕೊಂಡು ಹೋಗಿ ಕಿಡ್ನ್ಯಾಪ್‌ ಕಥೆ ಕಟ್ಟಿದೆ. ‌‌‌‌‌‌ನಂತರ ಇದೆಲ್ಲಾ ಗಿಮಿಕ್‌ ಎಂದು ಅಪ್ಪ– ಅಮ್ಮನಿಗೆ ತಿಳಿಯಿತು. ಹೀಗೆ; ತರಲೆ ಕೆಲಸಗಳಿಗೆ ಲೆಕ್ಕವೇ ಇಲ್ಲ ಎಂದು ವಯೋಸಹಜ ತುಂಟಾಟಗಳನ್ನು ಸ್ವಯಂ ಬಣ್ಣಿಸಿಕೊಂಡರು ರಶ್ಮಿ.

ಮೊದಲಿನಿಂದಲೂ ಕ್ರೀಡೆ ಅವರ ಆಸಕ್ತಿಯ ಕ್ಷೇತ್ರ. ಕ್ರೀಡಾ ಕೋಟಾದಲ್ಲೇ ಎಂಜಿನಿಯರಿಂಗ್‌ ಸೀಟು ಪಡೆದು, ಕಂಪ್ಯೂಟರ್‌ ಸೈನ್ಸ್‌ ಆಯ್ಕೆ ಮಾಡಿಕೊಂಡರು. ಆಟೋಟದಲ್ಲಿ ಎತ್ತಿದ ಕೈ. ಆದರೆ, ಓದಿನಲ್ಲಿ ಮಾತ್ರ ಸಾಧಾರಣ ವಿದ್ಯಾರ್ಥಿನಿ. ಗಣಿತ ಅವರಿಗೆ ಕಬ್ಬಿಣದ ಕಡಲೆ. ಹೇಗೋ ತಿಣುಕಾಡಿ ಪಾಸಾದರು. ಸೋಷಿಯಲ್ ಮೀಡಿಯಾದ ಗೀಳಿಗೆ ಅಂಟಿಕೊಂಡಿದ್ದಾಗ ಅಚಾನಕ್‌ ಆಗಿ ಧಾರಾವಾಹಿಯೊಂದರ ಆಡಿಷನ್‌ಗೆ ಆಫರ್‌ ಬಂದಿತು. ಸಿಕ್ಕ ಅವಕಾಶ ಕೈ ಹಿಡಿಯಿತು ಎಂದು ಹಿನ್ನೋಟ ಪರಿಚಯಿಸಿದರು.

ADVERTISEMENT

ನಾನೀಗ ರಶ್ಮಿ ಜಯರಾಮ್‌ ಅಲ್ಲ; ಉದಯ ಟಿವಿ ‘ದೇವಯಾನಿ’. ಇದೇ ಹೆಸರಿನಿಂದ ಆಪ್ತರ ಬಳಗ ಕಿಚಾಯಿಸಿದಾಗ ಖುಷಿ ಆಗುತ್ತದೆ. ನಟನೆಗೂ, ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಕಿರುತೆರೆ ಯಾನದಲ್ಲಿ ‘ಗಾಡ್‌ಫಾದರ್’ ಇಲ್ಲ. ಜೀ ಟಿವಿಯಲ್ಲಿ ಪ್ರಸಾರವಾದ ‘ಜೊತೆ ಜೊತೆಯಲಿ’ ಅಭಿನಯದ ಮೊದಲ ಧಾರಾವಾಹಿ. ನಂತರ ಉದಯ ಟಿವಿಯಲ್ಲಿ ‘ಮದು ಮಗಳು’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾದ ‘ನೀ ಹಚ್ಚಿದ ಕುಂಕುಮ’ ಹೆಸರು ತಂದು ಕೊಟ್ಟ ಧಾರಾವಾಹಿಗಳು ಎಂದು ಆರು ವರ್ಷಗಳ ನಟನಾ ಪಯಣ ಮೆಲುಕು ಹಾಕಿದರು.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅವರ ಅಭಿನಯದ ‘ದೇವಯಾನಿ’ ಹೊಸ ಸಸ್ಪೆನ್ಸ್, ಥ್ರಿಲ್ಲರ್ ಕತೆ ಹೊಂದಿದೆ. ಮಾಮೂಲು ಅತ್ತೆ – ಸೊಸೆ ಕಾಟದ ಕಿರುಕುಳದ ಕಥೆಯಿಂದ ಹೊರತಾಗಿರುವ ಈ ಧಾರಾವಾಹಿ ಪ್ರತಿ ಕಂತಿನಲ್ಲೂ ಕುತೂಹಲದ ತಿರುವು ನೀಡುತ್ತಾ ಮನರಂಜಿಸುತ್ತಿದೆ. ಕನ್ನಡದ ‘ದೇವಯಾನಿ’ ಸನ್‌ ಟಿವಿಯಲ್ಲಿ ‘ಸೆಲ್ವ ಮಗಳ್‌’ ಆಗಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಸ್ಟಾರ್‌ ವಿಜಯ್‌ ಟಿವಿಯಲ್ಲಿ ‘ನಾನ್‌ ಇರುವನ್‌ ನಮಕು ಇರುವರ್’ ಧಾರಾವಾಹಿಯಲ್ಲಿ ಅವರದ್ದು ಮುಖ್ಯ ಪಾತ್ರ. ಇದರ ಮುಖೇನ ನೆರೆಯ ತಮಿಳುನಾಡಿನಲ್ಲಿ ಅವರು ಜನಪ್ರಿಯ ಕಿರುತೆರೆ ನಟಿ.

ಧಾರಾವಾಹಿಯೊಂದರಲ್ಲಿ ಎರಡು, ಮೂರು ವರ್ಷ ಒಟ್ಟಿಗೆ ಕಲಾವಿದರೊಂದಿಗೆ ಅಭಿನಯಿಸುವುದರಿಂದ ಕುಟುಂಬದ ಸದಸ್ಯರಂತೆ ಬಾಂಧವ್ಯ ಬೆಳೆಯುತ್ತದೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಯುವ ಕನಸು ಸದ್ಯಕ್ಕಿಲ್ಲ.ಕಿರುತೆರೆಯಲ್ಲೇ ಕಂಫರ್ಟ್‌ ಇದೆ ಎನ್ನುವುದು ಅವರ ಮನದ ಇಂಗಿತ.

ಇನ್ನು ಊಟ, ತಿಂಡಿ ವಿಷಯದಲ್ಲಿ ಕಟ್ಟುನಿಟ್ಟಾಗಿ ಡಯಟ್‌ ಪಾಲಿಸುವುದಿಲ್ಲ. ಮೀನು, ಏಡಿಸಾರು ಚಪ್ಪರಿಸಿ ತಿನ್ನುವ ನಾನ್‌ ವೆಜ್ ಪ್ರಿಯೆ ಅವರು. ಬಿಡುವಾದಾಗ ಪಾಕ ಪ್ರವೀಣೆಯೂ ಹೌದು ! ಮನೆಮಂದಿ, ಸ್ನೇಹಿತರ ಎದುರು ಆಗಾಗ ಕೋಪಿಷ್ಠೆ, ಜಗಳಗಂಟಿ ಅವತಾರ ತಾಳುವುದು ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.