ಡ್ರಾಮಾ ಜೂನಿಯರ್ಸ್ ಸೀಸನ್ 3 ಗ್ರ್ಯಾಂಡ್ ಫಿನಾಲೆಯು ಇದೇ 24ರಂದು ಸಂಜೆ 6ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಹಾಗೂ ನಟಿ ಉಮಾಶ್ರೀ ಅವರ ಹುಟ್ಟೂರು ತಿಪಟೂರಿನಲ್ಲಿ ಫಿನಾಲೆ ನಡೆಯಿತು. ಅಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಅಂತಿಮ ಸುತ್ತಿನ ಸ್ಪರ್ಧೆಗಾಗಿ ನೂರಾರು ತಂತ್ರಜ್ಞರು ಬೃಹತ್ ವೇದಿಕೆಯಲ್ಲಿ ರಾತ್ರಿ–ಹಗಲು ಕೆಲಸ ಮಾಡಿದ್ದರು. ಗ್ರೂಪ್ ಆ್ಯಕ್ಟ್, ಜುಗಲ್‌ಬಂದಿ, ಸೋಲೊ ರೌಡ್ ಹೀಗೆ ಮೂರು ಹಂತದಲ್ಲಿ ಸ್ಫರ್ಧೆ ನಡೆಯಿತು.
ಸಿನಿಮಾ ವರ್ಸಸ್ ಸೀರಿಯಲ್, ದಕ್ಷಯಜ್ಞ, ಕಾಳಿದಾಸ– ಭೋಜರಾಜ, ನಕ್ಷತ್ರಿಕ, ಕಿಸಾ ಗೌತಮಿ, ಕಿಂಗ್ ಲಿಯರ್, ಒಡಲಾಳದ ಸಾಕವ್ವ ಹೀಗೆ ಹಲವು ಸ್ಕಿಟ್‌ಗಳ ಮೂಲಕ ಜೂನಿಯರ್‌ಗಳು ಜನರನ್ನು ರಂಜನೆಯ ಕಡಲಲ್ಲಿ ತೇಲಿಸಿದರು.
ಇನ್ನೊಂದೆಡೆ ವಾಹಿನಿಯ ದೈನಂದಿನ ಧಾರಾವಾಹಿಗಳಾದ ‘ಮಹಾದೇವಿ’, ‘ಕಮಲಿ’, ‘ಪಾರು’ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನಾಯಕ, ನಾಯಕಿಯರಾದ ಕಮಲಿ, ರಿಷಿ, ಪಾರು, ಆದಿತ್ಯ, ಹಿರಣ್ಮಯಿ ಹಾಗೂ ಸೂರ್ಯ ವೇದಿಕೆಗೆ ಆಗಮಿಸಿ ಮೋಹಕ ನೃತ್ಯ ಪ್ರದರ್ಶಿಸಿದರು. ಜೊತೆಗೆ, ಸರಿಗಮಪ ಸೀಸನ್ 15ರ ವಿಜೇತರಾದ ಕೀರ್ತನ್ ಹೊಳ್ಳ ಹಾಗೂ ಹನುಮಂತ ಅವರ ಗಾನಸುಧೆ ಫಿನಾಲೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಡಾನ್ಸ್ ಮೂಲಕ ಎಂಟ್ರಿ ಕೊಟ್ಟ ನಿರೂಪಕ ಮಾಸ್ಟರ್ ಆನಂದ್ ಜನರಿಗೆ ರಂಜನೆಯ ಕಚಗುಳಿ ಇಟ್ಟರು. ತೀರ್ಪುಗಾರರಾದ ವಿಜಯ್ ರಾಘವೇಂದ್ರ, ಲಕ್ಷ್ಮಿ ಹಾಗೂ ‘ಮುಖ್ಯಮಂತ್ರಿ’ ಚಂದ್ರು ವೇದಿಕೆಗೆ ಆಗಮಿಸಿ ಮಕ್ಕಳಿಗೆ ಶುಭ ಕೋರಿದರು. ಸೀಸನ್ 3 ವಿನ್ನರ್ಸ್‌ನ ಪ್ರಾಯೋಜಕರಾದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆ ಮುಖ್ಯಸ್ಥ ಡಾ.ಸಿ.ಜೆ ರಾಯ್ ಅವರು ‘ಡ್ರಾಮಾ ಜೂನಿಯರ್ಸ್ ಸೀಸನ್ 3 ವಿನ್ನರ್ ಪಟ್ಟ ಯಾರ ಪಾಲಿಗೆ?’ ಎಂದು ಘೋಷಿಸುವ ಮೂಲಕ ಫಿನಾಲೆಯ ಮಹಾವೇದಿಕೆಗೆ ತೆರೆ ಎಳೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.