ADVERTISEMENT

ಸಿನಿ ಪ್ರೇಮಿಗಳಿಗೆ ಹೊಸ ವಾಹಿನಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 19:31 IST
Last Updated 27 ಸೆಪ್ಟೆಂಬರ್ 2018, 19:31 IST
ಪರಮೇಶ್ವರ ಗುಂಡ್ಕಲ್‌
ಪರಮೇಶ್ವರ ಗುಂಡ್ಕಲ್‌   

ಮನರಂಜನೆಗಾಗಿಯೇ ಕಿರುತೆರೆಯಲ್ಲಿ ರಿಯಾಲಿಟಿ ಶೋ, ಕಾಮಿಡಿ, ಧಾರಾವಾಹಿ... ಹೀಗೆ ಸಾಕಷ್ಟು ಆಯ್ಕೆಗಳಿವೆ. ಈ ನಡುವೆಯೂ ಪ್ರತಿದಿನ ಟೀವಿಯಲ್ಲಿ ಸಿನಿಮಾ ನೋಡಲು ಬಯಸುವ ಒಂದು ವರ್ಗವಿದೆ. ಇಂತಹವರಿಗಾಗಿ ಭರಪೂರ ಸಿನಿಔತಣ ನೀಡಲು ಕರ್ಲಸ್‌ ಕನ್ನಡ ಸಿದ್ಧವಾಗಿದೆ.

‘ಕಲರ್ಸ್‌ ಕನ್ನಡ’ ಮತ್ತು ‘ಕಲರ್ಸ್‌ ಸೂಪರ್‌’ ಚಾನೆಲ್‌ಗಳನ್ನು ಆರಂಭಿಸಿರುವ ವಯಾಕಾಮ್‌ 18 ಸಂಸ್ಥೆಕನ್ನಡದ ಸಿನಿ ಪ್ರೇಕ್ಷಕರಿಗಾಗಿ ಸಿನಿಮಾ ವಾಹಿನಿಯೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಪ್ರಾದೇಶಿಕ ಮನೋರಂಜನ ಕ್ಷೇತ್ರದಲ್ಲಿ ಭದ್ರವಾದ ನೆಲೆಯೂರಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

‘ಮನೆ ಮನೆಯ ಚಿತ್ರಮಂದಿರ’ ಎಂಬ ಘೋಷ ವಾಕ್ಯದೊಂದಿಗೆ ಸೆ.24ರಿಂದ ಕಾರ್ಯಾರಂಭ ಮಾಡಿರುವ ಈ ವಾಹಿನಿಮನೆಯಲ್ಲಿಯೇ ಹೊಚ್ಚ ಹೊಸ ಸಿನಿಮಾ ನೋಡುವ ಅವಕಾಶ ಒದಗಿಸಿದೆ.

ADVERTISEMENT

ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾ ಚಾನಲ್‌ಗಳಿವೆ. ಇವುಗಳ ನಡುವೆ ಹೊಸತನದ ಮೂಲಕ ಪ್ರಸ್ತುತಪಡಿಸಿಕೊಂಡರೆ ಮಾತ್ರವೇ ಉಳಿವು ಎಂಬ ಸತ್ಯವನ್ನು ವಾಹಿನಿ ಅರಿತಿದೆ. ಈ ಕಾರಣಕ್ಕೆ ಸಿನಿಮಾದ ಜೊತೆಗೆಸಿನಿಪ್ರೇಕ್ಷಕರು ಬಯಸುವ ಸಾಕಷ್ಟು ಮನರಂಜನೆಯ ಆಯ್ಕೆಗಳನ್ನು ವಾಹಿನಿ ನೀಡಿದೆ.

ಸಾಮಾನ್ಯ ಮಂದಿಗೆ ಸಿನಿಮಾ ತಾರೆಯರ ಜೀವನಶೈಲಿಯ ಬಗ್ಗೆ ಸಾಕಷ್ಟು ಕುತೂಹಲಗಳಿರುತ್ತವೆ. ಜೊತೆಗೆ ಸಿನಿಮಾ ತಯಾರಿ ಹೇಗೆ ನಡೆಯುತ್ತದೆ. ಎಲ್ಲೆಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಎಡಿಟಿಂಗ್‌, ಕೊರಿಯೋಗ್ರಫಿ, ಸಂಕಲನ... ಹೀಗೆ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿರುತ್ತದೆ.

ಇದಕ್ಕೆ ಉತ್ತರವನ್ನುತಾರೆಯರ ಜೊತೆಗೆ ಮಾತುಕತೆ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳೇ ನೀಡಲಿದ್ದಾರೆ.ತೆರೆಯ ಹಿಂದೆ ನಡೆಯುವ ಹಲವು ಆಸಕ್ತಿಕರ ವಿಷಯಗಳು, ತಾರೆಯರ ಮನೆಯಲ್ಲಿನ ನೋಟಗಳು, ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ವಿಮರ್ಶೆ, ಸಂದರ್ಶನ, ಹರಟೆ... ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ವಾಹಿನಿ ರಂಜಿಸಲಿದೆ.

ಈ ವಾಹಿನಿಯ ಬತ್ತಳಿಕೆಯಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಸಿನಿಮಾಗಳಿವೆ. ಯಾವುದೇ ಒಂದು ವರ್ಗಕ್ಕಷ್ಟೇ ಈ ವಾಹಿನಿ ಸೀಮಿತವಾಗಿಲ್ಲ. ಎಲ್ಲಾ ವರ್ಗದವರನ್ನು ಮೆಚ್ಚಿಸುವ ಹವಣಿಕೆಯಲ್ಲಿದೆ. ಹೀಗಾಗಿ ಹೊಸ ಸಿನಿಮಾಗಳ ಜೊತೆಗೆ ‘ಗಂಧದ ಗುಡಿ’ ಮತ್ತು ‘ಸಂಪತ್ತಿಗೆ ಸವಾಲ್‍’ನಂತಹ ಕ್ಲಾಸಿಕ್ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಕಲರ್ಸ್ ಕನ್ನಡ ಸಿನಿಮಾ ವೀಕ್ಷಕರ ಮನದಾಳದಲ್ಲಿ ದೀರ್ಘಕಾಲ ಉಳಿಯುವ ಪ್ರಯತ್ನ ನಡೆಸುತ್ತಿದೆ.

ಪ್ರಶಸ್ತಿ ವಿಜೇತ ಚಿತ್ರಗಳು, ಆ್ಯಕ್ಷನ್‌, ರೊಮ್ಯಾನ್ಸ್‌, ಹಾಸ್ಯ, ಪೌರಾಣಿಕ,ಭಕ್ತಿ ಪ್ರಧಾನ ಹೀಗೆ ಎಲ್ಲ ಪ್ರಕಾರದ ಸಿನಿಮಾಗಳು ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕನ್ನಡ ಚಿತ್ರೋದ್ಯಮ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ಈ ಹಂತದಲ್ಲಿ ಸಿನಿಮಾಕ್ಕಾಗಿಯೇ ವಾಹಿನಿಯೊಂದರ ಅಗತ್ಯವಿದೆ.ವೀಕ್ಷಕರಿಗೆ ಉತ್ತಮ ಕಾರ್ಯಕ್ರಮ ನೀಡುತ್ತಾ ಮಾರುಕಟ್ಟೆಯಲ್ಲಿ ಮುಂಚೂಣಿಯ ಸ್ಥಾನ ಕಾಯ್ದು ಕೊಳ್ಳುವಲ್ಲಿ ಈ ವಾಹಿನಿ ನೆರವಾಗಲಿದೆ ಎಂಬುದು ಕಲರ್ಸ್‌ ಕನ್ನಡ ವಾಹಿನಿ ಮುಖ್ಯಸ್ಥರ ಅಂಬೋಣ.

ವಾಹಿನಿ ಪ್ರಾರಂಭವಾದ ಮೊದಲ ವಾರ ಪ್ರತಿ ದಿನ ಸಂಜೆ 7 ಗಂಟೆಗೆ ಹೊಸ ಚಲನಚಿತ್ರಗಳ ಪ್ರಸಾರ ಆಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಗುಳ್ಟು’ ಸಿನಿಮಾ ಇಂದು ಪ್ರಸಾರವಾಲಿದೆ.ಪ್ರತಿದಿನ ಪ್ರಸಾರವಾಗುವ ಸಿನಿಮಾಗಳ ಮಾಹಿತಿಗೆಈ ನಂಬರ್‌ಗೆ ಮಿಸ್‌ ಕಾಲ್‌ ನೀಡಿ 7434844440.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.