ADVERTISEMENT

ಸುಬ್ಬಿಯ ಸಂಸಾರದ ಕತೆ

ರೇಷ್ಮಾ ಶೆಟ್ಟಿ
Published 29 ನವೆಂಬರ್ 2018, 19:30 IST
Last Updated 29 ನವೆಂಬರ್ 2018, 19:30 IST
ದೀಪಾ ಭಾಸ್ಕರ್ 
ದೀಪಾ ಭಾಸ್ಕರ್    

ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು, ಕನ್ನಡ ಸಿನಿರಂಗದ ಅದೆಷ್ಟೋ ತಾರೆಯರಿಗೆ ದನಿಯಾದವರು. ದುಂಡು ಕೆನ್ನೆಯ, ಮುದ್ದು ಮುಖದ ಈ ಸುಂದರಿ ‘ಸುಬ್ಬಲಕ್ಷ್ಮಿ ಸಂಸಾರ’ದ ಸುಬ್ಬಿಯಾಗಿ ಕನ್ನಡಿಗರ ಮನಗೆದ್ದವರು. ಅವರೇ ದೀಪಾ ಭಾಸ್ಕರ್‌.

ಬೆಂಗಳೂರಿನ ಇವರು ನಟನೆಗೆ ಇಳಿದಿದ್ದು ಆಕಸ್ಮಿಕವಾಗಿ. ನಟನೆಯ ಪರಿಭಾಷೆ ತಿಳಿಯದ ಇವರು ಎ.ಎಸ್‌. ಮೂರ್ತಿ ಅವರ ‘ಬಿಂಬ’ ಎನ್ನುವ ಮಕ್ಕಳ ಶಿಬಿರದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಟೈಗರ್ ಪ್ರಭಾಕರ್ ಅವರ ‘ಮಹೇಂದ್ರ ವರ್ಮ’ ಎಂಬ ಸಿನಿಮಾಕ್ಕಾಗಿ ಬಾಲ ನಟರನ್ನು ಹುಡುಕುತ್ತಿದ್ದರು. ಹೀಗೆ ಶಿಬಿರದ ಮೂಲಕವೇ ಆಡಿಷನ್‌ಗೆ ತೆರಳಿದ ಈ ಬಾಲೆ ಸಿನಿಮಾಕ್ಕೆ ಆಯ್ಕೆಯಾಗಿದ್ದರು.

ಈ ರೀತಿ ಆರಂಭವಾದ ಅವರ ನಟನೆಯ ಪಯಣ ಇಂದಿಗೂ ಮುಂದುವರಿದಿದೆ. ಸಾಕಷ್ಟು ಸಿನಿಮಾ, ಧಾರವಾಹಿಗಳಿಗೆ ಬಣ್ಣ ಹಚ್ಚಿದ ಇವರು ‘ಪುಟ್ಟಿ’ ಎಂಬ ಮಕ್ಕಳ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ‘ಮೈ ಆಟೋಗ್ರಾಫ್’, ‘ಶಾಂತಿ ನಿವಾಸ’ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಇವರು ‘ಪಾಪ ಪಾಂಡು’, ‘ಹೋಗ್ಲಿ ಬಿಡಿ ಸಾರ್’, ಹಿಂದಿಯ ‘ಚೋಟಿ ಮಾ’, ‘ಮದರಂಗಿ’, ‘ಸಾಕ್ಷಿ’ ಮುಂತಾದ ಧಾರಾವಾಹಿಗಳಲ್ಲಿ ತಮ್ಮ ನಟನೆಯ ಛಾಪನ್ನು ತೋರಿದ್ದಾರೆ.

ADVERTISEMENT

‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯ ನಂತರ ನನಗೆ ಹೆಚ್ಚು ಹೆಸರು ತಂದು ಕೊಟ್ಟಿದ್ದು ‘ಸುಬ್ಬಲಕ್ಷ್ಮಿ ಸಂಸಾರ’ ಎಂದು ಖುಷಿಯಿಂದ ಹೇಳುವ ಇವರು, ‘ನೋಡ್ತಾ ಇರಿ, ಈ ಧಾರಾವಾಹಿ ಮುಗಿದು ವರ್ಷಗಳು ಕಳೆದ ಮೇಲೂ ಜನ ನನ್ನನ್ನು ಸುಬ್ಬಲಕ್ಷ್ಮಿ ಪಾತ್ರದಿಂದಲೇ ಗುರುತಿಸುತ್ತಾರೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ.

ಸುಬ್ಬಲಕ್ಷ್ಮಿ ಪಾತ್ರದ ಬಗ್ಗೆ ವಿವರಿಸುತ್ತಾ ‘ಸುಬ್ಬಲಕ್ಷ್ಮಿ ಹಳ್ಳಿಯಿಂದ ಮದುವೆಯಾಗಿ ಪಟ್ಟಣಕ್ಕೆ ಬರುವ ಮಹಿಳೆ. ಗಂಡ, ಸಂಸಾರ, ಮನೆಯನ್ನೇ ದೇವರು, ದೇವಸ್ಥಾನ ಎಂದು ಆಕೆ ಪೂಜಿಸುತ್ತಿರುತ್ತಾಳೆ. ಅಂತಹ ಮುಗ್ಧ ಹೆಣ್ಣುಮಗಳ ಜೀವನದಲ್ಲಿ ಗಂಡನಾದವನು ‘ನೀನು ನನಗೆ ಬೇಡ, ನನಗೆ ವಯಸ್ಸಿನಲ್ಲಿ ಚಿಕ್ಕವಳಾದ, ಪಟ್ಟಣದ ಹೆಣ್ಣುಮಗಳು ಬೇಕು’ ಎಂದು ಧಿಕ್ಕರಿಸಿ ಹೋದಾಗ ಈಕೆಗೆ ದಿಕ್ಕೇ ತೋಚದಂತಾಗುತ್ತದೆ. ಅಂಥವಳು ಕಷ್ಟಪಟ್ಟು ಮೇಲೆ ಬಂದು ತನ್ನ ಮಗನನ್ನು ನೋಡಿಕೊಂಡು ಸಂಪಾದನೆಯ ದಾರಿ ಕಂಡುಕೊಳ್ಳುತ್ತಾಳೆ. ಸಾಕಷ್ಟು ಹಣ ಗಳಿಸಿದರೂ ಅಹಂಕಾರ ಪಡದೇ ‘ನಾನು ಗಂಡನನ್ನು ಮರಳಿ ಪಡೆಯುತ್ತೇನೆ’ ಎನ್ನುವ ಹಟದೊಂದಿಗೆ ಬದುಕುತ್ತಿರುತ್ತಾಳೆ. ಅಂತಹ ದಿಟ್ಟ ಹೆಣ್ಣುಮಗಳ ಪಾತ್ರ ತಮ್ಮದು ಎನ್ನುತ್ತಾರೆ.

ಕೆಲ ಸಮಯ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು ದೀಪಾ. ಮದುವೆಯಾಗಿ ಐದಾರು ತಿಂಗಳು ಕಳೆದ ನಂತರ ನಿರ್ದೇಶಕಿ ಸ್ವಪ್ನಕೃಷ್ಣ, ದೀಪಾ ಅವರಿಗೆ ಕರೆ ಮಾಡಿದ್ದರು. ‘ಒಂದು ಪಾತ್ರವಿದೆ, ನೀವು ನಟಿಸಬೇಕು. ಬನ್ನಿ ಮಾತನಾಡೋಣ’ ಎಂದರು. ಅಲ್ಲಿ ಲುಕ್ ಟೆಸ್ಟ್‌, ಡೈಲಾಗ್ ಹೇಳಿದ ಮೇಲೆ ಪಾತ್ರಕ್ಕೆ ಆಯ್ಕೆ ಮಾಡಿದರು. ಕತೆ ಕೇಳಿದಾಗ ಕೊಂಚ ಹೆದರಿದ್ದ ಇವರು ನಂತರ ಪಾತ್ರವೇ ತಾವಾಗಿ ನಟಿಸಿ, ಯಶಸ್ಸು ಗಳಿಸಿದ್ದು ಈಗ ಇತಿಹಾಸ.

‘ಮೊದಲು ಕತೆ ಕೇಳಿದಾಗ ನಾನು ಕೊಂಚ ಗೊಂದಲಕ್ಕೆ ಒಳಗಾಗಿದ್ದೆ. ಕಾರಣ ಸುಬ್ಬಲಕ್ಷ್ಮಿಯಲ್ಲಿ ನನ್ನದು ಟೈಟಲ್ ರೋಲ್ ಆಗಿತ್ತು. ಬೆಂಗಳೂರಿನ ಹುಡುಗಿಯಾದ ನನಗೆ ಅಷ್ಟು ಮುಗ್ಧೆಯಾದ ಹಳ್ಳಿ ಹುಡುಗಿ ಪಾತ್ರ ಮಾಡಲು ಸಾಧ್ಯವಾಗುತ್ತದಾ ಎಂದು ಅನ್ನಿಸಿತ್ತು. ಪಾತ್ರ ಮಾಡುವುದು ಸುಲಭ, ಆದರೆ ಹಳ್ಳಿ ಹುಡುಗಿಯ ಪಾತ್ರವೆಂದ ಕೂಡಲೇ ಹಳ್ಳಿಗರ ಮನಸ್ಸಿಗೆ ಮೊದಲು ಹಿಡಿಸಬೇಕು. ಭಾಷೆ, ವರ್ತನೆ ಎಲ್ಲವೂ ಹಳ್ಳಿಗರಂತೆ ಇರಬೇಕು. ಇದು ನನ್ನಿಂದ ಸಾಧ್ಯವೇ ಅನ್ನಿಸಿತ್ತು. ಇಂದು ನನ್ನನ್ನು ಸುಬ್ಬಲಕ್ಷ್ಮಿಯನ್ನಾಗಿಸಿದ್ದು ನಮ್ಮ ಇಡೀ ತಂಡ. ನಮ್ಮ ತಂಡ ಕಟ್ಟಿದ ಈ ಕನಸಿನ ಪಾತ್ರಕ್ಕೆ ನಾನು ಜೀವ ತುಂಬಿದ್ದೇನಷ್ಟೆ’ ಎಂದು ವಿನಮ್ರರಾಗಿ ನುಡಿಯುತ್ತಾರೆ.

‘ಧಾರಾವಾಹಿಯ ಕತೆಯಲ್ಲಿ ರೋಚಕ ತಿರುವುಗಳು ಬರುತ್ತವೆ ಎಂಬ ಮಾತಿದೆ, ವೀಕ್ಷಕರು ಯಾವ ಹೊಸ ಬದಲಾವಣೆ ನಿರೀಕ್ಷಿಸಬಹುದು’ ಎಂದು ಸುಬ್ಬಿ ಬಳಿ ಕೇಳಿದರೆ‘ಅಯ್ಯೋ, ಅದನ್ನೆಲ್ಲಾ ನಾನು ಹೇಳಿ, ನೀವು ಬರೆದುಬಿಟ್ಟರೆ ಸೀರಿಯಲ್ ಮಜಾ ಹೊರಟು ಹೋಗುತ್ತದೆ. ಆದರೆ ತಿರುವುಗಳಿರುವುದು ಸತ್ಯ. ನೋಡೋಣ ಮುಂದೆ. ನೋಡ್ತಾ ಇದ್ರೆ ಮಜಾ ಇದೆ, ನೋಡಿ’ ಎಂದು ಜಾಣ ಉತ್ತರ ನೀಡುತ್ತಾರೆ.

‘ನಾನು ಇಂದು ನಟನಾ ಕ್ಷೇತ್ರದಲ್ಲಿ ಇರಲು ಮುಖ್ಯ ಕಾರಣ ನನ್ನ ಮನೆಯವರು. ಅವರ ಸಹಕಾರದಿಂದಲೇ ನಾನು ಇಷ್ಟು ಮುಂದುವರಿಯಲು ಸಾಧ್ಯವಾಗಿದ್ದು. ಮನೆಯವರಿಲ್ಲದೆ ನಾನು ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಸುಬ್ಬಲಕ್ಷ್ಮಿಯಾಗಿ ಇಷ್ಟು ಯಶಸ್ಸು ಗಳಿಸಲು ಮುಖ್ಯ ಕಾರಣ ನಮ್ಮ ಅತ್ತೆ. ಅವರಿಂದಲೇ ನಾನು ಈ ಧಾರಾವಾಹಿಯಲ್ಲಿ ನಟಿಸಲು ಸಾಧ್ಯವಾಗಿದ್ದು’ ಎನ್ನುತ್ತಾ ಮನೆಯವರ ಸಹಕಾರವನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ ಈ ಸುಬ್ಬಿ.

ಬ್ರ್ಯಾಂಡ್‌ಗೆ ಅನುಗುಣವಾಗಿ...

ಜೀ ಕನ್ನಡ ವಾಹಿನಿ ಇತ್ತೀಚಿಗೆ ತನ್ನ ಲಾಂಛನದಲ್ಲಿ ತುಸು ಬದಲಾವಣೆ ಮಾಡಿದೆ. ‘ಬಯಸಿದ ಬಾಗಿಲು ತೆಗೆಯೋಣ’ ಎನ್ನುವ ಅಡಿಶೀರ್ಷಿಕೆಯನ್ನು ತನ್ನ ಲಾಂಛನಕ್ಕೆ ನೀಡಿದೆ. ಬದಲಾಗಿರುವ ಲಾಂಛನಕ್ಕೆ ತಕ್ಕಂತೆ ಧಾರಾವಾಹಿಯಲ್ಲಿ ಕೂಡ ರೋಚಕ ತಿರುವುಗಳು ಎದುರಾಗಲಿವೆ ಎನ್ನುತ್ತಿವೆ ಜೀ ಕನ್ನಡ ವಾಹಿನಿಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.