ADVERTISEMENT

ಪೌರಾಣಿಕ ಪಾತ್ರಕ್ಕೆ ಜೀವ ತುಂಬುವಾಸೆ

ರಾಘವೇಂದೆ ಕೆ.
Published 25 ಏಪ್ರಿಲ್ 2019, 12:12 IST
Last Updated 25 ಏಪ್ರಿಲ್ 2019, 12:12 IST
ಚೈತ್ರಾ
ಚೈತ್ರಾ   

ಚೈತ್ರಾ ರಾವ್‌ ಝೀ ಕನ್ನಡದ ‘ಜೋಡಿ ಹಕ್ಕಿ’ಯ ಜಾನಕಿ ‘ಸುಧಾ’ ಜತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಜತೆಗಿನ ಸಂದರ್ಶನ ಇಲ್ಲಿದೆ.

ಚೈತ್ರಾ ಬಿಂಬ ಎಂದು ಕರೆಯುತ್ತಾರಲ್ಲ ಏಕೆ?

ರಂಗಭೂಮಿಯನ್ನು ಬಾಲ್ಯದಲ್ಲಿಯೇ ಪ್ರವೇಶ ಮಾಡಿದೆ. ನನ್ನ ಐದನೆಯ ವಯಸ್ಸಿನಲ್ಲೇ ರಂಗದ ಮೇಲೆ ಬಂದೆ. ಬೆಂಗಳೂರಿನ ವಿಜಯನಗರದ ಬಿಂಬ ತಂಡದಲ್ಲಿ ದೀರ್ಘಕಾಲ ರಂಗಶಿಕ್ಷಣ– ನಾಟಕ ಆಡಿದ್ದರಿಂದ ಹಾಗೆ ಕೆಲವರು ಕರೆಯುತ್ತಾರೆ. ಈಗಲೂ ನನಗೆ ರಂಗಭೂಮಿಯ ಆಕರ್ಷಣೆ ಇದೆ.

ADVERTISEMENT

* ರಂಗಭೂಮಿ, ಬೆಳ್ಳಿತೆರೆ, ಕಿರುತೆರೆ ಇದರಲ್ಲಿ ನಿಮ್ಮ ಆಯ್ಕೆ?

ರಂಗಭೂಮಿ ತವರು ಮನೆ ಇದ್ದಂತೆ. ಈಗಲೂ ಅದೇ ಇಷ್ಟ. ಅದರಿಂದಲೇ ತೆರೆಗೆ ಬರಲು ಸಾಧ್ಯವಾಗಿದ್ದು. ರಂಗ ನಟಿಯಾದ ನನ್ನನ್ನು ಟಿ.ಎಸ್. ನಾಗಾಭರಣ ‘ಮನಸೇ ಓ ಮನಸೆ’ ಧಾರಾವಾಹಿಯಲ್ಲಿ ಅಭಿನಯಿಸಲು ಕಾರಣರಾದರು. ತರುವಾಯ 2004ರಲ್ಲಿ ‘ಕೇರ್‌ ಆಫ್ ಫುಟ್ ಪಾತ್’ನಲ್ಲಿ ನಟಿಸಿದೆ. ಅದರ ಬೆನ್ನಿಗೆ ಮತ್ತೊಂದು ‘ಒಂದು ಪ್ರೀತಿಯ ಕಥೆ’ಯಲ್ಲಿ ನಡಿಸಿದೆ. ಮಾಡಿದೆ. ‘ಮಾಸ್ತಿ’ಟೆಲಿ ಫಿಲ್ಮ್‌ನಲ್ಲೂ ನಟಿಸಿದೆ. ‘ಕುಣಿಯೋಣು ಬಾರಾ’ ರಿಯಾಲಿಟಿ ಷೋದಲ್ಲಿ ಸ್ಪರ್ಧಿಯಾದೆ. ಮೂಲತಃ ನಾನು ಶಾಸ್ತ್ರೀಯ ನೃತ್ಯ ಪಟು. ಸುಮಾರು ಹದಿನೈದು ವರ್ಷ ಭರತನಾಟ್ಯ ಕಲಿತಿದ್ದೇನೆ. ನನ್ನಕ್ಕ ನೃತ್ಯ ತರಬೇತಿ ನೀಡುತ್ತಾಳೆ. ಬಿಡುವು ಸಿಕ್ಕಾಗೆಲ್ಲ ಈಗಲೂ ಕಾಲಿಗೆ ಗೆಜ್ಜೆ ಕಟ್ಟುತ್ತೇನೆ.

ಜಾನಕಿ ಪಾತ್ರದ ಬಗ್ಗೆ ಹೇಳುವುದಾದರೆ?

ಜಾನಕು ಪಾತ್ರ ತುಂಬಾ ಸೌಮ್ಯ ಸ್ವಭಾವದ ಗುಣ ಇರುವ ಯುವತಿಯ ಪಾತ್ರ. ಅವಳಿಗೆ ಮಕ್ಕಳಿಗೆ ಪಾಠ ಮಾಡುವುದು ಅತ್ಯಂತ ಖುಷಿ ಕೊಡುವ ಸಂಗತಿ. ಆಕೆಯ ತಂದೆ ಬ್ಯಾಂಕ್‌ನ ವ್ಯವಸ್ಥಾಪಕರು. ಮೂರು ವರ್ಷಕ್ಕೊಮ್ಮೆ ವರ್ಗಾವಣೆಯಾಗುತ್ತಾರೆ. ಈಗ ಅವರಿಗೆ ಮಂಡ್ಯಕ್ಕೆ ವರ್ಗಾವಣೆಯಾಗಿದೆ. ಅಲ್ಲಿ ಬಂದ ಮೇಲೆ ಪೈಲ್ವಾನ್‌ ಒಬ್ಬ ಇಷ್ಟ ಆಗಿದ್ದಾನೆ. ಅವನ ಮೇಲೆ ಪ್ರೀತಿ ಹುಟ್ಟಿದೆ. ಅವನಿಗೆ ಓದು ಬರಹ ಗೊತ್ತಿಲ್ಲ. ಅವನಿಗೆ ಅಕ್ಷರಾಭ್ಯಾಸ ಮಾಡಿಸುತ್ತಾಳೆ. ಆ ಪ್ರೀತಿಗೆ ಹುಡುಗನ ಅತ್ತಿಗೆ ಅಡ್ಡಿಯಾಗುತ್ತಿದ್ದಾರೆ. ಅವಳಿಗೆ ಹೇಗಾದರೂ ಮಾಡಿ ಮದುವೆಯನ್ನು ಮುರಿಯಬೇಕು ಎನ್ನುವ ಬಯಕೆ.

* ನಿಮ್ಮ ವೃತ್ತಿ, ಹವ್ಯಾಸದ ಬಗ್ಗೆ ನಿಮ್ಮ ಪೋಷಕರು ಏನು ಹೇಳುತ್ತಾರೆ?

ನನ್ನ ಇಷ್ಟದಂತೆ ಇರಲು ನಮ್ಮ ಪೋಷಕರು ಬಿಟ್ಟಿದ್ದಾರೆ. ಬಿಕಾಂವರೆಗೂ ಓದಿದ್ದೇನೆ. ಹಾಗೆ ನೋಡಿದರೆ ನನಗೆ ಕಚೇರಿಯಲ್ಲಿ ಎಂಟು– ಒಂಬತ್ತು ಗಂಟೆ ಕುಳಿತು ಕೆಲಸ ಮಾಡುವುದು ಇಷ್ಟ ಆಗುವುದಿಲ್ಲ. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎನ್ನುವ ಬಯಕೆ ನನಗಿದೆ. ಅದೆಲ್ಲಾ ಯಾವುದೇ ಚೌಕಟ್ಟಿನೊಳಗೆ ಬಂಧಿಯಾಗಿರುವುದು ಚೆನ್ನಾಗಿರಲ್ಲ. ನನಗೆ ನಟಿಸುವುದು ಕುಣಿಯುವುದು ಹವ್ಯಾಸವೂ, ಹೌದು ವೃತ್ತಿಯೂ ಹೌದು.

* ಸಮಾಜಮುಖಿ ಅಂದರೆ ಯಾವ ರೀತಿಯಲ್ಲಿ ತೊಡಗುತ್ತೀರಿ?

ತುಂಬಾ ಚಿಕ್ಕದಾಗಿಯೇ ಮಾಡಿದರೂ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು. ನನ್ನ ಕಾರ್ಯವನ್ನು ನೋಡಿ ಸ್ವಯಂ ಪ್ರೇರಣೆಯಿಂದ ಅವರೂ ಮಾಡುವಂತೆ ಆಗಲಿ ಎನ್ನುವ ಆಶಯ ನನ್ನಲ್ಲಿದೆ. ಅದು ಬದಲಾವಣೆಗೆ ಮಾರ್ಗವಾಗುತ್ತದೆ. ಸದ್ಯ ನನ್ನ ಮುಂದಿರುವ ಕನಸೆಂದರೆ ಸಾರ್ವಜನಿಕ ವಾಹನಗಳ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಜಾಗೃತಿ ಮೂಡಿಸುವುದು. ಅದರಿಂದ ಟ್ರಾಫಿಕ್‌ ಸಮಸ್ಯೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಬಹುದು. ಬೆಂಗಳೂರು ‘ಸಿಲಿಕಾನ್‌ ಸಿಟಿ’ ಎಂದು ಕರೆಸಿಕೊಳ್ಳುವುದಕ್ಕಿಂತ ಹಿಂದಿನ ‘ಗಾರ್ಡನ್‌ ಸಿಟಿ’ ಎಂದೆನಿಸಿಕೊಂಡರೆ ಚೆಂದ. ಅದಕ್ಕೆ ಹಸಿರು ಹುಟ್ಟಿಸುವ ಬಗ್ಗೆಯೂ ಯೋಚನೆ ಇದೆ.

* ಎಂತಹ ಪಾತ್ರ ಇಷ್ಟ?

ಒಬ್ಬ ನಟಿಯಾಗಿ ಎಂತಹ ಪಾತ್ರವನ್ನಾದರೂ ಮಾಡಲು ಸಿದ್ಧ. ಎಲ್ಲಾ ಪಾತ್ರವನ್ನೂ ನಿರ್ವಹಿಸಬೇಕು ಎನ್ನುವ ಆಶೆಯೂ ಇದೆ. ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಪೌರಾಣಿಕ ಪಾತ್ರಗಳು ಹೆಚ್ಚು ಇಷ್ಟ. ಏಕೆಂದರೆ, ಸೀತೆ, ಮಂಥರೆ, ಸಾವಿತ್ರಿ... ಹೀಗೆ ಯಾವುದೇ ಪಾತ್ರವನ್ನು ತೆಗೆದುಕೊಂಡರೂ ನಮ್ಮ ತಲೆಯಲ್ಲಿ ಹೀಗೆ ಎನ್ನುವ ಚಿತ್ರ ಇರುತ್ತದೆ. ಅದನ್ನು ನಟಿಸುವಾಗ ಅದನ್ನು ಮುರಿದು ಹೊಸಗುಣ, ಸ್ವರೂಪದ ಪಾತ್ರಕ್ಕೆ ಜೀವ ತುಂಬುತ್ತೇವೆ. ಇಂತಹ ಸೃಜನಶೀಲ ಕ್ರಿಯೆ ಸಂತೋಷ ಕೊಡುತ್ತದೆ. ಮತ್ತೆ ಹೇಳುವುದಾದರೆ ನೆಗೆಟಿವ್‌ ಪಾತ್ರಗಳು ಕೂಡ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.