ADVERTISEMENT

ನೀಲಿ ರೆಕ್ಕೆಗಳ ಅಮೆರಿಕ ಹಕ್ಕಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 15:09 IST
Last Updated 30 ಜುಲೈ 2019, 15:09 IST
ನೀಲಿ ಹಕ್ಕಿ
ನೀಲಿ ಹಕ್ಕಿ   

ದೊಡ್ಡ ಗಾತ್ರದ ಹಕ್ಕಿಗಳಿಗೆ ಹೋಲಿಸಿದರೆ ಪುಟ್ಟ ಗಾತ್ರದ ಹಕ್ಕಿಗಳು ಹೆಚ್ಚು ಮುದ್ದಾಗಿರುತ್ತವೆ. ಇಂತಹ ಹಕ್ಕಿಗಳು ಕಾಣಿಸಿಗುವುದು ಕೂಡ ಅಪರೂಪ. ಇಂದಿನ ಪಕ್ಷಿ ಪ್ರಪಂಚದಲ್ಲಿ ಗುಬ್ಬಚ್ಚಿ ಗಾತ್ರದ ನೀಲಿ ರೆಕ್ಕೆಗಳ ಹಕ್ಕಿಯ (Eastern Bluebird) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಸಿಯಾಲಿಯಾ ಸಿಯಾಲಿಸ್‌ (Sialia sialis). ಇದು ಟುರ್ಡಿಡೇ (Turdidae) ಕುಟುಂಬಕ್ಕೆ ಸೇರಿದೆ. ಉತ್ತರ ಅಮೆರಿಕ ಖಂಡದ ಪೂರ್ವಭಾಗ ಈ ಹಕ್ಕಿಗಳ ಮೂಲ ನೆಲೆಯಾಗಿರುವುದರಿಂದ ಇದಕ್ಕೆ ಈರ್ಸ್ಟನ್ ಬ್ಲೂ ಬರ್ಡ್ ಎನ್ನುತ್ತಾರೆ.

ಹೇಗಿರುತ್ತದೆ?

ನೀಲಿ, ಕಂದು, ಬಿಳಿ ಮತ್ತು ಕಪ್ಪು ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ತಲೆ, ಕತ್ತು, ಬೆನ್ನು ಮತ್ತು ರೆಕ್ಕೆಗಳು ಆಕರ್ಷಕ ನೀಲಿ ಬಣ್ಣದಲ್ಲಿ ಕಂಗೊಳಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ರೆಕ್ಕೆಗಳ ತುದಿ ಕಪ್ಪು ಬಣ್ಣದಲ್ಲಿರುತ್ತದೆ. ಎದೆ ಮತ್ತು ಸೊಂಟದ ಭಾಗ ಕಂದು ಬಣ್ಣದಲ್ಲಿದ್ದರೆ, ಉದರ ಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕೊಕ್ಕು ಕಪ್ಪು ಬಣ್ಣದಲ್ಲಿದ್ದು, ದೃಢವಾಗಿರುತ್ತದೆ. ಕಣ್ಣುಗಳು ಕಪ್ಪು ಬಣ್ಣದಲ್ಲಿರುತ್ತವೆ. ನೀಳವಾದ ಕಾಲುಗಳು ಕಪ್ಪು ಬಣ್ಣದಲ್ಲಿರುತ್ತವೆ. ಮೂರು ಬೆರಳುಗಳಿದ್ದು, ಉಗುರುಗಳು ನೀಳವಾಗಿರುತ್ತವೆ. ಹೆಣ್ಣು ಹಕ್ಕಿಯ ಪುಕ್ಕ ಗಂಡು ಹಕ್ಕಿಯಷ್ಟು ಆಕರ್ಷಕವಾಗಿ ಇರುವುದಿಲ್ಲ.

ADVERTISEMENT

ಎಲ್ಲಿದೆ?

ಉತ್ತರ ಅಮೆರಿಕ ಖಂಡದ ಪೂರ್ವ ಭಾಗ ಮತ್ತು ಮಧ್ಯ ಭಾಗದಲ್ಲಿ ಈ ಹಕ್ಕಿಯ ಸಂತತಿ ವಿಸ್ತರಿಸಿದೆ. ದಕ್ಷಿಣ ಕೆನಡಾದಿಂದ ನಿಕರಾಗುವಾ ದೇಶದ ವರೆಗೆ ಇದು ಸಂಚರಿಸುತ್ತದೆ. ಋತುವಿಗೆ ತಕ್ಕಂತೆ ವಾಸಸ್ಥಾನವನ್ನು ಬದಲಾಯಿಸುತ್ತಿರುತ್ತದೆ. ಮರಗಳು ಹೆಚ್ಚಾಗಿ ಬೆಳೆದಿರುವ ಪ್ರದೇಶ, ಕೃಷಿ ಭೂಮಿ, ಪಟ್ಟಣ ಪ್ರದೇಶ, ಬಯಲು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿ. ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತದೆ. ಒಂದು ಗುಂಪಿನಲ್ಲಿ ನೂರಾರು ಹಕ್ಕಿಗಳು ಇರುತ್ತವೆ. ಆದರೆ, ಆಹಾರ ಹುಡುಕುವಾಗ ಮತ್ತು ಸಂತಾನೋತ್ಪತ್ತಿಗಾಗಿ ಪ್ರತಿಯೊಂದು ಹಕ್ಕಿ ನಿರ್ದಿಷ್ಟ ಗಡಿ ಗರುತಿಸಿಕೊಂಡಿರುತ್ತದೆ. ಆಹಾರ ಲಭ್ಯತೆ ಕಡಿಮೆಯಾದಾಗ ಅಥವಾ ತಾಪಮಾನ ಹೆಚ್ಚಾದಾಗ ಈ ಹಕ್ಕಿ ವಾಸಸ್ಥಾನವನ್ನು ಬದಲಾಯಿಸಿಲು ವಲಸೆ ಹೋಗುತ್ತದೆ. ರೆಕ್ಕೆಗಳನ್ನು ವೇಗವಾಗಿ ಬಡಿಯುತ್ತಾ ಸಾಗುತ್ತದೆ. ರೆಕ್ಕೆಗಳನ್ನು ಬಡಿಯುವ ಮೂಲಕ ಮತ್ತು ಕಾಲುಗಳಿಂದ ಒದೆಯುವ ಮೂಲಕ ಇತರೆ ಹಕ್ಕಿಗಳ ಮೇಲೆ ದಾಳಿ ಮಾಡುತ್ತದೆ.

ಆಹಾರ

ಇದು ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಕೀಟಗಳೇ ಇದರ ಪ್ರಮುಖ ಆಹಾರ. ಲಾರ್ವಾಗಳನ್ನೂ ತಿನ್ನುತ್ತದೆ. ಕಂಬಳಿ ಹುಳುಗಳು, ಚಿಟ್ಟೆಗಳು, ಜೇಡ, ಮಣ್ಣು ಹುಳುಗಳು, ಬಸವನಹುಳು, ಅಕಶೇರುಕಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪ‍ತ್ತಿ

ಇದು ಜೀವಿತಾವಧಿಯಲ್ಲಿ ಒಂದೇ ಹಕ್ಕಿಯೊಂದಿಗೆ ಜೊತೆಯಾಗಿರುತ್ತದೆ. ಫೆಬ್ರುವರಿಯಿಂದ ಸೆಪ್ಟೆಂಬರ್‌ವರೆಗೆ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಏಪ್ರಿಲ್‌ ತಿಂಗಳಲ್ಲಿ ಹೆಚ್ಚು. ಈ ಅವಧಿಯಲ್ಲಿ ಗಂಡು ಹಕ್ಕಿ ಗರಿ ಬಿಚ್ಚಿ ಹೆಣ್ಣು ಹಕ್ಕಿಯನ್ನು ಆಕರ್ಷಿಸುತ್ತದೆ. ಸುರಕ್ಷಿತ ಸ್ಥಳದಲ್ಲಿ ಗೂಡು ನಿರ್ಮಿಸಿಕೊಳ್ಳುತ್ತದೆ. ಒಣಗಿದ ಮರಗಳಲ್ಲಿ ಅಥವಾ ಮರಕುಟುಕ ಹಕ್ಕಿಗಳು ಬಳಸಿ ಬಿಟ್ಟಿರುವ ಗೂಡುಗಳನ್ನೇ ಬಳಸಿಕೊಳ್ಳುತ್ತದೆ. ಒಣಗಿದ ಹುಲ್ಲು, ಸಿಪ್ಪೆಗಳನ್ನು ಗೂಡಿನಲ್ಲಿಟ್ಟು ಜೋಪಾನ ಮಾಡಿಕೊಳ್ಳುತ್ತದೆ.

3ರಿಂದ 5 ಮೊಟ್ಟೆಗಳನ್ನು ಹೆಣ್ಣು ಹಕ್ಕಿ ಇಡುತ್ತದೆ. 12ರಿಂದ 14 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮರಿಗಳು ಜನಿಸಿದಾಗ ದುರ್ಬಲವಾಗಿರುತ್ತವೆ. ಹೀಗಾಗಿ ಪೋಷಕ ಹಕ್ಕಿಗಳು ಕಾಳಜಿ ವಹಿಸಿ ನೋಡಿಕೊಳ್ಳುತ್ತವೆ. 16ರಿಂದ 22 ದಿನಗಳ ನಂತರ ಮರಿಗಳಿಗೆ ರೆಕ್ಕೆಗಳು ಮೂಡಿ ಹಾರಲು ಆರಂಭಿಸುತ್ತವೆ. 3ರಿಂದ 4 ವಾರಗಳ ವರೆಗೆ ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆಯುತ್ತವೆ. ಒಂದು ವರ್ಷದ ನಂತರ ಮರಿಗಳು ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

ಇದರ ದೃಷ್ಟಿ ಶಕ್ತಿ ತೀಕ್ಷ್ಣವಾಗಿದ್ದು, 100 ಅಡಿ ದೂರದಿಂದಲೇ ಪುಟ್ಟ ವಸ್ತುಗಳನ್ನು ಗುರುತಿಸುತ್ತದೆ.

ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್‌ ಮತ್ತು ಮಿಸ್ಸೊರಿ ರಾಜ್ಯಗಳ ರಾಜ್ಯ ಹಕ್ಕಿ.

ಈ ಹಕ್ಕಿ ಮಧರುವಾಗಿ ಕೂಗುವುದರಿಂದಲೂ ಗಮನ ಸೆಳೆಯುತ್ತದೆ.

ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ಗಂಡು ಹಕ್ಕಿ ಒಂದು ಗಂಟೆ ಅವಧಿಯಲ್ಲಿ ಸುಮಾರು 1 ಸಾವಿರ ಬಗೆಯ ಇಂಪಾದ ಶಬ್ದಗಳನ್ನು ಹೊರಡಿಸುತ್ತದೆ.

ಅಪಾಯ ಎದುರಾದಾಗ ರೆಕ್ಕೆಗಳನ್ನು ನಿಧಾನವಾಡಿ ಆಡಿಸಿ, ವಿಶಿಷ್ಟ ಸದ್ದುಗಳನ್ನು ಹೊರಡಿಸಿ ಇತರೆ ಹಕ್ಕಿಗಳನ್ನು ಎಚ್ಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.