ADVERTISEMENT

ಪಶ್ಚಿಮದ ನೀಲಿ ಹಕ್ಕಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಬ್ಲೂ ಬರ್ಡ್‌
ಬ್ಲೂ ಬರ್ಡ್‌   

ಶಿಖರಗಳಲ್ಲಿರುವ ನೀಲಿ ಹಕ್ಕಿಯ ಸೋದರ ಬಳಗದಂತಿರುವ ಈ ಪಶ್ಚಿಮ ನೀಲಿ ಹಕ್ಕಿಯ ವೈಜ್ಞಾನಿಕ ಹೆಸರು ಸೈಯಲಿಯಾ ಮೆಕ್ಸಿಕಾನ ( Sialia mexicana) ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?

ಅಮೆರಿಕನ್‌ ರಾಬಿನ್‌ ಹಕ್ಕಿಯ ಗಾತ್ರಕ್ಕಿಂತಲೂ ತುಸು ಚಿಕ್ಕದಾಗಿರುವ ನೀಲಿ ಹಕ್ಕಿಯು ತನ್ನ ಬುದ್ಧಿಮತ್ತೆಗೆ ಖ್ಯಾತಿ ಗಳಿಸಿದ್ದು, ಇದನ್ನು ಅಮೆರಿಕ ಸಂಸ್ಕೃತಿಯಲ್ಲಿ ಸಂತಸದ ದ್ಯೋತಕವೆಂದು ಭಾವಿಸಲಾಗುತ್ತದೆ. ತಲೆಯು ಸಂಪೂರ್ಣ ನೀಲಿ ಬಣ್ಣದಿಂದ ಕೂಡಿದ್ದರೆ, ಎದೆಯ ಭಾಗವು ಕಂದು ಬಣ್ಣದ ಪುಕ್ಕವನ್ನು ಹೊಂದಿರುತ್ತದೆ. ರಕ್ಕೆಗಳು ಗಾಢ ನೀಲಿ ಬಣ್ಣದಲ್ಲಿದ್ದರೆ, ಕಾಲಿನ ಭಾಗವು ಬೂದು ಬಣ್ಣದಲ್ಲಿರುತ್ತದೆ. ಕೊಕ್ಕು ಕಪ್ಪು ಬಣ್ಣದಲ್ಲಿದ್ದು, ಕಣ್ಣುಗಳು ಕೆಂಬಣ್ಣದಲ್ಲಿರುತ್ತದೆ. ಕಾಲುಗಳು ದೃಢವಾಗಿರುತ್ತವೆ.

ADVERTISEMENT

ಎಲ್ಲಿರುತ್ತೆ?

ಉತ್ತಮ ಅಮೆರಿಕದ ಪಶ್ಚಿಮ ಭಾಗದಲ್ಲಿ ಈ ನೀಲಿಹಕ್ಕಿಯನ್ನು ನೋಡಬಹುದು. ಜತೆಗೆ ಮೆಕ್ಸಿಕೊದ ಮಧ್ಯಭಾಗ, ಕ್ಯಾಲಿಫೋರ್ನಿಯಾದ ದಕ್ಷಿಣದಿಂದ ಉತ್ತರ ಭಾಗದಲ್ಲಿಯೂ ಇದು ವಾಸಿಸುತ್ತದೆ. ಚಳಿಗಾಲದಲ್ಲಿ ಉತ್ತರಿಂದ ವಲಸೆ ಹೋಗುತ್ತದೆ. ಈ ತಳಿಯು ದಟ್ಟವಾದ ಕಾಡುಗಳಲ್ಲಿ, ಗದ್ದೆಗಳಲ್ಲಿ ವಾಸಿಸುತ್ತದೆ.

ಆಹಾರ ಪದ್ಧತಿ

ಇದು ಮಾಂಸಾಹಾರಿಯಾಗಿದ್ದು, ಆಹಾರದ ಶೇ 80ರಷ್ಟು ಭಾಗ ಹುಳು ಹುಪ್ಪಟೆಗಳು, ಸಣ್ಣ ಜಂತುಗಳೇ ಇರುತ್ತದೆ. ಜತೆಗೆ ಹಣ್ಣು, ತರಕಾರಿಗಳನ್ನು ತಿನ್ನುತ್ತದೆ. ಜೇಡ, ಎರೆಹುಳವೆಂದರೂ ಇದಕ್ಕಿಷ್ಟ.

ಸಂತಾನೋತ್ಪತ್ತಿ

ಇದು ಏಕಸಂಗಾತಿಗೆ ನಿಷ್ಠೆಯಿಂದ ಇರುತ್ತದೆ. ಗಂಡು ಮತ್ತು ಹೆಣ್ಣು ನೀಲಿಹಕ್ಕಿಗಳು ಜೀವನದಾದ್ಯಂತ ತಮ್ಮ ಪ್ರೀತಿ ಹಾಗೂ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಷ್ಟಪಡುತ್ತವೆ. ಪರಸ್ಪರ ಸಹಕಾರಯುತ ಬದುಕಿನ ಮೇಲೆ ನಂಬಿಕೆ ಇಡುತ್ತವೆ. ಗಂಡು ಹಕ್ಕಿಯು ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಹಾಡು ಹೇಳುತ್ತದೆ. ರಕ್ಕೆಗಳನ್ನು ಅರ್ಧಕ್ಕೆ ತೆರೆದು, ಬಾಲವನ್ನು ವಿಶೇಷವಾಗಿ ಮಡಚಿ ಸಣ್ಣಗೆ ಹೆಜ್ಜೆ ಹಾಕಿ ಸೆಳೆಯುತ್ತದೆ. ಪ್ರೀತಿಸುವ ಸಂದರ್ಭದಲ್ಲಿಯೂ ಹೆಣ್ಣು ಹಕ್ಕಿಯ ಆಹಾರವನ್ನು ಗಂಡು ಹಕ್ಕಿಯೇ ತಂದು ಕೊಡುತ್ತದೆ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಗಡಿಯನ್ನು ಗುರುತಿಸಿಕೊಳ್ಳುತ್ತದೆ. ಮೇನಿಂದ ಜುಲೈವರೆಗೆ ಸಂತಾನೋತ್ಪತ್ತಿ ನಡೆಸುತ್ತದೆ. ಮರಗಳ ರಂಬೆಕೊಂಬೆಗಳನ್ನು ಬಳಸಿ, ಗೂಡು ಕಟ್ಟುತ್ತದೆ. ಹೆಚ್ಚಾಗಿ ಹೆಣ್ಣು ನೀಲಿಹಕ್ಕಿಯೇ ಗೂಡು ಕಟ್ಟುತ್ತದೆ. ನಾಲ್ಕರಿಂದ 6 ಮೊಟ್ಟೆಗಳನ್ನು ಇಡುತ್ತದೆ. 12ರಿಂದ 18 ದಿನಗಳ ಕಾಲ ಕಾವು ಕೊಡುತ್ತದೆ. ಮರಿಗಳ ಪೋಷಣೆಯಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳು ಸಮಾನಾದ ಜವಾಬ್ದಾರಿ ವಹಿಸುತ್ತವೆ. ಒಂದು ವರ್ಷದ ತರುವಾಯ ಮರಿಯು ಪ್ರಾಯಕ್ಕೆ ಬರುತ್ತದೆ.

ವರ್ತನೆ ಮತ್ತು ಜೀವನಕ್ರಮ

ಸಾಮಾನ್ಯವಾಗಿ ಆಗಾಗ ಇದು ವಲಸೆ ಹೋಗುತ್ತದೆ. ಜುಲೈನಿಂದ ಅಕ್ಟೋಬರ್‌ವರೆಗೆ ಒಂದು ಪ್ರದೇಶದಲ್ಲಿ ಹೆಚ್ಚು ಕಾಲ ನಿಲ್ಲಲು ಇಷ್ಟಪಡುವುದಿಲ್ಲ. ಚಳಿಗಾಲದಲ್ಲಿಯೂ ಬೆಚ್ಚಗಿನ ಗೂಡು ಕಟ್ಟುವ ಸ್ಥಳವನ್ನು ಆಯ್ದುಕೊಂಡು ವಲಸೆ ಹೊರಡುತ್ತದೆ. ಆಹಾರ ಅರಸುವುದಕ್ಕಾಗಿಯೇ ಎತ್ತರದಿಂದ ತಗ್ಗಿನ ಪ್ರದೇಶಕ್ಕೆ ಹಾರಾಟ ನಡೆಸುತ್ತದೆ. ಎಂಥ ಪರಿಸ್ಥಿತಿಯಲ್ಲಿಯೂ ತನ್ನ ಬೇಟೆ ತಪ್ಪಿ ಹೋಗದ ಹಾಗೇ ಕಣ್ಣಿಟ್ಟಿರುತ್ತದೆ. ಇದು ತನ್ನದೇ ಬಳಗ ಮಾಡಿಕೊಂಡು ಅಪಾಯದ ಪರಿಸ್ಥಿತಿಯಲ್ಲಿ ಒಗ್ಗಟ್ಟಾಗಿ ಬಲ ಪ್ರದರ್ಶಿಸುತ್ತದೆ. ಆಹಾರ ಲಭ್ಯತೆಯ ಆಧಾರದ ಮೇಲೆ ಈ ಗುಂಪು ದೊಡ್ಡದಾಗುತ್ತದೆ. ಚಳಿಗಾಲ ಮುಗಿದ ಮೇಲೆ ಹೆಚ್ಚು ಎತ್ತರ ಪ್ರದೇಶಗಳಿಗೆ ಹೋಗಿ ವಾಸ ಮಾಡುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಇದು ಪರಸ್ಪರ ಸಂವಹನ ನಡೆಸಲು ಫ್ಯೂ ಫ್ಯೂ ದನಿ ಹೊರಡಿಸಿ, ಪುಟ್ಟದಾದ ಸ್ವರಮೇಳವೇ ರೂಪುಗೊಂಡಂತೆ ಕೇಳಿಸುತ್ತದೆ.

* ಇದು ನೋಡಲು ಸೌಮ್ಯವಾಗಿದ್ದರೂ, ಕಾದಾಟಕ್ಕೆ ಇಳಿಯುತ್ತದೆ. ಪ್ರಾಯಕ್ಕೆ ಬಂದ ನೀಲಿ ಪಕ್ಷಿಯು ಕಾಲು, ಕಾಲು ಕೊಟ್ಟು ಜಗಳ ಕಾಯುತ್ತದೆ.

ಗಾತ್ರ-23 ರಿಂದ 31 ಗ್ರಾಂ,ಜೀವಿತಾವಧಿ-4 ವರ್ಷ,ಎತ್ತರ -16 ರಿಂದ 19 ಸೆಂ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.