ADVERTISEMENT

ಮೀನು ಹಾರುತಿದೆ ನೋಡಿದಿರಾ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 19:30 IST
Last Updated 27 ಏಪ್ರಿಲ್ 2019, 19:30 IST
ಹಾರುವ ಮೀನು
ಹಾರುವ ಮೀನು   

ನನ್ನ ಸ್ನೇಹಿತ ಉದಯ ಮೊದಲು ಮೀನು ವ್ಯಾಪಾರ ಮಾಡುತ್ತಿದ್ದ. ತನ್ನ ಒ-80ಯಲ್ಲಿ ‘ಪ್ಯಾಂಕೂ- ಪ್ಯಾಂಕೂ’ ಎಂಬ ಸದ್ದಿನೊಂದಿಗೆ ಬರುತ್ತಿದ್ದ. ಆಗ ನಮ್ಮ ಸುತ್ತಮುತ್ತಲಿನ ನಾಲ್ಕೈದು ಮನೆಗಳಲ್ಲಿ ವಿದ್ಯುತ್ ಸಂಚಾರವಾದಂತೆ ಆಗಿ ರಸ್ತೆಬದಿಗೆ ಬಂದು ನಿಲ್ಲುವುದು ವಾಡಿಕೆ. ಉದಯ ಒಳ್ಳೆಯ ಮಾತುಗಾರ. ಅವನೊಟ್ಟಿಗೆ ಹತ್ತು ನಿಮಿಷ ಕಳೆದರೆ ಅರ್ಧ ದಿನ ಪುಸ್ತಕ ಓದಿದಷ್ಟು ವಿಷಯ ಸಿಗುತ್ತದೆ. ಅದು ಅವನ ಆಸಕ್ತಿಯ ರಾಜಕೀಯ ಇರಬಹುದು, ಮೀನುಗಾರರ ಸಮಸ್ಯೆ, ಮೀನುಗಾರಿಕೆಯ ತಲೆಬಿಸಿ ಇರಬಹುದು, ಯಾವ ವಿಷಯವೇ ಆದರೂ ಉದಯನ ಬಾಯಲ್ಲಿ ಕೇಳಲು ರಸಗವಳದಂತಿರುತ್ತದೆ.

ಆ ದಿನ ನಾನು ಮನೆಯಲ್ಲಿದ್ದೆ. ಉದಯನ ಒ-80ಯ ಶಬ್ದ ಕೇಳುತ್ತಲೆ ಸಹಜ ಪ್ರೀತಿಯಿಂದ ಅವನಲ್ಲಿಗೆ ಹೋದೆ. ಮಾತು ಆರಂಭವಾಗಿತ್ತಷ್ಟೆ. ಆಕಸ್ಮಿಕವಾಗಿ ನನ್ನ ದೃಷ್ಟಿ ಮೀನಿನ ಬಾಕ್ಸ್ ಕಡೆಗೆ ಹೋಯಿತು. ಅಲ್ಲೊಂದು ಮೀನು ನನ್ನ ಆಕರ್ಷಣೆಯ ಕೇಂದ್ರಬಿಂದುವಾಯಿತು. ಸರ್ವೇ ಸಾಧಾರಣ ಮೀನುಗಳಂತೆ ಅದು ಕೂಡ ಒಂದಾಗಿದ್ದು, ಹೊರನೋಟಕ್ಕೆ ಯಾವುದೇ ವಿಶೇಷ ಕಾಣಿಸಲಿಲ್ಲ. ಆದರೂ, ಅದೊಂದೇ ಮೀನು ಏಕೆ ನನ್ನ ಕಣ್ಣನ್ನು ಸೆಳೆಯಿತು ಎನ್ನುವುದು ಇಂದಿಗೂ ಸೋಜಿಗ.

ಅದು ಸುಮಾರಾಗಿ ಬೈಗೆ (ಭೂತಾಯಿ) ಮೀನನ್ನು ಆಕಾರದಲ್ಲಿ ಹೋಲುತ್ತಿತ್ತು. ಅದೇ ಮೈಮಾಟ. ಅದೇ ಹುರುಪೆಗಳು, ಕಣ್ಣು ಸ್ವಲ್ಪ ದೊಡ್ಡದು. ಗಾತ್ರ ಮಾತ್ರ ಭೂತಾಯಿಗಿಂತ ತುಂಬಾ ದೊಡ್ಡದು ಎಂದರೆ ಬಂಗುಡೆ ಮೀನಿನ ಗಾತ್ರದ್ದು. ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡಾಗಲೇ ಗೊತ್ತಾಗಿದ್ದು- ನಾನು ಪ್ರಪಂಚದ ಅತ್ಯದ್ಭುತ ಮೀನೊಂದನ್ನು ಹಿಡಿದುಕೊಂಡಿದ್ದೇನೆಂದು. ಜಗತ್ತಿನ ಅತ್ಯಂತ ವಿಸ್ಮಯಕಾರಿ, ದುರ್ಲಭ ಮೀನುಗಳಲ್ಲಿ ಒಂದು ಮೀನು ಎಲ್ಲರ ಕಣ್ಣು ತಪ್ಪಿಸಿ ನನ್ನ ಕೈಮೇಲೆ ಕುಳಿತಿತ್ತು.

ADVERTISEMENT

ಎಕ್ಸೋಸಿಟಿಡಿಯೇ ಕುಟುಂಬಕ್ಕೆ ಸೇರಿದ ಈ ಮೀನನ್ನು ಸೂಕ್ಷ್ಮವಾಗಿ ಗಮನಿಸದ ಹೊರತು ಅಂತಹ ಯಾವುದೆ ವಿಶೇಷತೆಯೂ ನಮಗೆ ಕಾಣಿಸಲಾರದು. ಆದರೆ, ಸ್ವಲ್ಪ ಗಮನವಿಟ್ಟು ಅದರ ಈಜುರೆಕ್ಕೆಗಳನ್ನು ನೋಡಿದಾಗ ಮಾತ್ರ ಅರೆ ಈ ರೆಕ್ಕೆಗಳು ಎಷ್ಟು ಉದ್ದವಿವೆ ಅನಿಸುತ್ತದೆ. ನಿಜ ಇದೇ ರೆಕ್ಕೆಗಳಿಂದ ಈ ಮೀನು ಜೀವಜಗತ್ತಿನ ವಿಸ್ಮಯದ ಮೀನಾಗಿರುವುದು. ಇದರ ಪಾರ್ಶ್ವ ರೆಕ್ಕೆಗಳು ಇಡೀ ಮೀನಿನ ಅರ್ಧದಷ್ಟು ಉದ್ದವಿರುತ್ತವೆ. ಗರಿಷ್ಠ 18 ಇಂಚು (ಒಂದೂವರೆ ಅಡಿ) ಬೆಳೆಯಬಲ್ಲ ಈ ಮೀನಿಗೆ ಪಾರ್ಶ್ವ ರೆಕ್ಕೆಗಳೇ ಎಂಟರಿಂದ ಒಂಬತ್ತು ಇಂಚು ಉದ್ದವಿರುತ್ತವೆ. ಈ ರೆಕ್ಕೆಗಳನ್ನು ಕೈಯಿಂದ ಬಿಡಿಸಿದರೆ ಥೇಟ್ ಬಾವಲಿಯ ರೆಕ್ಕೆಗಳಂತೆ ಕಾಣುತ್ತದೆ.

ಬಣ್ಣ ಕಪ್ಪಲ್ಲ, ಜೊತೆಗೆ ಬಾವಲಿ ರೆಕ್ಕೆಗಳಿಗಿಂತ ಬಹಳ ಗಡುಸು. ಈ ವಿಶೇಷ ರೆಕ್ಕೆಗಳನ್ನು ಬಳಸಿ ಮೀನು ನೀರಿನಲ್ಲಿ ಈಜಾಡುವ ಜೊತೆಗೆ ತೀರಾ ಅಪಾಯಕಾರಿ ಸನ್ನಿವೇಶ ಎದುರಾದರೆ ನೀರು ಬಿಟ್ಟು ಗಾಳಿಯಲ್ಲಿ ಹಾರತೊಡಗುತ್ತದೆ. ಅದೂ ಎಲ್ಲೊ ಐದು-ಆರು ಅಡಿಗಳ ದೂರಕ್ಕೊ, ಒಂದು- ಎರಡು ಮೀಟರ್ ದೂರಕ್ಕೋ ಅಲ್ಲ. ಬರೋಬ್ಬರಿ 200 ಮೀಟರ್‌ಗಳಿಂದ 400 ಮೀಟರ್ ದೂರದವರೆಗೆ! ಅದು ಕೂಡಾ ನೀರಿನ ಮಟ್ಟದಿಂದ ಆರು ಮೀಟರ್ ಎತ್ತರದಲ್ಲಿ. ಹೀಗಾಗಿ ಈ ಮೀನಿಗೆ ‘ಹಾರುವ ಮೀನು’ ಎಂದೇ ಹೆಸರು. ಮತ್ಸ್ಯ ಜಗತ್ತಿನಲ್ಲಿ ಇಷ್ಟು ದೂರ ಲೀಲಾಜಾಲವಾಗಿ ಗಾಳಿಯಲ್ಲಿ ಹಾರುವ ಮೀನು ಇನ್ನೊಂದಿಲ್ಲ.

ಹಾರುವ ಮೀನಿಗೆ ‘ಹಾರುವ’ ಸಾಮರ್ಥ್ಯ ಬರಲು ಟೊರ್ಪೆಡೋ ಆಕಾರದ ಅದರ ದೇಹ ಬಹುಮುಖ್ಯ ಕಾರಣ. ಶತ್ರುಗಳು ಅಟ್ಟಿಸಿಕೊಂಡು ಬರುವಾಗ ನೀರನ್ನು ಆಳದಿಂದ ಬಾಣದಂತೆ ಸೀಳಿಕೊಂಡು ಶರವೇಗದಿಂದ ನೀರಿನ ಮೇಲ್ಮೈಯನ್ನು ತಲುಪಿ, ಟೇಕ್‌ಆಫ್ ಆಗಲು ದೋಣಿಯಾಕಾರದ ಅದರ ದೇಹವೇ ಸಹಕಾರಿ. ನೀರಿನ ಮೇಲ್ಮೈ ತಲುಪಿದ ಕೂಡಲೆ ವಿಶಾಲವಾದ ಹಕ್ಕಿಯ ರೆಕ್ಕೆಗಳಂತಿರುವ ಮೀನಿನ ರೆಕ್ಕೆಗಳು ಗಾಳಿಯಲ್ಲಿ ಮೀನನ್ನು ಹಕ್ಕಿಯಾಗಿ ಪ್ರತಿಸೃಷ್ಟಿ ಮಾಡುತ್ತವೆ. ಗಾಳಿಯಲ್ಲಿ ಹಕ್ಕಿಯನ್ನೂ ನಾಚಿಸುವಂತೆ ಮೀನು ಹಾರುತ್ತದೆ.

ಒಮ್ಮೆ ನೀರಿನಾಳದಿಂದ ಗಾಳಿಗೆ ಜಿಗಿದ ಮೀನು ಸುಮಾರು 200 ಮೀಟರ್ ದೂರ ಏಕಕಾಲಕ್ಕೆ ಕ್ರಮಿಸುತ್ತದೆ. ಆ ವೇಳೆಗೆ ವೇಗ ಕಡಿಮೆಯಾಗುವುದರಿಂದ ಮೀನು ನೀರಿನ ಮೇಲ್ಮೈಗೆ ಇಳಿಯತೊಡಗುತ್ತದೆ. ಇಳಿಯುತ್ತಲೆ ತನ್ನ ಬಾಲವನ್ನು ದೋಣಿಯ ಹುಟ್ಟಿನಂತೆ ನೀರಿಗೆ ಪಟಪಟನೆ ಬಡಿದು ವೇಗ ಪಡೆದುಕೊಂಡು ಮತ್ತೊಮ್ಮೆ ಗಾಳಿಯಲ್ಲಿ ಹಾರುತ್ತದೆ. ಕೆಲವೊಮ್ಮೆ ಮೀನು ಗಾಳಿ ಮತ್ತು ಸಮುದ್ರದ ತೆರೆಗಳನ್ನೂ ತನ್ನ ಹಾರುವಿಕೆಯ ಅನುಕೂಲಕ್ಕಾಗಿ ಬಳಸುವುದುಂಟು. ಜಪಾನಿನ ಸುಪ್ರಸಿದ್ಧ ಟಿ.ವಿ. ಓಊಏ ಚಾನೆಲ್ ಹಾರುವ ಮೀನೊಂದು ಪೂರ್ತಿ 45 ಸೆಕೆಂಡ್‍ಗಳ ಹಾರಾಟ ಮಾಡಿದ್ದನ್ನು ದಾಖಲಿಸಿದೆ. ಅದು ಸಹ ಅಂತಿಂಥ ವೇಗದಲ್ಲಲ್ಲ. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ! ಈ ವೇಗ ಪಡೆಯಲು ಆ ಹಾರುವ ಮೀನು ತನ್ನ ರೆಕ್ಕೆಗಳನ್ನು ಪ್ರತಿ ಸೆಕೆಂಡಿಗೆ 70 ಬಾರಿ ಬಡಿದುಕೊಂಡಿತ್ತು.

ಸಾಧಾರಣವಾಗಿ ಹಾರುವ ಮೀನು ನೀರಿನ ಮಟ್ಟದಲ್ಲೆ ಎಂದರೆ ನೀರಿನಿಂದ ಒಂದೂವರೆ ಅಡಿಯಿಂದ ಆರು ಮೀಟರ್ ಎತ್ತರದಲ್ಲಿ ಹಾರುತ್ತವಾದರೂ ಕೆಲವು ಜಾತಿಯ ಹಾರುವ ಮೀನುಗಳು ದೊಡ್ಡ ದೊಡ್ಡ ಹಡಗುಗಳ ನಾಲ್ಕು ಅಂತಸ್ತು ಎತ್ತರದ ಡೆಕ್‍ಗಳಿಗೆ ಡಿಕ್ಕಿ ಹೊಡೆದು ಬಿದ್ದ ನಿದರ್ಶನಗಳೂ ಇವೆ. ಇಂತಹ ಅದ್ಭುತ ಮೀನುಗಳು ಆಗಾಗ ಜಪಾನ್, ವಿಯೆಟ್ನಾಂ, ಇಂಡೋನೇಷ್ಯಾ, ಭಾರತ ಮತ್ತು ಸೊಲೋಮನ್ ದ್ವೀಪಗಳಲ್ಲಿ ಅಪರೂಪಕ್ಕೆ ಒಮ್ಮೊಮ್ಮೆ ಕಂಡುಬರುತ್ತವೆ. ಅವುಗಳ ತವರೂರು ಇರುವುದು ಬಾರ್ಬಡೋಸ್‍ನಲ್ಲಿ. ಬಾರ್ಬಡೋಸ್‌ ಅನ್ನು ‘ಹಾರುವ ಮೀನುಗಳ ನೆಲ’ ಎಂದು ಕರೆಯುವುದು ಇದೇ ಕಾರಣಕ್ಕೆ.

ಹಾರುವ ಮೀನು ಬಾರ್ಬಡೋಸ್‍ನ ರಾಷ್ಟ್ರೀಯ ಮೀನಾಗಿದೆ. ರಾತ್ರಿವೇಳೆ ಹಾರುವ ಮೀನುಗಳಿಗೆ ಬೆಳಕೆಂದರೆ ಪ್ರಾಣ. ಅವುಗಳ ಈ ದೌರ್ಬಲ್ಯವನ್ನು ಸೊಲೋಮನ್ ದ್ವೀಪದ ಜನರು ತಮ್ಮ ಲಾಭಕ್ಕಾಗಿ ಬಳಸುತ್ತಾರೆ. ರಾತ್ರಿಯಲ್ಲಿ ಟಾರ್ಚ್ ಸಹಾಯದಿಂದ ಆಕರ್ಷಣೆಗೆ ಒಳಗಾಗಿ ಟಾರ್ಚ್ ಬೆಳಕಿನತ್ತ ನೀರಿನಿಂದ ಮೇಲಕ್ಕೆ ಜಿಗಿಯುವ ಮೀನುಗಳನ್ನು ಅಲ್ಲೇ ಹಿಡಿದು ತಮ್ಮ ಬುಟ್ಟಿ ತುಂಬಿಸಿಕೊಳ್ಳುತ್ತಾರೆ.

ಜಗತ್ತಿನಲ್ಲಿ ಇದುವರೆಗೆ 64 ಜಾತಿಯ ಹಾರುವ ಮೀನುಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇವೆಲ್ಲವೂ ಬಹುತೇಕ ಹಾವಸೆ ಅಥವಾ ಶೈವಲಗಳನ್ನು ತಿಂದು ಬದುಕುತ್ತವೆ. ಹಾರುವ ಮೀನುಗಳ ಪ್ರಮುಖ ಶತ್ರುಗಳೆಂದರೆ ಟ್ಯೂನಾ, ಡಾಲ್ಫಿನ್‍ಗಳು, ಸಮುದ್ರ ಹಕ್ಕಿಗಳು ಹಾಗೂ ಸ್ಕ್ವಿಡ್(ಬಣಚ ಅಥವಾ ಬಂಡಾಸು ಮೀನು)ಗಳು. ಅತ್ಯಂತ ಆಳ ಸಾಗರದಲ್ಲಿ ವಾಸಿಸುವ, ಜೊತೆಗೆ ಹಾರುವ ಅದ್ಭುತ ಶಕ್ತಿ ಹೊಂದಿರುವ ಈ ಮೀನುಗಳು ಬಲೆ ಬೀಸಿ ಮೀನು ಹಿಡಿವ ಮೀನುಗಾರರಿಗೆ ಸಿಗುವುದು ಅತ್ಯಂತ ವಿರಳ. ಪ್ರಪಂಚದ ಅತಿ ಕೌತುಕದ, ಹೊರಜಗತ್ತಿಗೆ ಸಾಮಾನ್ಯವಾಗಿ ಕಾಣಸಿಗದ ಮೀನೊಂದು ನನ್ನ ಕೈ ಮೇಲೆ ಬೆಚ್ಚಗೆ ರೆಕ್ಕೆ ಬಿಚ್ಚಿಕೊಂಡು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದ್ದನ್ನು ನೆನಪಿಸಿಕೊಂಡರೆ ಮೈ ಜುಮ್‌ ಎನಿಸುತ್ತದೆ.

ನೀವೂ ಹಾರುವ ಮೀನು ನೋಡಬೇಕೆ?

ನಿಮಗೂ ಹಾರುವ ಮೀನನ್ನು ನೋಡಬೇಕೆಂಬ ಆಸೆಯಾಗುತ್ತಿದೆಯೆ? ಹಾಗಿದ್ದರೆ ಯಾನ್ ಮಾರ್ಟೆಲ್‍ನ ಕಾದಂಬರಿಗೆ ಆ್ಯಂಗ್ ಲೀ
ಜೀವಾಳ ನೀಡಿ ನಿರ್ದೇಶಿಸಿರುವ ಪ್ರಸಿದ್ಧ ಚಲನ ಚಿತ್ರವಾದ ‘ಲೈಫ್ ಆಫ್ ಪೈ’ನಲ್ಲಿ ಸಮುದ್ರದ ಮಧ್ಯದಲ್ಲಿ ತೇಲಾಡುವ ಪೈಗೆ ಈ ಮೀನುಗಳ ಸೈನ್ಯವೇ ಹಾರಿ ಬಂದು ಡಿಕ್ಕಿ ಹೊಡೆಯುವುದನ್ನೂ, ಅವುಗಳನ್ನು ಅಟ್ಟಿಸಿಕೊಂಡು ಬರುವ ಟ್ಯೂನಾ ಮೀನುಗಳನ್ನೂ ಕಣ್ತುಂಬಿಕೊಳ್ಳಬಹುದು. ಜೊತೆಗೆ ಯೂಟ್ಯೂಬ್‍ನಲ್ಲಿ ಹಾರುವಮೀನುಗಳ ರಾಶಿರಾಶಿ ವಿಡಿಯೊಗಳಿವೆಅವುಗಳನ್ನೂ ನೋಡಿ ವಿಸ್ಮಯಪಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.