ADVERTISEMENT

ಮಕ್ಕಳು ಅಳುವಂತೆ ಸದ್ದು ಮಾಡುವ ‘ಕೋಲಾ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:45 IST
Last Updated 2 ಅಕ್ಟೋಬರ್ 2019, 19:45 IST
ಮರಿಯೊಂದಿಗೆ ಕೋಲಾ
ಮರಿಯೊಂದಿಗೆ ಕೋಲಾ   

ನೋಡಿದ ಕೂಡಲೇ ಗಮನ ಸೆಳೆಯುವಂತಹ ಮುದ್ದಾದ ಪ್ರಾಣಿಗಳು ಕೆಲವು ಮಾತ್ರ. ಅಂತಹ ಮುದ್ದು ಪ್ರಾಣಿಗಳಲ್ಲಿ ಕೋಲಾ (Koala). ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ಅಪರೂಪದ ಸಸ್ತನಿ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಫಾಸ್ಕೊಲಾರಾಕ್ಟೊಸ್‌ ಸಿನೆರಿಯಸ್ (Phascolarctos cinereus). ಇದು ಫಾಸ್ಕೊಲಾರಾಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿದ್ದು ಡಿಪ್ರೊಟೊಡೊಂಟಿಯಾ (Diprotodontia). ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?:ಬೂದು, ಕಪ್ಪು ಮತ್ತು ಬಿಳಿ ಬಣ್ಣದ ದಟ್ಟವಾದ ಕೂದಲು ಬೆಳೆದಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಎದೆ ಮತ್ತು ಉದರ ಭಾಗದಲ್ಲಿ ಬಿಳಿಬಣ್ಣದ ಕೂದಲು ದಟ್ಟವಾಗಿ ಬೆಳೆದಿರುತ್ತವೆ. ಕಾಲುಗಳು ಮತ್ತು ಬೆರಳುಗಳು ನೀಳವಾಗಿದ್ದು, ಮರಗಳನ್ನು ದೃಢವಾಗಿ ಹಿಡಿದಿಟ್ಟುಕೊಳ್ಳಲು ನೆರವಾಗುವಂತೆ ಕಪ್ಪುಬಣ್ಣದ ನೀಳವಾದ ಉಗುರುಗಳು ಬೆಳೆದಿರುತ್ತವೆ. ತಲೆ ದೊಡ್ಡದಾಗಿದ್ದು, ದುಂಡಗಿರುತ್ತದೆ. ಮೂಗು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಬಣ್ಣದಲ್ಲಿರುತ್ತವೆ. ದಟ್ಟವಾದ ಕೂದಲಿನಿಂದ ಆವೃತವಾಗಿರುವ ಕಿವಿಗಳು ಅಗಲವಾಗಿದ್ದು, ವೃತ್ತಕಾರದಲ್ಲಿರುತ್ತವೆ. ಬಾಲ ಇರುವುದಿಲ್ಲ.

ADVERTISEMENT

ಎಲ್ಲಿದೆ?:ಆಸ್ಟ್ರೇಲಿಯಾದಲ್ಲಿ ಮಾತ್ರ ಕಾಣಸಿಗುವ ಸಸ್ತನಿಗಳಲ್ಲಿ ಇದು ಕೂಡ ಒಂದು. ಯುಕಾಲಿಪ್ಟಿಸ್ ಮರಗಳು ಹೆಚ್ಚಾಗಿ ಬೆಳೆಯುವ ಪ್ರದೇಶವೇ ಇದರ ನೆಚ್ಚಿನ ವಾಸಸ್ಥಾನ. ದಟ್ಟವಾಗಿ ಮರಗಳು ಬೆಳೆದಿರುವ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತದೆ. ಪೂರ್ವ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಕಾಡು ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಜೀವನಕ್ರಮ ಮತ್ತು ವರ್ತನೆ:ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ಪ್ರಾಣಿ. ಸಂತಾನೋತ್ಪತ್ತಿ ಅವಧಿಯಲ್ಲಿ ಹಲವು ಕೋಲಾಗಳು ಒಂದೇ ಭೂಪ್ರದೇಶದಲ್ಲಿ ವಾಸಿಸುತ್ತವೆ. ಆದರೆ ಒಂದು ಕೋಲಾ ಇರುವ ಮರದ ಮೇಲೆ ಮತ್ತೊಂದು ಕೋಲಾ ವಾಸಿಸುವುದಿಲ್ಲ. ಜೀವನವಿಡೀ ಮರಗಳಲ್ಲೇ ವಾಸಿಸುತ್ತದೆ. ನೆಲದ ಮೇಲೆ ಕಾಲಿಡುವುದು ಅಪರೂಪ. ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಹಗಲಿನಲ್ಲಿ ಸುರಕ್ಷಿತ ಮರಗಳ ಮೇಲೆ ನಿದ್ರಿಸುತ್ತದೆ. ಸದ್ದು ಮಾಡುವುದಕ್ಕೆ ಹೆಚ್ಚು ಇಷ್ಟಪಡುವುದಿಲ್ಲ. ಅಪಾಯ ಎದುರಾದಾಗ ಮಾತ್ರ ಶಿಶುಗಳು ಅಳುವಂತೆ ಸದ್ದು ಮಾಡಿ ಇತರೆ ಕೋಲಾಗಳನ್ನು ಎಚ್ಚರಿಸುತ್ತದೆ. ಪ್ರತಿ ಕೋಲಾ ತಾವು ವಾಸಿಸುವ ಮರಗಳ ಮೇಲೆ ವಿಶೇಷ ರಾಸಾಯನಿಕಗಳನ್ನು ಸ್ರವಿಸಿ, ತನ್ನ ವಾಸಸ್ಥಾನವೆಂದು ಇತರೆ ಕೋಲಾಗಳಿಗೆ ತಿಳಿಸುತ್ತದೆ.

ಆಹಾರ: ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಯುಕಾಲಿಪ್ಟಿಸ್ ಮರಗಳ ಎಲೆಗಳೇ ಇದರ ಪ್ರಮುಖ ಆಹಾರ. ಸುಮಾರು 30 ಬಗೆಯ ಯುಕಾಲಿಪ್ಟಿಸ್ ಮರಗಳನ್ನು ಗುರುತಿಸಲಾಗಿದ್ದು, ಎಲ್ಲ ಮರಗಳ ಎಲೆಗಳನ್ನೂ ಇದು ಸೇವಿಸುತ್ತದೆ. ಇದಲ್ಲದೇ ಮೆಲಾಲಿಕಾ ಎಂಬ ಪೊದೆ ಗಿಡದ ಎಲೆಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ: ಡಿಸೆಂಬರ್‌ನಿಂದ ಮಾರ್ಚ್‌ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಪ್ರಬಲ ಗಂಡು ಕೋಲಾ ತನ್ನ ವ್ಯಾಪ್ತಿಯಲ್ಲಿರುವ ಹಲವು ಹೆಣ್ಣು ಕೋಲಾಗಳೊಂದಿಗೆ ಜೊತೆಯಾಗುತ್ತದೆ. ಹೆಣ್ಣು ಕೋಲಾ ಕೇವಲ 35 ದಿನ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಜೊಯ್ (Joey) ಎನ್ನುತ್ತಾರೆ. ಮರಿ ಜನಿಸಿದ ನಂತರ 5ರಿಂದ 6 ತಿಂಗಳ ವರೆಗೆ ತಾಯಿಯ ಬೆನ್ನಿಗೆ ಅಂಟಿಕೊಂಡೇ ಬೆಳೆಯುತ್ತದೆ. ಈ ಅವಧಿಯಲ್ಲಿ ತಾಯಿಯ ಹಾಲು ಮಾತ್ರ ಕುಡಿಯುತ್ತದೆ. 6 ತಿಂಗಳ ನಂತರ ಚಿಗುರೆಲೆಗಳನ್ನು ತಿನ್ನಲು ಆರಂಭಿಸುತ್ತದೆ. 7 ತಿಂಗಳ ನಂತರ ತಾಯಿಯ ಬೆನ್ನೇರುವುದಿಲ್ಲ. ಒಂದು ವರ್ಷದ ನಂತರ ಸ್ವತಂತ್ರವಾಗಿ ಆಹಾರ ಹುಡುಕಲು ಆರಂಭಿಸುತ್ತದೆ. ಆದರೂ ಕೆಲವು ತಿಂಗಳ ವರೆಗೆ ತಾಯಿಯ ಜೊತೆಯಲ್ಲೇ ಬೆಳೆಯುತ್ತದೆ. ಗಂಡು ಕೋಲಾ 3–4 ವರ್ಷದ ನಂತರ ಹಾಗೂ ಹೆಣ್ಣು ಕೋಲಾ 2–3 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಇದು ನಿತ್ಯ 18 ಗಂಟೆ ನಿದ್ರಿಸುವುದಕ್ಕೇ ಮೀಸಲಿಡುತ್ತದೆ.

*ಇದರ ಮೆದುಳಿನ ತೂಕ ದೇಹದ ತೂಕದಲ್ಲಿ ಕೇವಲ ಶೇ 2ರಷ್ಟು ಮಾತ್ರ ಇರುತ್ತದೆ.

* ಇದು ಸೇವಿಸುವ ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳು ಇಲ್ಲದೇ ಇರುವುದರಿಂದ ಇದು ಸದಾ ಜಡವಾಗಿ ಜೀವಿಸುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

* ಅಬ್ರೋಗೈನ್ ಭಾಷೆಯಲ್ಲಿ ಕೋಲಾ ಎಂದರೆ ‘ನೀರು ಇಲ್ಲದ’ ಎಂದು ಅರ್ಥ. ಈ ಪ್ರಾಣಿ ನೀರು ಕುಡಿಯುವುದು ಅಪರೂಪ, ಹೀಗಾಗಿಯೇ ಈ ಹೆಸರು ಇಡಲಾಗಿದೆ. ಸೇವಿಸುವ ಎಲೆಗಳಿಂದಲೇ ಇದರ ದೇಹಕ್ಕೆ ನೀರು ಸಿಗುತ್ತದೆ.

* ದಿನದಲ್ಲಿ ಸುಮಾರು 1 ಕೆ.ಜಿಯಷ್ಟು ಎಲೆಗಳನ್ನು ತಿನ್ನುತ್ತದೆ. ಹೆಚ್ಚಿನ ಆಹಾರ ಸಂಗ್ರಹಿಸಿ ಇಟ್ಟುಕೊಳ್ಳಲು ನೆರವಾಗುವಂತೆ ದೇಹ ರಚನೆಯಾಗಿದೆ.

* ವೇಗವಾಗಿ ಮರಗಳನ್ನೇರುವುದಷ್ಟೇ ಅಲ್ಲದೇ, ವೇಗವಾಗಿ ಈಜುತ್ತಾ ನದಿ, ಸರೋವರಗಳನ್ನು ದಾಟುವ ಸಾಮರ್ಥ್ಯ ಇದಕ್ಕಿದೆ. ಪ್ರವಾಹ ಪರಿಸ್ಥಿತಿಯಲ್ಲೂ ಈಜಿ ಸುರಕ್ಷಿತ ಪ್ರದೇಶಗಳಿಗೆ ತಲುಪುತ್ತದೆ.

* ಗ್ರೀಕ್‌ ಭಾಷೆಯಲ್ಲಿ ಚೀಲ ಎಂಬ ಅರ್ಥ ಕೊಡುವ ಫಸ್‌ಕೊಲಾಸ್‌, ಕರಡಿ ಎಂದು ಅರ್ಥ ಕೊಡುವ ಅರ್ಕೊಟಸ್‌ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಬೂದು ಬಣ್ಣದ ಎಂದು ಅರ್ಥ ನೀಡುವ ಸಿನೆರಿಯಸ್ ಎಂಬ ಪದಗಳನ್ನು ಬಳಸಿ ಫಾಸ್ಕೊಲಾರಾಕ್ಟೊಸ್‌ ಸಿನೆರಿಯಸ್ (Phascolarctos cinereus) ಎಂಬ ವೈಜ್ಞಾನಿಕ ಹೆಸರು ಇದಕ್ಕೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.