ADVERTISEMENT

ವಲಸೆ ಪಕ್ಷಿಗಳ ಉಪ್ಪಲಪಾಡು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:30 IST
Last Updated 10 ಜುಲೈ 2019, 19:30 IST
ಉಪ್ಪಲಪಾಡು
ಉಪ್ಪಲಪಾಡು   

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ಚುನಾವಣಾ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದೆ. ಆಂಧ್ರದ ನೂತನ ರಾಜಧಾನಿ ವಿಜಯವಾಡದ ವಿಮಾನ ನಿಲ್ದಾಣದಿಂದ ಪ್ರಕಾಶಂ ಜಿಲ್ಲೆಯ ಒಂಗೊಲ್ ಕೇಂದ್ರ ಸ್ಥಾನಕ್ಕೆ ಹೋಗುವಾಗ ಮಟಮಟ ಮಧ್ಯಾಹ್ನ. ಚುರುಗುಟ್ಟುವ ಉರಿಬಿಸಿಲು. ಹೆದ್ದಾರಿಯ ಬದಿ ‘ಉಪ್ಪಲಪಾಡು ಪಕ್ಷಿಧಾಮ’ ಎನ್ನುವ ಬರಹದ ಫಲಕ ಕಂಡಿತು. ಕುತೂಹಲ ತಡೆಯದೇ, ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಆನ್‌ ಮಾಡಿ, ಈ ಪಕ್ಷಿಧಾಮದ ಬಗ್ಗೆ ‘ಸಂಶೋಧನೆ’ ಶುರುಮಾಡಿದೆ.

ಉಪ್ಪಲಪಾಡು ಪಕ್ಷಿಧಾಮಕ್ಕೆ ಬೇಸಿಗೆಯಲ್ಲಿ ಸಾವಿರಾರು ಪೆಲಿಕನ್ ಪಕ್ಷಿಗಳು ವಲಸೆ ಬರುವ ಬಗ್ಗೆ ಮಾಹಿತಿ ಸಿಕ್ಕಿತು. ಹೇಗೂ ಪಕ್ಷಿಧಾಮ ನಾನು ಪ್ರಯಾಣಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 16 ರಿಂದ 3 ಕಿ.ಮೀ ಅಂತರದಲ್ಲಿತ್ತು. ಕೈಯಲ್ಲಿ ಡಿಜಿಟಲ್ ಕ್ಯಾಮೆರಾ ಜತೆಗೆ, ಟೆಲಿ ಲೆನ್ಸ್ ಕೂಡ ಇತ್ತು ‘ಎಲ್ಲವೂ ಸುಸಜ್ಜಿತವಿದ್ದಾಗ, ಪುಳಕಿತನಾಗದೇ ಇರುತ್ತೇನೆಯೇ’. ಪಕ್ಷಿಧಾಮಕ್ಕೆ ಹೊರಟೇಬಿಟ್ಟೆ.

ಗುಂಟೂರು ಜಿಲ್ಲೆಯ ಉಪ್ಪಲಪಾಡು ಎಂಬ ಗ್ರಾಮದಲ್ಲಿ ವಲಸೆ ಬರುವ ಪಕ್ಷಿಗಳಿಗಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸೈಬೇರಿಯಾ ಮತ್ತು ಆಸ್ಟ್ರೇಲಿಯಾ ದೇಶದಿಂದ ಬರುವ ಈ ‘ಅತಿಥಿ’ಗಳಿಗಾಗಿ ಇಲ್ಲಿ ಕೃತಕ ಕೆರೆ, ಗಿಡ-ಮರಗಳು, ಕೃತಕ ದ್ವೀಪಗಳನ್ನು ಸೃಷ್ಟಿಸಲಾಗಿದೆ. ಪಕ್ಷಿಧಾಮಕ್ಕೆ ಹೊಂದಿಕೊಂಡ ಗ್ರಾಮದ ಜನರೂ ಈ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂಬುದೂ ಇಲ್ಲಿಯ ವಿಶೇಷ. ನಾನು ಪಕ್ಷಿಧಾಮಕ್ಕೆ ಬಂದಾಗ ಸಹಸ್ರಾರು ಪಕ್ಷಿಗಳ ಕಲರವ ನಮ್ಮನ್ನು ಸ್ವಾಗತಿಸಿತು. 7000ಕ್ಕೂ ಹೆಚ್ಚು ಪೆಲಿಕನ್ ಪಕ್ಷಿಗಳು, 4000ಕ್ಕೂ ಹೆಚ್ಚೂ ಪೆಂಟೆಡ್ ಸ್ಟಾರ್ಕ್‍ಗಳು ಅಲ್ಲಿಗೆ ದೇಶ ವಿದೇಶಗಳಿಂದ ವಲಸೆ ಬಂದಿದ್ದವು ಎಂಬ ಮಾಹಿತಿ ಸಿಕ್ಕಿತು. ಕೆರೆಯ ನಡುವಿದ್ದ ಮರದ ತುಂಬಾ ಪಕ್ಷಿಗಳು ಕುಳಿತಿದ್ದವು. ಲೆನ್ಸ್‌ ಝೂಮ್‌ ಮಾಡಿ ಒಂದಷ್ಟು ಫೋಟೊ ತೆಗೆದೆ.

ADVERTISEMENT

ಪೆಲಿಕನ್ ಪಕ್ಷಿಗಳನ್ನು ಕನ್ನಡದಲ್ಲಿ ಹೆಜ್ಜಾರ್ಲೆ ಎನ್ನುತ್ತಾರೆ. ಇವುಗಳನ್ನು ಉದ್ದವಾದ ಕೊಕ್ಕು ಮತ್ತು ಕೊಕ್ಕಿನೊಂದಿಗೆ ಕೆಳಗೆ ಜೋತಾಡುವ ಚೀಲದೊಂದಿಗೆ ಗುರುತಿಸಬಹುದು. ಸಾಮಾನ್ಯವಾಗಿ ಈ ಪಕ್ಷಿಗಳು ಚಳಿಗಾಲದಲ್ಲಿ ಅತ್ಯಂತ ಶೀತ ಪ್ರದೇಶಗಳಾದ ಸೈಬೇರಿಯಾ ಕಡೆಯಿಂದ ಉಷ್ಣವಲಯದ ಭಾರತ, ಪಾಕಿಸ್ತಾನ, ಮಾಲ್ಡೀವ್ಸ್‌ ಮತ್ತು ಮ್ಯಾನ್ಮಾರ್‌ ದೇಶಗಳಿಗೆ ವಲಸೆ ಬರುತ್ತವೆ. ನಮ್ಮ ನೆಲದಲ್ಲಿ ಸಂತಾನೋತ್ಪತ್ತಿ ಕಾರ್ಯ ಪೂರೈಸಿ ತಮ್ಮ ಮರಿಗಳೊಂದಿಗೆ ಮತ್ತೆ ಮರಳುತ್ತವೆ.

ನಾನು ಭೇಟಿಕೊಟ್ಟಾಗ, ಪಕ್ಷಿಗಳು ಮೀನುಗಳನ್ನು ಬೇಟೆಯಾಡಿ, ತಮ್ಮ ಗೂಡಿಗೆ ತೆರಳಿ ಮರಿಗಳಿಗೆ ತಿನ್ನಿಸುತ್ತಿದ್ದವು. ಇಂಥಹ ಅಪರೂಪದ ಕ್ಷಣಗಳಿಗೆ ನಾನೂ ಸಾಕ್ಷಿಯಾದೆ. ಹಲವು ಅಪರೂಪದ ಉತ್ತಮ ಚಿತ್ರಗಳನ್ನು ಸೆರೆಹಿಡಿದೆ.

ಚಿತ್ರಗಳು: ಲೇಖಕರವು

ಎಲ್ಲಿದೆ ಪಕ್ಷಿಧಾಮ ?

ವಿಜಯವಾಡ ವಿಮಾನ ನಿಲ್ದಾದಿಂದ ಉಪ್ಪಲಪಾಡು ಪಕ್ಷಿಧಾಮ 52 ಕಿ.ಮೀ ದೂರದಲ್ಲಿದೆ. ಗುಂಟೂರನಿಂದ 5 ಕಿ.ಮೀ ದೂರದಲಿದೆ. ವರ್ಷದ ಎಲ್ಲಾ ದಿನಗಳಲ್ಲೂ ಈ ಪಕ್ಷಿಧಾಮವನ್ನು ಸಂದರ್ಶಿಸಬಹುದು. ಬೇಸಿಗೆಯಲ್ಲಿ ಹೋದರೆ ವಲಸೆ ಪಕ್ಷಿಗಳ ಫೋಟೊ ತೆಗೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.