ADVERTISEMENT

ತತ್ತಿ ನುಂಗಬೇಡ್ವೇ ಮರಿ ಮಾಡುವೆ...

ಸೋಜಿಗ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 11:22 IST
Last Updated 1 ಜುಲೈ 2018, 11:22 IST
ನೀಲಿ ಮತ್ತು ಕೆಂಪು ಬಣ್ಣದಲ್ಲಿ ಸಯಾಮೀಸ್‌ ಮೀನು
ನೀಲಿ ಮತ್ತು ಕೆಂಪು ಬಣ್ಣದಲ್ಲಿ ಸಯಾಮೀಸ್‌ ಮೀನು   

ಗಾತ್ರದಲ್ಲಿ ಚಿಕ್ಕದಾಗಿದ್ದರೂ ಆಕ್ರಮಣಶೀಲ ಪ್ರವೃತ್ತಿ ಮತ್ತು ಆಕರ್ಷಕ ಬಣ್ಣದಿಂದ ಗಮನಸೆಳೆಯುವ ಮೀನು ಸಯಾಮೀಸ್ (Siamese fighting Fish). ಸಂತಾನೋತ್ಪತ್ತಿ ಮತ್ತು ವಂಶವನ್ನು ಬೆಳೆಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುವುದು ಜೀವ ಜಗತ್ತಿನಲ್ಲಿ ಸಾಮಾನ್ಯ. ಆದರೆ ಸಯಾಮೀಸ್‌ ಮೀನುಗಳ ವಿಚಾರದಲ್ಲಿ ತಾಯಿಯೇ ಶತ್ರು!

ಹೌದು, ತಾಯಿ ಮೀನುಒಂದು ಬಾರಿಗೆ 10 ರಿಂದ 45 ಮೊಟ್ಟೆಗಳನ್ನು ಇಡುತ್ತದೆ. ಆದರೆ ಅವುಗಳನ್ನು ಸ್ವಾಹಾ ಮಾಡಿಬಿಡುತ್ತದೆ. ಇದನ್ನು ತಡೆಯಲು ತಂದೆ ಮೀನು ಹರಸಾಹಸ ಪಡುತ್ತದೆ. ಹೇಗಾದರೂ ಮಾಡಿ ಮೊಟ್ಟೆಗಳನ್ನುತಾಯಿಯಿಂದ ಬೇರ್ಪಡಿಸುತ್ತದೆ. ಸಮುದ್ರ ದಡದಲ್ಲಿನ ಕಲ್ಲುಬಂಡೆಗಳ ನಡುವೆ ಸಣ್ಣ ಗೂಡು ನಿರ್ಮಿಸಿ, ಮೊಟ್ಟೆಗಳು ನೀರಿನಲ್ಲಿ ಕೊಚ್ಚಿಹೋಗದಂತೆ ಜೋಪಾನ ಮಾಡುತ್ತದೆ. ನಂತರ ಅವಕ್ಕೆ ತಾನೇ ಕಾವುಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳು ಜನಿಸಿದ ಮೂರು ದಿನಗಳ ನಂತರ ಈಜು ಕಲಿಯುತ್ತವೆ.

ವೈವಿಧ್ಯಮಯ ಬಣ್ಣಗಳಿಂದ ಕಂಗೊಳಿಸುವ ಸಯಾಮೀಸ್‌ ಮೀನುಗಳನ್ನು ಗುರುತಿಸುವುದು ಸುಲಭ. ಇವುಗಳಲ್ಲಿ ಹಲವು ಪ್ರಭೇದಗಳಿವೆ. ಕೆಲವು ಪ್ರಭೇದಗಳಿಗೆ ಬಾಲ ಮತ್ತು ರೆಕ್ಕೆಗಳು ಅಂಟಿಕೊಂಡಿರುವುದು ವಿಶೇಷ.ನೀಳ ದೇಹ ಮತ್ತು ಅಗಲವಾದ ರೆಕ್ಕೆಗಳು ಇರುವುದರಿಂದ, ಪರಭಕ್ಷಕ ಪ್ರಾಣಿಗಳಿಗೆ ಇವು ಆಹಾರವಾಗುತ್ತವೆ. ಸಮುದ್ರದಾಳಕ್ಕೆ ಹೋದಂತೆ ದೊಡ್ಡ ಗಾತ್ರದ ಜಲಚರಗಳು ಉಪಟಳ ನೀಡುತ್ತವೆ. ಆಳದಿಂದ ಮೇಲೆ ಬಂದರೆ ಹದ್ದು ಮತ್ತು ಹಕ್ಕಿಗಳು ಬೇಟೆಯಾಡಲು ಹೊಂಚುಹಾಕುತ್ತಲೇ ಇರುತ್ತವೆ!

ADVERTISEMENT

ತುಪ್ಪಳದಿಂದ ಆವರಿಸಿಕೊಂಡ ದೇಹ ಇವುಗಳದ್ದು. ರೆಕ್ಕೆಗಳು ಅಗಲವಾಗಿದ್ದು ಹಸಿರು, ಗಾಢ ಕಂದು, ಕೆಂಪು ಮತ್ತು ನೀಲಿ ಸೇರಿದಂತೆ ವಿವಿಧ ಬಣ್ಣಗಳಿಂದ ಕೂಡಿರುತ್ತವೆ. ಗಂಡು ಮೀನಿನ ರೆಕ್ಕೆಗಳು ಹೆಣ್ಣು ಮೀನಿನ ರೆಕ್ಕೆಗಳಿಗಿಂತಲೂ ಉದ್ದವಿರುತ್ತವೆ. ಅಗಲವಾದ ರೆಕ್ಕೆಗಳಿಂದ ನೋಡಲು ದೊಡ್ಡದಾಗಿ ಕಾಣಿಸಿದರೂ, ದೇಹ ತೆಳುವಾಗಿರುತ್ತದೆ.

ಇದು ಯಾವುದೇ ಇತರ ಜಲಚರಗಳೊಂದಿಗೆ ಬೆರೆಯುವುದಿಲ್ಲ. ಆಕ್ರಮಣಶೀಲ ಪ್ರವೃತ್ತಿಯನ್ನು ತೋರಿಸುತ್ತದೆ. ಪರಭಕ್ಷಕ ಪ್ರಾಣಿಗಳು ದಾಳಿ ಮಾಡಲು ಬಂದಾಗ, ಊಸರವಳ್ಳಿಯಂತೆ ದೇಹದ ಬಣ್ಣ ಬದಲಿಸಿಕೊಳ್ಳುವ ಸಾಮರ್ಥ್ಯವೂ ಇವುಗಳಿಗಿದೆ. ಸಮುದ್ರದಲ್ಲಿ ಆಮ್ಲಜನಕ ಸರಿಯಾಗಿ ದೊರೆಯದಿದ್ದಲ್ಲಿ, ನೀರಿನಿಂದ ಮೇಲಕ್ಕೆ ಮುಖ ಮಾಡಿ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ.

ಮ್ಯಾನ್ಮಾರ್‌, ಲಾವೋಸ್‌, ಕಾಂಬೋಡಿಯಮತ್ತುಆಗ್ನೇಯ ಏಷ್ಯಾ ದೇಶಗಳ ಕರಾವಳಿ ಪ್ರದೇಶಗಳಲ್ಲಿ ಸಯಾಮೀಸ್‌ ಮೀನುಗಳು ಹೆಚ್ಚಾಗಿ ಕಾಣಸಿಗುತ್ತವೆ. ಇದು ಸಂಪೂರ್ಣ ಮಾಂಸಾಹಾರಿ. ಸಮುದ್ರದಲ್ಲಿ ಸಿಗುವ ಸಿಗಡಿ, ಸಣ್ಣ ಗಾತ್ರದ ಮೀನುಗಳು ಮತ್ತು ಲಾರ್ವಾಗಳು ಇವುಗಳ ನೆಚ್ಚಿನ ಆಹಾರ.

ದೇಹದ ಉದ್ದ –2 ರಿಂದ 3 ಇಂಚು
ಜೀವಿತಾವಧಿ –1 ರಿಂದ 4 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.