ADVERTISEMENT

ಜಿರಾಫೆಗಳ ಕತ್ತು ಏಕೆ ಅಷ್ಟು ಉದ್ದ?

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 22:15 IST
Last Updated 14 ಜೂನ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರಿನಲ್ಲಿರುವ ಮೃಗಾಲಯದೊಳಕ್ಕೆ ಪ್ರವೇಶವಿಡುತ್ತಿದ್ದಂತೆ ನಮ್ಮ ಕಣ್ಣಿಗೆ ಬೀಳುವುದು ಎತ್ತರೆತ್ತರದ ಬಳುಕುವ ಉದ್ದುದ್ದ ಕತ್ತಿನ ಜೆರಾಫೆಗಳು. ಅವುಗಳ ಗಾತ್ರ ಹಾಗೂ ಎತ್ತರವೇ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡುಬಿಡುತ್ತದೆ. ಅವನ್ನು ನೋಡಿದ ಕೂಡಲೇ ಎಲ್ಲರಲ್ಲೂ ಮೂಡುವ ಪ್ರಶ್ನೆಯೇ ‘ಜೆರಾಫೆಯ ಕತ್ತು ಏಕೆ ಅಷ್ಟು ಉದ್ದ?’

ಹೀಗೆ ಕುತೂಹಲಕಾರಿ ಪ್ರಶ್ನೆಯನ್ನು ಕೇಳುತ್ತಾ ಮೃಗಾಲಯದೊಳಕ್ಕೆ ಹೋದರೆ ಇನ್ನಾವ ಪ್ರಾಣಿಗೂ ಇಷ್ಟುದ್ದದ ಕತ್ತು ಇರುವುದಿಲ್ಲ. ಅದಾಗ್ಯೂ ಎಲ್ಲ ಪ್ರಾಣಿಗಳಿಗೂ ಅವುಗಳದ್ದೇ ಆದ ವೈಶಿಷ್ಟ್ಯ ಇರುತ್ತದೆನ್ನಿ. ಆದರೆ ಕತ್ತು ಎಲ್ಲ ಪ್ರಾಣಿಗಳಿಗೂ ಇರುತ್ತದಾದರೂ ಜಿರಾಫೆಗಳ ಕತ್ತು ಮಾತ್ರ ಬಹಳ ವಿಶಿಷ್ಟ ಮತ್ತು ಆಕರ್ಷಕ!

ಜಿರಾಫೆಗಳ ಕತ್ತು ಏಕೆ ಅಷ್ಟು ಉದ್ದ – ಎನ್ನುವುದು ಎಲ್ಲರಂತೆ ವಿಜ್ಞಾನಿಗಳಿಗೂ ಕೌತುಕದ ವಿಷಯವೇ ಆಗಿತ್ತು. ಹಾಗಾಗಿ ಈ ಪ್ರಶ್ನೆಗೆ ಉತ್ತರ ಹುಡುಕಲು ಅನೇಕ ಜೀವವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಅದಕ್ಕೆ ಸಿಕ್ಕ ಉತ್ತರವೇ ಜೀವವಿಕಾಸ. ಅಂದರೆ ಕಾಲಾನಂತರದಲ್ಲಿ ಅವಶ್ಯಕತೆಗಳಿಗನುಗುಣವಾಗಿ ಜೀವಿಗಳ ಭೌತಿಕ ಹಾಗೂ ಆನುವಂಶಿಕ ಗುಣಲಕ್ಷಣಗಳಲ್ಲಿ ಬದಲಾವಣೆಯಾಗುತ್ತದೆ ಎನ್ನುವುದು. ವಿಕಸನವು ಎಲ್ಲ ಜೀವಿಗಳಲ್ಲೂ ಸಾಮಾನ್ಯವಾಗಿದ್ದರೂ ‘ಜೀವವಿಕಾಸ ಎಂದರೇನು? ಅದು ಹೇಗಾಯಿತು?’ – ಎಂದು ವಿವರಿಸಲು ಮಾತ್ರ ಜಿರಾಫೆಗಳ ಉದ್ದನೆಯ ಕತ್ತೇ ಪ್ರಮಾಣಿತ ಉದಾಹರಣೆಯಾಗಿಬಿಟ್ಟಿದೆ. ಜೀವಿಗಳ ವಿಕಾಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಾದಗಳಿದ್ದರೂ ಕೆಲವು ಮಾತ್ರವೇ ಒಪ್ಪುವಂಥವು; ಅಷ್ಟೇ ಅಲ್ಲ, ಇಲ್ಲಿ ಒಬ್ಬೊಬ್ಬರ ಸಿದ್ಧಾಂತವೂ ಭಿನ್ನಭಿನ್ನ.

ADVERTISEMENT

ಜೀವವಿಕಾಸದ ಅಧ್ಯಯನದ ಆರಂಭದಲ್ಲಿ ಜೀನ್‌ ಬ್ಯಾಪಿಸ್ಟ್‌ ಲಮಾರ್ಕ್‌ ಮಂಡಿಸಿದ್ದ ವಾದವೇ ‘ಯೂಸ್‌ ಅ್ಯಂಡ್‌ ಡಿಸ್‌ಯೂಸ್‌ ಥಿಯರಿ’. ಅಂದರೆ ನಮ್ಮ ದೇಹದ ಯಾವುದೇ ಅಂಗವೂ ನಮ್ಮ ಅವಶ್ಯಕತೆಗೆ ತಕ್ಕಂತೆ ಬೆಳವಣಿಗೆಯಾಗಿದೆ. ಅದನ್ನು ಬಳಸುತ್ತಿದ್ದಂತೆ ವಿಕಾಸವಾಗುತ್ತದೆ ಇಲ್ಲವಾದಲ್ಲಿ ನಶಿಸಿ ಹೋಗುತ್ತದೆ ಎಂದರ್ಥ. ಅಂತೆಯೇ ಜೆರಾಫೆಗಳೂ ಎತ್ತರೆತ್ತರದ ಗಿಡಗಳನ್ನೂ ಮರದ ಸೊಪ್ಪನ್ನೂ ತಿನ್ನಲು ಕತ್ತನ್ನು ಎತ್ತರಕ್ಕೆ ಚಾಚುತ್ತಿದ್ದುದರಿಂದ ಅವುಗಳ ಪೂರ್ವಜರ ಕತ್ತುಗಳು ಉದ್ದವಾದವು. ವಂಶಪಾರಂಪರಿಕವಾಗಿ ಅದು ಮಂದುವರೆದು ಉದ್ದ ಕತ್ತಿನ ಜಿರಾಫೆಗಳಷ್ಟೇ ಉಳಿದುಕೊಂಡವು ಎನ್ನುವುದು ಲಮಾರ್ಕರ ವಾದ.

ಮುಂದೆ ಮತ್ತೊಬ್ಬ ಜೀವವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಮತ್ತೊಂದು ಬಗೆಯ ವಾದವನ್ನು ಮುಂದಿಟ್ಟರು. ಅದುವೇ ‘ನ್ಯಾಚುರಲ್‌ ಸೆಲೆಕ್ಷನ್‌’ ಅಥವಾ ‘ನೈಸರ್ಗಿಕ ಆಯ್ಕೆ’ – ನಿಸರ್ಗದಲ್ಲಿರುವ ಬಲಿಷ್ಠವಾದ, ಉಳಿವಿಗಾಗಿ ಹೋರಾಡಿ ಗೆಲ್ಲುವ ಮತ್ತು ಸಂತಾನೋತ್ಪತ್ತಿಯನ್ನು ಮುಂದುವರೆಸಬಲ್ಲಂತಹ ಶಕ್ತಜೀವಿಗಳನ್ನು ನಿಸರ್ಗವೇ ಆಯ್ದುಕೊಳ್ಳುತ್ತದೆ ಎಂದರು ಡಾರ್ವಿನ್.‌ ಅಂತೆಯೇ ನಿಸರ್ಗದಲ್ಲಿ ವಿವಿಧ ಉದ್ದದ ಕತ್ತಿನ ಜೀವಿಗಳಿದ್ದವು. ಅವುಗಳಲ್ಲಿ ಉದ್ದ ಕತ್ತಿನವು ಗಿಡ-ಮರಗಳು ಎಷ್ಟೇ ಎತ್ತರವಾಗಿದ್ದರೂ ಅವನ್ನು ಎಟುಕಿಸಿಕೊಂಡು ತಿನ್ನಲು ಶಕ್ತವಾಗಿದ್ದರಿಂದ ಅಂತಹವು ಹೆಚ್ಚೆಚ್ಚು ಬದುಕಿದವು. ಹೀಗೆ ಪ್ರಕೃತಿಯೇ ಉದ್ದುದ್ದ ಕತ್ತಿನ ಜಿರಾಫೆಗಳನ್ನು ಬದುಕುಳಿಯುವಂತೆ ಆರಿಸಿಕೊಂಡಿತು ಎಂಬುದು ಡಾರ್ವಿನ್ನರ ವಾದ. ಈ ವಾದವನ್ನೇ ಹೆಚ್ಚು ಜನರು ಒಪ್ಪಿಕೊಂಡಿದ್ದರು.

ಆದರೆ ‘ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌’ನ ‘ಇನ್‌ಸ್ಟಿಟ್ಯೂಟ್‌ ಆಫ್‌ ಪೇಲಿಯಂಟಾಲಜಿ ಅಂಡ್‌ ಪೇಲಿಯಾಂಥ್ರೋಪಾಲಜಿ’ಯ ವಿಜ್ಞಾನಿಗಳ ಹೊಸ ಸಂಶೋಧನೆಯೊಂದು ಇವೆರಡೂ ವಾದಗಳು ತಪ್ಪಿರಬಹುದು ಎಂದು ಹೇಳುತ್ತಿದೆ. ಶಿಕೀ ವ್ಯಾಂಗ್‌ ಮತ್ತು ತಂಡದವರ ಪ್ರಕಾರ ‘ಸೆಕ್ಷ್ಯುಯಲ್‌ ಸೆಲೆಕ್ಷನ್‌’ ಅಥವಾ ‘ಲಿಂಗದ ಆಯ್ಕೆ’ ಜಿರಾಫೆಗಳ ಉದ್ದ ಕತ್ತಿಗೆ ಕಾರಣವಂತೆ. ಅರ್ಥಾತ್‌, ಉದ್ದುದ್ದ ಕತ್ತಿರುವ ಗಂಡು ಜೆರಾಫೆಗಳನ್ನು ಹೆಣ್ಣುಗಳು ಮೆಚ್ಚಿಕೊಳ್ಳುತ್ತಿದ್ದವು. ಹಾಗಾಗಿ ಉದ್ದ ಕತ್ತಿರುವ ಜೆರಾಫೆಗಳೇ ಹೆಚ್ಚು ಉಳಿದು ವಿಕಾಸವಾದವು. ಹೀಗೆ ಉದ್ದುದ್ದ ಕತ್ತು ಬೆಳೆಯಲು ಕಾರಣ ಹೆಣ್ಣುಗಳಿಗಾಗಿ ಗಂಡುಗಳ ನಡುವೆ ನಡೆದ ಹೊಡೆದಾಟ ಎನ್ನುತ್ತಾರೆ, ಶಿಕೀ ವ್ಯಾಂಗ್‌ ಮತ್ತು ತಂಡ.

ಶಿಕಿ ವ್ಯಾಂಗ್‌ ಮತ್ತು ತಂಡದವರಿಗೆ ಉತ್ತರ ಚೀನಾದಲ್ಲಿ ಇತ್ತೀಚೆಗೆ ಸುಮಾರು ಎರಡೂವರೆ ಕೋಟಿ ವರ್ಷಗಳಿಂದ ಒಂದೂಕಾಲು ಕೋಟಿ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಯೊಂದು ದೊರೆತಿತ್ತು. ‘ಡಿಸ್ಕೋಕೆರಿಕ್ಸ್‌ ಶಿಯೇಚಿ’ ಎನ್ನುವ ಇದನ್ನು ಅವರು ಅಧ್ಯಯನ ಮಾಡಿದಾಗ, ಇದು ಗಂಡು ಜಿರಾಫೆ ಮತ್ತು ಅದರ ಶಿರಭಾಗದಲ್ಲಿ ತಟ್ಟೆಯಂತಹ ಕೊಂಬಿನ ರಚನೆಯಿದೆ ಎನ್ನುವುದು ಕಂಡುಬಂದಿದೆ. ತಲೆ-ಕತ್ತು-ಬೆನ್ನುಮೂಳೆಯ ಈ ವಿಶಿಷ್ಟ ರಚನೆಗಳು ತಲೆ-ತಲೆ ಗುದ್ದಾಟಕ್ಕಾಗಿಯೇ ರೂಪುಗೊಂಡಿರಬೇಕು. ‘ಫೈನೈಟ್‌ ಎಲಿಮೆಂಟಲ್‌ ಅನಾಲಿಸಿಸ್‌’ ಅರ್ಥಾತ್‌ ‘ಗಣಕೀಕೃತ ಧಾತುಪರೀಕ್ಷೆ’ಯೂ ಡಿಸ್ಕೋಕೆರಿಕ್ಸ್‌ ಶಿಯೇಚಿಯಲ್ಲಿರುವ ಅಟ್ಲಾಂಟೋ-ಆಕ್ಸಿಪಿಟಾಲಿಸ್‌ ಹಾಗೂ ಇಂಟರ್‌ ಸರ್ವಿಕಲ್‌ ಆರ್ಟಿಕ್ಯುಲೇಷನ್‌ ರಚನೆ ಗುದ್ದಾಟಕ್ಕೇ ತಕ್ಕುದಾಗಿದೆ ಎನ್ನುತ್ತಿದೆ. ಇದರ ದಂತಕವಚದ ಸಮಸ್ಥಾನಿಗಳ ದತ್ತಾಂಶವೂ ಬೇರೆಲ್ಲಾ ಸಸ್ಯಾಹಾರಿಗಳ ಡೆಲ್ಟಾ 13C ಬೆಲೆಗೆ ಹೋಲಿಸಿದರೆ ಹೆಚ್ಚಾಗಿಯೇ ಇದೆ. ಡೆಲ್ಟಾ 13C ಬೆಲೆಯು ಸಸ್ಯಜನ್ಯ ಎಣ್ಣೆಯ ಮಟ್ಟವನ್ನು ಹೇಳುತ್ತದೆ. ಹಾಗಾಗಿ ಇದೊಂದು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಜೀವಿ ಎಂದು ಖಚಿತವಾಯಿತು.

ಇದು ಉಳಿದೆಲ್ಲಾ ಸ್ತನಿಗಳ ತಲೆ-ಕತ್ತುಗಳ ನಡುವಿನ ಕೀಲುಗಳಿಗಿಂತ ಸಂಕೀರ್ಣವಾಗಿದೆ. ಅವು ಟಗರುಗಳಂತೆ ತಲೆಯಿಂದ ಗುದ್ದಾಡುತ್ತಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಪಳೆಯುಳಿಕೆಯ ದಂತಕವಚ ಸಮಸ್ಥಾನಿಗಳ ದತ್ತಾಂಶಗಳ ಪ್ರಕಾರ ಡಿಸ್ಕೋಕೆರಿಕ್ಸ್‌ ಶಿಯೇಚಿಯ ದಂತರಚನೆ ಇತರೆ ಸಸ್ಯಾಹಾರಿ ಪ್ರಾಣಿಗಳಿಗಿಂತ ಭಿನ್ನವಾಗಿದೆಯಂತೆ. ಹಾಗಾಗಿ ಈ ಪರೀಕ್ಷೆಗಳು ಹೇಳುವುದಿಷ್ಟೇ, ಅವು ಇಂದಿನ ಜಿರಾಫೆಗಳಂತೆ ಎತ್ತರದಲ್ಲಿರುವ ಎಲೆ–ಸೊಪ್ಪುಗಳನ್ನು ಎಟುಕಿಸಿಕೊಂಡು ತಿನ್ನಬಲ್ಲವಾಗಿದ್ದವು. ಇವುಗಳ ವಿಶಿಷ್ಟವಾದ ತಲೆ-ಕತ್ತಿನ ರಚನೆ ಹಾಗೂ ತಟ್ಟೆಯಾಕಾರದ ಕೊಂಬಿನ ರಚನೆಯು ಅವುಗಳ ವಂಶಸ್ಥರೊಂದಿಗಿನ ಕಾದಾಟವನ್ನು ಸೂಚಿಸುತ್ತದೆ. ಗಂಡುಜಿರಾಫೆಗಳಲ್ಲಿ ಮಾತ್ರ ಇಂತಹ ರಚನೆ ಇದ್ದುದರಿಂದ, ಬಹುಶಃ ಹೆಣ್ಣುಗಳಿಗಾಗಿ ಗಂಡುಗಳು ಗುದ್ದಾಡುತ್ತಿದ್ದಿರಬೇಕು ಮತ್ತು ಹೆಣ್ಣುಗಳಿಗೂ ಉದ್ದ ಕತ್ತಿನ ಗಂಡುಗಳೇ ಹೆಚ್ಚು ಮೆಚ್ಚುಗೆಯಾಗುತ್ತಿದ್ದರಿಂದ ಉದ್ದ ಕತ್ತಿನ ಜೆರಾಫೆಗಳೇ ವಿಜಯೀಗಳಾದವು. ಅಂತಹವುಗಳ ವಂಶಾವಳಿಯೇ ಪ್ರಾಬಲ್ಯವಾಗಿ, ಉಳಿದವು ಅಳಿದು ಹೋಗಿರಬೇಕು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಅರ್ಥಾತ್‌, ಅವುಗಳ ಕತ್ತು ಉದ್ದವಾಗಲು ಆಹಾರವಷ್ಟೇ ಅಲ್ಲದೇ ಲಿಂಗವೂ ಕಾರಣ ಎಂದಾಯಿತು.

ಆದರೆ ಇಂದು ನಾವು ಕಾಣುವ ಜೆರಾಫೆಗಳು ತಲೆಯಿಂದ ಗುದ್ದಾಡದೆ ತಮ್ಮ ಕತ್ತುಗಳಿಂದ ಸೆಣಸಾಡುತ್ತವೆ. ಉದ್ದವಾಗಿರುವುದರಿಂದಲೋ ಏನೋ ಟಗರಿನಂತೆ ಬಲವಾಗಿ ಹೋರಾಡಲು ಸಾಧ್ಯವಾಗದಿರುವುದರಿಂದ ಇವು ಕತ್ತುಗಳನ್ನು ಬಳಸಿಕೊಂಡು ಕಾದಾಡುತ್ತವೆ. ಇದೂ ವಿಕಸನದ ಒಂದು ಹಂತವೇ ಇರಬೇಕು.

ಡಿಸ್ಕೋಕೆರಿಕ್ಸ್‌ ಶಿಯೇಚಿಯು ಜಿರಾಫೆಗಳ ಕತ್ತು ಹೇಗೆ ಮತ್ತು ಏಕೆ ಅಷ್ಟು ಉದ್ದವಾಯಿತು ಎಂದು ಹೇಳುತ್ತಾ ಜೀವಿವಿಕಾಸವನ್ನು ಅರ್ಥಮಾಡಿಸುವಂತಹ ಮತ್ತೊಂದು ಸಾಕ್ಷಿಯಾಗಿದೆ. ಡಾರ್ವಿನ್‌ನ ಸಿದ್ಧಾಂತವನ್ನೂ ತಳ್ಳಿಹಾಕಿ ವಿಕಾಸವಾದಕ್ಕೆ ಜೀವಿಗಳ ಲಿಂಗವೂ ಕಾರಣ ಎನ್ನುವುದನ್ನು ಈ ಸಂಶೋಧನೆ ತೋರಿಸಿಕೊಟ್ಟಿದೆ. ಅಂದಿನ ಗಂಡುಜಿರಾಫೆಗಳ ನಡುವೆ ಹೆಣ್ಣುಜಿರಾಫೆಗಳಿಗಾಗಿ ಅದೆಷ್ಟು ಕಾಳಗಗಳು ನಡೆದಿದ್ದುವೋ ತಿಳಿಯದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.