ADVERTISEMENT

ಅಪಾರ್ಟ್‌ಮೆಂಟ್‌ಗಳಲ್ಲೂ ಇಲ್ಲ ನೀರು!

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:42 IST
Last Updated 21 ಮೇ 2019, 19:42 IST
   

ನಗರದೊಳಗಿನ ಕೆಲವು ಬಡಾವಣೆಗಳೂ ಸೇರಿದಂತೆ ಹೊರವಲಯದ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಅಪಾರ್ಟ್‌ಮೆಂಟ್‌ಗಳ ಪರಿಸ್ಥಿತಿಯಂತೂ ಶೋಚನೀಯ. ಎಲ್ಲ ಮೂಲಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಅಂದಚೆಂದ ನೋಡಿ ಮನೆ ಖರೀದಿಸಿದ ಗ್ರಾಹಕರು ಈಗ ಪೆಚ್ಚುಮೋರೆ ಹಾಕಿ ಕುಳಿತಿದ್ದಾರೆ. ವಿವಿಧ ಬಡಾವಣೆಗಳಲ್ಲಿ 50 ಲಕ್ಷದಿಂದ ಒಂದೂವರೆ ಕೋಟಿ ರೂಪಾಯಿವರೆಗೆ ಫ್ಲ್ಯಾಟ್‌ಗಳು ಮಾರಾಟವಾಗಿವೆ. ಇಷ್ಟು ದುಬಾರಿ ಹಣ ತೆತ್ತು ಖರೀದಿಸಿದ ಫ್ಲ್ಯಾಟ್‌ನಲ್ಲಿ ನೀರಿಲ್ಲ ಎಂದರೆ ಹೇಗೆ ಎಂಬುದು ನಿವಾಸಿಗಳ ಪ್ರಶ್ನೆ.ಹೋಟೆಲ್‌, ಲಾಡ್ಜ್, ಕಲ್ಯಾಣ ಮಂಟಪಗಳಲ್ಲೂ ಇದೇ ಪರಿಸ್ಥಿತಿ ಇದೆ.

ಶಿಫ್ಟ್ ಲೆಕ್ಕದಲ್ಲಿ ನೀರು, ಸ್ವಿಮಿಂಗ್ ಪೂಲ್ ಬಂದ್

ADVERTISEMENT

ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದಲ್ಲಿರುವ ಪಿರ‌ಮಿಡ್ ಟೆಂಪಲ್ ಬೆಲ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೀರಿನ ಅಭಾವ ತಲೆದೋರಿದ್ದು, ಶಿಫ್ಟ್ ಲೆಕ್ಕದಲ್ಲಿ ನೀರು ಪೂರೈಸಲಾಗುತ್ತಿದೆ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ನಲ್ಲಿಯಲ್ಲಿ ನೀರು ಬರುವುದಿಲ್ಲ. ಈ ಸಮಯದಲ್ಲಾದರೂ ನೀರು ಉಳಿತಾಯ ಮಾಡುವುದು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಉದ್ದೇಶ. ಬೇಸಿಗೆಯ ಕಾರಣ ಸ್ವಿಮಿಂಗ್ ಪೂಲ್ ಬಂದ್ ಮಾಡಲಾಗಿದೆ. ಸಾಕಷ್ಟು ನೀರು ಲಭ್ಯವಾದ ಮೇಲೆಯೇ ಈಜುಕೊಳಕ್ಕೆ ಮರುಜೀವ ಬರಲಿದೆ.

ಕಾವೇರಿ ನೀರು ವಾರಕ್ಕೆರಡು ಬಾರಿ ಪೂರೈಕೆಯಾದರೂ, ಒಂದೇ ದಿನಕ್ಕೆ ಖಾಲಿಯಾಗಿಬಿಡುತ್ತದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಮಂಜುನಾಥ್. ಇಲ್ಲಿ ನಾಲ್ಕು ಬೋರ್‌ವೆಲ್‌ಗಳಿದ್ದರೂ ನೀರಿನ ಒರತೆ ಕಡಿಮೆಯಿದೆ. ಮೋಟಾರ್ ಚಾಲನೆ ಮಾಡಿದ ಅರ್ಧ ಗಂಟೆಯಲ್ಲಿ ನೀರು ನಿಂತುಬಿಡುತ್ತದೆ. ಹೀಗಾಗಿ ಟ್ಯಾಂಕರ್‌ ಮೇಲೆ ಅವಲಂಬನೆ ಅನಿವಾರ್ಯ ಎನ್ನುವುದು ಅವರ ಮಾತು. ದಿನಕ್ಕೆ 8ರಿಂದ 10 ಟ್ಯಾಂಕರ್ ಹಾಕಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಟ್ಯಾಂಕರ್‌ಗೆಂದೇ ನಿತ್ಯ ಸುಮಾರು ₹6 ಸಾವಿರ ಖರ್ಚು ಮಾಡಲಾಗುತ್ತಿದೆ.

ಬತ್ತಿದ ಕೊಳವೆಬಾವಿ

ಕಾವೇರಿ ನೀರು ಪೂರೈಕೆಯಾಗುವ ಪ್ರದೇಶಗಳ ಪರಿಸ್ಥಿತಿಯೇ ಹೀಗಿದೆ. ಇನ್ನು ಕಾವೇರಿ ನೀರಿನ ಸಂಪರ್ಕ ಇಲ್ಲದ ಮನೆ, ಅಪಾರ್ಟ್‌ಮೆಂಟ್‌ಗಳ ಸ್ಥಿತಿ ಕೇಳುವುದೇ ಬೇಡ. ಸರ್ಜಾಪುರ ರಸ್ತೆಯ ಸನ್‌ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ನೂರಾರು ಬ್ಲಾಕ್‌ಗಳಿವೆ. ಇಲ್ಲಿ ಜಲಮಂಡಳಿಯ ನೀರಿನ ಸಂಪರ್ಕ ಇಲ್ಲ. ಇರುವ ಮೂರು ಬೋರ್‌ವೆಲ್‌ಗಳು ನೀರಿನ ಹೊಣೆ ಹೊತ್ತುಕೊಂಡಿದ್ದವು. ಆದರೆ ಬೇಸಿಗೆ ಅವಧಿಯು ಇಲ್ಲಿನ ನಿವಾಸಿಗಳನ್ನು ಹೈರಾಣಾಗಿಸಿದೆ. ಒಂದು ಬ್ಲಾಕ್‌ಗೆ ನಿತ್ಯ 5 ಟ್ಯಾಂಕರ್ ನೀರು ಬೇಕೇ ಬೇಕು ಎನ್ನುತ್ತಾರೆ ಅಪಾರ್ಟ್‌ನಿವಾಸಿ ನಿವಾಸಿಗಳ ಸಮಿತಿಯ ಸದಸ್ಯ ಶಿವರಾಜ್.ಬೆಳ್ಳಂದೂರಿನ ಮೀನಾಕ್ಷಿ ಎನ್‌ಕ್ಲೇವ್‌ನಲ್ಲೂ ಇದೇ ಸ್ಥಿತಿ ಇದೆ. ನಿತ್ಯ ನಾಲ್ಕು ಟ್ಯಾಂಕರ್ ನೀರು ಅಗತ್ಯ ಎನ್ನುವುದು ನಿವಾಸಿ ಹಮೀದ್ ಮಾತು.

ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡ ಮನೆಗಳಿಗೆ ಮಾತ್ರವೇ ನೀರಿನ ಸಂಪರ್ಕ ಎಂದುಜಲಮಂಡಳಿ ಆದೇಶಿಸಿದ್ದರೂ, ಅದು ನೆಪಕ್ಕಷ್ಟೇ ಎಂಬಂತಾಗಿದೆ. ಒಂದು ಚಿಕ್ಕ ಗುಂಡಿ ತೋಡಿ ಅದೇ ಮಳೆ ನೀರು ಸಂಗ್ರಹ ವ್ಯವಸ್ಥೆ ಎಂದು ತೋರಿಸಿ ನೀರಿನ ಸಂಪರ್ಕ ಪಡೆಯುವವರೂ ಇದ್ದಾರೆ. ಹೀಗಾಗಿ ಬೇಸಿಗೆಯಲ್ಲಿ ಜಲಕ್ಷಾಮ ಬಾಗಿಲಿಗೆ ಬಂದು ನಿಂತಿದೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರ ಮಳೆನೀರು ಸಂಗ್ರಹ ಹಾಗೂ ಜಲಮರುಪೂರಣ ವ್ಯವಸ್ಥೆ ಇದೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕಿದೆ.

ಜಲಮಂಡಳಿ ಹೇಳುವುದೇನು?

ಯಾವುದೇ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡಿಲ್ಲ ಎನ್ನುತ್ತದೆ ಜಲಮಂಡಳಿ.ನಗರದ 575 ಚದರ ಕಿಲೋಮೀಟರ್ ವ್ಯಾಪ್ತಿಯು ಬೆಂಗಳೂರು ಜಲಮಂಡಳಿಗೆ ಬರುತ್ತದೆ. ಇಲ್ಲಿ 9.70 ಲಕ್ಷ ಕೊಳಾಯಿ ನೀರಿನ ಸಂಪರ್ಕ ಇವೆ. ಬೇಸಿಗೆಯ ಕಾರಣ ಈ ವ್ಯಾ‍ಪ್ತಿಯಲ್ಲಿ ಫೆಬ್ರುವರಿಯ ಬಳಿಕ ನೀರು ಪೂರೈಕೆಯನ್ನು ಹೆಚ್ಚಿಸಲಾಗಿದೆ ಎನ್ನುತ್ತಾರೆ ಜಲಮಂಡಳಿ ಮುಖ್ಯ ಎಂಜಿನಿಯರ್ ಬಿ.ಸಿ. ಗಂಗಾಧರ್.

ಕಾವೇರಿ ನೀರಿನ ಜೊತೆ ಬೋರ್‌ವೆಲ್‌ ನೀರನ್ನೂ ಮೇಲೆತ್ತಿ ಬಳಸುತ್ತಿದ್ದ ಕಾರಣ ಇಷ್ಟು ದಿನ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಬೇಸಿಗೆಯಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ನೀರಿನ ಬವಣೆ ಎದುರಾಗಿದೆ ಎನ್ನುವುದು ಅವರ
ಸಮರ್ಥನೆ.

575 ಚದರ ಕಿಲೋಮೀಟರ್‌ನಿಂದ 800 ಚದರಕಿಲೋಮೀಟರ್ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದ್ದು, ಈ ವ್ಯಾಪ್ತಿಯ ಪ್ರದೇಶಗಳ ಜನರು ಕೊಳವೆಬಾವಿ ಮೇಲೆಯೇ ಅವಲಂಬಿತರಾಗಿದ್ದಾರೆ. ಮೂರ್ನಾಲ್ಕು ವರ್ಷಗಳಲ್ಲಿ ಈ ವ್ಯಾಪ್ತಿಯ ಜನರಿಗೂ ಕಾವೇರಿ ನೀರು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ 23 ಹಳ್ಳಿಗಳಿಗೆ ನೀರು ಒದಗಿಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನೀರು ಮಿತವ್ಯಯಕ್ಕೆ ನಗರದ ಕೆಲವು ವಸತಿ ಸಮುಚ್ಚಯಗಳ ನಿವಾಸಿಗಳ ಸಂಘಗಳು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿವೆ. ಇವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿಗಳಿಗೆ ಸೂಚನೆ ನೀಡಿವೆ.

* ತೀರಾ ಅಗತ್ಯವಿದ್ದರೆ ಮಾತ್ರ ನೀರು ಬಳಸಿಕೊಳ್ಳಿ
* ನಲ್ಲಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ತಕ್ಷಣ ದುರಸ್ತಿಗೊಳಿಸಿ
* ಅರ್ಧ ಫ್ಲಷ್ ಮಾಡುವುದನ್ನು ರೂಢಿಸಿಕೊಳ್ಳಿ
* ನಿಯಮಿತವಾಗಿ ಕಾರು ತೊಳಿಯುವ ಅಭ್ಯಾಸ ಕೈಬಿಡಿ
* ಬಕೆಟ್ ನೀರಿನಿಂದ ಕಾರು ಒರೆಸಿದರೆ ಸಾಕು
* ಪೂರ್ಣ ತುಂಬಿದ ಮೇಲೆಯೇ ವಾಷಿಂಗ್ ಮಷಿನ್‌ ಆನ್ ಮಾಡಿ
* ಬಳಸಿದ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡಿ
* ಷವರ್ ಸ್ನಾನವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ
* ಷವರ್‌ ಸ್ನಾನದ ವೇಳೆ ಮೊದಲಿಗೆ ಸುರಿಯುವ ತಣ್ಣೀರು ವ್ಯರ್ಥ ಮಾಡಬೇಡಿ
* ಟ್ಯಾಂಕರ್ ನೀರಿಗಾಗಿ ಹೆಚ್ಚುವರಿ ನಿರ್ವಹಣಾ ವೆಚ್ಚ ಭರಿಸಬೇಕು
* ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು

* ಮುಂದಿನ ಮೂರು ತಿಂಗಳಿಗೆ ನಗರಕ್ಕೆ ನೀರಿನ ಸಮಸ್ಯೆ ಇಲ್ಲ. ಕೆಆರ್‌ಎಸ್‌ನಲ್ಲಿ 7 ಹಾಗೂ ಕಬಿನಿಯಲ್ಲಿ 3 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಈಗ ನಗರಕ್ಕೆ ನಿತ್ಯ 145.4 ಕೋಟಿ ಲೀಟರ್ ನೀರು ಪೂರೈಸಲಾಗುತ್ತಿದೆ.

-ಬಿ.ಸಿ. ಗಂಗಾಧರ್, ಜಲಮಂಡಳಿ ಮುಖ್ಯ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.