ADVERTISEMENT

ಗೋಲ್ಡನ್ ಶೋವರ್ ಎಂಬ ಚೆಂದುಳ್ಳಿ ಚೆಲುವೆ!

​ಪ್ರಜಾವಾಣಿ ವಾರ್ತೆ
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಕಕ್ಕೆ ಗಿಡ
ಕಕ್ಕೆ ಗಿಡ   

ಸಸ್ಯ ಸಾಮ್ರಾಜ್ಯ, ಅಪರಿಮಿತ ವೈಚಿತ್ರ್ಯ, ವೈಶಿಷ್ಟ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಒಂದು ವಿಸ್ಮಯ ಜಗತ್ತು. ಈ ಭವ್ಯ ಸಾಮ್ರಾಜ್ಯದ ಒಬ್ಬ ಚೆಂದುಳ್ಳಿ ಚೆಲುವೆ ಈ ಗೋಲ್ಡನ್ ಶೋವರ್ (Golden shower). ಹಸಿರು ಸೀರೆಯನ್ನುಟ್ಟು ಬಂಗಾರದ ಆಭರಣಗಳಿಂದ ಸಿಂಗರಿಸಿಕೊಂಡು ಮದುವಣಗಿತ್ತಿಯಂತೆ ಶೋಭಿಸುವ ಈ ಚೆಲುವೆ ಕಂಡದ್ದು ಉಣಕಲ್ ಕೆರೆಯ ತೀರದ ಉದ್ಯಾನವನದಲ್ಲಿ.

ಫ್ಯಾಬೇಸಿ(Fabaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿರುವ ಈ ಗೋಲ್ಡನ್ ಶೋವರ್‌ನ
ವೈಜ್ಞಾನಿಕ ಹೆಸರು ಕ್ಯಾಸಿಯಾ ಫಿಸ್ಟುಲಾ ಎಲ್ (Cassia Fistula L.) ಕನ್ನಡದಲ್ಲಿ ಹೆಗ್ಗಕ್ಕೆ ಮರ ಅಥವಾ ಕಕ್ಕೆ ಮರ ಎಂದು ಕರೆಯುತ್ತಾರೆ. ಹೆಚ್ಚಾಗಿ ಉದ್ಯಾನವನಗಳಲ್ಲಿ, ಮನೆಯಂಗಳದಲ್ಲಿ, ದಾರಿಯ ಪಕ್ಕದಲ್ಲಿ ಆಲಂಕಾರಿಕ ಗಿಡವಾಗಿ ಬೆಳೆಸಲ್ಪಡುವ ಈ ಗಿಡದ ತವರು ನಮ್ಮ ಭಾರತ. 10–20 ಮೀಟರಿನಷ್ಟು ಸಾಧಾರಣ ಎತ್ತರ ಬೆಳೆಯುವ ಕಕ್ಕೆ ಮರ. ಇವುಗಳನ್ನು ಪಾಳು ಭೂಮಿಯಲ್ಲಿಯೂ ಬೆಳೆಯಬಹುದು.

ಗೋಲ್ಡನ್ ಶೋವರ್‌ ಕೇರಳ ರಾಜ್ಯ ಹೂವಾಗಿದ್ದು, ಈ ವೃಕ್ಷವನ್ನು ಮಲಯಾಳಂನಲ್ಲಿ ಕನಿಕೊನ್ನ ಎಂದು ಕರೆಯುತ್ತಾರೆ. ಅಲ್ಲಿನ ವಿಶು ಎಂಬ ಸಾಂಪ್ರದಾಯಿಕ ಹಬ್ಬದಲ್ಲಿ ವಿಶುಕ್ಕಾನಿ (ವಿಶು ಹಬ್ಬದ ದಿನದಂದು ಎದ್ದ ತಕ್ಷಣ ಮೊದಲು ಪವಿತ್ರವಾದ ವಸ್ತುವನ್ನು ನೋಡುವ ರೂಢಿ) ಸಂದರ್ಭದಲ್ಲಿ ಈ ವೃಕ್ಷವನ್ನು ನೋಡಿದರೆ ವರ್ಷಪೂರ್ತಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಕಕ್ಕೆ ಮರದ ಹಣ್ಣುಗಳಿಂದ ನೈಸರ್ಗಿಕ ಬಣ್ಣವನ್ನೂ ಹೊರತೆಗೆದಿದ್ದು ಅದನ್ನು 32 ಬಗೆಯ ಛಾಯೆಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಹಣ್ಣುಗಳಲ್ಲಿನ ಬಣ್ಣದಂಶಕ್ಕೆ ಫಿಸ್ಟುಲಿಕ ಆಸಿಡ್ ಎಂದು ಹೆಸರಿಸಲಾಗಿದೆ.

ADVERTISEMENT

ತಮ್ಮಲ್ಲಿನ ಔಷಧೀಯ ಗುಣಗಳಿಂದ ಆಯುರ್ವೇದ, ಯುನಾನಿ ಚಿಕಿತ್ಸಾ ಪದ್ಧತಿಯಲ್ಲಿ ಈ ಸಸ್ಯ ಪ್ರಭೇದ ಸಹಕಾರಿಯಾಗಿವೆ. ಇದಕ್ಕೆ ಕ್ಯಾಸಿಯಾ ಫಿಸ್ಟುಲಾ ಕೂಡಾ ಹೊರತಾಗಿಲ್ಲ. ಇದರ ಎಲೆ, ಖಾಂಡದ ತೊಗಟೆ, ಹಣ್ಣಿನ ತಿರುಳು ಎಲ್ಲವೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಹಣ್ಣಿನ ತಿರುಳು ಹೆಚ್ಚು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ಹೊಂದಿದೆ. ಇದರ ಎಲೆಗಳ ಕಚ್ಚಾ ರಸವು ಚಿಕೂನ್‌ಗುನ್ಯ ಹರಡುವ ಸೊಳ್ಳೆಗಳ ಲಾರ್ವಾಗಳನ್ನು ಕೊಲ್ಲುವಲ್ಲಿ ಸಹಕಾರಿಯಾಗಿದೆ. ಸ್ಯಾಂಡ್-ಫ್ಲೈ ಮೂಲಕ ಮಾನವನ ಅಂಗಾಂಶಗಳಿಗೆ ಪ್ರವೇಶಿಸುವ ಲೇಶ್ಮೇನಿಯಾ ಎಂಬ ರೋಗಾಣುವಿನಿಂದ ಉಂಟಾಗುವ ಚರ್ಮರೋಗದ ನಿಯಂತ್ರಣದಲ್ಲಿ ಇದರ ಹಣ್ಣಿನ ಹೆಗ್ಸೇನ ರಸವು ಸಹಕಾರಿಯಾಗಿದೆ. ಅಜೀರ್ಣತೆಯಿಂದ ಬಳಲುವ ಮೇಯುವ ಪ್ರಾಣಿಗಳಾದ ಆಡು, ದನ, ಎಮ್ಮೆಯಂತ ಪ್ರಾಣಿಗಳಿಗೆ ತುಂಬಾನೇ ಸಹಕಾರಿ. ಶಿಲೀಂಧ್ರ ವಿರೋಧಿ, ಉರಿಯೂತ ವಿರೋಧಿಯಂಥ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಗೋಲ್ಡನ್ ಶೋವರ್ ಒಂದು ಅದ್ಭುತ ಗಿಡವೆಂದು ಹೇಳಬಹುದು.

-ಕಾರ್ತಿಕ ಅ.ಈರಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.