ADVERTISEMENT

ದೀಪಾವಳಿಯಲ್ಲಿ ಸುರಕ್ಷೆಯೇ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:45 IST
Last Updated 5 ನವೆಂಬರ್ 2018, 19:45 IST

ಪಟಾಕಿ ಸಿಡಿಸಿ ಸಂತೋಷ ಪಡುವ ಹಬ್ಬವೇ ದೀಪಾವಳಿ. ಈ ಸಂಭ್ರಮದ ಬೆಳಕು, ಕಿಡಿಯಾಗದಿರಲು ಒಂದಷ್ಟು ಎಚ್ಚರಿಕೆಯ ಕ್ರಮತೆಗೆದುಕೊಳ್ಳಿ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಪಟಾಕಿ ಸಿಡಿತದಿಂದ ಸುಟ್ಟ ಗಾಯಗಳ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ವಿಶೇಷವಾಗಿ ಮಕ್ಕಳು ಈ ಪಟಾಕಿ ಸಿಡಿತದ ಗಾಯಗಳಿಗೆ ತುತ್ತಾಗುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಸರಳ ತಂತ್ರಗಳನ್ನು ಅನುಸರಿಸಿ.

ಗುಣಮಟ್ಟದ ಪಟಾಕಿಗಳನ್ನು ಖರೀದಿಸಿ:ಗುಣಮಟ್ಟದ ಪಟಾಕಿಗಳನ್ನು ಖರೀದಿಸಿದರೆ ಅಪಾಯ ಅಥವಾ ಅನಾಹುತಗಳ ಪ್ರಮಾಣ ಕಡಿಮೆಯಾಗುತ್ತದೆ. ಸ್ಪಾರ್ಕರ‍್ಸ್, ಚಕ್ರಗಳು ಮತ್ತು ಪೆನ್ಸಿಲ್‌ನಂತಹ ಹೆಚ್ಚು ಶಬ್ದ ಬಾರದಂತಹ ಮತ್ತು ಸ್ಫೋಟವಾಗದಂತಹ ಪಟಾಕಿಗಳನ್ನು ಖರೀದಿಸುವುದು ಸೂಕ್ತ. ಪೋಷಕರು ಎಲ್ಲ ಸಂದರ್ಭಗಳಲ್ಲಿಯೂ ಮಕ್ಕಳೊಟ್ಟಿಗೆ ಇರಲೇಬೇಕು.

ಬಯಲು ಪ್ರದೇಶದಲ್ಲಿ ಪಟಾಕಿ ಹಚ್ಚಬೇಕು: ಸ್ಫೋಟಗೊಳ್ಳುವ ಪಟಾಕಿಗಳನ್ನು ಸಣ್ಣ ಪ್ರದೇಶ/ಮನೆಗಳ ಸುತ್ತಮುತ್ತಲಿನ ಪರಿಸರದಲ್ಲಿ ಹಚ್ಚಿದರೆ ಗಾಯಗಳಾಗುವ ಸಂಭವಗಳು ಹೆಚ್ಚಿರುತ್ತವೆ. ಪಟಾಕಿ ಸ್ಫೋಟಗೊಳ್ಳಲಿಲ್ಲ ಎಂಬ ಕಾರಣಕ್ಕೆ ಅದರ ಬಳಿ ಹೋಗಿ ಪರೀಕ್ಷಿಸದಿರಿ. ಬಯಲಲ್ಲಿ ಸಿಡಿಸುವಾಗ ಪಟಾಕಿ ನಿಧಾನವಾಗಿ ಸಿಡಿದರೂ ಅನಾಹುತಗಳ ಪ್ರಮಾಣ ಕಡಿಮೆ ಇರುತ್ತದೆ. ಕೆಲವೊಮ್ಮೆ ಹೀಗೆ ಪರೀಕ್ಷಿಸುವ ಸಂದರ್ಭದಲ್ಲಿಯೇ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗಿ ದೃಷ್ಟಿಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ADVERTISEMENT

ಕೆಲವೊಮ್ಮೆ ಶಬ್ದ ಮಾಡದಂಥ ಪಟಾಕಿಗಳು ಅತಿ ಹೆಚ್ಚು ಹೊಗೆಯುಗುಳುತ್ತವೆ. ಈ ಹೊಗೆ ಉಸಿರಾಟಕ್ಕೆ ತೊಂದರೆ ಉಂಟು ಮಾಡಬಹುದು. ಹಾಗಾಗಿ ಹೆಚ್ಚು ಗಾಳಿಯಾಡುವ ಬಯಲು ಪ್ರದೇಶದಲ್ಲಿಯೇ ಪಟಾಕಿ ಸಿಡಿಸುವುದು ಸೂಕ್ತವಾಗಿದೆ.

ತುರ್ತು ಮುಂಜಾಗ್ರತಾ ಕ್ರಮಗಳು:-ಹತ್ತಿರದಲ್ಲಿಯೇ ಬಕೆಟ್ ತುಂಬಾ ನೀರನ್ನು ಇಟ್ಟುಕೊಂಡಿರಬೇಕು. ಯಾವುದಾದರೂ ಅನಾಹುತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ನೀಡುವಂತಹ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಂಡಿರಬೇಕು. ಇದಲ್ಲದೇ, ಕೆಲವು ಅಗತ್ಯ ಚಿಕಿತ್ಸಾ ಪರಿಕರಗಳು ಅಥವಾ ಔಷಧಿಯನ್ನು ಇಟ್ಟುಕೊಳ್ಳುವುದು ಸೂಕ್ತ.

ಮೇಲ್ವಿಚಾರಣೆ: ಪೋಷಕರ ಮೇಲ್ವಿಚಾರಣೆ ಇಲ್ಲದೇ ಮಕ್ಕಳು ಪಟಾಕಿ ಹಚ್ಚಲು ಬಿಡಬಾರದು ಮತ್ತು ಹಚ್ಚಿದ ಪಟಾಕಿಯಿಂದ ಸುರಕ್ಷತೆಯ ಅಳತೆಯ ದೂರದಲ್ಲಿ ಮಕ್ಕಳು ನಿಲ್ಲುವಂತೆ ಮಾಡುವುದು ಕಡ್ಡಾಯ.

ಗಾಯಗಳು: ಪಟಾಕಿಯಿಂದ ಆಗುವ ಗಾಯಗಳು ಗಂಭೀರ ಸ್ವರೂಪದ್ದಾಗಿರುತ್ತವೆ ಮತ್ತು ಕಣ್ಣನ್ನು ಹಾನಿಗೊಳಿಸುತ್ತವೆ. ಇಷ್ಟೇ ಅಲ್ಲ, ದೃಷ್ಟಿಯನ್ನೇ ಕಳೆಯುತ್ತವೆ. ಕಣ್ಣುಗಳು ಕಾರ್ನಿಯಲ್ ಅಬ್ರಾಶನ್ಸ್/ಲೇಸರೇಷನ್ಸ್, ಹೈಫೇಮಿಯಾ, ಫಾರಿನ್ ಬಾಡೀಸ್ ಮತ್ತು ಎನ್‌ಕ್ಲಿಯೇಷನ್‌ನಂತಹ ಮೃದುವಾದ ಜೀವಕಣಗಳನ್ನು ಹೊಂದಿರುತ್ತವೆ. ಪಟಾಕಿಯಿಂದ ಈ ಜೀವಕಣಗಳಿಗೆ ಹಾನಿಯಾದರೆ ಅದು ಗಂಭೀರವಾಗಿರುತ್ತದೆ ಮತ್ತು ಜೀವನಪರ್ಯಂತ ಅಂಧಕಾರದಲ್ಲಿ ಮುಳುಗಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದ ಆಗಬಹುದಾದ ಗಾಯ ಮತ್ತು ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸುರಕ್ಷತಾ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯವಾಗಿದೆ.

(ಡಾ.ರಘು ನಾಗರಾಜು ಅವರು ಬೆಂಗಳೂರಿನ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ ಮತ್ತು ರಿಫ್ರಾಕ್ಟೀವ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್.)

ಡಾ. ರಘು ನಾಗರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.