ADVERTISEMENT

ಕುಣಿಯುವ ಜಿಂಕೆಗಳ ನಡುವೆ...

ಡಾ .ಕೆ.ಎಸ್.ಚೈತ್ರಾ
Published 5 ಮಾರ್ಚ್ 2022, 19:30 IST
Last Updated 5 ಮಾರ್ಚ್ 2022, 19:30 IST
ಬಾಲೆಯ ಥರ ಬ್ಯಾಲೆ ಮಾಡುವ ಜಿಂಕೆ 
ಬಾಲೆಯ ಥರ ಬ್ಯಾಲೆ ಮಾಡುವ ಜಿಂಕೆ    

‘ಭಾರತದ ಸ್ವಿಡ್ಜರ್ಲೆಂಡ್ ಎಂದೇ ಪ್ರಸಿದ್ಧವಾದ ಮಣಿಪುರದ ರಾಜಧಾನಿ ಇಂಫಾಲ ನಗರವನ್ನು ಇನ್ನೇನು ತಲುಪಲಿದ್ದೇವೆ’ ಎಂಬ ಗಗನಸಖಿಯ ಘೋಷಣೆ ಕೇಳಿ ಸುಮ್ಮನೇ ಕಿಟಕಿಯಿಂದ ನೋಡಿದೆ. ತಿಳಿನೀಲಿಬಣ್ಣದ ಸೀರೆಯಂತೆ ವಿಸ್ತಾರವಾಗಿ ಹರಡಿದ ಜಲರಾಶಿಯ ನಡುವೆ ಹಸಿರು ಬಳೆಗಳಂಥ ದೊಡ್ಡ ವರ್ತುಲಗಳು! ಎಷ್ಟು ಚೆಂದ ಅನ್ನಿಸುವ ಜತೆಗೆ ಏನಿರಬಹುದು ಎಂಬ ಕುತೂಹಲವೂ ಮೂಡಿತ್ತು. ಮಣಿಪುರದ ಹಸಿರು ಬೆಟ್ಟ, ಆಳವಾದ ಕಣಿವೆ, ದಟ್ಟವಾದ ಕಾಡು, ಹಾಲ್ನೊರೆಯ ಜಲಪಾತ ಎಲ್ಲವನ್ನೂ ನೋಡಿದ್ದಾಯ್ತು.

ಮಹಿಳೆಯರೇ ನಡೆಸುವ ಇಮಾ ಖೈತೆಲ್ (ಅಮ್ಮಂದಿರ ಮಾರುಕಟ್ಟೆ) ಸುತ್ತುವಾಗ ಬಟ್ಟೆ, ಗೊಂಬೆ, ಮ್ಯಾಗ್ನೆಟ್, ಪುಸ್ತಕ ಹೀಗೆ ಎಲ್ಲೆಲ್ಲೂ ಉದ್ದ ಕೊಂಬಿನ ಜಿಂಕೆಯ ಚಿತ್ರ, ಇದೇನು ಎಂದು ವಿಚಾರಿಸಿದಾಗ ‘ಮಣಿಪುರದ ರಾಜ್ಯ ಪ್ರಾಣಿ ಇದು. ಜಗತ್ತಿನಲ್ಲೇ ವಿಶಿಷ್ಟ. ಏಕೆಂದರೆ ಇದು ಕುಣಿಯುವ ಜಿಂಕೆ’ ಎಂಬ ಉತ್ತರ ಸಿಕ್ಕಿತು. ಅರೆ, ಈ ಪುಟ್ಟ ರಾಜ್ಯದಲ್ಲಿ ಪ್ರಾಣಿ ಪಕ್ಷಿಗಳೂ ಕುಣಿಯುತ್ತವೆಯೇ ಎಂದು ಬೆರಗಾದೆ. ಇಷ್ಟೆಲ್ಲಾ ಕೇಳಿದ ಮೇಲೆ ನೋಡದೇ ಬರುವುದು ಹೇಗೆ? ಅಂತೂ ಮಾಯಾ ಜಿಂಕೆ ಅಲ್ಲ, ಕುಣಿಯುವ ಜಿಂಕೆಯನ್ನು ನೋಡಲು ಇಂಫಾಲದಿಂದ ಐವತ್ತು ಕಿ.ಮೀ. ದೂರದಲ್ಲಿರುವ ಬಿಷ್ಣುಪುರ ಜಿಲ್ಲೆಯ ಲೋಕ್ತಾಕ್ ಸರೋವರದಲ್ಲಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನವನಕ್ಕೆ ನಮ್ಮ ಪಯಣ ಶುರುವಾಯ್ತು.

ಲೋಕ್ತಾಕ್ ಸರೋವರ

ADVERTISEMENT

ಉತ್ತರ ಭಾರತದ ಅತಿದೊಡ್ಡ ಸಿಹಿ ನೀರಿನ ಸರೋವರವಾದ ಲೋಕ್ತಾಕ್ ಸುಮಾರು ಮುನ್ನೂರು ಚದರ ಅಡಿಗಳಷ್ಟು ದೊಡ್ಡದು. ಈ ಸರೋವರದಲ್ಲಿ ಮಣ್ಣು, ಸಸ್ಯರಾಶಿ ಮತ್ತು ಸಾವಯವ ಅಂಶಗಳು ಸೇರಿದ ಫ್ಯೂಮಿಡ್ ಹಾಸು ನಿರ್ಮಾಣವಾಗಿ ಅವು ದ್ವೀಪದ ಮಾದರಿಯಲ್ಲಿ ತೇಲುತ್ತಿರುತ್ತವೆ. ಈ ಸರೋವರ ಮಣಿಪುರಿ ಜನರ ಜೀವನಾಡಿ; ಮೀನು ಸಾಕಾಣಿಕೆ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಈ ಸರೋವರ ಮೀನುಗಳ ಆಶ್ರಯ ತಾಣ. ಇದಲ್ಲದೇ ಜಲವಿದ್ಯುತ್ ಯೋಜನೆಗೆ ಇಲ್ಲಿಯ ನೀರು ಬಳಕೆಯಾದರೆ, ಕೃಷಿ ಚಟುವಟಿಕೆ ಮತ್ತು ಕುಡಿಯಲು ಇಲ್ಲಿಂದಲೇ ನೀರು ಪೂರೈಕೆಯಾಗುತ್ತದೆ. ವಿಶಾಲವಾದ ಈ ಸರೋವರದಲ್ಲಿ ಅಲ್ಲಲ್ಲಿ ಕಾಣುವ ಹಸಿರು ಬಳೆಯಂಥ ವೃತ್ತಾಕಾರದ ವಿನ್ಯಾಸಗಳೇ ಫ್ಯೂಮಿಡಿಶಾಂಗ್. ಅವುಗಳು ಮೀನುಗಳನ್ನು ಹಿಡಿಯಲು ಸ್ಥಳೀಯರು ಫ್ಯೂಮಿಡಿ ಬಳಸಿ ಕಟ್ಟಿರುವ ಮೀನು ಹಿಡಿಯುವ ಸ್ಥಳಗಳು. ಈ ಸರೋವರದಲ್ಲಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನವನ ಪ್ರಪಂಚದ ಏಕೈಕ ತೇಲುವ ಉದ್ಯಾನ. ಜೀವವೈವಿಧ್ಯದ ನೆಲೆಯಾಗಿರುವ ಈ ಅಪೂರ್ವ ತಾಣದಲ್ಲಿ ಕಾಡು ಬೆಕ್ಕು, ಹಾರುವ ನರಿ, ಸೀಲ್, ಕರಡಿ, ಬಿದಿರ ಇಲಿ, ಸಿವೆಟ್ ಬೆಕ್ಕು, ವಿವಿಧ ರೀತಿಯ ಹಾವುಗಳು ಮತ್ತು ಅಪರೂಪದ ಪ್ರಭೇದಗಳ ಮೀನುಗಳನ್ನು ಕಾಣಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಜಗತ್ತಿನಲ್ಲಿ, ಕುಣಿಯುವ ಜಿಂಕೆಗಳ ಏಕೈಕ ಪ್ರಾಕೃತಿಕ ನೆಲೆ ಇದಾಗಿದೆ!

ಸಾಂಗೈನ ಬ್ಯಾಲೆ

ಟಿಕೆಟ್ ಪಡೆದು ಉದ್ಯಾನವನದ ಜೀಪಿನಲ್ಲಿ ಉದ್ಯಾನವನದ ಒಳಗೆ ಹೊಕ್ಕಾಗ ಕಂಡಿದ್ದು ವಿಶಾಲ ಹುಲ್ಲುಗಾವಲು, ಅಲ್ಲಲ್ಲಿ ಸಣ್ಣ ಹೂವು ಅಷ್ಟೆ. ವೀಕ್ಷಣೆಗೆ ನಿರ್ಮಿಸಿರುವ ಅಟ್ಟಣಿಗೆಯಲ್ಲಿ ನಿಂತು ಎಲ್ಲೆಡೆ ದೃಷ್ಟಿ ಹಾಯಿಸಿದ್ದಾಯ್ತು. ‘ಸದ್ದು ಮಾಡಬೇಡಿ, ಬೆಳಿಗ್ಗೆ 5-8 ಮತ್ತು ಸಂಜೆ 3-6 ಜಿಂಕೆಗಳು ಹುಲ್ಲು ತಿನ್ನಲು ಬರುವ ಸಮಯ’ ಎಂಬ ಎಚ್ಚರಿಕೆಯ ನಡುವೆ ಅಲ್ಲಿದ್ದ ಬೈನಾಕ್ಯುಲರ್ಸ್‌ನಲ್ಲಿ ನೋಡುತ್ತಿದ್ದಂತೆ ಕಣ್ಣಿಗೆ ಬಿತ್ತು ಜಿಂಕೆ. ಕಂದು ಬಣ್ಣದ ಮೈ, ಉದ್ದದ ಕೋಡು. ನೋಡುತ್ತಿದ್ದಂತೆ ಕಾಲು ಬಗ್ಗಿಸಿ ಇನ್ನೊಂದೆಡೆಗೆ ಕುಣಿಯುತ್ತಾ ಓಡಿತು. ಆಗಾಗ್ಗೆ ನಿಂತು ಕತ್ತು ತಿರುಗಿಸಿ ಕಣ್ಣು ಅರಳಿಸಿ ಪೋಸ್ ಬೇರೆ ಕೊಡುತ್ತಿತ್ತು, ಥೇಟ್ ಬ್ಯಾಲೆ ಮಾಡುವ ಬಾಲೆಯ ಥರ! ಸ್ವಲ್ಪ ದೂರ ಹೀಗೆ ಕುಣಿದು ನಂತರ ಹುಲ್ಲಿನ ಮಧ್ಯೆ ಮಾಯವಾಯಿತು.

ಸ್ಥಳೀಯ ಭಾಷೆಯಲ್ಲಿ ಸಾಂಗೈ ಎಂದು ಕರೆಯಲಾಗುವ ಈ ಜಿಂಕೆಯ ಹೆಸರಿಗೆ ಅದರ ಈ ವರ್ತನೆಯೇ ಕಾರಣ. ಸಾ-ಪ್ರಾಣಿ ಅಂಗೈ-ಕಾಯುವುದು. ಈ ಜಿಂಕೆ ಎಂಥದ್ದೇ ಸಂದರ್ಭದಲ್ಲಿ ಓಡುವಾಗಲೆಲ್ಲಾ ಆಗಾಗ್ಗೆ ನಿಂತು ಹಿಂತಿರುಗಿ ನೋಡುತ್ತದೆ. ಅದರ ಭಂಗಿ, ಕಣ್ಣು ಮತ್ತು ಕಿವಿ ಅದು ಯಾರಿಗೋ ಕಾಯುತ್ತಿರುವ ಹಾಗೆ ಭಾಸವಾಗುತ್ತದೆ. ಹೀಗಾಗಿ ಅದೇ ಹೆಸರು! ಇದಕ್ಕಿರುವ ವಿಶಿಷ್ಟ ಕೋಡುಗಳಿಂದಾಗಿ ಬ್ರೋ ಆಂಟ್ಲರ್ಡ್ ಡೀರ್ ಎಂದೂ ಕರೆಯಲಾಗುತ್ತದೆ. 1951ರಲ್ಲಿ ಈ ಅಪರೂಪದ ತಳಿ ಅಳಿದುಹೋಗಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದೇ ಉದ್ಯಾನವನದಲ್ಲಿ 1953ರಲ್ಲಿ ಅದನ್ನು ಕಂಡುಹಿಡಿದ ಕೀರ್ತಿ ಪರಿಸರತಜ್ಞ ಎಡ್ವರ್ಡ್ ಪಿ. ಜಿ. ಅವರಿಗೆ ಸಲ್ಲುತ್ತದೆ.

ಕುಣಿತದ ಗುಟ್ಟು

ವಿಶಾಲವಾದ ಈ ಹುಲ್ಲುಗಾವಲಿಗೆ ಪ್ರವೇಶ ಸಣ್ಣ ದೋಣಿಯಲ್ಲಿ ಎಂದಾಗ ಆಶ್ಚರ್ಯವಾಯ್ತು. ದೋಣಿ ಹತ್ತಲು ಕೆಳಗೆ ಬಂದಾಗಲೇ ತಿಳಿದಿದ್ದು ನಾವು ನೋಡುತ್ತಿರುವುದು ನೀರಿನ ಮೇಲೆ ಬೆಳೆದ ಹುಲ್ಲು, ಜೊಂಡು ಸಸ್ಯಗಳ ಫ್ಯೂಮಿಡಿಯ ದಪ್ಪ ಹಾಸಿಗೆ! ಈ ಹಾಸು ಕೆಲವು ಸೆಂಟಿಮೀಟರ್‌ಗಳಿಂದ ಎರಡು ಮೀಟರ್‌ಗಳವರೆಗೆ ದಪ್ಪವಿರುತ್ತದೆ. ಬೇಸಿಗೆಯಲ್ಲಿ ಸರೋವರದ ನೀರು ಕಡಿಮೆಯಾದಂತೆ ಈ ಜೌಗು ಸಸ್ಯಗಳ ಬೇರುಗಳು ನೆಲವನ್ನು ಮುಟ್ಟಿ ಅಲ್ಲಿಂದ ಮಣ್ಣಿನ ಸಾರ ಹೀರಿಕೊಳ್ಳುತ್ತವೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದಂತೆ ಸರೋವರದ ತಳದಿಂದ ಮೇಲೆದ್ದು ನೀರಿನಲ್ಲಿ ತೇಲುತ್ತವೆ. ಪ್ರತೀ ಮಳೆಗಾಲ-ಬೇಸಿಗೆಯಲ್ಲಿ ಇದು ನಡೆದು ಈ ಫ್ಯೂಮಿಡಿ ಬೆಳೆಯುತ್ತದೆ. ಈ ಹಾಸು ತೆಳ್ಳಗಿದ್ದು ಹುಲ್ಲಿನ ನಡುವೆ ಅಲ್ಲಲ್ಲಿ ನೀರದಾರಿಯಲ್ಲಿ ದೋಣಿ ಸಾಗಿದಂತೆ ಜಿಂಕೆಯ ಕುಣಿತದ ಕಾರಣ ತಿಳಿಯಿತು. ಸರೋವರದ ಮೇಲೆ ತೇಲುವ ಈ ದಪ್ಪಹುಲ್ಲುಹಾಸಿನ ಮೇಲೆ ಓಡಾಡುವಾಗ ಜಿಂಕೆಯ ಪಾದಗಳು ಸ್ವಲ್ಪ ಕೆಳಕ್ಕಿಳಿದು ಮೇಲೆ ಬರುತ್ತವೆ, ಅಂದರೆ ಕುಪ್ಪಳಿಸಿದ ಹಾಗೆ. ದೂರದಿಂದ ನೋಡಿದಾಗ ಇದು ಜಿಂಕೆ ಕುಣಿಯುತ್ತಿರುವ ಹಾಗೆ ಕಾಣಿಸುತ್ತದೆ!

ಶುಭ ಶಕುನ

ಮಣಿಪುರದ ಜಾನಪದ ಸಾಹಿತ್ಯದಲ್ಲಿ ಸಾಂಗೈ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಮನುಷ್ಯರು ಮತ್ತು ಪ್ರಕೃತಿಯನ್ನು ಬೆಸೆಯುವ ಆತ್ಮ ಈ ಸಾಂಗೈ ಎಂದು ವರ್ಣಿಸಲಾಗಿದೆ. ಹಾಗಾಗಿಯೇ ಈ ಜಿಂಕೆ ಕೊಂದರೆ ಅದು ಮಹಾಪಾಪ, ಪ್ರಕೃತಿಗೆ ಮಾಡುವ ಅಪಚಾರ ಎಂದು ಭಾವಿಸಲಾಗುತ್ತದೆ. ಜನಪದ ಕತೆಯೊಂದು ಕಡೆಂಗ್ ಎಂಬ ಮೊಯಿರಂಗ್ ಪ್ರಾಂತ್ಯದ ಮಹಾವೀರ ತನ್ನ ಪ್ರಿಯತಮೆಗಾಗಿ ಗರ್ಭಿಣಿ ಜಿಂಕೆಯೊಂದನ್ನು ಬೇಟೆಯಲ್ಲಿ ಸೆರೆ ಹಿಡಿದ. ಆದರೆ ಮರಳಿ ಬರುವಷ್ಟರಲ್ಲಿ ಆತನ ಪ್ರಿಯತಮೆ ರಾಜನನ್ನು ವರಿಸಿ ರಾಣಿಯಾಗಿದ್ದಳು. ದುಃಖಿತನಾದ ಆತ ಈ ಜಿಂಕೆಯನ್ನು ಕೈಬುಲ್‌ ಲಾಮ್ಜಾವೋ ಕಾಡಿನಲ್ಲಿ ಬಿಡುಗಡೆ ಮಾಡಿದ. ಅಂದಿನಿಂದ ಇದೇ ಸಾಂಗೈಗಳ ವಾಸಸ್ಥಾನವಾಯಿತು ಎಂದು ವಿವರಿಸುತ್ತದೆ. ಮತ್ತೆ ಕೆಲವು ದಂತಕತೆಗಳ ಪ್ರಕಾರ ಲುವಾಂಗ್ ವಂಶದ ರಾಜಕುವರ ದೈವಬಲದಿಂದ ಸಾಂಗೈ ಎಂಬ ಜಿಂಕೆಯಾಗಿದ್ದಾನೆ. ಕತೆ ಏನೇ ಇರಲಿ ಸಾಂಗೈ ಎಂದರೆ ಇಲ್ಲಿಯ ಜನರಿಗೆ ಶುಭ ಶಕುನ ಮತ್ತು ಎಲ್ಲಿಲ್ಲದ ಹೆಮ್ಮೆ! ನೃತ್ಯ, ಸಂಗೀತ, ನಾಟಕ, ಸಾಹಿತ್ಯ ಎಲ್ಲದರಲ್ಲೂ ಸಾಂಗೈ ಕಾಣಬಹುದು. ಪ್ರತಿವರ್ಷ ನವೆಂಬರ್‌ನಲ್ಲಿ ಹತ್ತು ದಿನಗಳ ಕಾಲ ಸಾಂಗೈ ಸಾಂಸ್ಕೃತಿಕ ಉತ್ಸವವನ್ನು ರಾಜ್ಯದೆಲ್ಲೆಡೆ ಹಮ್ಮಿಕೊಳ್ಳಲಾಗುತ್ತದೆ. ತಮ್ಮ ಕಲೆ-ಸಂಸ್ಕೃತಿ-ಸ್ಥಳೀಯ ಪಾಕವೈವಿಧ್ಯ, ಸಾಹಸ ಕ್ರೀಡೆಗಳು ಹೀಗೆ ರಾಜ್ಯದ ವೈಶಿಷ್ಟ್ಯವನ್ನು ಬಿಂಬಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಇದರದ್ದು.

ಕುಣಿತ ನಿಲ್ಲುವ ಭೀತಿ

ಐವತ್ತರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ಸಾಂಗೈಗಳು ಈಗ ಇನ್ನೂರಕ್ಕೂ ಹೆಚ್ಚಿವೆ. ಆದರೆ ಆತಂಕ ಮೂಡಿಸುವ ವಿಷಯವೆಂದರೆ ಇವುಗಳ ಉಳಿವಿಗೆ ಕಾರಣವಾದ ಫ್ಯೂಮಿಡಿಯ ಹಾಸು ತೆಳುವಾಗುತ್ತಿದೆ. ಅಣೆಕಟ್ಟು ನಿರ್ಮಾಣ, ಅಕ್ರಮ ಬೇಟೆ, ಸರೋವರದ ಸರಹದ್ದಿನಲ್ಲಿ ಜನವಸತಿ ಈ ಎಲ್ಲಾ ಕಾರಣಗಳಿಂದ ಸರೋವರದಲ್ಲಿ ಈ ಹಾಸು ಅಲ್ಲಲ್ಲಿ ಚೆದುರುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಸಾಂಗೈಗಳು ನಶಿಸುವ ಸಾಧ್ಯತೆ ಇದೆ. ಇವುಗಳಿಗೆ ಬೇರೆ ಕಡೆ ನೆಲೆ ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆಯಾದರೂ ಬಹಳ ನಾಚಿಕೆ ಸ್ವಭಾವದ ಇವು ಬೇರೆಡೆ ಹೊಂದಿಕೊಳ್ಳುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತದೆ. ಸಾಂಗೈಗಳ ಕುಣಿತ ಇನ್ನೆಷ್ಟು ದಿನ? ಕಾಲವೇ ನಿರ್ಧರಿಸಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.