ADVERTISEMENT

ಅನುಭವ ಮಂಟಪ | ಜಾತಿವಾರು ನಿಗಮ; ಸಾಲದ ಭಾರಕ್ಕೆ ಬಾಗಿವೆ ನಿಗಮಗಳು

ವಿ.ಎಸ್.ಸುಬ್ರಹ್ಮಣ್ಯ
Published 24 ನವೆಂಬರ್ 2020, 21:22 IST
Last Updated 24 ನವೆಂಬರ್ 2020, 21:22 IST
   

ರಾಜ್ಯದಲ್ಲಿ ದಶಕದ ಹಿಂದೆ ಬೆರಳೆಣಿಕೆಯಷ್ಟಿದ್ದ ಸಮುದಾಯ ಆಧಾರಿತ ನಿಗಮಗಳ ಸಂಖ್ಯೆ ಈಗ 20 ತಲುಪಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬುವುದು ನಿಗಮಗಳ ಸ್ಥಾಪನೆಯ ಉದ್ದೇಶವಾಗಿತ್ತು. ಆದರೆ, ಈಗ ಈ ನಿಗಮಗಳ ಕೆಲಸ ಬಹುತೇಕ ಸಾಲ ವಿತರಣೆಗೆ ಸೀಮಿತವಾಗಿದೆ. ಅಧಿಕಾರಕ್ಕೇರುವ ಎಲ್ಲ ಪಕ್ಷಗಳೂ ಈ ನಿಗಮಗಳನ್ನು ‘ಮತ ಬ್ಯಾಂಕ್‌’ ಸೃಷ್ಟಿಯ ಅಸ್ತ್ರಗಳನ್ನಾಗಿಯೇ ಬಳಸಿಕೊಳ್ಳುತ್ತಿವೆ; ನಿಗಮಗಳ ಮೂಲಕ ಸಾಲ ವಿತರಣೆಗೆ ಆಸಕ್ತಿ ತೋರುವವರೇ ಹೆಚ್ಚು. ಇದರಿಂದಾಗಿ, ಜಾತಿ ಮತ್ತು ಸಮುದಾಯ ಆಧಾರಿತವಾಗಿ ಸರ್ಕಾರ ಸ್ಥಾಪಿಸಿರುವ ನಿಗಮಗಳಿಂದ ಸಾಲ ಪಡೆದರೆ ಮರುಪಾವತಿ ಮಾಡುವುದು ಕಡ್ಡಾಯವಲ್ಲ ಎಂಬ ಭಾವನೆ ಜನಮಾನಸದಲ್ಲಿ ಬೇರೂರುತ್ತಿದೆ.

1975ರಿಂದ ಈಚೆಗೆ ರಾಜ್ಯದಲ್ಲಿ ಸಮುದಾಯ ಅಭಿವೃದ್ಧಿಯ ಪರಿಕಲ್ಪನೆಯಡಿ ಕೆಲವು ನಿಗಮಗಳು ಅಸ್ತಿತ್ವಕ್ಕೆ ಬಂದವು. ಆರಂಭದಲ್ಲಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ (ಹಿಂದಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ) ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಾತ್ರ ಇದ್ದವು. 1986ರಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. 2006ರಿಂದ ಈಚೆಗೆ ಜಾತಿ ಆಧಾರಿತ ನಿಗಮಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ.

ಸಾಲದ ಸುತ್ತ ಗಿರಕಿ: ಹಿಂದುಳಿದ ಸಮುದಾಯಗಳ ಜನರಿಗೆ ಎಲ್ಲ ರೀತಿಯಲ್ಲೂ ಶಕ್ತಿ ತುಂಬುವುದು ನಿಗಮಗಳ ಸ್ಥಾಪನೆಯ ಪ್ರಮುಖ ಗುರಿಯಾಗಿತ್ತು. ಆದರೆ, ಆರಂಭದ ಕೆಲವು ವರ್ಷಗಳಲ್ಲೇ ಎಲ್ಲ ನಿಗಮಗಳೂ ವೈಯಕ್ತಿಕ ಸಾಲ ವಿತರಣೆ ಯೋಜನೆಗೆ ಸೀಮಿತವಾದವು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು ಕೆಲವು ವರ್ಷಗಳ ಕಾಲ ಆಟೊ ರಿಕ್ಷಾ, ಟ್ಯಾಕ್ಸಿ ಖರೀದಿ ಸಾಲ ವಿತರಣೆಯ ಕೇಂದ್ರಗಳಂತಾಗಿದ್ದವು.

ADVERTISEMENT

ಸಮುದಾಯ ಮತ್ತು ಜಾತಿ ಆಧಾರಿತ ನಿಗಮಗಳಲ್ಲಿ 25ಕ್ಕೂ ಹೆಚ್ಚು ಸಾಲ ಯೋಜನೆಗಳಿವೆ. ಹೆಚ್ಚಿನ ಯೋಜನೆಗಳಲ್ಲಿ ಸ್ವಯಂ ಉದ್ಯೋಗ, ವಾಹನ ಖರೀದಿ, ಕೃಷಿ, ಹೈನುಗಾರಿಕೆ ಮತ್ತು ಪಶು ಸಂಗೋಪನೆ ಚಟುವಟಿಕೆಗಳಿಗೆ ಸಾಲ ನೀಡಲಾಗುತ್ತಿದೆ. ₹1 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಖಾತರಿಯೂ ಬೇಕಿಲ್ಲ. ಸ್ಥಳೀಯ ಶಾಸಕರ ನೇತೃತ್ವದಲ್ಲೇ ಫಲಾನುಭವಿಗಳ ಆಯ್ಕೆ ನಡೆಯುವುದರಿಂದ ಈ ಯೋಜನೆಗಳಿಗೆ ರಾಜಕೀಯವಾಗಿಯೂ ಬೇಡಿಕೆ ಹೆಚ್ಚು. ಹೀಗಾಗಿ ಈ ನಿಗಮಗಳಲ್ಲಿ ವೈಯಕ್ತಿಕ ಸಾಲ ವಿತರಣೆಯ ಹೊಸ ಯೋಜನೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಒಂದರಲ್ಲೇ ಕಳೆದ ವರ್ಷ ವೈಯಕ್ತಿಕ ಸಾಲ ಯೋಜನೆಯಡಿ ನೆರವು ಕೋರಿ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಉಳಿದ ನಿಗಮಗಳಲ್ಲೂ ವೈಯಕ್ತಿಕ ಸಾಲ ಕೋರಿ ಇದೇ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.ಲಭ್ಯ ಅನುದಾನಕ್ಕೆ ಹೋಲಿಸಿದರೆ ಶೇಕಡ 10ರಷ್ಟು ಮಂದಿಗೂ ಸಾಲ ವಿತರಿಸುವುದು ಕಷ್ಟ.

ನಿಗಾ ವ್ಯವಸ್ಥೆಯೇ ಇಲ್ಲ: ಸಾಲ ಪಡೆದುಕೊಂಡ ಫಲಾನುಭವಿಗಳು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ? ಸಾಲದ ಮೊತ್ತದಿಂದ ಉದ್ಯೋಗ ಸೃಷ್ಟಿ ಆಗಿದೆಯೇ? ಅಥವಾ ಸಾಲದ ಮೊತ್ತ ಅನ್ಯ ಉದ್ದೇಶಕ್ಕೆ ಬಳಕೆ ಆಗಿದೆಯೇ ಎಂಬುದರ ಕುರಿತು ನಿಗಾ ಇಡುವ ವ್ಯವಸ್ಥೆಯನ್ನು ಯಾವ ನಿಗಮವೂ ಹೊಂದಿಲ್ಲ. ಸಾಲದ ಮೊತ್ತ ಕೈಸೇರಿದ ಬಳಿಕ ನಿಗಮಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಫಲಾನುಭವಿಗಳ ಸಂಖ್ಯೆಯೇ ಹೆಚ್ಚು. ಪರಿಣಾಮವಾಗಿ ಸಾಲದ ಉದ್ದೇಶವೂ ಈಡೇರುತ್ತಿಲ್ಲ, ಕೊಟ್ಟ ಹಣವೂ ಮರಳಿ ನಿಗಮಕ್ಕೆ ಬರುತ್ತಿಲ್ಲ.

1975ರಲ್ಲಿ ಆರಂಭವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, 1977ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ 1986ರಲ್ಲಿ ಆರಂಭವಾದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ವೈಯಕ್ತಿಕ ಸಾಲ ಯೋಜನೆಯಡಿ ನೆರವು ಪಡೆದವರ ಪೈಕಿ 10.25 ಲಕ್ಷ ಮಂದಿ 2013ರವರೆಗೂ ಬಾಕಿ ಉಳಿಸಿಕೊಂಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಈ ಮೂರೂ ನಿಗಮಗಳ ಜತೆ ಡಾ.ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಫಲಾನುಭವಿಗಳ ಸಾಲವನ್ನೂ ಮನ್ನಾ ಮಾಡಿದ್ದರು. ರಾಜ್ಯ ಸರ್ಕಾರ ಆಗ ಮಂಡಿಸಿದ್ದ ಅಂಕಿಅಂಶಗಳ ಪ್ರಕಾರ, ಈ ನಿಗಮಗಳಿಂದ ಸಾಲ ಪಡೆದವರ ಪೈಕಿ ಶೇ 75ರಷ್ಟು ಮಂದಿ ನಾಲ್ಕು ದಶಕ ಕಳೆದರೂ ಮರುಪಾವತಿ ಮಾಡಿರಲಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜಮೀನಿನ ಒಡೆತನ ಕಲ್ಪಿಸುವ ಭೂ ಒಡೆತನ ಯೋಜನೆಯನ್ನು ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಜತೆಗೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗಂಗಾ ಕಲ್ಯಾಣ ಯೋಜನೆಯೂ ಇದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲೂ ಗಂಗಾ ಕಲ್ಯಾಣ ಯೋಜನೆ ಇದೆ. ಬಹುತೇಕ ಎಲ್ಲ ನಿಗಮಗಳಲ್ಲೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗೆ ಸಾಲ ನೀಡುವ ಯೋಜನೆಗಳಿವೆ. ಆದರೆ, ಈ ಎಲ್ಲವೂ ಅಧಿಕಾರಸ್ಥರ ‘ಮುಷ್ಠಿ’ಯಲ್ಲಿ ಸಿಲುಕಿವೆ. ಈ ನಿಗಮಗಳ ಬಹುತೇಕ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ‘ಅರ್ಹತೆ’ಗಿಂತಲೂ ರಾಜಕೀಯ ಪ್ರಭಾವ ಕೆಲಸ ಮಾಡುವುದೇ ಹೆಚ್ಚು.

ಇದ್ದ ನಿಗಮಗಳ ಅನುದಾನಕ್ಕೆ ಕತ್ತರಿ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊಸದಾಗಿ ರಚಿಸಿರುವ ಮರಾಠಾ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ಮತ್ತು ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಘೋಷಿಸಲಾಗಿದೆ. ಆದರೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ನಿಗಮಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ.

ಹಳೆಯ ನಿಗಮಗಳಲ್ಲಿ ಶಿಕ್ಷಣ ಸಾಲ, ವಿದ್ಯಾರ್ಥಿ ವೇತನ, ವಿದೇಶ ಶಿಕ್ಷಣಕ್ಕೆ ಸಾಲ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಿದೆ. ಹೆಚ್ಚಿನ ನಿಗಮಗಳು ಪ್ರಸಕ್ತ ವರ್ಷ ವೈಯಕ್ತಿಕ ಸಾಲ ಮತ್ತು ಇತರ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನೂ ಕಡಿತಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.