ADVERTISEMENT

ಆಳ-ಅಗಲ| ಏರುತ್ತಲೇ ಇದೆ ರೂಪಾಂತರ ತಳಿ ಓಮೈಕ್ರಾನ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:31 IST
Last Updated 29 ಡಿಸೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದೇಶದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜತೆಗೆ ಓಮೈಕ್ರಾನ್‌ ಕೋವಿಡ್‌ ದೃಢಪಡುವ ಪ್ರಮಾಣದಲ್ಲೂ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಪ್ರಕರಣಗಳು ಪತ್ತೆಯಾದ ನಂತರ ಈ ಏರಿಕೆ ಕಂಡುಬರುತ್ತಿದೆ. ಈಗ ದೇಶದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ತಳಿಯದ್ದೇ ಪ್ರಧಾನ ಪಾಲು. ಈ ಪ್ರಕರಣಗಳಲ್ಲಿ ಓಮೈಕ್ರಾನ್‌ ಕೋವಿಡ್‌ ಪ್ರಕರಣಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ. ಆದರೆ ಡೆಲ್ಟಾಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಓಮೈಕ್ರಾನ್‌ಗೆ ಇರುವ ಕಾರಣ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಅಪಾಯವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

2020ರ ಡಿಸೆಂಬರ್ ಮತ್ತು 2021ರ ಜನವರಿ ವೇಳೆಗೆ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರತೆ ಪಡೆದಿತ್ತು. ಆದರೆ ಆ ಅವಧಿಯಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಆದರೆ, 2021ರ ಮಾರ್ಚ್‌ ಅಂತ್ಯದ ವೇಳೆಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಯಿತು. ನಂತರದ ಎರಡು ತಿಂಗಳವರೆಗೆ ತೀವ್ರತೆ ಗರಿಷ್ಠ ಮಟ್ಟದಲ್ಲಿತ್ತು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ವಿಶ್ವದ ಬೇರೆ ದೇಶಗಳಲ್ಲಿ ಓಮೈಕ್ರಾನ್‌ ಮತ್ತು ಡೆಲ್ಟಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಭಾರತದಲ್ಲಿ ಇದೇ ವೇಳೆಯಲ್ಲಿಯೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ವಿದೇಶಿ ಪ್ರಯಾಣಿಕರ ತಪಾಸಣೆ, ಪರೀಕ್ಷೆ, ಏಕಾಂತವಾಸ ಮತ್ತು ಕ್ವಾರಂಟೈನ್‌ನ ಮೂಲಕ ದೇಶದಲ್ಲಿ ಓಮೈಕ್ರಾನ್‌ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ಆದರೆ, ಈ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದರೂ ದೇಶದ 21 ರಾಜ್ಯಗಳಿಗೆ ಓಮೈಕ್ರಾನ್‌ ಹರಡಿದೆ. ಆದರೆ ಸದ್ಯದ ಮಟ್ಟಿಗೆ ಓಮೈಕ್ರಾನ್‌ನಿಂದ ಬರುವ ಕೋವಿಡ್‌ನ ತೀವ್ರತೆ ಕಡಿಮೆ ಇದೆ ಎಂಬುದೇ ಸಮಾಧಾನಕರ ಸಂಗತಿ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಆಧಾರ: ರಾಯಿಟರ್ಸ್‌, ಎಎಫ್‌ಪಿ, ಪಿಟಿಐ
ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್‌ಗಳು

----

ಸಮುದಾಯಕ್ಕೆ ಹರಡಿದೆಯೇ?

ದೇಶದಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯು ಸಮುದಾಯಕ್ಕೆ ಹರಡಿದೆಯೇ ಎಂಬುದರ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ. ಹಲವು ರಾಜ್ಯಗಳಲ್ಲಿ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದೇ ಇರುವ ವ್ಯಕ್ತಿಗಳಲ್ಲೂ ಓಮೈಕ್ರಾನ್‌ ಸೋಂಕು ಪತ್ತೆಯಾಗಿದೆ. ಹೀಗಾಗಿ ಅದು ಸಮುದಾಯಕ್ಕೆ ಹರಡಿರುವ ಸಾಧ್ಯತೆ ಅತ್ಯಧಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಓಮೈಕ್ರಾನ್‌ ಹರಡುವ ಬಗೆ, ಅದು ಪ್ರತಿರೋಧಕ ಶಕ್ತಿಯನ್ನು ತಪ್ಪಿಸಿ ಹರಡುವ ಸಾಮರ್ಥ್ಯ ಹೊಂದಿದೆಯೇ ಮತ್ತು ಅದು ಉಂಟು ಮಾಡುವ ರೋಗದ ತೀವ್ರತೆ ಅಪಾಯಕಾರಿ ಮಟ್ಟದಲ್ಲಿ ಇರಲಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

‘ಅಮೆರಿಕದಲ್ಲಿ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ಶೇ 70ಕ್ಕಿಂತಲೂ ಹೆಚ್ಚು, ಓಮೈಕ್ರಾನ್ ಪ್ರಕರಣಗಳೇ ಇವೆ. ಅಮೆರಿಕದಲ್ಲಿ ಈಗ ಪತ್ತೆಯಾಗುತ್ತಿರುವ ಓಮೈಕ್ರಾನ್‌ ಪ್ರಕರಣಗಳ ಪ್ರಮಾಣವನ್ನು ಪರಿಗಣಿಸಿದರೆ, ಅದು ಸಮುದಾಯಕ್ಕೆ ಹರಡಿದೆ ಎಂದು ನಿರ್ಧರಿಸಬಹುದು’ ಎಂದು ಸೆಂಟರ್‌ ಫಾರ್ ಡಿಸೀಸ್ ಕಂಟ್ರೋಲ್‌ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಅಮೆರಿಕದಲ್ಲಿ ಈಗ ಪ್ರತಿದಿನ 2.5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವದಾದ್ಯಂತ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ. ಆದರೆ ಇವುಗಳಲ್ಲಿ ಓಮೈಕ್ರಾನ್‌ ಪ್ರಕರಣಗಳೆಷ್ಟು ಮತ್ತು ಡೆಲ್ಟಾ ಪ್ರಕರಣಗಳೆಷ್ಟು ಎಂಬುದರ ನಿಖರವಾದ ಮಾಹಿತಿ ಲಭ್ಯವಿಲ್ಲ.

ಭಾರತದಲ್ಲಿ ಈವರೆಗೆ ಓಮೈಕ್ರಾನ್‌ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ 50ಕ್ಕೂ ಹೆಚ್ಚು ಮಂದಿಗೆ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲ. ಅವರು ವಿದೇಶ ಪ್ರಯಾಣ ಮಾಡಿಲ್ಲ ಮತ್ತು ವಿದೇಶದಿಂದ ವಾಪಸಾದವರ ಸಂಪರ್ಕಕ್ಕೂ ಬಂದಿಲ್ಲ. ಆದರೆ ಅಮೆರಿಕದಲ್ಲಿನ ಪರಿಸ್ಥಿತಿ ಮತ್ತು ವಿಶ್ಲೇಷಣೆಗಳು ಭಾರತಕ್ಕೂ ಅನ್ವಯವಾಗುತ್ತದೆ ಎಂದು ಹೇಳಲಾಗದು. ಈ ಎಲ್ಲಾ ಅಂಶಗಳನ್ನು ದೃಢಪಡಿಸುವ ವೈಜ್ಞಾನಿಕ ಅಧ್ಯಯನಗಳು ಇನ್ನೂ ಪೂರ್ಣವಾಗಿಲ್ಲ. ಅಲ್ಲಿಯವರೆಗೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಹೇಳಿದೆ.

ಹೆಚ್ಚಳವಾಗದ ಕೋವಿಡ್‌ ಪರೀಕ್ಷೆ ಪ್ರಮಾಣ

ಇದೇ ವರ್ಷದ ಮೇ ತಿಂಗಳಲ್ಲಿ ದೇಶದಲ್ಲಿ ಅಬ್ಬರಿಸಿದ್ದ ಕೋವಿಡ್ ಎರಡನೇ ಅಲೆಯು ತಣ್ಣಗಾಗುತ್ತಿದೆ ಎನ್ನುವಾಗಲೇ, ‘ಓಮೈಕ್ರಾನ್’ ಮೂಲಕ ಸೋಂಕು ಮತ್ತೆ ಬಲಿಷ್ಠವಾಗುವತ್ತ ಹೆಜ್ಜೆ ಇರಿಸಿದೆ. ಪ್ರಕರಣಗಳು ಮತ್ತೆ ಅಲ್ಪ ಏರಿಕೆ ದಾಖಲಿಸಿವೆ.

ಡಿಸೆಂಬರ್ ತಿಂಗಳಲ್ಲಿ ನಿತ್ಯ ವರದಿಯಾಗುವ ಹೊಸ ಪ್ರಕರ ಣಗಳನ್ನು ಗಮನಿಸಿದರೆ, ಸಾಕಷ್ಟು ಏರಿಳಿತ ಕಂಡುಬಂದಿದೆ. ಡಿಸೆಂಬರ್‌ 2ರಂದು ಅತಿಹೆಚ್ಚು ಅಂದರೆ, 9,765 ಪ್ರಕರಣಗಳು ವರದಿಯಾಗಿದ್ದವು. ಈ ಬಳಿಕ ನಿಧಾನವಾಗಿ ಇಳಿಕೆ ಕಂಡುಬಂದಿತು. ಡಿಸೆಂಬರ್ 9ರಂದು ಮತ್ತೆ ಒಂಬತ್ತು ಸಾವಿರದ ಗಡಿಗೆ ಹೋಗಿದ್ದ ನಿತ್ಯದ ಪ್ರಕರಣಗಳು, ಮತ್ತೆ ಈ ಗಡಿಯನ್ನು ತಲುಪಿದ್ದು ಡಿಸೆಂಬರ್ 29ರಂದು. ಡಿಸೆಂಬರ್ 15 ಹಾಗೂ 21ರಂದು 5,000ದ ಕೆಳಗೆ ಇಳಿದಿದ್ದವು. ಆದರೆ, ಕೋವಿಡ್ ದೃಢಪಡುವ ಪ್ರಮಾಣ ಶೇಕಡಾ ಒಂದನ್ನು ದಾಟಿಲ್ಲ. ಡಿಸೆಂಬರ್ ಆರಂಭದಲ್ಲಿ ಶೇಕಡ 0.94ರಷ್ಟು ದಾಖಲಾಗಿದ್ದೇ ತಿಂಗಳ ಗರಿಷ್ಠ ದರ.

ಪ್ರಕರಣಗಳಲ್ಲಿ ಈ ಮಟ್ಟಿಗಿನ ವ್ಯತ್ಯಾಸ ಕಾಣಲು ಕಾರಣ ವಿದೆ. ದೇಶದಲ್ಲಿ ದಿನವೂ ಸರಾಸರಿ 10 ಲಕ್ಷ ಜನರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ಪ್ರಮಾಣವು ಇಳಿಕೆಯಾದ ದಿನ ದಂದು ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದು ಗಮನಾರ್ಹ. ಹೆಚ್ಚು ಪರೀಕ್ಷೆ ನಡೆಸಿದ ದಿನಗಳಂದು ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ದತ್ತಾಂಶಗಳು ಹೇಳುತ್ತವೆ. ಉದಾಹರಣೆಗೆ ಡಿ. 20ರಂದು 6,563 ಪ್ರಕರಣಗಳು ದಾಖಲಾಗಿದ್ದವು. ಅಂದು ಕೇವಲ 8.77 ಲಕ್ಷ ಪರೀಕ್ಷೆ ನಡೆದಿದ್ದವು. ಡಿ.27ರಂದು 6,531 ಸೋಂಕಿತರು ಕಂಡುಬಂದಿದ್ದರು. ಅಂದು 7.52 ಲಕ್ಷ ಪರೀಕ್ಷೆ ನಡೆದಿದ್ದವು. ತಿಂಗಳ ಆರಂಭದಲ್ಲಿ 11 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿತ್ತು. ಡಿ.29ರಂದೂ ಸಹ 11.67 ಲಕ್ಷ ಪರೀಕ್ಷೆಗಳು ನಡೆದಿವೆ. ಓಮೈಕ್ರಾನ್ ಪ್ರಕರಣಗಳು ಇನ್ನೆರಡು ದಿನಗಳಲ್ಲಿ ಸಾವಿರದ ಗಡಿ ದಾಟುವ ಸೂಚನೆ ಇದ್ದರೂ, ಪರೀಕ್ಷೆಗಳ ಪ್ರಮಾಣ ಹೆಚ್ಚಿಸಿಲ್ಲ ಎಂಬುದು ಸರ್ಕಾರದ ದತ್ತಾಂಶಗಳನ್ನು ಗಮನಿಸಿದರೆ ತಿಳಿಯುತ್ತದೆ. ಎರಡನೇ ಅಲೆ ತೀವ್ರವಾಗಿದ್ದ ಮೇ ತಿಂಗಳಲ್ಲಿ ದಿನವೂ ಸರಿಸುಮಾರು 3 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಆಗ ಸರ್ಕಾರ ನಿತ್ಯವೂ 31 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.

21 ರಾಜ್ಯಗಳಿಗೆ ವಿಸ್ತರಿಸಿದ ‘ಓಮೈಕ್ರಾನ್’

ಕೊರೊನಾ ರೂಪಾಂತರ ತಳಿ ‘ಓಮೈಕ್ರಾನ್’ ಭಾರತವನ್ನು ಪ್ರವೇಶಿಸಿ ಭೀತಿ ಸೃಷ್ಟಿಸಿದೆ. ಡಿಸೆಂಬರ್ 2ರಂದು ದೇಶದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಕರ್ನಾಟಕದಲ್ಲಿ ಮೊದಲಿಗೆ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಕಂಡುಬಂದಿತ್ತು. ಒಂದು ತಿಂಗಳು ಕಳೆಯುವ ಮುನ್ನವೇ ಓಮೈಕ್ರಾನ್ ತನ್ನ ಪ್ರತಾಪ ತೋರಿಸಿದೆ. ಡಿ. 29ಕ್ಕೆ ಈ ಪ್ರಕರಣಗಳ ಸಂಖ್ಯೆ 781ಕ್ಕೆ ತಲುಪಿದೆ.

ಆಫ್ರಿಕಾದಲ್ಲಿ ಪತ್ತೆಯಾದ ಈ ತಳಿಯು ದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ತಪಾಸಣೆ ಕಠಿಣಗೊಳಿಸಲಾಯಿತು. ಸೋಂಕು ಕಾಣಿಸಿಕೊಂಡು ಅಪಾಯಕಾರಿ ಎನಿಸಿದ್ದ ಆಫ್ರಿಕಾದ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶಿಸುವ ಎಲ್ಲರ ಕೋವಿಡ್ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಿ, ಅವರನ್ನು ಕ್ವಾರಂಟೈನ್ ಮಾಡಲಾಯಿತು.

ಡಿಸೆಂಬರ್ ಮೊದಲ ವಾರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸೋಂಕಿತರು ಕಂಡುಬಂದಿದ್ದರು. ಎಲ್ಲ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಸಹ, ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಈ ಸೋಂಕು ದೇಶದ 11 ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿತು. ಮೂರನೇ ವಾರಕ್ಕೆ ಇದರ ವ್ಯಾಪ್ತಿ 14 ರಾಜ್ಯಗಳಿಗೆ ಹಿಗ್ಗಿತು. ಡಿಸೆಂಬರ್ ಮುಗಿಯಲು ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಓಮೈಕ್ರಾನ್ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತನ್ನ ಛಾಪು ಒತ್ತಿದೆ. ಕಾಶ್ಮೀರ ಕಣಿವೆಯ ಲಡಾಖ್, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳು, ಈಶಾನ್ಯ ರಾಜ್ಯವಾದ ಮಣಿಪುರವನ್ನೂ ತಲುಪಿ, ಆತಂಕ ಮೂಡಿಸಿದ್ದು, ಕೆಲವೇ ದಿನಗಳಲ್ಲಿ ದೇಶವ್ಯಾಪಿ ಹರಡುವ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.