ADVERTISEMENT

ಆಳ–ಅಗಲ | ಇ–ಖಾತಾ: ಅವ್ಯವಸ್ಥೆಗೆ ಕೊನೆ ಎಂದು?

ಡಿಜಿಟಲ್ ಖಾತಾ ಕಡ್ಡಾಯದಿಂದ ಆಸ್ತಿ ನೋಂದಣಿಗೆ ತೊಡಕು

ಚಂದ್ರಹಾಸ ಹಿರೇಮಳಲಿ
​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 0:30 IST
Last Updated 7 ಡಿಸೆಂಬರ್ 2024, 0:30 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮಿನಿ ವಿಧಾನ ಸೌಧದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಜನಸಂದಣಿಯ ದೃಶ್ಯ –ಪ್ರಜಾವಾಣಿ ಚಿತ್ರ
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮಿನಿ ವಿಧಾನ ಸೌಧದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಜನಸಂದಣಿಯ ದೃಶ್ಯ –ಪ್ರಜಾವಾಣಿ ಚಿತ್ರ   
ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದೆ. ನಿವೇಶನ, ಮನೆ ಮಾರಾಟಕ್ಕೆ ಸಂಬಂಧಿಸಿದ ಅಕ್ರಮಗಳನ್ನು ಮತ್ತು ಜನ ಮೋಸಹೋಗುವುದನ್ನು ತಡೆಯಲು ಇದು ನಿಜಕ್ಕೂ ಉತ್ತಮ ಹಾಗೂ ದಿಟ್ಟ ಹೆಜ್ಜೆ. ಆದರೆ, ಸರ್ಕಾರದ ಆಶಯಕ್ಕೆ ತಕ್ಕಂತೆ ಇ ಖಾತಾ ವಿತರಿಸುವ ಕೆಲಸ ವೇಗವಾಗಿ, ಪಾರದರ್ಶಕವಾಗಿ ನಡೆಯುತ್ತಿಲ್ಲ. ಹಲವು ತೊಡಕುಗಳಿಂದಾಗಿ ಇ–ಖಾತಾ ನೀಡುವ ಪ್ರಕ್ರಿಯೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ

ಬೆಂಗಳೂರು: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಸರ್ಕಾರ ಇ–ಸ್ವತ್ತು, ಇ–ಖಾತಾ ಕಡ್ಡಾಯಗೊಳಿಸಿದ ನಂತರ ಹಲವು ಸಮಸ್ಯೆಗಳು ಎದುರಾಗಿದ್ದು, ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ. ನಿತ್ಯವೂ ಜನರು ಸ್ಥಳೀಯ ಸಂಸ್ಥೆ ಹಾಗೂ ನೋಂದಣಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಆಸ್ತಿಗಳ ಖಾತೆ ಹಾಗೂ ನಕ್ಷೆಗಳ ಮಂಜೂರಾತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆಗೆ ಕದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಿದ್ದಾರೆ. ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇ–ಆಸ್ತಿ, ಇ–ವಿನ್ಯಾಸ ಹಾಗೂ ಇ–ಸ್ವತ್ತು, ಇ–ಖಾತಾ ವಿತರಣೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ರಚಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕುರಿತು ಅಧ್ಯಯನ ನಡೆಸಲಾಗಿದೆ. 

ಕಂದಾಯ ನಿವೇಶನ, ಬಿ–ಖಾತಾವೇ ಸಮಸ್ಯೆಯ ಮೂಲ: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿ-ಖಾತಾ ಮತ್ತು ಕಂದಾಯ ನಿವೇಶನಗಳಿಗೆ ಇ–ಖಾತಾ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೇ 90ರಷ್ಟು ಆಸ್ತಿಗಳಿಗೆ ಇ-ಸ್ವತ್ತು ಇಲ್ಲ. ದಶಕಗಳ ಹಿಂದೆಯೇ ನಗರ ಪ್ರದೇಶಗಳಿಗೆ ಸೇರಿದ ಅಂತಹ ಗ್ರಾಮಗಳ ಜನರು ತಮ್ಮ ಆಸ್ತಿಯ ಇ–ಖಾತಾ ಇಲ್ಲದೇ ಪರಿತಪಿಸುತ್ತಿದ್ದಾರೆ. ಇನ್ನು, ಇತ್ತೀಚೆಗೆ ನಗರ ಪ್ರದೇಶಗಳ ವ್ಯಾಪ್ತಿಗೆ ಸೇರಿದ ಗ್ರಾಮಗಳದ್ದೂ ಅದೇ ಸಮಸ್ಯೆಯಾಗಿದೆ. ಅಂತಹ ಆಸ್ತಿಗಳಿಗೆ ಇ–ಖಾತಾ ಸಿಗದೆ ನೋಂದಣಿಗೆ ಸಮಸ್ಯೆಯಾಗಿದೆ.

ADVERTISEMENT

‘ತಂತ್ರಾಂಶದಲ್ಲಿನ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಹಿಂದೆ ಅನುಸರಿಸುತ್ತಿದ್ದ ಪದ್ಧತಿಯಂತೆ ಲಭ್ಯವಿರುವ ಖಾತಾಗಳ, ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ನಿರ್ವಹಿಸಬೇಕು’ ಎನ್ನುವುದು ಸಾರ್ವಜನಿಕರ ಒತ್ತಾಯ.

ಪರಿವರ್ತನೆಗೊಂಡ ಉದ್ದೇಶಕ್ಕೆ ಬಳಕೆಯಾಗದ ಕೃಷಿ ಭೂಮಿ: ಭೂ ಪರಿವರ್ತನೆಗೊಂಡ ರಾಜ್ಯದ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ ಪರಿವರ್ತನೆಯಾದ ಉದ್ದೇಶಕ್ಕೆ ಬಳಕೆಯಾಗಿಲ್ಲ. ಅತ್ತ ಕೃಷಿ ಭೂಮಿಯಾಗಿಯೂ ದಾಖಲೆಗಳಲ್ಲಿ ಉಳಿದಿಲ್ಲ. ಕೆಲವರು ಭೂ ಪರಿವರ್ತನೆ ಮಾಡಿಕೊಂಡು ಲೇಔಟ್‌ ಅಭಿವೃದ್ಧಿಪಡಿಸದೇ , ಸಿ.ಎ. ನಿವೇಶನ, ಉದ್ಯಾನಗಳಿಗೆ ಜಾಗವನ್ನೂ ಬಿಡದೆ ನಿಯಮಬಾಹಿರವಾಗಿ ತುಂಡು ಭೂಮಿ (ನಿವೇಶನ) ಮಾರಾಟ ಮಾಡಿದ್ದಾರೆ. ಇಂತಹ ಆಸ್ತಿಗಳನ್ನು ನೋಂದಣಿ ಮಾಡಲು ತೊಡಕುಗಳು ಎದುರಾಗಿವೆ. ಇಂತಹ ಭೂಮಿಯ ನೋಂದಣಿ ಸಮಸ್ಯೆ ಬಗೆಹರಿಸಲು ಈಚೆಗೆ ಕಂದಾಯ ಇಲಾಖೆ ಹೊಸ ಸೂತ್ರ ಸಿದ್ಧಪಡಿಸಿದೆ. ಅಂತಹ ಜಮೀನುಗಳನ್ನು ‘ಕೃಷಿಯೇತರ ಅಭಿವೃದ್ಧಿಯಾಗದ ಜಮೀನು’ ಎಂದು ಪರಿಗಣಿಸಲು ಇಲಾಖೆ ಸೂಚಿಸಿದೆ.

ಭೂಮಿ, ಇ-ಸ್ವತ್ತು ಹಾಗೂ ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು, ಒಂದು ಸರ್ವೆ ನಂಬರ್‌ ಜಮೀನು ಭೂಪರಿವರ್ತನೆಯಾದ ನಂತರ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದರೆ ಅಂತಹ ಆಸ್ತಿ ಗುರುತಿನ ಸಂಖ್ಯೆಯನ್ನು ಭೂಮಿ ತಂತ್ರಾಂಶಕ್ಕೆ ರವಾನಿಸಲಾಗುತ್ತದೆ. ಅಂತಹ ಜಮೀನನ್ನು ಪಹಣಿ ಆಧಾರದ ಮೇಲೆ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ.

ಪರಿತ್ಯಾಜನಾ ಪತ್ರಗಳ ನೋಂದಣಿ: ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆಗಳ ರಸ್ತೆ, ಆಟದ ಮೈದಾನ, ಉದ್ಯಾನಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ (ರಿಲಿಂಕ್ವಿಷ್‌ಮೆಂಟ್) ಮಾಡಬೇಕು. ಆದರೆ, ಅವುಗಳಿಗೆ ಖಾತೆ ನೀಡುವ ಬಗ್ಗೆ ಗೊಂದಲವಿದ್ದ ಕಾರಣ ಈ ಪ್ರಕ್ರಿಯೆ ಸ್ಥಗಿತವಾಗಿತ್ತು. ಇಂತಹ ಬಡಾವಣೆಗಳ ಮೂಲ ಮಾಲೀಕರು, ಅಭಿವೃದ್ಧಿದಾರರ ಹೆಸರಿಗೆ ರಸ್ತೆ ಉದ್ಯಾನಗಳಿಗೆ ಖಾತೆ ಸೃಜನೆ ಮಾಡಿ, ಅವರಿಂದ ನೋಂದಣಿ ಮುಖಾಂತರ ವರ್ಗಾಯಿಸಲು ಸಾಧ್ಯವಾಗುವ ರೀತಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಇದೇ ರೀತಿಯಲ್ಲಿ ಬಿಬಿಎಂಪಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಪರಿಹಾರವನ್ನು ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ.

ಇ–ಖಾತಾ ಕಡ್ಡಾಯ: ಕಾಯ್ದೆಗೆ ತಿದ್ದುಪಡಿ

ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ ಇ–ಸ್ವತ್ತು ಕಡ್ಡಾಯಗೊಳಿಸಿದ ಮಾದರಿಯಲ್ಲೇ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್‌ ಸ್ವರೂಪದ ಇ–ಖಾತಾ ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ ಇದೇ ವರ್ಷದ ಫೆಬ್ರುವರಿಯಲ್ಲಿ ವಿಧಾನಮಂಡಲದ ಅನುಮೋದನೆ ಪಡೆದಿತ್ತು. ಅದನ್ನು ಸೆಪ್ಟೆಂಬರ್‌–ಅಕ್ಟೋಬರ್‌ನಿಂದ ಜಾರಿಗೆ ತರಲಾಗಿದೆ.

‘ವಿದ್ಯುನ್ಮಾನ ಮಾಧ್ಯಮದ ಸಾಧನಗಳ ಮೂಲಕ ಇತರ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜಿಸದ ಹೊರತು ಸ್ಥಿರ ಸ್ವತ್ತಿನ ವರ್ಗಾವಣೆ ಅಥವಾ ಪರಭಾರೆ ಮಾಡುವಂತಿಲ್ಲ’ ಎಂಬುದನ್ನು ನೋಂದಣಿ ಕಾಯ್ದೆ–1908ರ ಸೆಕ್ಷನ್‌ 71–ಎಗೆ ಸೇರಿಸಲಾಗಿದೆ.

‘ಗ್ರಾಮೀಣ ಪ್ರದೇಶಗಳ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆಯಲ್ಲಿ ಇ–ಸ್ವತ್ತು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ನಗರ ಪ್ರದೇಶಗಳಲ್ಲಿ ಭೌತಿಕ ಕಡತದ (ಕಾಗದದ) ಖಾತೆ ಆಧಾರದಲ್ಲಿ ಈಗಲೂ ನೋಂದಣಿ ನಡೆಯುತ್ತಿತ್ತು. ಇದರಿಂದ ಅಕ್ರಮವಾಗಿ ಸ್ವತ್ತುಗಳ ನೋಂದಣಿ, ವಂಚನೆ ನಡೆಯುತ್ತಿತ್ತು. ಅದನ್ನು ತಪ್ಪಿಸಲು ಇ-ಖಾತಾ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ನಗರ ಪ್ರದೇಶಗಳ ಆಸ್ತಿಗಳ ನೋಂದಣಿ ಇ-ಖಾತಾ ಇದ್ದರೆ ಮಾತ್ರ ಸಾಧ್ಯ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ವ್ಯಾಪ್ತಿಯ ಸ್ವತ್ತುಗಳು ಮತ್ತು ಇತರ ಎಲ್ಲ ನಗರ ಪ್ರದೇಶಗಳ ಸ್ವತ್ತುಗಳಿಗೂ ಇದು ಅನ್ವಯವಾಗುತ್ತದೆ.

ನೈಜ ಆಸ್ತಿಗಳ ನೋಂದಣಿಗೆ ಸಮಸ್ಯೆಯಾಗಿಲ್ಲ. ಅಕ್ರಮವಾಗಿ ನಿರ್ಮಿಸಿದ ಬಡಾವಣೆಗಳಲ್ಲಿನ ಸ್ವತ್ತುಗಳಿಗೆ ತೊಡಕಾಗಿದೆ. ಇ–ಖಾತಾದಿಂದಾಗಿ ಕಾನೂನುಬಾಹಿರ ನೋಂದಣಿಗೆ ಕಡಿವಾಣ ಬಿದ್ದಿದೆ
ಕೆ.ಎ.ದಯಾನಂದ,ನೋಂದಣಿ ಮಹಾ ಪರಿವೀಕ್ಷಕ

ಇ–ಖಾತಾ ಕಡ್ಡಾಯ: ಕಾಯ್ದೆಗೆ ತಿದ್ದುಪಡಿ ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ ಇ–ಸ್ವತ್ತು ಕಡ್ಡಾಯಗೊಳಿಸಿದ ಮಾದರಿಯಲ್ಲೇ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್‌ ಸ್ವರೂಪದ ಇ–ಖಾತಾ ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ ಇದೇ ವರ್ಷದ ಫೆಬ್ರುವರಿಯಲ್ಲಿ ವಿಧಾನಮಂಡಲದ ಅನುಮೋದನೆ ಪಡೆದಿತ್ತು. ಅದನ್ನು ಸೆಪ್ಟೆಂಬರ್‌–ಅಕ್ಟೋಬರ್‌ನಿಂದ ಜಾರಿಗೆ ತರಲಾಗಿದೆ. ‘ವಿದ್ಯುನ್ಮಾನ ಮಾಧ್ಯಮದ ಸಾಧನಗಳ ಮೂಲಕ ಇತರ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜಿಸದ ಹೊರತು ಸ್ಥಿರ ಸ್ವತ್ತಿನ ವರ್ಗಾವಣೆ ಅಥವಾ ಪರಭಾರೆ ಮಾಡುವಂತಿಲ್ಲ’ ಎಂಬುದನ್ನು ನೋಂದಣಿ ಕಾಯ್ದೆ–1908ರ ಸೆಕ್ಷನ್‌ 71–ಎಗೆ ಸೇರಿಸಲಾಗಿದೆ. ‘ಗ್ರಾಮೀಣ ಪ್ರದೇಶಗಳ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆಯಲ್ಲಿ ಇ–ಸ್ವತ್ತು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಭೌತಿಕ ಕಡತದ (ಕಾಗದದ) ಖಾತೆ ಆಧಾರದಲ್ಲಿ ಈಗಲೂ ನೋಂದಣಿ ನಡೆಯುತ್ತಿತ್ತು. ಇದರಿಂದ ಅಕ್ರಮವಾಗಿ ಸ್ವತ್ತುಗಳ ನೋಂದಣಿ ವಂಚನೆ ನಡೆಯುತ್ತಿತ್ತು. ಅದನ್ನು ತಪ್ಪಿಸಲು ಇ-ಖಾತಾ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ನಗರ ಪ್ರದೇಶಗಳ ಆಸ್ತಿಗಳ ನೋಂದಣಿ ಇ-ಖಾತಾ ಇದ್ದರೆ ಮಾತ್ರ ಸಾಧ್ಯ. ಬಿಬಿಎಂಪಿ ಬಿಡಿಎ ಕೆಐಎಡಿಬಿ ವ್ಯಾಪ್ತಿಯ ಸ್ವತ್ತುಗಳು ಮತ್ತು ಇತರ ಎಲ್ಲ ನಗರ ಪ್ರದೇಶಗಳ ಸ್ವತ್ತುಗಳಿಗೂ ಇದು ಅನ್ವಯವಾಗುತ್ತದೆ.

ರಾಜ್ಯದೆಲ್ಲೆಡೆ ಸಮಸ್ಯೆ

ಮೈಸೂರು/ಹುಬ್ಬಳ್ಳಿ/ಕಲಬುರಗಿ/ದಾವಣಗೆರೆ/ಮಂಗಳೂರು: ಇ–ಖಾತಾ ಸಮಸ್ಯೆ ರಾಜಧಾನಿ ಬೆಂಗಳೂರಿನಲ್ಲಷ್ಟೇ ಅಲ್ಲ, ಮೈಸೂರು, ಹುಬ್ಬಳ್ಳಿ–ಧಾರಾವಾಡ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇದೆ. ಗ್ರಾಮೀಣ ಭಾಗದಲ್ಲಿ ಜನರು ಇ–ಸ್ವತ್ತು ಮಾಡಿಸಲು ಪರದಾಡುತ್ತಿದ್ದಾರೆ. ಇದರಿಂದಾಗಿ ಆಸ್ತಿಗಳ ಖರೀದಿ, ಮಾರಾಟ ನೋಂದಣಿ ಆಗುತ್ತಿಲ್ಲ. ಆಸ್ತಿಗಳ ಮಾಲೀಕರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಆಸ್ತಿಗಳ ಮಾಲೀಕರ ಬಳಿ ಅಗತ್ಯವಾಗಿ ಬೇಕಾಗಿರುವ ದಾಖಲೆಗಳು ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಸರ್ವರ್‌, ಇಂಟರ್‌ನೆಟ್‌ ಸಮಸ್ಯೆಯೂ ಬಾಧಿಸುತ್ತಿದೆ. ಇ–ಖಾತಾ ಮಾಡಿಸಿಕೊಡಲು ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಅಧಿಕಾರಿಗಳು ಕೂಡ ನಿವೇಶನದ ಅಳತೆಗೆ ತಕ್ಕಂತೆ ₹15ಸಾವಿರದಿಂದ ₹ 30ಸಾವಿರದವರೆಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪಗಳಿವೆ. ಇಲ್ಲವಾದರೆ ಸಾಕಷ್ಟು ಹಳೆಯ ದಾಖಲೆಗಳನ್ನು ಕೇಳಿ ಸತಾಯಿಸುವ, ಅರ್ಜಿ ತಿರಸ್ಕರಿಸುವ ಹುನ್ನಾರಗಳು ನಡೆಯುತ್ತಿರುವ ಬಗ್ಗೆಯೂ ದೂರುಗಳಿವೆ.

ರಾಜ್ಯ ಸರ್ಕಾರ ಸಮರ್ಪಕವಾಗಿ ಪೂರ್ವಸಿದ್ಧತೆ ಮಾಡದೆ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯಗೊಳಿಸಿರುವುದರಿಂದ ಈ ಎಲ್ಲ ಸಮಸ್ಯೆಗಳಾಗಿವೆ ಎಂಬುದು ಆಸ್ತಿ ಮಾಲೀಕರ ಆರೋಪ. 

ದಾಖಲೆಗಳಿರುವುದು ಕಡ್ಡಾಯ: ಮಾಲೀಕರು ತಮ್ಮ ಜಮೀನು ಅಥವಾ ಆಸ್ತಿಗೆ ಸಂಬಂಧಿಸಿದಂತೆ ಪಕ್ಕಾ ಖಾತೆಯನ್ನು ಹೊಂದಿರಬೇಕು. ಕೃಷಿ ಭೂಮಿಗೆ ಪಹಣಿ ಇರುವಂತೆ ಕೃಷಿಯೇತರ (ಎನ್‍ಎ) ಭೂಮಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ–ಸ್ವತ್ತು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ–ಖಾತಾ ಮಾಡಿಸಿಕೊಳ್ಳಬೇಕಾಗುತ್ತದೆ. ಆಸ್ತಿ ನೋಂದಣಿ ಸಂದರ್ಭದಲ್ಲಿ ಇದು ಕಡ್ಡಾಯ. ಆದರೆ, ಈ ಸ್ವತ್ತು ನೀಡಲು, ಇ–ಖಾತಾ ಮಾಡಿಸಬೇಕು ಎಂದರೆ ಮಾಲೀಕರು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಹೇಳುತ್ತಾರೆ ಅಧಿಕಾರಿಗಳು.

ಭೂ ಪರಿವರ್ತನೆ ಸೇರಿದಂತೆ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಇರಬೇಕು. ಒಂದು ದಾಖಲೆ ಇಲ್ಲದಿದ್ದರೂ ಆಗುವುದಿಲ್ಲ. ದಾಖಲೆಗಳು ಸರಿ ಇದ್ದರೆ, ಇ–ಖಾತೆಯಾಗಲಿ, ಇ–ಸ್ವತ್ತುವಾಗಲೀ ಮಾಲೀಕರಿಗೆ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ ಎಂಬುದು ಅವರ ವಾದ.

‘ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊರತಾದ ಜಮೀನಿಗೆ ಇ–ಸ್ವತ್ತು (9/11) ನೀಡಲಾಗುತ್ತದೆ. ಅದಕ್ಕೆ ಭೂ ಪರಿವರ್ತನೆಯಾಗಬೇಕು. ಆದರೆ, ಗ್ರಾಮೀಣ ಭಾಗಗಳಲ್ಲಿ ಬಹುತೇಕರು ಭೂ ಪರಿವರ್ತನೆಗೆ ಮುಂದಾಗುವುದಿಲ್ಲ. ಶುಲ್ಕ ಪಾವತಿ ಒಂದು ಕಾರಣವಾದರೆ, ಕಚೇರಿಗಳಿಗೆ ಅಲೆದಾಡಬೇಕು ಎಂಬುದು ಮತ್ತೊಂದು ಕಾರಣ. ಭೂ ಪರಿವರ್ತನೆ ಆಗದ ಆಸ್ತಿಯನ್ನು ನಾವು ಕ್ರಮಬದ್ಧವಲ್ಲದ ಆಸ್ತಿ (11ಬಿ ಖಾತೆ) ಎಂದು ಗುರುತಿಸುತ್ತೇವೆ. ಈ ದಾಖಲೆ ಇದ್ದರೆ ಆಸ್ತಿ ನೋಂದಣಿ ಮಾಡಿಕೊಳ್ಳಲು ಆಗುವುದಿಲ್ಲ. ಈಗಿನ ಹಲವು ಆಸ್ತಿಗಳು ಗ್ರಾಮ ಠಾಣಾ ವ್ಯಾಪ್ತಿಯಿಂದ ಹೊರಗಿವೆ. ದಾಖಲೆಗಳು ಇಲ್ಲದಿದ್ದರೆ ಇ–ಸ್ವತ್ತು ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಚಾಮರಾಜನಗರ ಜಿಲ್ಲೆಯ ಹೆಸರು ಹೇಳಲಿಚ್ಛಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು. 

ದಾಖಲೆಗಳನ್ನು ಹೊಂದಿಸಲು ಹರಸಾಹಸ: ಬಹುತೇಕ ನಗರ ಪ್ರದೇಶಗಳಲ್ಲಿ ಹಳೆಯ ಬಡಾವಣೆ, ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದಂತೆ ಮಾಲೀಕರ ಬಳಿ ದಾಖಲೆಗಳು ಇಲ್ಲ. ದಶಕಗಳ ಹಿಂದೆ ಖರೀದಿಸಿದ ನಿವೇಶನಗಳ ದಾಖಲೆಗಳನ್ನು ಹೊಂದಿಸಿಕೊಳ್ಳಲು ಮಾಲೀಕರು ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ನಿವೇಶನದ ನೋಂದಣಿ ದಾಖಲಾತಿ ಇದ್ದರೂ ಹಕ್ಕು ವರ್ಗಾವಣೆ ಮಾಡುತ್ತಿಲ್ಲ. ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ ಭೂಮಿಯಲ್ಲಿ ನಗರ ಯೋಜನೆ ಇಲಾಖೆಯಿಂದ ಲೇಔಟ್ ನಕ್ಷೆ ತಯಾರಿಸಿ ಅನುಮೋದನೆ ಪಡೆದ ನಿವೇಶನಗಳ‌ ಖಾತಾ ಮಾತ್ರ ಜನರಿಗೆ ದೊರೆಯುತ್ತಿವೆ. ಆದರೆ, ಕೃಷಿ‌ ಜಮೀನಿನಲ್ಲಿ ನಿವೇಶನ ಖರೀದಿಸಿದವರ ಗೋಳು ಗೋಳಾಗಿಯೇ ಉಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಠಾಣಾ ಜಾಗದಲ್ಲಿನ ಆಸ್ತಿಗಳಿಗೆ ಮಾತ್ರ ಇ–ಸ್ವತ್ತು ಮಾಡಿಕೊಡಲಾಗುತ್ತಿದೆ.

‘ಭೂಪರಿವರ್ತನೆಯಾದ ನಂತರ ಸಂಬಂಧಪಟ್ಟ ಇಲಾಖೆಗಳಲ್ಲಿ ಖಾತೆ ಮಾಡಿಸಲು ಹೋದಾಗ ನಗರಾಭಿವೃದ್ಧಿ ಪ್ರಾಧಿಕಾರದವರು ಲೇಔಟ್ ಪ್ಲಾನ್ ಮಾಡಿಸಲು ಹೇಳುತ್ತಾರೆ. ಅಭಿವೃದ್ಧಿ ಶುಲ್ಕ ಪಾವತಿಸಿ ಖಾತೆ ಮಾಡಿಸಿಕೊಡುತ್ತಾರೆ. ಇಷ್ಟೆಲ್ಲಾ ಮುಗಿದ ಮೇಲೆ ನಗರಸಭೆ, ಪುರಸಭೆ ಹಾಗೂ ಪಂಚಾಯಿತಿಗಳಲ್ಲಿ ಖಾತೆ ಆಗುತ್ತದೆ. ಖಾತೆಯಾದ ನಂತರ ಖಾತೆ ಮಾಡಿಸುವ ವ್ಯಕ್ತಿಗಳ ಬೇಡಿಕೆಗೆ ಅನುಗುಣವಾಗಿ ಮನೆ ಕಟ್ಟಿಕೊಳ್ಳಲು ಎಂಜಿನಿಯರ್ ಪ್ಲಾನ್ ತೆಗೆದುಕೊಂಡು ಪರವಾನಗಿ ಪಡೆಯಬೇಕಿದ್ದು ಇದಕ್ಕೂ ಶುಲ್ಕ ಕೊಡಬೇಕು. ಇಷ್ಟೆಲ್ಲಾ ಆದರೂ ಖಾತೆಗೂ ಶುಲ್ಕ ನೀಡಬೇಕು. ಒಟ್ಟಿನಲ್ಲಿ ನಿವೇಶನ ಅಥವಾ ಮನೆ ಕಟ್ಟುವವನ ಪಾಡು ಚಿಂತಾಜನಕವಾಗಿದೆ’ ಎಂಬುದು ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಾದ ರವಿ, ಸಿ.ಪಿ.ಜಗದೀಶ್, ಶಿವಕುಮಾರ್, ಎಚ್.ಪಿ.ಚನ್ನಯ್ಯ ಅವರ ಅಳಲು.

ಬಾಗಲಕೋಟೆಯಲ್ಲಿ ಮುಳುಗಡೆ ಸಂತ್ರಸ್ತರಿಗೆಂದು ನಿರ್ಮಿಸಲಾದ ನವನಗರದ ಯುನಿಟ್‌ಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆ ಅನುಮೋದನೆ ದೊರೆತಿಲ್ಲ. ಪರಿಣಾಮ ಇ–ಖಾತಾ ನೀಡುತ್ತಿಲ್ಲ. ಬಿಟಿಡಿಎಗೆ ಇ ಖಾತಾ ನೀಡುವಂತೆ ಆದೇಶ ಹೊರಡಿಸಿದೆ. ಆದರೂ, ಸಮಸ್ಯೆ ಪರಿಹರಿದಿಲ್ಲ. ಇದರಿಂದಾಗಿ ಯುನಿಟ್ 1 ಹಾಗೂ ಯುನಿಟ್ 2ರಲ್ಲಿನ 30 ಸಾವಿರಕ್ಕೂ ಹೆಚ್ಚು ನಿವೇಶನಗಳಿಗೆ ಇ–ಖಾತಾ ದೊರೆಯದ್ದರಿಂದ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.


ತಾಂತ್ರಿಕ ಕಾರಣಗಳು: ತಾಂತ್ರಿಕ ಕಾರಣಗಳು ಕೂಡ ಇ-ಖಾತಾ, ಇ–ಸ್ವತ್ತು ಪಡೆಯುವುದನ್ನು, ಆಸ್ತಿ ನೋಂದಣಿಯನ್ನು ಕಠಿಣಗೊಳಿಸಿವೆ. ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ, ಇಂಟರ್‌ನೆಟ್‌ ಸಮಸ್ಯೆ, ತಂತ್ರಾಂಶದಲ್ಲಿನ ದೋಷಗಳು ಇಡೀ ಪ್ರಕ್ರಿಯೆಯನ್ನು ವಿಳಂಬವಾಗುವಂತೆ ಮಾಡುತ್ತಿವೆ. 

ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೆಸರುಗಳು ಹಾಗೂ ಆಸ್ತಿಗಳು ಎರಡು ಬಾರಿ ನೋಂದಣಿಯಾಗಿದ್ದರೆ ಅವುಗಳು ಗ್ರಾಮ ಪಂಚಾಯಿತಿಗಳ ಪಂಚತಂತ್ರ ಸರ್ವರ್‌ನಲ್ಲಿ ತೋರಿಸುವುದಿಲ್ಲ. ಮತ್ತೆ ಉಪನೋಂದಣಾಧಿಕಾರಿ ಕಚೇರಿಗೆ ಅಲೆದಾಡಿ ಸರಿಪಡಿಸಿಕೊಳ್ಳಬೇಕಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಆಸ್ತಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬಂದ ಬಳಿಕ ಭೂಮಾಪನಾ ಇಲಾಖೆ ಹಾಗೂ ನಗರಾಭಿವೃದ್ಧಿ ಕೋಶಗಳ ಪರಿಶೀಲನೆ ನಂತರ ಇ-ಖಾತಾ ಮಾಡಿಸಲು ಅವಕಾಶ ನೀಡಲಾಗುತ್ತದೆ. ಇದು ಇ–ಆಸ್ತಿ ದಾಖಲೆಗಳ ವಿತರಣೆಯನ್ನು ನಿಧಾನಗೊಳಿಸುತ್ತಿವೆ. ಇ–ಖಾತಾದಲ್ಲಿ ಹೆಸರು ಸೇರಿದಂತೆ ಇತರ ವಿವರಗಳ ತಿದ್ದುಪಡಿ ಇದ್ದರೆ ಮಾಡಲು ಸಾಧ್ಯವಾಗುತ್ತಿಲ್ಲ. ತಂತ್ರಾಂಶದಲ್ಲಿ ಎಲ್ಲ ಮಾಹಿತಿ ದಾಖಲಿಸಿದರೂ ತಿದ್ದುಪಡಿ ಆಗುತ್ತಿಲ್ಲ.

ಆಸ್ತಿ ಮಾಲೀಕರು ಏನಂತಾರೆ?

ವಳಂಬವಾಗುತ್ತಿದೆ: ಇ–ಖಾತಾಗೆ ಅರ್ಜಿ ಹಾಕಿ ತಿಂಗಳಾದರೂ ಮಾಡಿಕೊಡುವುದಿಲ್ಲ. ಏನೇನೋ ಸಬೂಬು ಹೇಳಿಕೊಂಡು ದಿನ ದೂಡುತ್ತಾರೆ. ಯಾವುದೇ ನಿವೇಶನವನ್ನು ನೋಂದಣಿ ಮಾಡಬೇಕಾದರೆ ಮತ್ತು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಇ–ಖಾತಾ ಅತ್ಯವಶ್ಯಕ. ಆದರೆ ಪಂಚಾಯಿತಿಗಳಲ್ಲಿ ಇ–ಖಾತಾ ಪಡೆಯಲು ಹಲವು ತಿಂಗಳು ಬೇಕು
ರಾಜೇಶ್, ಆಲೂರು, ಹಾಸನ ಜಿಲ್ಲೆ
ಪರವಾನಗಿ ಕೇಳುತ್ತಾರೆ: 20 ವರ್ಷಗಳ ಹಿಂದೆ ಕಟ್ಟಿದ ಮನೆಗೆ ಇ–ಖಾತಾ ಮಾಡಿಸುವಾಗ, ಮನೆ ಕಟ್ಟಲು ನೀಡಿದ  ಪರವಾನಗಿ ಕೇಳುತ್ತಾರೆ. ಮನೆ ನಿರ್ಮಿಸುವಾಗ ಎಲ್ಲ ದಾಖಲೆ ಇಟ್ಟುಕೊಂಡಿರುವುದಿಲ್ಲ. ಈಗ ಎಂ.ಎ.ಆರ್‌–19ಗೆ ಅರ್ಜಿ ಸಲ್ಲಿಸಿದರೆ ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕು. ಯಾವ ಕೆಲಸವೂ ವೇಗವಾಗಿ ನಡೆಯುತ್ತಿಲ್ಲ. ಹೆಚ್ಚಾಗಿ ಹಿರಿಯ ನಾಗರಿಕರು ಕಚೇರಿಗಳಿಗೆ ಬರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವವರನ್ನು ನಿಯೋಜಿಸಬೇಕು
ಶಿವಕುಮಾರ್‌, ತುಮಕೂರು
ತುರ್ತು ಮಾರಾಟಕ್ಕೆ ಅಡ್ಡಿ: ಮಾಲೀಕರು ಈಗ ಪಾಲಿಕೆಗೆ ಇ–ಖಾತೆ ಮಾಡಿಸಲು ಅರ್ಜಿ ಕೊಟ್ಟರೆ ಅವರು ಕೇಳಿದ ದಾಖಲೆಯನ್ನು ಪೂರೈಸಿ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆಸ್ತಿ ಇದೆ. ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳಿಸಲು ಇಲ್ಲವೇ ಮದುವೆ ಮತ್ತಿತರ ಕಾರಣಗಳಿಗೆ ಈಗ ತುರ್ತಾಗಿ ಆಸ್ತಿ ಮಾರಾಟ ಮಾಡಲು ಇ–ಖಾತಾದ ಸಮಸ್ಯೆ ಅಡ್ಡಿಯಾಗಿದೆ
ಶ್ರೀಕಾಂತ್ ಕಾಮತ್, ಶಿವಮೊಗ್ಗ ಜಿಲ್ಲೆ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಕಾರ್ಯದರ್ಶಿ
ವಿಳಂಬ ಧೋರಣೆ: ಇ–ಖಾತೆಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಜನರು ಪರದಾಡುವಂತಾಗಿದೆ. ಹಣಕ್ಕಾಗಿ ಅಧಿಕಾರಿಗಳು, ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದ ಪ್ರಕರಣವೂ ಈಚೆಗೆ ನಡೆದಿತ್ತು. ಲಂಚಕ್ಕೆ ಬೇಡಿಕೆ ಇಡುತ್ತಿರುವುದರಿಂದ ಜನರು ನಮಗೆ ನೆರವಿಗಾಗಿ ಕರೆ ಮಾಡುತ್ತಿದ್ದಾರೆ
–ಎಸ್‌.ಟಿ.ವೀರೇಶ್‌, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ
ಬಡ, ಮಧ್ಯಮವರ್ಗದವರಿಗೆ ಸಮಸ್ಯೆ: ತುಂಡು ಭೂಮಿಯ ಮಾಲೀಕರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ ಭೂಮಿಯನ್ನುಕೃಷಿಯೇತರ ಭೂಮಿ ಪರಿವರ್ತನೆಗೆ ಕನಿಷ್ಠ 3 ಗುಂಟೆ ಜಾಗದ ಅಗತ್ಯವಿದೆ. ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗದಿದ್ದರೆ ಇ–ಸ್ವತ್ತು, ಇ–ಖಾತಾ ಮಾಡಿಸಲು ಆಗದು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಮಸ್ಯೆ ಎದುರಿಸುವಂತಾಗಿದೆ
ಸತೀಶ ಬೇಳೂರಕರ, ಕಾರವಾರ 
ಜನರಿಗೆ ತೊಂದರೆ :ಒಂದೂವರೆ ವರ್ಷದ ಹಿಂದೆ 18 ಸೆಂಟ್ ಜಾಗ ಖರೀದಿಸಿದ್ದೆ. ಅದರಲ್ಲಿ ವಿವಾದಕ್ಕೆ ಒಳಗಾಗಿದ್ದ 1.83 ಸೆಂಟ್ ಜಾಗವನ್ನು ನೋಂದಾಯಿಸಲು ಒಂದೂವರೆ ವರ್ಷದಿಂದ ಓಡಾಡುತ್ತಿದ್ದೇನೆ. ಇ–ಖಾತೆ, ಆ ಖಾತೆ ಎಂದೆಲ್ಲ ಹೇಳಿ ಸತಾಯಿಸುತ್ತಿದ್ದಾರೆ. ನನಗೆ ಅದು ಯಾವುದೂ ಗೊತ್ತಿಲ್ಲ. ವಕೀಲರ ಬಳಿ ದಾಖಲೆಗಳನ್ನು ಕೊಟ್ಟಿದ್ದೇನೆ. ಇನ್ನೂ ನನ್ನ ಕೆಲಸ ಆಗಿಲ್ಲ. ಸರ್ಕಾರದ ವ್ಯವಸ್ಥೆಯೊಂದು ಜನರಿಗೆ ಈ ರೀತಿ ತೊಂದರೆ ಕೊಟ್ಟರೆ ಹೇಗೆ?
ರಾಬರ್ಟ್‌ ಡಿಸೋಜಾ, ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.