ADVERTISEMENT

ಅಪಾಯದ ಟ್ರ್ಯಾಕ್‌ನಲ್ಲಿ ಜೀವನದ ಹೋರಾಟ

ವಿಕ್ರಂ ಕಾಂತಿಕೆರೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST
ಗದಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಕ್ರೈಟೀರಿಯಂ ವಿಭಾಗದ ಸ್ಪರ್ಧೆಯ ಒಂದು ದೃಶ್ಯ...  –ಚಿತ್ರಗಳು: ಬನೇಶ್ ಕುಲಕರ್ಣಿ
ಗದಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಕ್ರೈಟೀರಿಯಂ ವಿಭಾಗದ ಸ್ಪರ್ಧೆಯ ಒಂದು ದೃಶ್ಯ... –ಚಿತ್ರಗಳು: ಬನೇಶ್ ಕುಲಕರ್ಣಿ   

ಸ್ಕಿನ್ ಟೈಟ್ ಬಟ್ಟೆ ತೊಟ್ಟು, ಏರೋಡೈನಾಮಿಕ್ ಹೆಲ್ಮೆಟ್ ಹಾಕಿಕೊಂಡು ದುಬಾರಿ ಬೆಲೆಯ ವಿದೇಶಿ ನಿರ್ಮಿತ ಸೈಕಲ್ ಏರಿ ವಾಯುವೇಗದಲ್ಲಿ ಸಾಗುವ ಸೈಕ್ಲಿಸ್ಟ್‌ಗಳನ್ನು ನೋಡಿದವರಿಗೆ ಅವರ ಜೀವನ ವರ್ಣರಂಜಿತವಾಗಿದೆ ಎಂದೆನಿಸುವುದು ಸಹಜ. ಆದರೆ ಬದುಕಿನ ದಾರಿಯಲ್ಲಿ ಅವರು ನೂರಾರು ಅಡೆತಡೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಎಚ್ಚರ ತಪ್ಪಿದರೆ ಅತ್ಯಂತ ಅಪಾಯಕಾರಿಯಾದ ಸೈಕ್ಲಿಂಗ್ ಕ್ರೀಡೆ ಅನೇಕರಿಗೆ ಬದುಕು ಕಟ್ಟಿಕೊಳ್ಳುವ ಹೋರಾಟವೂ ಹೌದು.

ಮಾನವ ಮತ್ತು ಯಂತ್ರದ ಸಾಂಗತ್ಯವಾದ ಸೈಕ್ಲಿಂಗ್‌ನಲ್ಲಿ ಎಚ್ಚರ ತಪ್ಪಿದರೂ ಸೈಕಲ್ ಕೈಕೊಟ್ಟರೂ ಅಪಾಯ ಖಂಡಿತ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪ್ರತಿಸ್ಪರ್ಧಿಯ ಆಕ್ರಮಣ ಪ್ರವೃತ್ತಿಯೂ ಸೈಕ್ಲಿಂಗ್ ಪಟುವಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಹೀಗಾಗಿ ಪ್ರತಿಯೊಂದು ಸ್ಪರ್ಧೆ ಮುಗಿಯುವವರೆಗೂ ಸೈಕ್ಲಿಸ್ಟ್ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಇರಬೇಕಾಗುತ್ತದೆ. ಆತ ಅಂತಿಮ ಗೆರೆ ದಾಟಿದ ನಂತರವೇ ಮನೆ ಮಂದಿ ಹಾಗೂ ಕೋಚ್‌ಗಳು ನಿಟ್ಟುಸಿರು ಬಿಡುವುದು.

ರಾಜ್ಯದಲ್ಲಿ ಸೈಕ್ಲಿಂಗ್ ಕ್ರೀಡೆಗೆ ಉತ್ತರ ಕರ್ನಾಟಕವೇ ಕಾಶಿ. ಅದರಲ್ಲೂ ವಿಶೇಷವಾಗಿ ವಿಜಾಪುರ, ಬಾಗಲಕೋಟೆ ಜಿಲ್ಲೆಗಳು ಸೈಕ್ಲಿಸ್ಟ್‌ಗಳನ್ನು ತಯಾರಿಸುವ ಕೇಂದ್ರಗಳಾಗಿ ಗಮನ ಸೆಳೆದಿವೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ಸೈಕ್ಲಿಂಗ್ ಪಟು ಸಿಗುತ್ತಾರೆ.

ಈ ಭಾಗದ ಸೈಕ್ಲಿಸ್ಟ್‌ಗಳಲ್ಲಿ ಬಹುತೇಕರು ಬಡತನದ ಕುಲುಮೆಯಲ್ಲಿ ಬೇಯುತ್ತಲೇ ಸಾಧನೆ ಮಾಡುತ್ತಿದ್ದಾರೆ. ವಿವಿಧ ಕಾರಣಗಳಿಂದ ಸೈಕ್ಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅವರು ಮಾಡುತ್ತಿರುವ ಸಾಧನೆ ಬದುಕನ್ನು ರೂಪಿಸುವ ದಾರಿಯ ಹುಡುಕಾಟವೂ ಆಗಿದೆ. ಇಲ್ಲಿ ಮಾಡಿದ ಸಾಧನೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಭರವಸೆ ಅಪಾಯವನ್ನು ಮೆಟ್ಟಿ ನಿಲ್ಲಲು ಅವರನ್ನು ಪ್ರೇರೇಪಿಸುತ್ತದೆ.

ಗದಗದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬಿದ್ದು ಕೈಗೆ ಗಾಯ ಮಾಡಿಕೊಂಡ ರಾಷ್ಟ್ರೀಯ ಸೈಕ್ಲಿಸ್ಟ್ ಬಾಗಲಕೋಟೆಯ ರಾಜೇಶ್ವರಿ ಡುಳ್ಳಿ, `ಶಾಲೇಲಿ ಶ್ಯಾನೆ ಇಲ್ದಿದ್ರೂ ಇಲ್ಲಿ ಸಾಧನೆ ಮಾಡಿದ್ರೆ ಜಾಬ್ ಸಿಕ್ತೈತಿ' ಎಂದು ಹೇಳಿದ್ದು ಎಲ್ಲ ಸೈಕ್ಲಿಂಗ್ ಪಟುಗಳ ಮನದಾಳದ ಮಾತಿಗೆ ಕನ್ನಡಿಯಾಗಿತ್ತು.

ಸ್ವಂತ ಸೈಕಲ್ ಇಲ್ಲದೆ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗೆ ಹೋದ ಹಾಗೂ ಗದಗದಲ್ಲಿ ನಾಲ್ಕು ಚಿನ್ನದ ಪದಕ ಗೆದ್ದ ಶೈಲಾ ಮಟ್ಯಾಳ, ಹೊಲದ ಕೆಲಸಕ್ಕೆ ಹೋಗುವ ತಾಯಿಯ ದುಡಿಮೆಯಿಂದ ಹೊಟ್ಟೆ ಹೊರೆದುಕೊಳ್ಳುವ, ಸದ್ಯ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಸಿದ್ಧತೆಯಲ್ಲಿರುವ ಸೀಮಾ ಆಡಗಲ್ ಮುಂತಾದ ಅನೇಕರು ಸುಂದರ ಭವಿಷ್ಯದ ಕನಸು ಹೊತ್ತುಕೊಂಡಿದ್ದಾರೆ. 

`ಇದು ಕೇವಲ ಓಟವಲ್ಲ. ಬದುಕಿನ ಆಟ ಕೂಡ. ಬಿದ್ದರೂ ಎದ್ದು ಮತ್ತೆ ಮುಂದೆ ಹೋಗಬೇಕು, ಗುರಿ ಮುಟ್ಟುವ ತನಕ ಸಾಗಬೇಕು. ಈ ಪ್ರವೃತ್ತಿಯನ್ನು ಅಭ್ಯಾಸದ ಸಂದರ್ಭದಲ್ಲೇ ರೂಢಿಸಿಕೊಂಡಿರುತ್ತೇವೆ. ಅಪಾಯ ಮುಂದಿದ್ದರೂ ಅದರ ಕಡೆಗೆ ಗಮನ ಕೊಡದೆ ಧಾವಿಸುತ್ತೇವೆ. ಸ್ಪರ್ಧೆಯ ಫಿನಿಷಿಂಗ್ ಲೈನ್ ನಮ್ಮ  ಜೀವನದ ಸ್ಟಾರ್ಟಿಂಗ್ ಪಾಯಿಂಟ್ ಎಂದೇ ತಿಳಿದಿರುತ್ತೇವೆ' ಎಂದು ರಾಜೇಶ್ವರಿ ವಿಶ್ಲೇಷಿಸಿದಾಗ ಸುತ್ತ ಇದ್ದ ಗೆಳತಿಯರು ಹೌದು ಎಂದು ತಲೆ ಆಡಿಸಿದರು.

ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ಸುಮಾರು 20 ಮಂದಿ ಸೈಕ್ಲಿಸ್ಟ್‌ಗಳು ಈಗ ರೈಲ್ವೆ ಮತ್ತು ಪೊಲೀಸ್ ಇಲಾಖೆಯ ವಿವಿಧ ಹುದ್ದೆಯಲ್ಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಅನೇಕ ಮಂದಿ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಸದ್ಯ ಸೈಕ್ಲಿಂಗ್ ಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಇಲ್ಲದಿದ್ದರೂ ರೈಲ್ವೆ ಮತ್ತು ಸೇನೆಯಲ್ಲಿ ಭರವಸೆಯ ಬಾಗಿಲು ತೆರೆದೇ ಇದೆ. ಸೈಕ್ಲಿಂಗ್‌ನಲ್ಲಿ ಮಿಂಚು ಹರಿಸಿ ಉದ್ಯೋಗ ಪಡೆದಿರುವ ಹಿರಿಯರು ಅವರಿಗೆ ಆದರ್ಶವಾಗಿ ನಿಂತಿದ್ದಾರೆ. ರೇಸಿಂಗ್ ಸಂದರ್ಭದಲ್ಲಿ ಬಿದ್ದು ತೊಡೆ ಎಲುಬು ಮುರಿದ ರಾಷ್ಟ್ರೀಯ ಸೈಕ್ಲಿಸ್ಟ್, ವಿಜಾಪುರದ ರುದ್ರಪ್ಪ ನ್ಯಾಮನಗೌಡ ಅವರಿಗೆ ರೈಲ್ವೆಯಲ್ಲಿ ಕೆಲಸ ಸಿಕ್ಕಿದ ಉದಾಹರಣೆ ಯುವ ಸೈಕ್ಲಿಸ್ಟ್‌ಗಳ ಕಣ್ಣ ಮುಂದೆಯೇ ಇದೆ.

ಗದಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಕೊನೆಯ ದಿನ ಬಾಲಕರ ಮಾಸ್ ಸ್ಟಾರ್ಟ್ ಸ್ಪರ್ಧೆಯ ವೇಳೆ ಕುರಿ ಅಡ್ಡ ಬಂದ ಕಾರಣ ಬಿದ್ದು ಮೀನಖಂಡದ ಬಳಿ ಮತ್ತು ತೊಡೆಯಲ್ಲಿ ಗಾಯ ಮಾಡಿಕೊಂಡ ಮೈಸೂರಿನ ರಾಹುಲ್ ರೋಷನ್, ಓವರ್‌ಟೇಕ್ ಭರದಲ್ಲಿ ಬಿದ್ದು ಕೈಗೆ ಗಂಭೀರ ಗಾಯ ಮಾಡಿಕೊಂಡ ಗದಗದ ಸವಿತಾ ತಲಕಲ್, ಹಿಂದಿನಿಂದ ಬಂದ ಸ್ಪರ್ಧಾಳುವಿನ ಗಾಲಿ ತಾಗಿ ಬಿದ್ದ ರಾಜೇಶ್ವರಿ ಡುಳ್ಳಿ, ವಿಜಾಪುರದ ಸಚಿನ್ ಬೋವಿ, ಬಾಗಲಕೋಟೆಯ ರೂಪಾ ಗೌಡರ್ ಮುಂತಾದವರೆಲ್ಲರೂ ಕೊನೆಯ ಕ್ಷಣದಲ್ಲಿ ಪದಕ ಬಾಚುವ ತವಕದಲ್ಲಿದ್ದರು.

ಉದ್ದೇಶಪೂರ್ವಕವಾಗಿ ಕಟ್ ಹೊಡೆಯುವುದು, ಬ್ಲಾಕ್ ಮಾಡುವುದು ಇತ್ಯಾದಿ ಸೈಕ್ಲಿಂಗ್‌ನಲ್ಲಿ ಸಾಮಾನ್ಯ. ಎಲ್ಲ ಸಂದರ್ಭದಲ್ಲೂ ಅಧಿಕಾರಿಗಳು ಇದನ್ನು ತಪ್ಪು ಎಂದು ಪರಿಗಣಿಸುವುದೂ ಇಲ್ಲ. ಅಂತಿಮ ಗೆರೆಯ ನೂರು ಮೀಟರ್ ದೂರದಲ್ಲಿ ಈ ರೀತಿ ಮಾಡಿದರೆ ಮಾತ್ರ ಸ್ಪರ್ಧಾಳುವನ್ನು ಅನರ್ಹಗೊಳಿಸುತ್ತಾರೆ. ಎದುರಾಳಿ ಮಾಡುವ ಕುತಂತ್ರಗಳನ್ನೇ ತಂತ್ರ ಎಂದು ಪರಿಗಣಿಸುವ ಉದಾರ ಮನಸ್ಥಿತಿ ಇನ್ನೂ ಸೈಕ್ಲಿಂಗ್‌ನಲ್ಲಿ ಇದೆ. ಹೀಗಾಗಿ ಇಂಥ ಸಂದರ್ಭವನ್ನು ಎದುರಿಸುವ ಕಲೆಯನ್ನು ಹೇಳಿಕೊಡುವುದು ಕೂಡ ಕೋಚ್‌ಗಳ ಪ್ರಮುಖ ಜವಾಬ್ದಾರಿ.

`ಪ್ರೇಕ್ಷಕರಿಗೆ ರೋಮಾಂಚನಗೊಳಿಸುವ ರೋಡ್ ಸೈಕ್ಲಿಂಗ್‌ನಲ್ಲಿ ಅಪಾಯದ ಸಾಧ್ಯತೆ ಹೆಚ್ಚು. ಸ್ಕಿಡ್ ಆಗಿ  ಬೀಳುವುದು, ಸೈಕ್ಲಿಸ್ಟ್ ನಿಶ್ಶಕ್ತಿಯಿಂದ ಸಮತೋಲನ ಕಳೆದು ಬೀಳುವುದು, ಬೇರೆ ಸೈಕಲ್‌ನ ಗಾಲಿ ತಾಗಿ ನೆಲಕ್ಕುರುಳುವುದು ಇತ್ಯಾದಿ ಸಹಜ. ಗುಂಪು ಸ್ಪರ್ಧೆಯಲ್ಲಿ ಅನುಭವ ಇಲ್ಲದಿದ್ದವರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.

ದೇಹದ ಕಸುವನ್ನೆಲ್ಲ ಒಟ್ಟುಗೂಡಿಸಿ `ಶಕ್ತಿ ಸ್ಫೋಟ' ಮಾಡುವ ಸ್ಪ್ರಿಂಟರ್ ಅಂತಿಮ ಕ್ಷಣಗಳಲ್ಲಿ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಆದರೂ ಛಲ ಬಿಡದೆ ಮುನ್ನುಗ್ಗುವುದು ಸೈಕ್ಲಿಸ್ಟ್‌ಗಳ ವೈಶಿಷ್ಟ್ಯ' ಎಂಬುದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಂ.ಕುರಣಿ ಅವರ ಅಭಿಪ್ರಾಯ.

ರಾಜ್ಯದಲ್ಲಿ ನೂರಾರು ಸೈಕ್ಲಿಸ್ಟ್‌ಗಳಿಗೆ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ದಾರಿ ತೋರಿಸಿದ, ಸ್ವತಃ ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಕೂಡ ಆಗಿರುವ ವಿಜಾಪುರ ಸೈಕ್ಲಿಂಗ್ ಕ್ರೀಡಾನಿಲಯದ ಕೋಚ್ ಸಿ.ಎಂ.ಕುರಣಿ ಅವರ ಪ್ರಕಾರ ಸೈಕ್ಲಿಂಗ್‌ನ ರೋಚಕತೆ ಇರುವುದೇ ಸವಾಲನ್ನು ಎದುರಿಸುವುದರಲ್ಲಿ.

`ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೂಡುವುದನ್ನು ಹೇಳಿಕೊಡುವುದು ಕೂಡ ಕೋಚಿಂಗ್‌ನ ಬಹುಮುಖ್ಯ ಅಂಗ. ಅಭ್ಯಾಸದ ವೇಳೆ ಭುಜದ ಸಮೀಪದ ಎಲುಬು (ಕಾಲರ್ ಬೋನ್) ಮುರಿಯುವುದು ಸರ್ವೇ ಸಾಮಾನ್ಯ. ಸಮಸ್ಯೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಇಂಥ ಸಂದರ್ಭದಲ್ಲಿ ಅವರಿಗೆ ಹೇಳಿಕೊಡುತ್ತೇನೆ. ಪಟ್ಟುಬಿಡದೆ ಹೋರಾಡಲು ಇಂಥ ಅನುಭವಗಳು ಅವರಿಗೆ ನೆರವಾಗುತ್ತವೆ' ಎಂದು ಕುರಣಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.