ADVERTISEMENT

ಇದು ನಂಬಿಕೆ ಪ್ರಶ್ನೆ...

ಡಿ.ಗರುಡ
Published 20 ಮೇ 2012, 19:30 IST
Last Updated 20 ಮೇ 2012, 19:30 IST
ಇದು ನಂಬಿಕೆ ಪ್ರಶ್ನೆ...
ಇದು ನಂಬಿಕೆ ಪ್ರಶ್ನೆ...   

ನಿಜಾನಾ... ನಂಬಬಹುದಾ...?
ಮುಗ್ಧ ಕ್ರಿಕೆಟ್ ಅಭಿಮಾನಿ ಕಣ್ಣರಳಿಸಿ ಕೇಳಿದ್ದ. ದಿಟ್ಟತನದಿಂದ ಅವನಿಗೆ ಉತ್ತರ ನೀಡಲು ಸಾಧ್ಯವೆ? ಖಂಡಿತ ಆಗದ ಮಾತದು.

ಸದಾ ಕಾಡುವ ಅದೇ ಪ್ರಶ್ನೆ ಭೂತಾಕಾರವಾಗಿ ಎದ್ದು ನಿಂತು ಈಗ ಸದ್ದು ಮಾಡಿ ಕುಣಿಯುತ್ತಿದೆ. ಒಂದಿಷ್ಟು ಸತ್ಯಗಳು ಕಣ್ಣೆದುರು ಇವೆ. ಆದರೆ ಒಪ್ಪಿಕೊಳ್ಳಬಹುದೆ? ನಿಜವೆಂದಾದರೆ ಕ್ರಿಕೆಟ್ ಪ್ರೀತಿಗೆ ಅನುಮಾನದ ಕೊಡಲಿ ಪೆಟ್ಟು.

ಅದೇ ಸಹನೀಯ ಎನಿಸದ ಸಂಕಟ. ಅದೆಷ್ಟೊಂದು ಕಾಲ ಆಸಕ್ತಿಯಿಂದ ಕುಳಿತು ಆಟವನ್ನು ನೋಡಿದ್ದಾಗಿದೆ. ರೋಚಕ ಆಟವೆಂದು ಮೆಚ್ಚಿಕೊಂಡು ಗಂಟೆಗಟ್ಟಲೆ ಹರಟುತ್ತಾ ಪಂದ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾಗಿದೆ. ಸಂಭ್ರಮದಿಂದ ನೋಡಿದ್ದು, ಗೆಳೆಯರ ಜೊತೆಗೆ ಚರ್ಚೆ ಮಾಡಿದ್ದು, ಮತ್ತೆ ಮತ್ತೆ ನೆನೆದು ಸಂತಸ ಪಟ್ಟಿದ್ದು... ಅದೆಲ್ಲವೂ ಮಿಥ್ಯವನ್ನು ಕಂಡೇ
ಸತ್ಯವೆಂದು ನಂಬಿದ ತೃಪ್ತಿಯೇ?

ಹೀಗೆ ಯೋಚಿಸಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ವಿಲವಿಲ ಒದ್ದಾಡುತ್ತಿದೆ. ಮೂರ್ಖರಾದೆವಾ...ಇನ್ನೂ ಆಗುತ್ತಿದ್ದೇವಾ... ಎನ್ನುವ ಯೋಚನೆಗಳೆಲ್ಲ ಮಿದುಳು ಹೊಕ್ಕು ಬಾವಲಿಗಳಾಗಿ ತೂಗುತ್ತಿವೆ. ಹಿಂದೆ ಅದೆಷ್ಟೋ ಬಾರಿ ಹೀಗೆ ಆಗಿದ್ದಿದೆ. ಆದರೆ ಹೆಚ್ಚು ಘಾಸಿ ಮಾಡಿದ್ದು ಈಗ. ಅಚ್ಚುಮೆಚ್ಚಿನ ಆಟವೆಂದು ಅಪ್ಪಿಕೊಂಡಿದ್ದ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ `ಸ್ಪಾಟ್ ಫಿಕ್ಸಿಂಗ್~ ಕಿಡಿ ಸಿಡಿದು ಕಾಡ್ಗಿಚ್ಚಾಗಿ ಮನಸ್ಸು ಸುಡುತ್ತಿದೆ.

ಅವರ ಆಟವು ಅಂದ, ಇವರ ಆರ್ಭಟ ಚೆಂದ, ಥ್ರಿಲ್ ಆಯಿತು ಎಂದು ಮುದದಿಂದ ನಲಿದಿದ್ದೆಲ್ಲವೂ ಅಂಗೈಯಲ್ಲಿ ಹಿಡಿದ ಮಂಜಿನ ಹನಿಯ ಹಾಗೆ ಆಯಿತು. ಭಾರತದ ದೇಶಿ ಕ್ರಿಕೆಟ್ ಮಹಾ ಅಂಗವಾಗಿ ಬೆಳೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಡ್ಡಿನಾಸೆಗಾಗಿ ಆಟದ ಹಿತಕ್ಕೆ ಸೆಡ್ಡು ಹೊಡೆದು ನಿಂತ ವಿಕೃತ ಪರಾಕ್ರಮಿಗಳೂ ಇದ್ದಾರೆ ಎಂತು ತಿಳಿದಾಗಲೇ ಅಭಿಮಾನ ತುಂಬಿದ್ದ ಎದೆಯಿಂದ ಆಕ್ರಂದನ.

ಒಳ್ಳೆಯವರ ನಡುವೆ ಕೆಟ್ಟವರೂ ಇರುತ್ತಾರೆ ಎಂದು ಸಮಾಧಾನ ಹೇಳಿಕೊಂಡರೂ ನೋಡಿದ ಪ್ರತಿಯೊಂದು ಎಸೆತವನ್ನು ಪ್ರಶ್ನಿಸುವಂಥ ಸಂಶಯದ ಹುಳು ಗುಯ್‌ಗುಡುವ ಸದ್ದು ನಿಲ್ಲಿಸಿಲ್ಲ.

ಒಂದೇ ಓವರ್‌ನಲ್ಲಿ ಪಂದ್ಯದ ಸ್ವರೂಪ ಬದಲಾಗುವಂಥ ಚುಟುಕು ಕ್ರಿಕೆಟ್‌ನಲ್ಲಿ `ಸ್ಪಾಟ್ ಫಿಕ್ಸಿಂಗ್~ ಎಂದರೆ ಅದೊಂದು ಆಘಾತವೇ ಸರಿ. ಕೇವಲ ಆರು ಎಸೆತಗಳಲ್ಲಿ ವ್ಯತ್ಯಾಸ ಮಾಡಲು ಸಾಧ್ಯವಿರುವ ಕ್ರಿಕೆಟ್ ಪ್ರಕಾರ ಇದು. ಆದ್ದರಿಂದಲೇ ರೋಮಾಂಚನ ಹೆಚ್ಚು.

ಆದರೆ ಇಂಥ ರೋಚಕ ಆಟವು ಮೋಸದಾಟದ ಭೂತದ ಕೈಗೆ ಕಟ್ಟಿದ ಸೂತ್ರದ ಗೊಂಬೆಯಾದರೆ, ಅದೇ ಈಗ ಕಾಡುತ್ತಿರುವ ಸವಾಲು. ಖಾಸಗಿ ಸುದ್ದಿ ವಾಹಿನಿಯೊಂದು ಮುಸುಕು ತೊಟ್ಟುಕೊಂಡು ಹೋಗಿ ದೇಶಿ ಆಟಗಾರರ ದುರಾಸೆಯ ಸತ್ಯ ತಿಳಿಯಲು ಯತ್ನಿಸಿತು. ನಂತರ ಕ್ರಿಕೆಟಿಗರ ಅಮಾನತು ಹಾಗೂ ವಿಚಾರಣೆ...!

ಆ ವಿಷಯ ಏನೇ ಇರಲಿ; ಅಪಾರ ಅಭಿಮಾನ ತುಂಬಿರುವ ಮಡಿಕೆಗೆ ಕಲ್ಲು ಹೊಡೆದ ಹಾಗೆ ಆಗಿದ್ದಂತೂ ಸತ್ಯ. ಪ್ರತಿಯೊಂದು ಎಸೆತದಲ್ಲಿನ ಆಟದ ಅದ್ಭುತವನ್ನು ಮೆಚ್ಚಿಕೊಳ್ಳುವ ಮನಗಳ ಕದ ಮುಚ್ಚಿಕೊಳ್ಳುವ ಭಯ ಕಾಡುತ್ತಿದೆ. ಒಂದೊಂದು `ಬೌಲ್~ನಲ್ಲಿಯೂ ನಡೆಯುವ ಘಟನೆಗಳ ಸಾಲುಗಳನ್ನು ವಿಮರ್ಶೆಯ ತಕ್ಕಡಿಗೆ ಹಾಕುವಂಥ ಸ್ಥಿತಿ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನಿಖೆ, ವಿಚಾರಣೆ, ಶಿಕ್ಷೆ... ಹೀಗೆ ಏನೇ ಪ್ರಹಸನ ಮಾಡಲಿ; ಕ್ರಿಕೆಟ್ ಪ್ರೇಮ ಹಿಂದಿನಷ್ಟು ಗಟ್ಟಿಯಾಗಿ ಉಳಿಯುವುದಂತೂ ಸ್ವಲ್ಪ ಕಷ್ಟ!

ಕ್ರೀಡಾಂಗಣಕ್ಕೆ ಹೋಗಿ ಕೇಕೆ ಹಾಕಿದ್ದು, ಟೆಲಿವಿಷನ್ ಸೆಟ್ ಮುಂದೆ ಗಂಟೆಗಟ್ಟಲೆ ಗಟ್ಟಿಯಾಗಿ ಕುಳಿತು ನೋಡಿದ ಆಟದಲ್ಲಿನ ಕೆಲವು ಪಾತ್ರಗಳು ಸುಳ್ಳಿನ ಸೂತ್ರ ಕಟ್ಟಿಕೊಂಡಿವೆ ಎಂದು ಅನಿಸತೊಡಗಿದ್ದು ಐಪಿಎಲ್ ಭವಿಷ್ಯಕ್ಕೂ ಪೆಟ್ಟು ನೀಡಬಹುದು.

ಕೆಟ್ಟಮೇಲೆ ಬುದ್ದಿಬಂತು ಎನ್ನುವಂತೆ ವರ್ತಿಸುವ ಕ್ರಿಕೆಟ್ ಮಂಡಳಿ ಹಾಗೂ ಐಪಿಎಲ್ ಆಡಳಿತವು ಎಚ್ಚರಗೊಳ್ಳಬೇಕು. ಭ್ರಷ್ಟಾಚಾರವು ಅಂಗಳದೊಳಗೆ ಸುಳಿಯದಂತೆ ಬಾಗಿಲು ಭದ್ರ ಮಾಡಬೇಕು. ಆಗಲೇ ಕ್ರಿಕೆಟ್ ಆಟಕ್ಕೆ ಮಾತ್ರವಲ್ಲ ಈ ಆಟವನ್ನು ಪ್ರೀತಿಸುವ ಕೋಟಿ ಕೋಟಿ ಮನಗಳಿಗೂ ಹಿತಾನುಭವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.