ADVERTISEMENT

ಎಲ್ಲವೂ ಇದೆ, ಕ್ರೀಡಾಪಟುಗಳೇ ಇಲ್ಲ...

ಸಚ್ಚಿದಾನಂದ ಕುರಗುಂದ
Published 3 ಫೆಬ್ರುವರಿ 2013, 19:59 IST
Last Updated 3 ಫೆಬ್ರುವರಿ 2013, 19:59 IST
ಓಬವ್ವ ಕ್ರೀಡಾಂಗಣದ ಲಾಂಗ್‌ಜಂಪ್ `ಪಿಟ್' ಅನ್ನು ಯಾರೂ ಬಳಸದೆ ವರ್ಷಗಳೇ ಉರುಳಿವೆ, ಅಲ್ಲಿ ಹುಲ್ಲು ಬೆಳೆದಿವೆ...! 	-ಚಿತ್ರಗಳು: ಭವಾನಿ ಮಂಜು
ಓಬವ್ವ ಕ್ರೀಡಾಂಗಣದ ಲಾಂಗ್‌ಜಂಪ್ `ಪಿಟ್' ಅನ್ನು ಯಾರೂ ಬಳಸದೆ ವರ್ಷಗಳೇ ಉರುಳಿವೆ, ಅಲ್ಲಿ ಹುಲ್ಲು ಬೆಳೆದಿವೆ...! -ಚಿತ್ರಗಳು: ಭವಾನಿ ಮಂಜು   

`ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ' ಗಾದೆ ಮಾತು ಚಿತ್ರದುರ್ಗ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ.
ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬೇಕಾದ ಅಗತ್ಯ ಮೂಲಸೌರ್ಕರ್ಯದ ಕೊರತೆ ಇಲ್ಲ; ಆದರೆ, ಈ ಸೌಲಭ್ಯಗಳನ್ನು ಬಳಸಿಕೊಂಡು ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತರಬೇಕಾದ ಪ್ರತಿಭಾನ್ವಿತ ಕ್ರೀಡಾಪಟುಗಳ ಕೊರತೆ ಕಾಣಿಸುತ್ತಿದೆ. ಇರುವ ಬೆರಳೆಣಿಕೆಯಷ್ಟು ಕ್ರೀಡಾಪಟುಗಳ ಪ್ರತಿಭೆಗೆ ಸಾಣೆ ಹಿಡಿಯಲು ನುರಿತ ತರಬೇತುದಾರರೂ ಇಲ್ಲ.

ಸಿಂಥೆಟಿಕ್ ಟ್ರ್ಯಾಕ್, ಈಜುಕೊಳ, ಸುಸಜ್ಜಿತ ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಟೆನಿಸ್ ಅಂಕಣಗಳಿವೆ. 1990ರಲ್ಲಿ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ಉದ್ಘಾಟನೆಗೊಂಡಿತ್ತು. ಅಂದಿನಿಂದ ಕ್ರೀಡಾಂಗಣಕ್ಕೆ ಕಾಯಕಲ್ಪವೇ ದೊರೆತಿರಲಿಲ್ಲ. ಜಿಲ್ಲೆಯವರೇ ಆದ ಗೂಳಿಹಟ್ಟಿ ಡಿ.ಶೇಖರ್ ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಹೊಸ ಆಯಾಮ ನೀಡಿದರು.

2009ರಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಯಿತು. ಇತ್ತೀಚೆಗೆ ಟ್ರ್ಯಾಕ್ ಸುತ್ತ ಸಿಮೆಂಟ್ ಪೇವರ್ಸ್‌ ಸಹ ಹಾಕಲಾಗಿದೆ. ಮುಖ್ಯಮಂತ್ರಿ ನಿಧಿಯಲ್ಲಿ ತಲಾ ರೂ. 2.5 ಲಕ್ಷ ವೆಚ್ಚದಲ್ಲಿ ಸಿಂಥೆಟಿಕ್ ಹೊಂದಿದ ಟೆನಿಸ್ ಮತ್ತು ಬ್ಯಾಸ್ಕೆಟ್‌ಬಾಲ್ ಅಂಕಣ ಹಾಗೂ ವಾಲಿಬಾಲ್ ಮಣ್ಣಿನ ಅಂಕಣಗಳನ್ನು ಸಿದ್ಧಪಡಿಸಲಾಯಿತು. ಕ್ರೀಡಾಂಗಣದ ಪಕ್ಕದಲ್ಲೇ ಈಜು ಪ್ರಿಯರಿಗಾಗಿ ರೂ. 1.5 ಕೋಟಿ ಮೊತ್ತದಲ್ಲಿ ಈಜುಕೊಳ ನಿರ್ಮಿಸಲಾಯಿತು.

ADVERTISEMENT

ಕಳೆದ ಮೂರು ವರ್ಷಗಳಲ್ಲಿ ಇಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಹತ್ತು ಹಲವು ಕ್ರೀಡಾಕೂಟಗಳು ನಡೆದಿವೆ. ರಾಷ್ಟ್ರಮಟ್ಟದ ಪೈಕಾ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕ್ರೀಡಾಕೂಟ, ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೀಟ್ ಕೂಟ, ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ, ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ... ಹೀಗೆ  ತಾಲ್ಲೂಕುಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ಹತ್ತು ಹಲವು ಕ್ರೀಡಾಕೂಟಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ.

ಆದರೆ, ಈ ಎಲ್ಲ ಕ್ರೀಡಾಕೂಟಗಳಲ್ಲಿ ಹೊರ ಜಿಲ್ಲೆಯವರದ್ದೇ ಪ್ರಾಬಲ್ಯ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕಳಪೆ ಪ್ರದರ್ಶನ ನೀಡಿದ ಚಿತ್ರದುರ್ಗ ಜಿಲ್ಲೆ ಕೇವಲ ಒಂದೇ ಒಂದು ಪದಕಕ್ಕೆ ತೃಪ್ತಿಪಟ್ಟಿತು. ಅದು ಸಹ ಮೂರನೇ ಸ್ಥಾನ. ಮೂಲಸೌಕರ್ಯಗಳಿದ್ದರೂ ಕ್ರೀಡಾಪಟುಗಳಿಗೆ ಮಾರ್ಗದರ್ಶಕರು ಇಲ್ಲ.

`ಇಲ್ಲಿ ವಿದ್ಯಾರ್ಥಿಗಳು ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಸ್ಥಳೀಯ ದೈಹಿಕ ಶಿಕ್ಷಕರು ಪ್ರೋತ್ಸಾಹ ನೀಡಿ ಕನಿಷ್ಠ 25 ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿದರೆ ಮಾರ್ಗದರ್ಶನ ನೀಡಬಹುದು' ಎನ್ನುತ್ತಾರೆ ಅಥ್ಲೆಟಿಕ್ ತರಬೇತುದಾರ ಮಂಜುನಾಥ್.
ಇಲ್ಲಿ ಅಥ್ಲೆಟಿಕ್ ಮತ್ತು ವಾಲಿಬಾಲ್ ತರಬೇತುದಾರರು ಮಾತ್ರ ಇದ್ದಾರೆ. ಬ್ಯಾಸ್ಕೆಟ್‌ಬಾಲ್, ಕೊಕ್ಕೊ, ಕಬಡ್ಡಿ, ಫುಟ್‌ಬಾಲ್, ಹಾಕಿ,  ಪವರ್‌ಲಿಫ್ಟಿಂಗ್ ಮತ್ತು ವೇಟ್‌ಲಿಫ್ಟಿಂಗ್, ಬ್ಯಾಡ್ಮಿಂಟನ್, ಈಜು, ಟೆನಿಸ್ ಕ್ರೀಡೆಗಳಿಗೆ ತರಬೇತುದಾರರೇ ಇಲ್ಲ.

`ನಿರಂತರವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪೋಷಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ' ಎನ್ನುತ್ತಾರೆ ದೈಹಿಕ ಶಿಕ್ಷಕ ಶಿವರಾಂ. ಸದ್ಯಕ್ಕೆ ಸಿಂಥೆಟಿಕ್ ಟ್ರ್ಯಾಕ್ ಸುತ್ತ ತಂತಿ ಬೇಲಿ ಹಾಕಿ ಕ್ರೀಡಾಪಟುಗಳಿಗೆ ಮಾತ್ರ ಬಳಕೆಯಾಗುವಂತೆ ಮಾಡಲಾಗಿದೆ. ಯಾವುದೇ ಸಮಾರಂಭಗಳಿಗೆ ಜಿಲ್ಲಾಡಳಿತ ಇಲ್ಲಿ ಅವಕಾಶ ನೀಡಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮುಂತಾದ ಸರ್ಕಾರಿ ಕಾರ್ಯಕ್ರಮಗಳನ್ನು ಸಹ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

`ಸಿಂಥೆಟಿಕ್ ಟ್ರ್ಯಾಕ್ ನಿರ್ವಹಣೆಗೆ ಸಮಸ್ಯೆ ಇಲ್ಲ. ಜಿಲ್ಲಾಮಟ್ಟದಲ್ಲಿ ಇಂತಹ ಸೌಲಭ್ಯಗಳು ಎಲ್ಲಿಯೂ ಇಲ್ಲ. ಆದರೆ, ಸಮರ್ಪಕ ಸದ್ಭಳಕೆಯಾಗಬೇಕಾಗಿದೆ' ಎಂದು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಮುಹಿಬುಲ್ಲಾ ಹೇಳುತ್ತಾರೆ.
ಸಚ್ಚಿದಾನಂದ ಕುರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.