ADVERTISEMENT

ಒಲಿಂಪಿಕ್ಸ್: ಕ್ರೀಡೆಗಳ ರದ್ದು ಹಾಗೂ ಸೇರ್ಪಡೆ

ಜಗನ್ನಾಥ ಪ್ರಕಾಶ್
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಹಗ್ಗ ಜಗ್ಗಾಟ ಅಥವಾ ಟಗ್ ಆಫ್ ವಾರ್ ಇಂದಿಗೂ ನಮ್ಮಲ್ಲಿ ಬಹಳ ಜನಪ್ರಿಯವಾದ ಕ್ರೀಡೆ.  ನಮ್ಮ ಮಲೆನಾಡಿನಲ್ಲಿ ಮುಂಗಾರು ಕಾಲಕ್ಕೆ ಕೆಸರು ಗದ್ದೆಯಲ್ಲಿ ಟಗ್ ಆಫ್ ವಾರ್ ನಡೆಯುವುದು ಸಾಮಾನ್ಯ.  ಟಗ್ ಆಫ್ ವಾರ್ ಪ್ರಾಚೀನ  ಒಲಿಂಪಿಕ್‌ನಲ್ಲಿ ಇತ್ತೆಂಬುದಕ್ಕೆ ದಾಖಲೆಗಳಿವೆ. ಆಧುನಿಕ ಒಲಿಂಪಿಕ್ಸ್‌ನ ಆರಂಭದಲ್ಲಿ ಈ ಸ್ಪರ್ಧೆ ನಡೆಯುತ್ತಿತ್ತು. 

ಟಗ್ ಆಫ್ ವಾರ್ ಸ್ಪರ್ಧೆಯಲ್ಲಿ ಬಹುತೇಕ ಪದಕಗಳನ್ನು ಬ್ರಿಟನ್ ಗೆದ್ದುಕೊಳ್ಳುತ್ತಿತ್ತು.  ಈ ಕ್ರೀಡೆಯು 1920ರ ಒಲಿಂಪಿಕ್ ಕೂಟದ ನಂತರ ರದ್ದಾಯಿತು.  ಮತ್ತೆ ಟಗ್ ಆಫ್ ವಾರ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಒಲಿಂಪಿಕ್ಸ್‌ನ ಆರಂಭದ ದಿನಗಳಲ್ಲಿ ಕಾಣಿಸಿಕೊಂಡ ಅನೇಕ ಕ್ರೀಡೆಗಳು ಈಗಿನ ಒಲಿಂಪಿಕ್ಸ್‌ನಲ್ಲಿ ಕಾಣಲು     ಸಿಗುವುದಿಲ್ಲ.   ಕೆಲವು ಕ್ರೀಡೆಗಳು ಕೆಲವು ಕೂಟಗಳಲ್ಲಿ ನಡೆದು ನಂತರ ರದ್ದಾಗಿ ಪುನಃ ಸೇರ್ಪಡೆಗೊಂಡಿದ್ದೂ ಉಂಟು. 

ಒಲಿಂಪಿಕ್ಸ್ ಇತಿಹಾಸದಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು  ಕ್ರೀಡೆಗಳು ಒಮ್ಮೆ ಮಾತ್ರ ಸ್ಪರ್ಧೆಗಳಾಗಿ ನಡೆದು    ಆನಂತರ  ರದ್ದಾಗಿವೆ.  ಕೆಲವು ಕೇವಲ ಪ್ರದರ್ಶನ ಕ್ರೀಡೆಗಳಾಗಿ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನಗೊಂಡಿವೆ. 

1896ರ ಮೊದಲ ಆಧುನಿಕ ಒಲಿಂಪಿಕ್ಸ್ ನಡೆದಾಗ ಇದ್ದ ಮೋಟಾರು ಬೋಟಿಂಗ್, ಟಗ್ ಆಫ್ ವಾರ್, ಲಾ ಕ್ರಾಸಿ ಮೊದಲಾದ ಹತ್ತು ಕ್ರೀಡೆಗಳು ಈಗ ಸಂಪೂರ್ಣವಾಗಿ ಒಲಿಂಪಿಕ್ಸ್‌ನಿಂದ ಕಣ್ಮರೆಯಾಗಿವೆ.  ಹಿಂದೊಮ್ಮೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆದು, ನಂತರ ಅದೃಶ್ಯವಾಗಿದ್ದ ಗಾಲ್ಫ್ ಹಾಗೂ ರಗ್ಬಿ ಕ್ರೀಡೆಗಳು ಮತ್ತೆ ಒಲಂಪಿಕ್ಸ್ ಕೂಟದ ಅಂಗಳಕ್ಕೆ ಬಂದು ನಿಂತಿವೆ.

ಬಹಳ ಇತ್ತೀಚಿನವರೆಗೆ ಅತಿಥೇಯ ರಾಷ್ಟ್ರಗಳು ಒಲಿಂಪಿಕ್ಸ್ ಕೂಟಗಳನ್ನು ಸಂಘಟಿಸುವಾಗ ಸ್ಥಳೀಯವಾದ ಕೆಲವು ಕ್ರೀಡೆಗಳನ್ನು ಏರ್ಪಡಿಸಲು ಮುಂದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಒಪ್ಪಿಗೆ ಪಡೆದುಕೊಳ್ಳುತ್ತಿದ್ದವು.  ಆದರೆ ಆ ಕ್ರೀಡೆಗಳು ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಪ್ರಚಲಿತವಾಗಿದ್ದರಿಂದ ಹೆಚ್ಚು ಜನಪ್ರಿಯವಾಗದೆ ಕೊನೆಕೊನೆಗೆ ಒಲಂಪಿಕ್ಸ್‌ನಿಂದ ಕಣ್ಮರೆಯಾಗುತ್ತಿದ್ದವು. 

ಆಧುನಿಕ ಒಲಿಂಪಿಕ್ಸ್‌ನ ಆರಂಭ ಕೂಟದಲ್ಲಿ ಸ್ಪರ್ಧೆಗಳಾಗಿದ್ದ ಕೆಲವು ಕ್ರೀಡೆಗಳು ಇಂದಿಲ್ಲವಾದರೂ ಅವುಗಳಲ್ಲಿ ಕೆಲವು ಮಾರ್ಪಾಡುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಈಗಲೂ ಉಳಿಸಿಕೊಳ್ಳಲಾಗಿದೆ.

1900ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಒಂದು ಸ್ಪರ್ಧೆ ಜೀವಂತ ಪಕ್ಷಿಗಳನ್ನು ಕೊಲ್ಲುವುದಾಗಿತ್ತು.  ಪಿಸ್ತೂಲ್‌ನಿಂದ ಪಾರಿವಾಳಗಳನ್ನು ಗುಂಡಿಟ್ಟು ಕೊಲ್ಲುವ ಸ್ಪರ್ಧೆ ಆಧುನಿಕ ಒಲಿಂಪಿಕ್‌ನಲ್ಲಿ ವಿವಾದಕ್ಕೆಕಾರಣವಾಯಿತು.  ಈ ಸ್ಪರ್ಧೆಯಲ್ಲಿ ಜೀವಂತ ಪಾರಿವಾಳಗಳನ್ನು ಕೊಂದ ಭೂಪನೊಬ್ಬ ಚಿನ್ನದ ಪದಕವನ್ನೂ ಗಳಿಸಿದ್ದ.  ಇನ್ನೊಂದು ದುರಂತವೆಂದರೆ ಆ ಕೂಟದಲ್ಲಿ ಮುನ್ನೂರು ಪಾರಿವಾಳಗಳು ಪ್ರಾಣ ಕಳೆದುಕೊಂಡಿದ್ದವು.

  1904ರ ಒಲಿಂಪಿಕ್ಸ್‌ನಲ್ಲಿ  ಈ ಸ್ಪರ್ಧೆಯನ್ನು ರದ್ದು ಮಾಡಲಾಯಿತು.  ಆದರೆ ಪಿಸ್ತೂಲಿನಿಂದ ಮಣ್ಣಿನ ಪಾರಿವಾಳಗಳಿಗೆ ಗುಂಡಿಕ್ಕುವ ಸ್ಪರ್ಧೆ ಜಾರಿಗೆ ಬಂದಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.