ADVERTISEMENT

ಕರಾಟೆ ಪಟುವೇ ಆಗಬೇಕು

ಪ್ರಮೋದ ಜಿ.ಕೆ
Published 27 ನವೆಂಬರ್ 2011, 19:30 IST
Last Updated 27 ನವೆಂಬರ್ 2011, 19:30 IST
ಕರಾಟೆ ಪಟುವೇ ಆಗಬೇಕು
ಕರಾಟೆ ಪಟುವೇ ಆಗಬೇಕು   

ಜೀವನದಲ್ಲಿ ಏನಾದರೂ ಸಾಧಿಸಬೇಕು. ಅದು ಕರಾಟೆಯಲ್ಲಿ...! ಇಂಥದ್ದೊಂದು ಹೆಬ್ಬಯಕೆ, ಕನಸು, ಛಲ ಹುಟ್ಟಿಕೊಂಡಿದ್ದು ಕೇವಲ ಆರು ವರ್ಷದ ಮೋಹಿತ್ ರೆಡ್ಡಿಗೆ. ಸಾಧನೆ ಮಾಡಬೇಕು ಎನ್ನುವ ಕನಸು, ಆಸೆ ಎಲ್ಲರಲ್ಲೂ ಮೂಡುವುದು ಸಹಜ. ಆದರೆ, ಕಂಡ ಕನಸನ್ನು ನನಸು ಮಾಡಿಕೊಂಡವರಲ್ಲಿ, ತೊಟ್ಟ ಛಲಕ್ಕೆ ಪೆಟ್ಟು ಬೀಳದಂತೆ ಎಚ್ಚರ ವಹಿಸಿ ಗುರಿ ಮುಟ್ಟುವವರು ತೀರಾ ಕಡಿಮೆ.

ಪುಟ್ಟ ಬಾಲಕನಾದರೂ ಸಹ, ಆತನ  ಸಾಧನೆ ದೊಡ್ಡದು. ಆಗಿನ್ನೂ ಶಾಲೆಗೆ ಹೋಗಲು ಮಕ್ಕಳು ಹಿಂದೇಟು ಹಾಕಿ ಪಾಲಕರನ್ನು ಗೋಳಾಡಿಸಿ ಅಪ್ಪನಿಂದ ಬಯ್ಯಿಸಿಕೊಳ್ಳುವ ವಯಸ್ಸದು. ಈ ವಯಸ್ಸಿಗಾಗಲೇ ಮೋಹಿತ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಮಗನ ಸಾಧನೆಗೆ ತಂದೆ ಗುರುನಾಥ ರೆಡ್ಡಿ ಅವರ ಬೆಂಬಲ ಇದೆ.

ದೈಹಿಕವಾಗಿ ಸವಾಲಾಗುವಂತಹ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಸುಲಭವಲ್ಲ. ಆದರೂ. ಛಲ ಬಿಡದ ಮೋಹಕ ಕಣ್ಣಿನ ಮೋಹಿತ್ ಆಂಧ್ರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡ ನಾಡಿನ ಕಂಪನ್ನು ಆಂಧ್ರದಲ್ಲಿ ಪಸರಿಸಿದ್ದಾನೆ.

ಬಾಲಕರ ಕುಮಿಟಿ (ಪ್ರಥಮ ಸ್ಥಾನ), ಕಟಾ (ಮೂರನೇ ಸ್ಥಾನ), ಹಾಗೂ ಟೀಮ್ ಕಟಾ (ದ್ವಿತೀಯ ಸ್ಥಾನ) ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾನೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲೂ ಮಿಂಚಿನ ಪ್ರದರ್ಶನ ನೀಡಿದ್ದಾರೆ.

ವೈಯಕ್ತಿಕ ಕಟಾ ಹಾಗೂ ಟೀಮ್ ಕಟಾ ವಿಭಾಗದಲ್ಲಿ `ಚಿನ್ನ~ದ ಹುಡುಗ ಎನಿಸಿಕೊಂಡಿದ್ದಾನೆ. ಫೈಟ್‌ನಲ್ಲಿ ಬೆಳ್ಳಿ ಪದಕವನ್ನು ತಮ್ಮ ಪದಕಗಳ ಖಾತೆಗೆ ಸೇರಿಸಿಕೊಂಡಿದ್ದಾನೆ. ಕರಾಟೆ ಆಡಲು ಆರಂಭಿಸಿ ಒಂದು ವರ್ಷ ಕಳೆಯುವ ಮುನ್ನವೇ ಚಿನ್ನ, ಬೆಳ್ಳಿ ಪದಕ ಜಯಿಸಿರುವ ಮೋಹಿತ್ ಭವಿಷ್ಯದ ದಿನಗಳಲ್ಲಿ ಇನ್ನಷ್ಟು ಪದಕಗಳ ಒಡೆಯನಾಗಬೇಕು ಎನ್ನುವ ಕನಸು ಹೊಂದಿದ್ದಾನೆ. ಅದಕ್ಕೆ ತಕ್ಕ ಪ್ರಯತ್ನ ನಡೆಸುತ್ತಿದ್ದಾನೆ.

ಮುಂಬರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಈಗಲೇ ಅಭ್ಯಾಸ ಆರಂಭಿಸಿದ್ದಾನೆ. ಅದಕ್ಕೆ ಕೋಚ್‌ಗಳ ಮಾರ್ಗದರ್ಶನದ ಬೆಂಬಲವೂ ಇದೆ. ಕೇವಲ ಎಂಟು ತಿಂಗಳುಗಳ ಹಿಂದೆಯಷ್ಟೇ ಕರಾಟೆಯತ್ತ ಒಲವು ಬೆಳಸಿಕೊಂಡ ಮೋಹಿತ್ ಕ್ರೀಡೆಯ ಜೊತೆಗೆ ಇತರ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾನೆ.

ನೃತ್ಯ, ಸೈಕ್ಲಿಂಗ್, ಡ್ರೈವಿಂಗ್‌ನಲ್ಲಿಯೂ ಆಸಕ್ತಿ ಹೊಂದಿದ್ದಾನೆ. ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿರುವ ಮೋಹಿತ್‌ಗೆ ಕರಾಟೆಯಲ್ಲಿಯೇ ವಿಭಿನ್ನವಾದದ್ದನ್ನು ಸಾಧಿಸಬೇಕು ಎನ್ನುವ ಆಸೆ.

`ಮಕ್ಕಳು ಕ್ರೀಡೆಯ ಬೆನ್ನತ್ತಿ ಹೋದರೆ, ಓದಿನಲ್ಲಿ ಹಿಂದೆ ಬೀಳುತ್ತಾರೆ ಎನ್ನುವ ಕಾರಣಕ್ಕೆ ಸಾಕಷ್ಟು ಮಕ್ಕಳು ಈ ಕ್ಷೇತ್ರದತ್ತ ತಿರುಗಿ ನೋಡುವುದಿಲ್ಲ. ಆದರೆ, ಮೋಹಿತ್ ಆಟದ ಜೊತೆ ಪಾಠದಲ್ಲೂ ಮುಂದಿದ್ದಾನೆ. ನಾವು ಪಾಲಕರಾಗಿ ಮಕ್ಕಳು ಬೆಳೆಯುವ ಆಶಯಕ್ಕೆ ಬಲ ಹಾಗೂ ಬೆಂಬಲ ನೀಡಬೇಕು~ ಆ ಕೆಲಸವನ್ನು ನಾವು ಮಾಡಿದೆವು ಎಂದು ಮೋಹಿತ್ ತಂದೆ ಗುರುನಾಥ ರೆಡ್ಡಿ ಸಂತಸದಿಂದ ಹೇಳುತ್ತಾರೆ.

ಮಗನ ಸಾಧನೆ ಬಗ್ಗೆ ಕೇಳಿದಾಗ, ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿರುವುದರಿಂದ ಸಹಜವಾಗಿಯೇ ಸಂತಸವಾಗಿದೆ. ಇಲ್ಲಿ ನಮ್ಮ ಪ್ರಯತ್ನ ಹಾಗೂ ಸಲಹೆಗಿಂತ, ಸಾಧಿಸಬೇಕು ಎನ್ನುವ ಒಂದೇ ಒಂದು ಕಾರಣದಿಂದ ಮೋಹಿತ್ ಕರಾಟೆಯತ್ತ ಹೆಚ್ಚು ಒಲವು ತೋರಿದ. ಅದಕ್ಕೆ ತಕ್ಕ ಅಭ್ಯಾಸ ಮಾಡಿದ. ಈ ಅವನ ಗುಣವೇ ನಮಗೆ ಮೆಚ್ಚುಗೆಯಾಗಿದೆ ಎಂದು ತಿಳಿಸಿದರು.

ಇನ್ನೂ ಚಿಕ್ಕ ವಯಸ್ಸು. ಬೆಟ್ಟದಷ್ಟು ಸಾಧಿಸಬೇಕು ಎನ್ನುವ ಹುಮ್ಮಸ್ಸು. ಅದಕ್ಕಾಗಿಯೇ ನಿತ್ಯ ನಾಲ್ಕು ಗಂಟೆಗಳ ಕಾಲ ಅಭ್ಯಾಸ. ಬೆಳೆಯುವ ಪೈರನ್ನು ಮೊಳಕೆಯಲ್ಲಿ ನೋಡು ಎನ್ನುವಂತೆ ಇನ್ನೂ ಪುಟ್ಟ ಬಾಲಕನಾಗಿರುವಾಗಲೇ ಸಾಧನೆಯ ಶಿಖರವನ್ನು ಬೆನ್ನತ್ತಿ ಹೋಗುತ್ತಿರುವ ಮೋಹಿತ್ ಪ್ರಯತ್ನ ಶ್ಲಾಘನೀಯ. ಈ ಹಾದಿಯಲ್ಲಿ ಯಶಸ್ಸು ಕಾಣಲಿ. ಸಾಧನೆಯ ಹಾದಿಯಲ್ಲಿ ಸಾಗಿರುವ ಮೋಹಿತ್‌ನ ಪುಟ್ಟ ಪುಟ್ಟ ಹೆಜ್ಜೆಗಳು ದೊಡ್ಡದಾಗಲಿ...! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.