ADVERTISEMENT

ಕೌಜಲಗಿಯಲ್ಲಿ ಕುಸ್ತಿಗೆ ಹೊಸ ರಂಗು

ವಿನಾಯಕ ಭಟ್ಟ‌
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST
ಹರಿಯಾಣ ಡಬಲ್ ಕೇಸರಿ ಪ್ರಶಸ್ತಿ ವಿಜೇತ ಮನದೀಪ ಸಿಂಗ್ ಹಾಗೂ ಮಹಾರಾಷ್ಟ್ರ ಚಾಂಪಿಯನ್ ಸಾಂಗಲಿಯ ವಿನೋದ ದೇಸಾಯಿ ನಡುವಿನ ಕುಸ್ತಿ ದೃಶ್ಯ.
ಹರಿಯಾಣ ಡಬಲ್ ಕೇಸರಿ ಪ್ರಶಸ್ತಿ ವಿಜೇತ ಮನದೀಪ ಸಿಂಗ್ ಹಾಗೂ ಮಹಾರಾಷ್ಟ್ರ ಚಾಂಪಿಯನ್ ಸಾಂಗಲಿಯ ವಿನೋದ ದೇಸಾಯಿ ನಡುವಿನ ಕುಸ್ತಿ ದೃಶ್ಯ.   

ಕುಸ್ತಿಗೆ ಹೆಸರಾದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದಲ್ಲಿ ಈಚೆಗೆ ಪೈಲ್ವಾನರ ಬಗ್ಗೆಯೇ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ.

ಕೌಜಲಗಿಯಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಹಣಾಹಣಿ ನಡೆಸಿದ್ದ ಹೆಸರುವಾಸಿ ಪೈಲ್ವಾನರು ಹಾಕಿದ ವಿವಿಧ ಪಟ್ಟುಗಳು ಮತ್ತು ಸೆಣಸಾಡಿದ ರೋಚಕ ಕ್ಷಣಗಳ ಬಗ್ಗೆಯೇ ಮಾತುಗಳು.

ಹನಮಂತ ದೇವರ ಓಕಳಿ ಅಂಗವಾಗಿ ಕೌಜಲಗಿ ಕುಸ್ತಿ ಸಂಘಟನಾ ಸಮಿತಿ ಕಳೆದ ವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಹಬ್ಬವು ಗೋಕಾಕ ಪ್ರದೇಶದ ಕುಸ್ತಿ ಪ್ರಿಯರಲ್ಲಿ ಸಂಚಲನ ಮೂಡಿಸಿತ್ತು. ಅಖಾಡಕ್ಕೆ ಇಳಿದ ಜಟ್ಟಿಗಳು ತೊಡೆ ತಟ್ಟಿ, ಕಾಳಗ ಆರಂಭಿಸಿದಾಗ ಸಾವಿರಾರು ವೀಕ್ಷಕರ ರೋಮಾಂಚನದ ಪ್ರತಿಕ್ರಿಯೆ ಪದಗಳಿಗೆ ನಿಲುಕುವಂತಹದ್ದಲ್ಲ.

ಭಾರತ ಮಲ್ಲ ಸಾಮ್ರಾಟ-2012, ಹರಿಯಾಣ ಡಬಲ್ ಕೇಸರಿ ಪ್ರಶಸ್ತಿ ವಿಜೇತ ಮನದೀಪ ಸಿಂಗ್ ಹಾಗೂ ಮಹಾರಾಷ್ಟ್ರ ಚಾಂಪಿಯನ್ ಆಗಿರುವ ಸಾಂಗಲಿಯ ವಿನೋದ ದೇಸಾಯಿ ನಡುವೆ ನಡೆದ ಪಂದ್ಯವು ವಿಶೇಷ ಆಕರ್ಷಣೆಯಾಗಿತ್ತು.

ಆರಂಭದಿಂದಲೂ ವೀರೋಚಿತವಾಗಿ ಸೆಣಸಿದ ಮಲ್ಲರು, ರೋಮಾಂಚನ ಮೂಡಿಸಿದರು. ಅಂತಿಮವಾಗಿ ಮನದೀಪ ಸಿಂಗ್ ಅವರು ದೇಸಾಯಿಯನ್ನು `ಗೀಚಾ ದಾವ್‌ಪೇಚ್'ನಲ್ಲಿ ಚಿತ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

`ಬಲಭೀಮ ಕೌಜಲಗಿ ಕೇಸರಿ ಪಟ್ಟ', 2 ಕೆ.ಜಿ. ಬೆಳ್ಳಿ ಗದೆ ಹಾಗೂ 50 ಸಾವಿರ ರೂಪಾಯಿ ಬಹುಮಾನವನ್ನು ಪಡೆದು ಬೀಗಿದರು.

ಇನ್ನೊಂದು ಪ್ರಮುಖ ಪಂದ್ಯವು ಡಬಲ್ ಕರ್ನಾಟಕ ಕಂಠೀರವ ಪ್ರಶಸ್ತಿ ವಿಜೇತ ಸಂಜಯ ಮಾನೆ ಮುಧೋಳ ಹಾಗೂ ರಾಷ್ಟ್ರೀಯ ಸ್ವರ್ಣ ಪದಕ ವಿಜೇತ ಹರಿಯಾಣದ ಸಂದೀಪ ಕುಮಾರ ನಡುವೆ ನಡೆಯಿತು. ಅಂತಿಮವಾಗಿ ಸಂಜಯ ಮಾನೆ ಅವರು `ಏಕ್ ಚಕ್' ದಾವ್‌ಪೇಚ್ (ಕೌಶಲ)ನಲ್ಲಿ ಸಂದೀಪ ಕುಮಾರ ಅವರನ್ನು ನೆಲಕ್ಕೆ ಉರುಳಿಸಿದರು.

ಕರ್ನಾಟಕ ಚಾಂಪಿಯನ್ ಆಗಿರುವ ಬೆಳಗಾವಿಯ ಅಪ್ಪೋಶಿ ಅಡಳಟ್ಟಿ ಹಾಗೂ ಭಾವನಸವದತ್ತಿಯ ಸಾಂಬಾ ಸುಂಡಕೆ ಅವರು ತೀವ್ರ ಕಾದಾಟ ನಡೆಸಿದರೂ, ಯಾರೂ ನೆಲಕ್ಕುರುಳಲಿಲ್ಲ. ಹೀಗಾಗಿ ಸಮಬಲ ಪ್ರದರ್ಶನದಲ್ಲಿ ಪಂದ್ಯ ಕೊನೆಗೊಂಡಿತು.

ಬೆಳಗಾವಿಯ ಸಂಜು ಹಿಡಕಲ್‌ಡ್ಯಾಂ ಮತ್ತು ದಾವಣಗೆರೆಯ ಸದ್ದಾಮ್ ರೋಣ; ಬೆಳಗಾವಿಯ ಸಿದ್ಧಪ್ಪ ಬೆನಚಿನಮರಡಿ ಮತ್ತು ಪ್ರವೀಣ ದಾವಣಗೆರೆ ನಡುವಿನ ಹಣಾಹಣಿ ಕುಸ್ತಿ ಪ್ರಿಯರಿಗೆ ಮುದ ನೀಡಿದವು. 47 ಜೋಡಿಗಳ ನಡುವೆ ನಡೆದ ಕುಸ್ತಿ ಪಂದ್ಯಗಳು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವೀಕ್ಷಕರಿಗೆ ರಸದೌತಣ ನೀಡಿತು.

ಪೈಲ್ವಾನರ ಊರು: ಕೌಜಲಗಿಯ ಕುಸ್ತಿ ಪಂದ್ಯಕ್ಕೆ ಹಲವು ದಶಕಗಳ ಇತಿಹಾಸವಿದೆ. ಮೊದಲಿನಿಂದಲೂ ಇಲ್ಲಿ ಕುಸ್ತಿ ಪಂದ್ಯಗಳು ನಡೆಯುತ್ತಿರುವುದರಿಂದ ಕೌಜಲಗಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಾಜಿ ಪೈಲ್ವಾನರು ಇದ್ದಾರೆ. ಇವತ್ತಿಗೂ ಉತ್ಸಾಹಿ ಯುವಕರು ನಿತ್ಯವೂ ಅಭ್ಯಾಸ ನಡೆಸುತ್ತಲೇ ಇರುವುದು ಸಾಮಾನ್ಯ.

`ಹನುಮಂತ ದೇವರ ಓಕಳಿ ದಿನ ಅನಾದಿ ಕಾಲದಿಂದಲೂ ದೇಸಾಯಿ ಮನೆತನದವರು ಸಣ್ಣ ಪ್ರಮಾಣದಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸುತ್ತಿದ್ದರು. ಕಾಲ ಕ್ರಮೇಣ ಊರಿನ ಗಣ್ಯರು ಸೇರಿಕೊಂಡು ಪಂದ್ಯ ನಡೆಸಲು ಆರಂಭಿಸಿದರು.

ಕಿತ್ತೂರು ಉತ್ಸವ ಸೇರಿದಂತೆ ವಿವಿಧೆಡೆ ನಡೆದ ರಾಷ್ಟ್ರ ಮಟ್ಟದ ಕುಸ್ತಿಗೆ ಹೋಗುತ್ತಿದ್ದ ನಮಗೆ, ನಮ್ಮೂರಿ ನಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕುಸ್ತಿ ನಡೆಸಬೇಕು ಎನಿಸಿತು. ಹೀಗಾಗಿ ಊರಿನ ಮಾಜಿ ಪೈಲ್ವಾನರೆಲ್ಲ ಸೇರಿಕೊಂಡು ಕುಸ್ತಿ ಸಂಘಟನೆ ರಚಿಸಿದ್ದೇವೆ. ಗ್ರಾಮಸ್ಥರ ಸಹಕಾರದಿಂದ ಕಳೆದ ಎರಡು ವರ್ಷಗಳಿಂದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಗಳನ್ನು ಆಯೋಜಿಸುತ್ತಿದ್ದೇವೆ' ಎಂದು ಮಾಜಿ ಪೈಲ್ವಾನ್ ಬಸಪ್ಪ ನಿಂಗಪ್ಪ ಸಣ್ಣಕ್ಕಿ `ಪ್ರಜಾವಾಣಿ'ಗೆ ತಿಳಿಸಿದರು.

`ನಮ್ಮ ಕಾಲದಲ್ಲಿ ನಡೆಯುವ ಕುಸ್ತಿ ಪಂದ್ಯಕ್ಕೆ ಜಿಲ್ಲೆಯ ಗೋಕಾಕ, ಮುಧೋಳ, ಜಮಖಂಡಿಯ ಪೈಲ್ವಾನರು ಮಾತ್ರ ಬರುತ್ತಿದ್ದರು. ರಾಷ್ಟ್ರಮಟ್ಟದ ಪಂದ್ಯ ಆಯೋಜಿಸುತ್ತಿರುವುದರಿಂದ ಹರಿಯಾಣ, ದೆಹಲಿ, ಪಂಜಾಬ್, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪೈಲ್ವಾನರು ಬರುತ್ತಿದ್ದಾರೆ. ಕಳೆದ ವರ್ಷ 28 ಜೋಡಿಗಳು ಬಂದಿದ್ದರೆ, ಈ ವರ್ಷ 47 ಜೋಡಿಗಳ ನಡುವೆ ಪೈಪೋಟಿ ನಡೆದಿತ್ತು. ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು' ಎಂದು ಸಣ್ಣಕ್ಕಿ ಅಭಿಪ್ರಾಯ ಪಡುತ್ತಾರೆ.

`ಎರಡು ತಿಂಗಳು ಮೊದಲೇ ಪಂದ್ಯದ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತೇವೆ. ಸಮಬಲ (ತೂಕ ಹಾಗೂ ಎತ್ತರ) ಇರುವ ಪೈಲ್ವಾನರ ಜೋಡಿಯನ್ನು ಆಯ್ಕೆ ಮಾಡುತ್ತೇವೆ. ಬಳಿಕ ಅವರ ಊರಿಗೆ ತೆರಳಿ ಪೈಲ್ವಾನರಿಗೆ ಆಹ್ವಾನ ನೀಡಿ ಬರುತ್ತೇವೆ. ಕೌಜಲಗಿಯಲ್ಲಿ ವರ್ಷದಿಂದ ವರ್ಷಕ್ಕೆ ಕುಸ್ತಿ ಪಂದ್ಯದ ರಂಗೇರುತ್ತಿದೆ' ಎನ್ನುತ್ತಾರೆ ಪಂದ್ಯದ ಮೇಲುಸ್ತುವಾರಿ ವಹಿಸಿದ್ದ ಬೆಳಗಾವಿಯ ಮಾಜಿ ಪೈಲ್ವಾನ ಜೀವನ್ ಧರೆಣ್ಣವರ.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಗ್ರಾಮೀಣ ಕ್ರೀಡೆಯಾದ ಕುಸ್ತಿ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ. ಬೆಳಗಾವಿಯ ಯಳ್ಳೂರು ಸೇರಿದಂತೆ ಜಿಲ್ಲೆಯ ಗಡಿ ಭಾಗಗಳಲ್ಲಿ ಆಗಾಗ ನಡೆಯುವ ಕುಸ್ತಿ ಪಂದ್ಯಗಳು ಯುವ ಪೈಲ್ವಾನರಿಗೆ ಪ್ರೇರಣೆ ನೀಡುತ್ತಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.