ADVERTISEMENT

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಗದಗದ `ಟ್ರ್ಯಾಕ್'

ಕೆ.ಎಸ್.ಸುನಿಲ್
Published 3 ಫೆಬ್ರುವರಿ 2013, 19:59 IST
Last Updated 3 ಫೆಬ್ರುವರಿ 2013, 19:59 IST
ಗದಗ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಸಾರ್ವಜನಿಕರ ವಾಯುವಿಹಾರ...!	 	ಪ್ರಜಾವಾಣಿ ಚಿತ್ರಗಳು :ಬನೇಶ ಕುಲಕರ್ಣಿ
ಗದಗ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಸಾರ್ವಜನಿಕರ ವಾಯುವಿಹಾರ...! ಪ್ರಜಾವಾಣಿ ಚಿತ್ರಗಳು :ಬನೇಶ ಕುಲಕರ್ಣಿ   

ಕ್ರೀಡಾಪಟುಗಳ ಹೋರಾಟದ ಫಲವಾಗಿ ಗದಗಿನ ಕೆ.ಎಚ್.ಪಾಟೀಲ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಬಂದಿತು. ಆದರೆ ಕಳಪೆ ಗುಣಮಟ್ಟ ಮತ್ತು ನಿರ್ವಹಣೆ ಕೊರತೆಯಿಂದಾಗಿ ಟ್ರ್ಯಾಕ್ ಹಾಳಾಗುತ್ತಿದೆ !

ಮಳೆ ಬಂದರೆ ಟ್ರ್ಯಾಕ್ ಮೇಲೆ ನೀರು ನಿಲ್ಲುವುದು ಮಾಮೂಲು. ಅಲ್ಲಲ್ಲಿ ಉಬ್ಬುಗಳು ಕಾಣಿಸಿಕೊಂಡಿವೆ. ನೀರು ನಿಲ್ಲುವುದನ್ನು ತಡೆಯಲು ಟ್ರ್ಯಾಕ್ ನಿರ್ಮಿಸಿದ ಕಂಪೆನಿಯ ಸಿಬ್ಬಂದಿ ಟ್ರ್ಯಾಕ್ ಮಧ್ಯೆ ಎರಡು ಅಡಿ ಆಳದ ಹದಿಮೂರು ರಂಧ್ರ ಮಾಡಿ ಕೈತೊಳೆದುಕೊಂಡಿದ್ದಾರೆ!

ಇನ್ನೂ ಟ್ರ್ಯಾಕ್ ಮೇಲೆ ಕ್ರೀಡಾಪಟುಗಳಿಗಿಂತ ವಾಯುವಿಹಾರಿಗಳು ಮತ್ತು ಬೀದಿ ನಾಯಿಗಳದ್ದೇ ಕಾರುಬಾರು. ಆಗಾಗ್ಗೆ  ಕ್ರೀಡಾಪಟುಗಳು ಮತ್ತು ವಾಯುವಿಹಾರಿಗಳ ನಡುವೆ ಜಗಳ ಇಲ್ಲಿ ಸಾಮಾನ್ಯ.

ADVERTISEMENT

ದೆಹಲಿ ಮೂಲದ ಚಡ್ಡಾ ಕಂಪೆನಿ ಎರಡು ವರ್ಷಗಳ ಹಿಂದೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದೆ. ಟ್ರ್ಯಾಕ್ ಮೇಲೆ ನೀರು ನಿಲ್ಲುವುದನ್ನು ಕಂಡಾಗ ಆ ಕಂಪೆನಿಯ ಸಿಬ್ಬಂದಿಯೇ  ಅಲ್ಲಲ್ಲಿ ರಂಧ್ರ ಕೊರೆದು ನೀರು ಹರಿದು ಹೋಗುವಂತೆ ಮಾಡಿದೆ. ಆದರೆ ಸ್ಪೈಕ್ ಧರಿಸಿ ಅಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವ ಕುರಿತು ಸಾಕಷ್ಟು ಬಾರಿ ದೂರುಗಳು ಬಂದಿವೆ.

ಕ್ರೀಡಾಂಗಣದ ಸಿಬ್ಬಂದಿ ಟ್ರ್ಯಾಕ್ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಆರೋಪ ಕ್ರೀಡಾಪಟುಗಳದ್ದು. 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್‌ಗೆ ಪ್ರತಿದಿನ ನೀರು ಹಾಕಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಹಾಗೂ ನೀರಿನ ಕೊರತೆ ನೆಪ ಹೇಳಿ ವಾರದಲ್ಲಿ ಎರಡು ಬಾರಿ ಮಾತ್ರ ಪೂರ್ಣ ಟ್ರ್ಯಾಕ್‌ಗೆ ನೀರು ಹಾಕಲಾಗುತ್ತಿದೆ. ಪ್ರತಿ ದಿನ ಕ್ರೀಡಾಪಟುಗಳ ಅಭ್ಯಾಸಕ್ಕೆ 100 ಮೀಟರ್ ಮಾತ್ರ ನೀರು ಹಾಕಲಾಗುತ್ತಿದೆ. ಅವಶ್ಯಕತೆಗೆ ತಕ್ಕ ನೀರಿನ ಪಾಯಿಂಟ್‌ಗಳು ಇಲ್ಲ.  200 ಮೀ. ಮತ್ತು 400 ಮೀಟರ್ ಓಟ ಅಭ್ಯಾಸ ಮಾಡುವ ಕ್ರೀಡಾಪಟುಗಳು ನೀರಿಲ್ಲದ ಟ್ರ್ಯಾಕ್ ಮೇಲೆ ಅಭ್ಯಾಸ ಮಾಡಬೇಕಿದೆ.

ಅಂತರರಾಷ್ಟ್ರೀಯ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ ಕುಗ್ರಾಮದ ಬಾಲಕಿ ಪ್ರೇಮಾ ಹುಚ್ಚಣ್ಣನವರ ಅಭ್ಯಾಸ ಮಾಡುವುದು ಇದೇ ಕ್ರೀಡಾಂಗಣದಲ್ಲಿ. ಬಸಿರಾ ವಕಾರದ, ಶಾಹಿದಾ ಬಳಿಗಾರ ಹಾಗೂ ಅಥ್ಲೀಟ್‌ಗಳಾದ ಬಸವರಾಜು, ಕಂಬಳೆ, ವೀರೇಶ ರೋಣದ, ಶಶಿಕುಮಾರ, ಅಶೋಕ ತೋಟದ ಬೆಳಿಗ್ಗೆ ಮತ್ತು ಸಂಜೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದಾರೆ.

ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ಇಲ್ಲಿಯೇ ನಡೆಯುತ್ತದೆ.  ಕ್ರೀಡಾಕೂಟ ನಡೆಯುವಾಗ ಪ್ರೇಕ್ಷಕರು ಬಿರುಬಿಸಿಲಿನಲ್ಲಿಯೇ ಕುಳಿತು ವೀಕ್ಷಿಸಬೇಕು. ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕ್ರೀಡಾಂಗಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಹೊರಗಿನವರೇ ಹೆಚ್ಚು ಇದನ್ನು ಉಪಯೋಗಿಸುವುದರಿಂದ ಕ್ರೀಡಾಪಟುಗಳಿಗೆ ಸಾಕಷ್ಟು ಕಿರಿಕಿರಿಯಾಗಿದೆ. ಕುಡಿಯುವ ನೀರನ್ನು ಬಾಟಲಿಗಳಲ್ಲಿ ಕ್ರೀಡಾಪಟುಗಳೇ ತರಬೇಕು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಅಪ್ಪಚ್ಚು ರಂಜನ್ ಇತ್ತೀಚೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು.

`ಟ್ರ್ಯಾಕ್ ಮಧ್ಯೆ ರಂಧ್ರ ಮಾಡಿರುವುದರಿಂದ ಸ್ಪೈಕ್ ಹಾಕಿಕೊಂಡು ಅಭ್ಯಾಸ ಮಾಡುವಾಗ ತೊಂದರೆಯಾಗುತ್ತದೆ. ವಾರದಲ್ಲಿ ಒಂದೆರಡು ಬಾರಿ ಪೂರ್ಣ ಟ್ರ್ಯಾಕ್‌ಗೆ ನೀರು ಹಾಕುತ್ತಾರೆ. ಅಭ್ಯಾಸದ ವೇಳೆ ವಾಕ್ ಮಾಡುವವರು ಮಧ್ಯೆ ಬಂದು ಸಾಕಷ್ಟು ಬಾರಿ ಜಗಳವೂ ನಡೆದಿದೆ. ಬಹುತೇಕ ಮಂದಿ ಚಪ್ಪಲಿ ಹಾಕಿಕೊಂಡೇ ನಡೆಯುತ್ತಾರೆ.  ಟ್ರ್ಯಾಕ್‌ನಲ್ಲಿ ಓಡಾಡದಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ'.ಎಂಬುದು ಕ್ರೀಡಾಪಟುಗಳ ಅಳಲು.

`ದಿನ ಬಿಟ್ಟು ದಿನ ಟ್ರ್ಯಾಕ್‌ಗೆ ನೀರು ಹಾಕಲಾಗುತ್ತಿದೆ. ವಾಟರ್ ಪಾಯಿಂಟ್‌ಗಳ ಸಂಖ್ಯೆಯನ್ನು 5ರಿಂದ 8ಕ್ಕೆ ಹೆಚ್ಚಿಸಲಾಗುವುದು. ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ರೂ. 4.77 ಲಕ್ಷ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಟ್ಯಾಂಕ್ ನಿರ್ಮಿಸಲಾಗುವುದು' ಎನ್ನುತ್ತಾರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್.

`400 ಮೀಟರ್ ಎಂಟು ಲೇನ್ ಮಾಡುವ ಯೋಚನೆ ಇದೆ. ಕಂಪೆನಿಗೆ ಅಂದಾಜು ಪಟ್ಟಿ ನೀಡುವಂತೆ ಕೇಳಲಾಗಿದೆ. ನೀರು ಶುದ್ಧೀಕರಿಸುವ ಉಪಕರಣ ಅಳವಡಿಸುವಂತೆ ನಗರಸಭೆಗೆ ಮನವಿ ಮಾಡಲಾಗಿದೆ. ಸಾರ್ವಜನಿಕರಿಗೆ ಟ್ರ್ಯಾಕ್ ಮೇಲೆ ನಡೆಯದಂತೆ ಮನವಿ ಮಾಡಿದರೂ ಮಾತು ಕೇಳುತ್ತಿಲ್ಲ' ಎನ್ನುವುದು ಅವರ ಅಸಹಾಯಕ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.