ADVERTISEMENT

ಬದಲಾಗಲಿನ್ನು ಮನಸ್ಸು...

ಕೆ.ಓಂಕಾರ ಮೂರ್ತಿ
Published 20 ಡಿಸೆಂಬರ್ 2010, 12:50 IST
Last Updated 20 ಡಿಸೆಂಬರ್ 2010, 12:50 IST

‘ಪದಕ ಗೆದ್ದಾಗ ಕರ್ನಾಟಕದ ಕ್ರೀಡಾಪಟು ಎನ್ನುತ್ತಾರೆ. ಆಮೇಲೆ ಸುಧೀರ್ ಏನಾದ ಎಂದು ಯಾರೂ ಕೇಳುವುದೇ ಇಲ್ಲ. ಇದು ನಮ್ಮ ಪರಿಸ್ಥಿತಿ’
‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ವೇಟ್‌ಲಿಫ್ಟರ್ ಸುಧೀರ್ ಕುಮಾರ್ ಅವರು ಸರ್ಕಾರ ಹಾಗೂ ಕ್ರೀಡಾ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪರಿ ಇದು!

‘ಅಕಸ್ಮಾತ್ ಯಾರಾದರೂ ಒಲಿಂಪಿಕ್ ಅಥವಾ ಬೇರೆ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ಅದು ಅವರ ಕಠಿಣ ಪ್ರಯತ್ನದಿಂದ. ಇಲ್ಲಿ ಖಂಡಿತ ಸರ್ಕಾರದ ಪ್ರಯತ್ನ ಇರುವುದಿಲ್ಲ’ ಎಂದು ಅಂಜು ಬಾಬಿ ಜಾರ್ಜ್ ಒಮ್ಮೆ ಹೇಳಿದ ಮಾತಿನಲ್ಲಿ ತುಂಬಾ ಅರ್ಥವಿದೆ.

ನಿಜ, ಕಷ್ಟಪಟ್ಟು ಅಭ್ಯಾಸ ನಡೆಸುವಾಗ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ತಮ್ಮ ಹಣವನ್ನೇ ಖರ್ಚು ಮಾಡಿಕೊಂಡು ವಿದೇಶಕ್ಕೆ ತೆರಳಿದಾಗ ಯಾರೂ ಗಮನಿಸುವುದಿಲ್ಲ. ಕಿಂಚಿತ್ ಸಹಾಯ ಮಾಡುವುದಿಲ್ಲ. ಸರಿಯಾದ ಸೌಲಭ್ಯ ನೀಡುವುದಿಲ್ಲ. ಆದರೆ ಒಂದು ಪದಕ ಗೆದ್ದು ಬಂದಾಗ ಇಂದ್ರ, ಚಂದ್ರ ಎಂದು ಅಟ್ಟಕ್ಕೇರಿಸುತ್ತಾರೆ. ಕೆಲ ದಿನಗಳಲ್ಲಿ ಮತ್ತೆ ಅವರನ್ನು ಮರೆತು ಬಿಡುತ್ತಾರೆ.

ADVERTISEMENT

ಅದಕ್ಕೊಂದು ಉದಾಹರಣೆ ಕಾಮನ್‌ವೆಲ್ತ್ ಕೂಟ. ನವದೆಹಲಿಯಲ್ಲಿ ನಡೆದ ಈ ಕೂಟದಲ್ಲಿ ಪದಕ ಗೆದ್ದವರಿಗೆ ಸರ್ಕಾರಗಳು, ರಾಜಕಾರಣಿಗಳು, ಕಂಪೆನಿಗಳು ಪೈಪೋಟಿಗೆ ಬಿದ್ದವರಂತೆ ಬಹುಮಾನ ನೀಡಲು ಮುಂದಾದವು. ಹಣ, ಪುರಸ್ಕಾರ, ಸನ್ಮಾನ ಮಾಡಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು. ಅವರಿಗೆ ಪುಕ್ಕಟೆ ಪ್ರಚಾರ. ಇಂಥವರಿಗೆ ಏನು ಹೇಳಬೇಕು ನೀವೇ ಹೇಳಿ?

ನಿಜ. ಇವರೆಲ್ಲಾ ಗೆದ್ದೆತ್ತಿನ ಬಾಲ ಹಿಡಿಯುವವರು!
ಬದಲಾಗಿ ತಮ್ಮ ರಾಜ್ಯದಲ್ಲಿ ಕ್ರೀಡಾಪಟುಗಳನ್ನು ಹುರಿದುಂಬಿಸಲು ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಸೂಕ್ತ ಯೋಜನೆ ರೂಪಿಸಿ ಉದಯೋನ್ಮುಖ ಪ್ರತಿಭೆಗಳಿಗೆ ಯಾವ ರೀತಿ ನೆರವಾಗಬೇಕು ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆರಂಭದಲ್ಲಿ ಕರ್ನಾಟಕ ಸರ್ಕಾರ ಪದಕ ಗೆದ್ದವರನ್ನು ಸನ್ಮಾನಿಸುವ ಗೋಜಿಗೆ ಹೋಗಲಿಲ್ಲ ಬಿಡಿ. ಅಶ್ವಿನಿ ಚಿದಾನಂದ ಅಕ್ಕುಂಜಿ ಅವರನ್ನು ನರೇಂದ್ರ ಮೋದಿ ಸರ್ಕಾರ ಸನ್ಮಾನಿಸಿದ ಮೇಲೆ ಕರ್ನಾಟಕ ಎಚ್ಚೆತ್ತುಕೊಂಡಿತು!

ಕಾಮನ್‌ವೆಲ್ತ್ ಕೂಟ, ಏಷ್ಯನ್ ಕೂಟಕ್ಕೆ ಮುನ್ನ ಅಶ್ವಿನಿ ಬಗ್ಗೆ ಇವರಾರಿಗೂ ಗೊತ್ತಿರಲಿಲ್ಲ. ಅವರ ತರಬೇತಿಗಾಗಿ ಯಾವುದೇ ಸೌಲಭ್ಯ ನೀಡಿರಲಿಲ್ಲ. ದಿನದ ಭತ್ಯೆಗೂ ಹಣವಿಲ್ಲದೇ ಪರದಾಡಿದ ಉದಾಹರಣೆ ಇದೆ. ಅದೆಷ್ಟೊ ಅಥ್ಲೀಟ್‌ಗಳಿಗೆ ಪೌಷ್ಠಿಕಾಂಶ ಆಹಾರ ಸಿಗುತ್ತಿಲ್ಲ. ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಕೆಲ ಅಥ್ಲೀಟ್‌ಗಳಿಗೆ ಉದ್ಯೋಗವಿಲ್ಲ.

‘ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತೋರಿದ ಉತ್ತಮ ಪ್ರದರ್ಶನ ಕ್ರೀಡಾಪಟುಗಳಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿತ್ತು. ಹಾಗಾಗಿ ಏಷ್ಯನ್ ಕ್ರೀಡಾಕೂಟದಲ್ಲಿ ನಾವು ನಾಲ್ಕು ಅಥವಾ ಐದನೇ ಸ್ಥಾನ ಪಡೆಯುವ ಭರವಸೆಯಲ್ಲಿದ್ದೆವು. ಆದರೆ ಕೂಟಕ್ಕೆ ಸಿದ್ಧರಾಗಲು ಸರಿಯಾದ ಸಮಯಾವಕಾಶವೇ ಸಿಗಲಿಲ್ಲ. ಕಾಮನ್‌ವೆಲ್ತ್ ಕೂಟದಲ್ಲಿ ವಿಜೇತರಾದವರನ್ನು ಅಭಿನಂದಿಸಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಿದ್ದವು. ಹಾಗಾಗಿ ತರಬೇತಿ ಶಿಬಿರ ಕೂಡ ತಡವಾಯಿತು. ಗುವಾಂಗ್‌ಜೌನಲ್ಲಿ ನಿರೀಕ್ಷಿಸಿದಷ್ಟು ಪದಕಗಳು ಬರಲಿಲ್ಲ’ ಎನ್ನುತ್ತಾರೆ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡದ ಚೆಫ್ ಡಿ ಮಿಷನ್ ಆಗಿದ್ದ ಅಭಯ್ ಸಿಂಗ್ ಚೌಟಾಲ.

ಈಗ ಕಾಮನ್‌ವೆಲ್ತ್, ಏಷ್ಯನ್ ಕ್ರೀಡಾಕೂಟ ಮುಗಿದು ಹೋಗಿದೆ. ನಿರೀಕ್ಷೆಗಿಂತ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ಖಂಡಿತ ಈ ಸಾಧನೆ ಭಾರತದ ಕ್ರೀಡೆಗಳ ಹಣೆಬರಹವನ್ನು ಬದಲಾಯಿಸಿದೆ. ಯುವ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿದೆ.

ಆದರೆ ಈಗ ಸರ್ಕಾರ ಹಾಗೂ ಕ್ರೀಡಾ ಆಡಳಿತದ ಮುಂದೆ ದೊಡ್ಡ ಸವಾಲು ಎದುರಿದೆ. ಕಾರಣ 2012ರ ಲಂಡನ್ ಒಲಿಂಪಿಕ್ಸ್.
ಭಾರತದ ಕ್ರೀಡಾಪಟುಗಳಿಗೆ ಅಲ್ಲಿಯೂ ಮಿಂಚುವ ಸಾಮರ್ಥ್ಯವಿದೆ. ಅಶ್ವಿನಿ, ಸೈನಾ ಅವರ ಮೇಲೆ ಪದಕದ ಭರವಸೆ ಇಟ್ಟುಕೊಳ್ಳಬಹುದು. ಹಾಗೇ, ಉಳಿದ ಪ್ರತಿಭೆಗಳಿಗೂ ಇಲ್ಲಿ ಖಂಡಿತ ಬರವಿಲ್ಲ. ಆದರೆ ಜಗತ್ತಿನಲ್ಲಿ ಪ್ರತಿಭೆಯೊಂದಿದ್ದರೆ ಸಾಲದು. ಆ ಪ್ರತಿಭೆ ಅರಳಿ ಹೂವಾಗಲೂ ಮಾರ್ಗದರ್ಶಕರು ಬೇಕು. ವಿಶ್ವ ಮಟ್ಟದ ಸೌಲಭ್ಯಗಳು ಅಗತ್ಯವಿದೆ. ವರ್ಷಗಟ್ಟಲೇ ಅಭ್ಯಾಸ ನಡೆಸಬೇಕು. ಹಾಗಾದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಖಂಡಿತ ಸುಧಾರಿತ ಫಲಿತಾಂಶ ಹೊರಹೊಮ್ಮಬಹುದು.

ಬೀಜಿಂಗ್ ಒಲಿಂಪಿಕ್ಸ್‌ಗಾಗಿ ಚೀನಾ ಹತ್ತು ವರ್ಷಗಳಿಂದ ಅಭ್ಯಾಸ ನಡೆಸಿತ್ತು. ಅದರ ಗುರಿ ಅಮೆರಿಕಾವನ್ನು ಹಿಂದಿಕ್ಕಿ ನಂಬರ್ ಒನ್ ಆಗಬೇಕು ಎಂಬುದು. ಅದರಲ್ಲಿ ಯಶಸ್ವಿಯೂ ಆಯಿತು. ಆದರೆ ಎರಡು ತಿಂಗಳು ಇದ್ದಾಗ ಎಚ್ಚೆತ್ತುಕೊಳ್ಳುವ ಪರಿಸ್ಥಿತಿ ಭಾರತದ್ದು. ಇನ್ನಾದರೂ ಮನಸ್ಸು ಬದಲಾಗುವುದೇ?!

ನಿಜ, ಚಾಂಪಿಯನ್‌ಗಳನ್ನು ಒಂದು ದಿನದಲ್ಲಿ ತಯಾರಿಸಲು ಸಾಧ್ಯವಿಲ್ಲ. ಕಠಿಣ ಅಭ್ಯಾಸ ಹಾಗೂ ಸೂಕ್ತ ಸೌಲಭ್ಯ ಚಾಂಪಿಯನ್‌ಗಳನ್ನು ಸೃಷ್ಟಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.