ADVERTISEMENT

ಬ್ಲೇಡ್ ರನ್ನರ್ ಪಿಸ್ಟೋರಿಯಸ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಸಾಧನೆಯ ಹಾದಿಯಲ್ಲಿ ಬರುವ ಸಾವಿರಾರು ಕಷ್ಟ ಕೋಟಲೆಗಳನ್ನು ಮೀರಿ ಮುನ್ನುಗ್ಗುವವನೇ ನಿಜವಾದ ಸಾಧಕ ಎಂಬ ನಾಣ್ಣುಡಿ, ದಕ್ಷಿಣ      ಆಫ್ರಿಕಾದ `ಬ್ಲೇಡ್ ರನ್ನರ್~ ಖ್ಯಾತಿಯ ಆಸ್ಕರ್ ಲಿಯೋನಾರ್ಡ್ ಪಿಸ್ಟೋರಿಯಸ್ ಎಂಬ ಓಟಗಾರನಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ಸ್ ಓಟದ ಸೆಮಿಫೈನಲ್     ತಲುಪಿದ್ದ ಪಿಸ್ಟೋರಿಯಸ್ ಸಾಧನೆ ಮಹತ್ತರವಾದದ್ದು. ಎರಡು ಮೊಣಕಾಲುಗಳಿಗೆ ಕೃತಕ ಕಾಲು (ಕಾರ್ಬನ್-ಫೈಬರ್ ಫ್ಲೆಕ್ಸಿಬಲ್ ಬ್ಲೆಡ್) ಅಳವಡಿಸಿಕೊಂಡು ಸಾಮಾನ್ಯ ಓಟಗಾರರ ಜಂಘಾಬಲವನ್ನೇ ಅಡಗಿಸುವಂತೆ ಪೈಪೋಟಿ ನೀಡಿದ ಪಿಸ್ಟೋರಿಯಸ್‌ನ ಎದೆಗಾರಿಕೆಗೆ ವಿಶ್ವವೇ ತಲೆದೂಗಿದೆ. ಪಿಸ್ಟೋರಿಯಸ್ ಹುಟ್ಟಿದ 11 ತಿಂಗಳಲ್ಲೇ (ಜನನ: 22-11-1986) ವಿಚಿತ್ರ ಕಾಯಿಲೆಗೆ ತುತ್ತಾಗಿ ಎರಡೂ ಕಾಲುಗಳನ್ನು ಮೊಣಕಾಲಿನವರೆಗೆ      ಕತ್ತರಿಸಬೇಕಾಯಿತು.

ಕಾಲುಗಳಿಲ್ಲ ಎಂದು ಪಿಸ್ಟೋರಿಯಸ್ ಮೂಲೆಯಲ್ಲಿ ಕೂರದೇ ವಿದ್ಯಾಭ್ಯಾಸಕ್ಕೆ ಮುಂದಾದರು. ವೈದ್ಯರ ಸಲಹೆ ಪಡೆದು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಸಾಮಾನ್ಯರಂತೆ ಬದುಕಲೆತ್ನಿಸಿದರು. ಅವರ ಅದಮ್ಯ ಜೀವನೋತ್ಸಾಹ ಕಂಡು ಓರಗೆಯವರು ಬೆರಗಾಗಿದ್ದರು. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಪಿಸ್ಟೋರಿಯಸ್ ರಗ್ಬಿ, ಟೆನಿಸ್ ಆಡುತ್ತಿದ್ದರು. ರಗ್ಬಿ ಆಡುವಾಗ ಗಾಯಗೊಂಡು ಮೊಣಕಾಲಿನ ಚಿಕಿತ್ಸೆಗೆ ಒಳಗಾದರು. ಬಹುಶಃ ಈ ಗಾಯವೇ ಅವರ ಬದುಕಿಗೆ ಹೊಸ ತಿರುವು ಕೊಟ್ಟಿದ್ದು! ಗಾಯದಿಂದ ಚೇತರಿಸಿಕೊಂಡ ಬಳಿಕ ಪಿಸ್ಟೋರಿಯಸ್ ಮತ್ತೆ ರಗ್ಬಿಯತ್ತ ಮುಖ ಮಾಡಲಿಲ್ಲ. ನಂತರ ಅವರು ಅಂಕಣಕ್ಕೆ ಇಳಿದದ್ದು ವೇಗದ ಓಟಗಾರನಾಗಿ.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ 100ಮೀ. ಮತ್ತು 200 ಮೀಟರ್ಸ್ ಓಟಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದು ವಿಶ್ವದ ಗಮನ ಸೆಳೆದರು. 

 ಅಥೆನ್ಸ್‌ನಿಂದ ಆರಂಭವಾದ ಅವರ ವಿಜಯ ಯಾತ್ರೆ ಲಂಡನ್  ಒಲಿಂಪಿಕ್ಸ್‌ವರೆಗೂ ನಡೆದಿದೆ.   ಪಿಸ್ಟೋರಿಯಸ್ ಪ್ಯಾರಾಲಿಂಪಿಕ್ಸ್ ಮಾತ್ರವಲ್ಲದೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದಾರೆ.

ಈ ನಡುವೆ ಇವರು ವಾಣಿಜ್ಯ ಪದವಿ ಪಡೆದರು. ಇವರ `ಡ್ರೀಮ್ ರನ್ನರ್~ ಎಂಬ ಆತ್ಮಕಥೆ 2008ರಲ್ಲಿ ಪ್ರಕಟಗೊಂಡಿತು.

ಕೃತಕ ಕಾಲು ಜೋಡಿಸಿಕೊಂಡಿರುವವರು ಪ್ರಮುಖ ಕೂಟಗಳಲ್ಲಿ   ಓಡುವುದರ ಮೇಲೆ 2007ರಲ್ಲಿ     ಅಂತರರಾಷ್ಟ್ರೀಯ ಅಥ್ಲೆಟಿಕ್ಸ್   ಫೆಡರೇಷನ್ (ಐಎಎಎಫ್)  ನಿರ್ಬಂಧ ಹೇರಿತು. ಇದಕ್ಕೆ ಧೃತಿಗೆಡದ ಪಿಸ್ಟೋರಿಯಸ್ ನ್ಯಾಯಾಲಯದ ಮೆಟ್ಟಿಲು ಏರಿದರು.

ಯಾಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿದರು. ಅಂತಿಮವಾಗಿ ನ್ಯಾಯಾಲಯ ಪಿಸ್ಟೋರಿಯಸ್ ಪರವಾಗಿ ತೀರ್ಪು ನೀಡಿತು. 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ವೇಗದ ಓಟದಲ್ಲಿ ಓಡಲು ಅರ್ಹತೆ ಪಡೆದರಾದರೂ ಫೈನಲ್ ತಲುಪಲಿಲ್ಲ.ಆದರೂ ಎದೆಗುಂದದೆ ಪ್ಯಾರಾಲಿಂಪಿಕ್ಸ್‌ನಲ್ಲಿ  ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ಗೆದ್ದರು. 2011ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ 4ಗಿ400 ಮೀಟರ್ ಪುರುಷರ ರಿಲೆಯಲ್ಲಿ ಬೆಳ್ಳಿ ಪದಕ ಗೆದ್ದರು.

ಇವರು ಕಳೆದ ವರ್ಷ 400 ಮೀಟರ್ಸ್ ಓಟವನ್ನು 45.07ಸೆಕೆಂಡುಗಳಲ್ಲಿ ಕ್ರಮಿಸಿದ್ದರಿಂದ ಲಂಡನ್ ಒಲಿಂಪಿಕ್ಸ್‌ಗೆ `ಎ~ ದರ್ಜೆಯ ಅರ್ಹತೆ ಪಡೆದಿದ್ದರು. ಮೊನ್ನೆ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದ ಹೀಟ್ಸ್‌ನಲ್ಲಿ ಗಮನಾರ್ಹ ಸಾಮರ್ಥ್ಯ ತೋರಿ ಸೆಮಿಫೈನಲ್ ತಲುಪಿದ್ದರು. ಆದರೆ ಸೆಮಿಫೈನಲ್‌ನಲ್ಲಿ 46.19 ಸೆಕೆಂಡುಗಳಲ್ಲಿ ಓಡಿದರಾದರೂ, ಫೈನಲ್ ತಲುಪಲಾಗಲಿಲ್ಲ. ಓಟ ಮುಗಿದ ಮೇಲೆ ಈ ಸ್ಪರ್ಧೆಯ ವಿಶ್ವ ಚಾಂಪಿಯನ್ ಗ್ರೆನಡಾದ ಕಿರನಿ ಜೇಮ್ಸ ಅವರು ಪಿಸ್ಟೋರಿಯಸ್ ಬಳಿ ಹೋಗಿ ಅವರನ್ನು ಅಪ್ಪಿಕೊಂಡು ಅಭಿನಂದಿಸಿದಾಗ, ಗ್ಯಾಲರಿಯಲ್ಲಿದ್ದ ಸಾವಿರಾರು ಮಂದಿ ಚಪ್ಪಾಳೆ ತಟ್ಟಿದ್ದರು.

400 ಮೀಟರ್ಸ್ ಓಟದಲ್ಲಿ ಫೈನಲ್ ಪ್ರವೇಶಿಸಲು ವಿಫಲರಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಿಸ್ಟೋರಿಯಸ್ `ಇಲ್ಲಿ ಸೋತರೆ ಏನಂತೆ, ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲುತ್ತೇನೆ~ ಎಂದು ಆತ್ಮ  ವಿಶ್ವಾಸದಿಂದ ನುಡಿದಿದ್ದರು. ಪಿಸ್ಟೋರಿಯಸ್ ಅವರಿಗೆ ಇರುವ ಆತ್ಮವಿಶ್ವಾಸ,  ಸಾಧನೆಯ ಛಲದ ಮುಂದೆ ಎಲ್ಲಾ    ಪದಕಗಳು ಗೌಣ ಅಲ್ಲವೇ...
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.