ADVERTISEMENT

ಭಾರತ ತಂಡದಲ್ಲಿ ಸಚಿನ್ ಆಜೀವ ಸದಸ್ಯ!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

* ಭಾರತ ತಂಡದಲ್ಲಿ ಸಚಿನ್ ಆಜೀವ ಸದಸ್ಯ !
ಸಚಿನ್ ನಿವೃತ್ತಿಗೆ ಇದು ಸಕಾಲವಲ್ಲ, ಅಕಾಲ. ಅವರು ಎಷ್ಟೋ ವರ್ಷಗಳ ಹಿಂದೆಯೇ ಮರ್ಯಾದೆಯಿಂದ ನಿವೃತ್ತರಾಗಬೇಕಿತ್ತು. ಕರ್ನಾಟಕದ ವಿಜಯ್ ಭಾರದ್ವಾಜ್ ಸೇರಿದಂತೆ ನೂರಾರು ಪ್ರತಿಭಾವಂತರನ್ನು ಒಂದೇ ಪಂದ್ಯದಿಂದ ಅಳೆದು ಹೊರಕ್ಕೆಸೆದ ಆಯ್ಕೆ ಸಮಿತಿ  ಸಚಿನ್ ವಿಚಾರದಲ್ಲಿ ಅಸಹಾಯಕವಾಗಿದೆ. `ಇಂಗು ತೆಂಗು ಇದ್ರೆ ಎಂತಹ ಮಂಗನೂ ಅಡುಗೆ ಮಾಡುತ್ತೆ' ಎನ್ನುವ ಹಾಗೆ, ಸಚಿನ್‌ಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೇ ಸಿಕ್ಕಿದ್ದರೂ ಅವರು ಇದಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದರು ಎಂಬುವುದರಲ್ಲಿ ಅನುಮಾನವಿಲ್ಲ.

ಉಡುಗೊರೆ ಬಂದ ಕಾರಿಗೂ ಸರ್ಕಾರ ತೆರಿಗೆ ಮನ್ನಾ ಮಾಡಲಿ ಎಂದು ನಿರೀಕ್ಷಿಸುವ, ಹಲವು ಬಾರಿ ತನ್ನ ಕೆಟ್ಟ ಆಟದಿಂದ ತಂಡದ ಇತರರು ತೊಂದರೆಗೀಡಾಗುವಂತೆ ಮಾಡಿದ ಸಚಿನ್ `ಸ್ವಾರ್ಥದ ಬೆಟ್ಟ'. `ಗುಂಪುಗಾರಿಕೆ' ನಡೆಸಿ ಹೊಸ ಪ್ರತಿಭೆಗಳಿಗೆ ಅಡ್ಡಿಯಾಗಿದ್ದಾರೆ. ಇದೆಲ್ಲಾ ಕಂಡಾಗ ನನಗನ್ನಸುತ್ತೆ, ಸಂವಿಧಾನಕ್ಕೆತಿದ್ದುಪಡಿ ತಂದು `ಸಚಿನ್ ಅವರನ್ನು ಭಾರತ ತಂಡದ ಆಜೀವ ಸದಸ್ಯ' ಎಂದು ಘೋಷಿಸುವುದೇ ಸೂಕ್ತ.
ವಾ.ಮುರಳೀಧರ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ.

* ಅವರು ಇಡುವ ಪ್ರತಿ ಹೆಜ್ಜೆಯೂ ದಾಖಲೆಯೇ...
ಸಚಿನ್ ನನ್ನ ಮಟ್ಟಿಗೆ ಕ್ರಿಕೆಟ್ ದೇವರು. ಅವರಿಲ್ಲದ ತಂಡವನ್ನು ನಾನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಚಿನ್ ಈಗ ಇಡುವ ಪ್ರತಿ ಹೆಜ್ಜೆಯೂ ಹೊಸ ದಾಖಲೆಯೇ. ಒಬ್ಬ ಮನುಷ್ಯನ ಜೀವನದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವೇ ಎಂಬ ಅಚ್ಚರಿ ನನ್ನನ್ನು ನಿತ್ಯವೂ ಕಾಡುತ್ತಲೇ ಇರುತ್ತದೆ.
  ಕೆ.ನರೇಶ್, ಸೋಮಲಿಂಗದಳ್ಳಿ,   ಚಿಂಚೋಳಿ ತಾಲ್ಲೂಕು, ಗುಲ್ಬರ್ಗ ಜಿಲ್ಲೆ.

* ಈಗಲೂ `ಕ್ರೀಡಾ ಮನೋಭಾವ' ಮೆರೆಯಲಿ
ಸಚಿನ್‌ಗೆ ತಾನು ಔಟಾಗಿದ್ದೇನೆಂದು ಅನಿಸಿದರೆ, ಕೆಲವೊಮ್ಮೆ ಅಂಪೈರ್ `ಔಟ್' ಎನ್ನದಿದ್ದರೂ ಸಚಿನ್ ಸ್ವತಃ ಪೆವಿಲಿಯನ್‌ನತ್ತ ಹೆಜ್ಜೆ ಹಾಕುವ `ಕ್ರೀಡಾ ಮನೋಭಾವ' ಮೆರೆದಿದ್ದಾರೆ. ಅದೇ ರೀತಿ ಅವರು ನಿವೃತ್ತಿಗೆ ಸಂಬಂಧಿಸಿದಂತೆಯೂ ಔದಾರ್ಯ ತೋರಲಿ ಎಂಬುದು ನನ್ನ ಆಶಯ. ಒತ್ತಡಗಳ ಮಹಾಪೂರಕ್ಕೆ ಮಣಿದು ಬಲವಂತವಾಗಿ ನಿವೃತ್ತರಾಗುವುದಕ್ಕಿಂತ ಶೀಘ್ರದಲ್ಲಿ ತಾವೇ ಸ್ವತಃ ವಿದಾಯ ಹೇಳುವುದೇ ಸೂಕ್ತ.
ಎಸ್.ಕೆ.ವಾಸು, ಚಂಗಡಿಹಳ್ಳಿ, ಯಸಳೂರು, ಸಕಲೇಶಪುರ,  ಹಾಸನ ಜಿಲ್ಲೆ.

* ಸಮಕಾಲೀನರಂತೆ ಸಚಿನ್ ನಡೆದು ಕೊಳ್ಳಲಿ
ಶಿಖರ್ ಧವನ್, ಚೇತೇಶ್ವರ ಪೂಜಾರ, ಮುರಳಿ ವಿಜಯ್ ಅವರಂತಹ ಅನೇಕ ಪ್ರತಿಭಾವಂತರಿಗೆ ಅವಕಾಶ ನೀಡುವ ದಿಸೆಯಲ್ಲಿ ಸಚಿನ್ ಅವರು ನಿವೃತ್ತಿ ಬಗ್ಗೆ ಯೋಚಿಸುವುದು ಅವಶ್ಯಕವಾಗಿದೆ. ಸಚಿನ್ ಅವರ ಸಮಕಾಲೀನರೆಲ್ಲರೂ ನಿವೃತ್ತರಾಗಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕು. ಸಚಿನ್ ಫಾರ್ಮ್‌ನಲ್ಲಿಲ್ಲ ಎಂಬುದನ್ನೂ ಮರೆಯುವಂತಿಲ್ಲ.
-ಶಂಕ್ರೇಶ ಕಮ್ಮಾರ ಶಿಕ್ಷಕ, ಬೀಡನಾಳ ತಾಂಡ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.