ADVERTISEMENT

ವಿವಿಎಸ್ ಬ್ಯಾಟಿಂಗ್ ಶೈಲಿಯ ವಿಶೇಷ...!

ಡಿ.ಗರುಡ
Published 20 ನವೆಂಬರ್ 2011, 19:30 IST
Last Updated 20 ನವೆಂಬರ್ 2011, 19:30 IST
ವಿವಿಎಸ್ ಬ್ಯಾಟಿಂಗ್ ಶೈಲಿಯ ವಿಶೇಷ...!
ವಿವಿಎಸ್ ಬ್ಯಾಟಿಂಗ್ ಶೈಲಿಯ ವಿಶೇಷ...!   

ಭಾರತವು ಟೆಸ್ಟ್‌ನಲ್ಲಿ ಅನೇಕ ಬಾರಿ ಕಷ್ಟದ ಸುಳಿಗೆ ಸಿಲುಕಿದಾಗ ರಕ್ಷಣೆಗೆ ನಿಂತಿದ್ದು ದಕ್ಷಿಣದ ಇಬ್ಬರು ಬ್ಯಾಟ್ಸ್‌ಮನ್‌ಗಳು. ವಿ.ವಿ.ಎಸ್.ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಎಂದರೆ ದೇಶದ ತಂಡಕ್ಕೆ ಸದಾ ಆಪ್ತರಕ್ಷಕರು.

ತಮ್ಮ ವಿಶಿಷ್ಟವಾದ ಶೈಲಿಯಿಂದ ಎದುರಾಳಿ ಬೌಲರ್‌ಗಳನ್ನು ಕಾಡುವುದೇ ಈ ಕ್ರಿಕೆಟ್ ತಾರೆಗಳ ವಿಶೇಷ. ಜೊತೆಯಾಗಿ ನಿಂತರೆ ದೊಡ್ಡ ಇನಿಂಗ್ಸ್ ಖಚಿತ.

ಅದಕ್ಕೆ ಕಾರಣ ಅವರಾಡುವ ರೀತಿ. ಏನೋ ಸೂಕ್ಷ್ಮವಾದ ಅಂಶವು ಅಲ್ಲಡಗಿದೆ. ಅದನ್ನು ಲಕ್ಷ್ಮಣ್ ಮಾತಲ್ಲಿಯೇ ಕೇಳಿ ತಿಳಿಯಬೇಕು. ಆಗಲೇ ಅರ್ಥಪೂರ್ಣ. ಅಂಥದೊಂದು ಪ್ರಯತ್ನದ ಫಲವೇ ಇಲ್ಲಿ ಪದಗಳ ರೂಪಪಡೆದು ಸಾಲುಗಳಾಗಿವೆ.

ರಾಹುಲ್ ಶೈಲಿಯ ವಿಚಿತ್ರ ರೂಪ ಲಕ್ಷ್ಮಣ್?
ಇರಬಹುದು. ದ್ರಾವಿಡ್ ಬ್ಯಾಟಿಂಗ್ ಕಾಪಿಬುಕ್ ಫಾಲೋ ಮಾಡುವಂತೆ. ನಾನು ಸ್ವಲ್ಪ ಮಟ್ಟಿಗೆ ಹಾಗೆಯೇ! ಆದರೆ ಒಂದಿಷ್ಟು ಒರಟುತನ ಇದೆ ಎನಿಸುತ್ತದೆ.      ರಾಹುಲ್‌ನ ವಿಚಿತ್ರ ರೂಪವೆಂದು ಕೆಲವರು ಬರೆದಿದ್ದನ್ನು ಕೂಡ ಓದಿದ್ದೇನೆ.

ಎತ್ತರದಲ್ಲಿ ಇಬ್ಬರ ನಡುವೆ ವ್ಯತ್ಯಾಸವಿದೆ. ಅದೇ ಶೈಲಿಯನ್ನು ವಿಭಿನ್ನಗೊಳಿಸುತ್ತದೆ. ಅವರಿಗೆ ಮೊಣಕಾಲಿನವರೆಗೆ ಪುಟಿದೇಳುವ ಚೆಂಡು ನನಗೆ ತೀರ ಕೆಳಗಿದೆ ಎನಿಸುತ್ತದೆ.

ಆದ್ದರಿಂದ ನಾನು ತುಂಬಾ ಕೆಳಮಟ್ಟದಲ್ಲಿ ಒಂದು ಚೆಂಡನ್ನು ಎದುರಿಸುತ್ತಿದ್ದರೆ, ರಾಹುಲ್ ನಿರಾಯಾಸವಾಗಿ ಅದನ್ನು ತಡೆದು ಆಡುತ್ತಾರೆ. ಆಫ್‌ಸೈಡ್‌ನಲ್ಲಿ ನನಗಿಂತ ಹೆಚ್ಚು ಉತ್ತಮ ಹೊಡೆತಗಳನ್ನು ರಾಹುಲ್ ಪ್ರಯೋಗಿಸಬಲ್ಲರು. ಅದೇ ಕಾರಣಕ್ಕೆ ಅವರು `ವಾಲ್~ ಎನಿಸಿಕೊಂಡಿದ್ದಾರೆ.

ವೈಯಕ್ತಿಕವಾಗಿ ಇಷ್ಟಪಡುವ ಶಾಟ್‌ಗಳು?
ಆಫ್‌ಡ್ರೈವ್ ಹಾಗೂ ಪುಲ್‌ಶಾಟ್. ಆದರೆ ಪ್ರತಿಯೊಂದು ಪಂದ್ಯದಲ್ಲಿ ಎದುರಾಗುವ ಬೌಲರ್‌ಗಳು ಚೆಂಡನ್ನು ಪುಟಿದೇಳಿಸುವ ರೀತಿ ಹಾಗೂ ಸ್ಪಿನ್ ಮಾಡುವ ಮಟ್ಟದ ಮೇಲೆ ಇದು ಅವಲಂಬಿತವಾಗಿರುತ್ತದೆ.

ಪ್ರತಿಯೊಂದು ಎಸೆತಕ್ಕೆ ಇಂಥದೇ ಹೊಡೆತವನ್ನು ಪ್ರಯೋಗಿಸಬೇಕೆಂದು ನಿರ್ಧಾರ ಮಾಡಿಕೊಳ್ಳುವುದಿಲ್ಲ. ಶಾಟ್ ಆಯ್ಕೆಯು ಆ ಕ್ಷಣದ ಪ್ರತಿಕ್ರಿಯೆ ಮಾತ್ರ.

ಆದರೆ ಅಭ್ಯಾಸ ಮಾಡುವ ಸಂದರ್ಭದಲ್ಲಿ ಚೆಂಡು ಯಾವ ಕೋನದಲ್ಲಿ ನುಗ್ಗಿಬರುತ್ತದೆ ಹಾಗೂ ಅದನ್ನು ಹೇಗೆ ಆಡಬೇಕೆಂದು ಪ್ರಯೋಗ ಮಾಡಬಹುದು. ಕೆಲವೊಮ್ಮೆ ಅಂಗಳದಲ್ಲಿ ಅರಿವಿಲ್ಲದಂತೆಯೇ ವಿಚಿತ್ರವಾದ ಹೊಡೆತಗಳನ್ನು ಪ್ರಯೋಗಿಸಿರುತ್ತೇನೆ.

ಆನಂತರ ಆ ಬಗ್ಗೆ ಯೋಚಿಸಿ ಮತ್ತೆ ಹಾಗೆ ಮಾಡಲು ಸಾಧ್ಯವೇ ಎಂದು ನೆಟ್ಸ್‌ನಲ್ಲಿ ಪ್ರಯತ್ನಿಸುತ್ತೇನೆ.

`ಪಂಚ್~ ಪ್ರಯೋಗ ಕಷ್ಟವೆನ್ನುವ ಅಭಿಪ್ರಾಯವಿದೆ?
ಸಚಿನ್ ತೆಂಡೂಲ್ಕರ್ ರೀತಿಯಲ್ಲಿ `ಪಂಚ್~ ಶಾಟ್ ಖಂಡಿತ ಸಾಧ್ಯವಿಲ್ಲ. ಅದಕ್ಕೆ ನನ್ನ ಎತ್ತರವೂ ಕಾರಣ. ನಾನು ನೇರವಾಗಿ ನಿಂತು ಚೆಂಡನ್ನು ಎದುರಿಸಿದಾಗ ಅದು ನನ್ನ ಬ್ಯಾಟ್‌ನ ತೀರ ತುದಿಯಲ್ಲಿ ತಾಗುತ್ತದೆ.

ಆಗ ಅಪಾಯ ಹೆಚ್ಚು. ಕೆಲವೊಮ್ಮೆ ಚೆಂಡು ಎತ್ತರಕ್ಕೆ ಪುಟಿದಾಗ ನಾನೂ ಚೆಂಡನ್ನು ಪಂಚ್ ಮಾಡಿ ವಿಕೆಟ್ ನೇರಕ್ಕೆ ಬೌಂಡರಿ ಗಳಿಸಿದ್ದೇನೆ. ಭಾರತದಲ್ಲಿನ ಪಿಚ್‌ಗಳಲ್ಲಿ ನನ್ನಂಥ ಬ್ಯಾಟ್ಸ್‌ಮನ್ ಹಾಗೆ ಮಾಡುವುದು ಕಷ್ಟ.

ಆದರೆ ವೇಗದ ಪಿಚ್‌ಗಳಿರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನಲ್ಲಿ ಖಂಡಿತ ಸಾಧ್ಯ. ಆಸ್ಟ್ರೇಲಿಯಾದಲ್ಲಿ ಆಡಿದ್ದಾಗ ಅನೇಕ ಬಾರಿ ಪಂಚ್‌ಗೆ ಸಮೀಪದ ತಂತ್ರವೆನಿಸಬಹುದಾದ ಹೊಡೆತದಿಂದ ಚೆಂಡನ್ನು ಗಡಿಗಟ್ಟಿದ್ದೇನೆ.

ಆಸ್ಟ್ರೇಲಿಯಾದಲ್ಲಿ ಭಾರತ ಆಡಿದಾಗ ರಾಹುಲ್-ಲಕ್ಷ್ಮಣ್ ಮೇಲೆ ನಿರೀಕ್ಷೆ ಹೆಚ್ಚು?

ನಮ್ಮ ಇಬ್ಬರ ಶೈಲಿಗೆ ಒಗ್ಗುವಂಥ ಅಂಗಳಗಳು ಅಲ್ಲಿವೆ. ಚೆಂಡು ಪುಟಿದೇಳುವುದು ನಮಗಿಬ್ಬರಿಗೂ ಅಪಾಯಕಾರಿ ಎನಿಸುವುದಿಲ್ಲ.

ಚೆಂಡು ಬ್ಯಾಟ್‌ನ ಮಧ್ಯದಲ್ಲಿ ಅಪ್ಪಳಿಸುವಂತೆ ಮಾಡುವುದು ನಮ್ಮ ರೀತಿ. ಆದ್ದರಿಂದಲೇ ಬೇರೆಯವರಿಗೆ ಕಷ್ಟ ಎನಿಸುವ ಎಸೆತಗಳು ನಮಗೆ ಸುಲಭವಾಗಿ ಕಾಣಿಸುತ್ತವೆ. ಬ್ಯಾಟ್ ಅನ್ನು ಕೆಳಮುಖವಾಗಿ ಹಿಡಿಯುವುದರಿಂದ ಕ್ಯಾಚ್ ನೀಡುವ ಸಾಧ್ಯತೆಯೂ ಬಹಳ ಕಡಿಮೆ.

ಆಫ್‌ಸ್ಟಂಪ್ ನೇರಕ್ಕೆ ಇಲ್ಲವೇ ಅದಕ್ಕೂ ಕೆಲವು ಅಂಗುಲ ಹಿಂದೆ ನಿಂತು ಆಡುವುದರಿಂದ      ಎಲ್‌ಬಿಡಬ್ಲ್ಯು ಸಾಧ್ಯತೆಯೂ ಕಡಿಮೆ. ವಿಕೆಟ್ ಹಿಂದೆ ಕ್ಯಾಚ್ ಪಡೆಯುವ ನಿರೀಕ್ಷೆ ಮಾಡುವುದಕ್ಕೂ ಎದುರಾಳಿ ತಂಡದವರಿಗೆ ಅವಕಾಶ ಇರುವುದಿಲ್ಲ.

ಒತ್ತಡವನ್ನು ನಿಭಾಯಿಸುವ ಗುಟ್ಟು?
ಪ್ರತಿ ಬಾರಿಯೂ ಕ್ರೀಸ್‌ಗೆ ಹೋಗುವ ಮುನ್ನ ತಂಡಕ್ಕೆ ಪ್ರಯೋಜನವಾಗುವ ಆಟವಾಡಬೇಕೆಂದು ಯೋಚಿಸುತ್ತೇನೆ. ನಾನು ದೊಡ್ಡ ಇನಿಂಗ್ಸ್ ಆಡಿದ್ದೆಲ್ಲ ಒತ್ತಡದ ಪರಿಸ್ಥಿತಿಯಲ್ಲಿ. ನಾನು ಆಡುವ ಕ್ರಮಾಂಕವೇ ಅಂಥದು.

ಆದ್ದರಿಂದ ಸಹಜವಾಗಿಯೇ ಅಂಥ ಸಂದರ್ಭಕ್ಕೆ ಹೊಂದಿಕೊಂಡು ಆಡುವುದನ್ನು ಕಲಿತಿದ್ದೇನೆ. ಸಹನೆ ಕಳೆದುಕೊಳ್ಳುವುದಿಲ್ಲ. ಏಕಾಗ್ರತೆ ಕಾಯ್ದುಕೊಂಡು ಚೆಂಡನ್ನು ಎದುರಿಸುತ್ತೇನೆ. ಪಿಚ್ ಗುಣದ ಬಗ್ಗೆಯಂತೂ ಯೋಚಿಸುವುದಿಲ್ಲ. ಯಾವುದೇ ಅಂಗಳ ಇರಲಿ, ದೀರ್ಘ ಇನಿಂಗ್ಸ್ ಗುರಿಯಾಗಿರುತ್ತದೆ. ಅದರಿಂದ ತಂಡಕ್ಕೆ ಅನೇಕ ಬಾರಿ ನೆರವಾಗಿ ನಿಂತಿದ್ದೇನೆ ಎನ್ನುವ ತೃಪ್ತಿ ನನ್ನದು.

ರಾಹುಲ್ ಜೊತೆಗೆ ಕ್ರೀಸ್‌ನಲ್ಲಿದ್ದಾಗ?
ದ್ರಾವಿಡ್ ಸಹನೆಯಿಂದ ಆಡುವ ರೀತಿಯನ್ನು ನೋಡಿದಾಗಲೇ ಪ್ರೇರಣೆ ಸಿಗುತ್ತದೆ. ನಾವಿಬ್ಬರೂ ಸಾಮಾನ್ಯವಾಗಿ ಕ್ರೀಸ್‌ನಲ್ಲಿದ್ದಾಗ ಕಡಿಮೆ ಮಾತನಾಡುತ್ತೇವೆ.

ಒಳ್ಳೆಯ ಹೊಡೆತದಿಂದ ಬೌಂಡರಿ, ಸಿಕ್ಸರ್ ಗಳಿಸಿದಾಗ ಪರಸ್ಪರ ಅಭಿನಂದಿಸುತ್ತೇವೆ. ರಾಹುಲ್ ಕೂಡ ನನ್ನಂತೆಯೇ ಮಾತು ಕಡಿಮೆ.

ಆದರೆ ಮಹೇಂದ್ರ ಸಿಂಗ್ ದೋನಿ ಜೊತೆಗಿದ್ದರೆ ಅದು ಒಂದು ರೀತಿಯಲ್ಲಿ ರಂಜನೆ. ಅವರು ಗಂಭೀರವಾಗಿರುವುದಿಲ್ಲ. ಪಿಚ್ ನಡುವೆ ಜೊತೆಗೆ ನಿಂತಾಗಲೊಮ್ಮೆ ಅವರು ತಮ್ಮ ಹಾಸ್ಯಪ್ರಜ್ಞೆಯಿಂದ ನಗಿಸುತ್ತಾರೆ.

ಯಾವ ರೀತಿಯ ಪಿಚ್ ಇಷ್ಟ?
ಪಿಚ್ ಗುಣದ ಬಗ್ಗೆ ನಾನೆಂದೂ ಯೋಚಿಸಿಲ್ಲ. ಒಂದೊಂದು ಕಡೆಗೆ ಮಣ್ಣಿನ ಗುಣ ಬೇರೆ ಆಗಿರುತ್ತದೆ. ಆದ್ದರಿಂದ ಸಿಗುವ ಅಂಗಳದಲ್ಲಿ ಚೆನ್ನಾಗಿ ಆಡಬೇಕು. ಅದೇ ನನ್ನ ಉದ್ದೇಶ ಹಾಗೂ ಗುರಿ. ಈಡನ್ ಗಾರ್ಡನ್ಸ್‌ನಲ್ಲಿ ನನ್ನ ಸಾಧನೆ ಉತ್ತಮವಾಗಿರಬಹುದು.

ಆದರೆ ಇದೇ ನನ್ನ ನೆಚ್ಚಿನ ಅಂಗಳ ಎಂದಲ್ಲ. ಈಡನ್ ನನಗೆ ಸುಂದರ ನೆನಪುಗಳನ್ನು ನೀಡಿದ್ದರಿಂದ ಅದು ವಿಶೇಷವಾದದ್ದು ಎಂದು ಮಾತ್ರ ಹೇಳಬಲ್ಲೆ.

ಶೈಲಿಯಲ್ಲಿ ಬದಲಾವಣೆ ಯೋಚನೆ?
ಬೌಲರ್‌ಗಳು ನನ್ನ ತಂತ್ರವನ್ನು ಅರಿಯುತ್ತಾ ಸಾಗಿದಂತೆ ಅಪಾಯ ನನಗೇ ಹೆಚ್ಚು. ಆದ್ದರಿಂದ ಸೂಕ್ಷ್ಮವಾಗಿ ಬದಲಾವಣೆ ಮಾಡಿಕೊಳ್ಳಲೇಬೇಕು.

ಈ ವಿಷಯದಲ್ಲಿ ಕೋಚ್ ಡಂಕನ್ ಫ್ಲೆಚರ್ ಅನೇಕ ಪ್ರಯೋಜನಕಾರಿ ಸಲಹೆಗಳನ್ನು ನೀಡುತ್ತಾರೆ. ಸ್ಪಷ್ಟವಾಗಿ ಗೋಚರಿಸದಿದ್ದರೂ ಸೂಕ್ಷ್ಮ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಹಾಗೆ ಮಾಡುವುದು ಮುಖ್ಯವೂ ಆಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.