ADVERTISEMENT

ವೈಕಲ್ಯ ಮರೆಸಿದ ಕ್ರಿಕೆಟ್‌ ವೈಭವ...

ಉತ್ತರ ಕರ್ನಾಟಕ

ವಿಕ್ರಂ ಕಾಂತಿಕೆರೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಅಂದು ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಅಂಗವಿಕಲರ ಎಲೈಟ್‌ ಗುಂಪಿನ ರಾಷ್ಟ್ರೀಯ  ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯ ರಂಗೇರಿತ್ತು. ಪಶ್ಚಿಮ ಬಂಗಾಳದ ಬ್ಯಾಟ್ಸ್‌ಮನ್‌ ಅಬ್ದುಲ್‌ ಖಲೀಲ್‌ ಬ್ಯಾಟಿಂಗ್‌ನ ಮೋಹಕತೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು

 ಆಕರ್ಷಕ ಕಟ್‌ ಶಾಟ್‌ಗಳ ಮೂಲಕ ಸುಲಭವಾಗಿ ಒಂದು ಅಥವಾ ಎರಡು ರನ್‌ಗಳನ್ನು ಗಳಿಸುತ್ತಿದ್ದ ಅವರು ಸುಂದರ ಆನ್‌ಡ್ರೈವ್ ಮೂಲಕ ಎರಡು ಬೌಂಡರಿ ಬಾರಿಸಿದ ನಂತರ ಎದುರಾಳಿ ನಾಯಕನ ಎಸೆತ ಗಳನ್ನು ಮೋಹಕವಾಗಿ ಲಾಫ್ಟ್‌ ಮಾಡಿ ಒಂದೇ ಓವರ್‌ನಲ್ಲಿ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ಕಳುಹಿಸಿದಾಗ ಸಹ ಆಟಗಾರ ರೊಂದಿಗೆ ಕ್ರಿಕೆಟ್‌ ಪ್ರಿಯರಲ್ಲಿ  ರೋಮಾಂಚನ. ಈ ಕಲಾತ್ಮಕ ಆಟಗಾರನ ಫುಟ್‌ವರ್ಕ್‌ ಗಮನಿಸಿ ದರೆ ಈತನ ಎಡಗಾಲು ಪೋಲಿಯೊದಿಂದಾಗಿ ಸೊಟ್ಟಗಿದೆ ಎಂದು ನಂಬುವುದೇ ಕಷ್ಟ!

ಇದೇ ತಂಡದ ವಿಕೆಟ್ ಕೀಪರ್‌ ತುಷಾರ್‌ ಡೈವ್‌ ಮಾಡಿ ತೆಗೆದುಕೊಂಡ ಕ್ಯಾಚ್‌ಗಳು ಹಾಗೂ ‘ಚುರುಕಿನ ಕಾರ್ಯಾಚರಣೆ’ ನಡೆಸಿ ಮಾಡಿದ ರನೌಟ್‌ಗಳು ಇವರೊಳಗೆ ಪ್ರಬುದ್ಧ ಆಟಗಾರ ಇರುವುದನ್ನು ಬಿಂಬಿಸಿತು. ಆದರೆ ಡ್ರೆಸಿಂಗ್‌ ಕೊಠಡಿಗೆ ಬಂದು ಬಲಗಾಲಿಗೆ ಜೋಡಿಸಿ ರುವ ಕೃತಕ ಅಂಗವನ್ನು ತೆಗೆದಿರಿಸಿ ಕುಳಿತು ಕೊಳ್ಳುವ ಇವರನ್ನು ನೋಡಿದರೆ ಅಚ್ಚರಿಯಾಗು ತ್ತದೆ.

ಕಾಲಿನ ಪಾದ ತಿರುಚಿದ್ದರೂ ವೇಗವಾಗಿ ಓಡಿ ಚೆಂಡನ್ನು ತಡೆಯುವ ರಫೀಕುಲ್‌ ಇಸ್ಲಾಂ, ದೇವಬ್ರತ್‌ ರಾಯ್‌, ಒಂದೇ ಕೈಯಲ್ಲಿ ಸ್ಫೋಟಕ ಹೊಡೆತಗಳನ್ನು ಹೊಡೆಯಬಲ್ಲ ಗುಜರಾತ್‌ ತಂಡದ ಸಾಹೀಬ್‌ ಅಂಜುಮ್‌, ಬಲಗೈ ಮಣಿ ಗಂಟಿನ ಕೆಳಗೆ ಕತ್ತರಿಸಿ ಹೋಗಿದ್ದರೂ ಎಡಗೈ ಯಲ್ಲಿ ಬ್ಯಾಟಿಂಗ್‌ ಮತ್ತು ವೇಗದ ಬೌಲಿಂಗ್ ಮಾಡಬಲ್ಲ ವಿದರ್ಭದ ಶಹಾಬ್‌, ಆಂಧ್ರ ತಂಡದ ವಿಕೆಟ್‌ ಕೀಪರ್‌ ಪೋಲಿಯೊ ಪೀಡಿತ ವಿಜಯ್‌, ಆಕರ್ಷಕ ಶೈಲಿಯಲ್ಲಿ ಎಡಗೈ ಸ್ಪಿನ್‌ ಮಾಡುವ ಆಂಧ್ರ ತಂಡದ ನಾಯಕ ಸುಬ್ಬಾರಾವ್‌, ವೇಗಿಗಳಾದ ವಿದರ್ಭದ ಶಿವ ನಾರಾಯಣ್‌, ತಮಿಳುನಾಡಿನ ವಿ.ಹರಿ, ಹೀಗೆ ವೈಕಲ್ಯ  ಮರೆತು ಮೈದಾನದಲ್ಲಿ ಮಿಂಚು ಹರಿಸಿದ ವರು ಒಬ್ಬರಲ್ಲ, ಇಬ್ಬರಲ್ಲ, ಅನೇಕ ಮಂದಿ.

ಬಾಲ್ಯದಲ್ಲೇ ಅಂಗವಿಕಲರಾದವರು, ಕೆಲಸದ ನಡುವೆ ಅಥವಾ ವಾಹನ ಅಪಘಾತದಲ್ಲಿ ಅಂಗ ಊನವಾದವರು, ಬೆರಳು ಮತ್ತಿತರ ಭಾಗಗಳನ್ನು ಕಳೆದುಕೊಂಡವರು ಹೀಗೆ ವಿವಿಧ ಬಗೆಯ ಅಂಗವಿಕಲರು ಮೈದಾನದಲ್ಲಿ ತಮ್ಮ ಸಾಮರ್ಥ್ಯ ವನ್ನು ಒರೆಗೆ ಹಚ್ಚುತ್ತಿದ್ದರೆ, ಪ್ರೇಕ್ಷಕರು ದಂಗಾಗಿ ದ್ದರು. ಅವರಲ್ಲಿ ಅನುಕಂಪದ ಭಾವ ದೂರವಾಗಿ ಅಭಿನಂದನೆಯ ನುಡಿ ಚಪ್ಪಾಳೆಯ ರೂಪದಲ್ಲಿ ಹೊರಹೊಮ್ಮುತ್ತಿತ್ತು.

ದಕ್ಷಿಣ ವಲಯದಿಂದ ಅರ್ಹತೆ ಪಡೆಯದ ಕರ್ನಾಟಕ ತಂಡ ಟೂರ್ನಿಯಲ್ಲಿ   ಇರಲಿಲ್ಲವಾ­ದ­ರೂ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ವಿದರ್ಭ ಒಳಗೊಂಡಂತೆ ಎಂಟು ತಂಡಗಳ ಆಟಗಾ­ರರು ಸ್ಪರ್ಧಾತ್ಮಕ ಕ್ರಿಕೆಟ್‌ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. 

ಹೆಚ್ಚಿನ ತಂಡಗಳಲ್ಲಿ ಅಂಗವಿಕಲ ಕ್ರಿಕೆಟ್‌ ಆಟ­ಗಾರರಿಗೆ ಅವರ ಕೋಚ್‌ಗಳೇ ಪೋಷಕರು. ಕೆಲ­ವರು ಉದ್ಯೋಗ ಮಾಡುತ್ತಿದ್ದರೂ ಅಂಗವಿಕಲ ಎನ್ನುವ ಕಾರಣಕ್ಕೆ ಸಮರ್ಪಕವಾದ ವೇತನ ಸಿಗುವು­ದಿಲ್ಲ. ದೈಹಿಕ ನ್ಯೂನತೆಯ ಜೊತೆಗೆ ಸಮಾಜದ ಕೆಟ್ಟ ನೋಟದ ಬರೆಯೂ ಸೇರಿ ದೇಹ, ಮನಸ್ಸು ಜರ್ಝರಿತವಾಗಿದ್ದರೂ ಮೈದಾನಕ್ಕೆ ಇಳಿದಾಗ ಈ ಆಟಗಾರರು ಸಂಪೂರ್ಣ ಬದಲಾಗುತ್ತಾರೆ.

ಫೀಲ್ಡರ್‌ಗಳು ಮಾಡುವ ಡೈವ್‌ಗಳು ಬೆಚ್ಚಿ ಬೀಳಿ­ಸುತ್ತವೆ. ರನ್‌ಗಾಗಿ ಓಡುವ ಬ್ಯಾಟ್ಸ್‌ಮನ್‌ ಗಳ ಚುರುಕು ಅಚ್ಚರಿ ಮೂಡಿಸುತ್ತದೆ. ಒಂದು ಕಾಲಿನ ಮೇಲೆ ದೇಹದ ಭಾರ ಹಾಕಿ ಮಾಡುವ ಡ್ರೈವ್‌­ಗಳು ಮತ್ತು ಸ್ವೀಪ್‌ಗಳು ಬೆರಗು ಮೂಡಿಸುತ್ತವೆ. ರಿವರ್ಸ್‌ ಹಿಟ್‌ ಮಾಡಬಲ್ಲ ಆಂಧ್ರಪ್ರದೇಶದ ರೋಸಿ ರೆಡ್ಡಿ ಅವರಂಥ ಆಟಗಾರರು ಅಂಗವಿಕಲ­ತೆಗೇ ಸಡ್ಡು ಹೊಡೆದು ನಿಂತಿದ್ದಾರೆ. ಬೌಂಡರಿ ಗೆರೆ­ಯ ಬಳಿಯಲ್ಲೂ ಒಂಟಿ ಕೈಯಲ್ಲಿ ಕ್ಯಾಚ್‌ ಪಡೆಯ­ಬಲ್ಲ ದೇವಬ್ರತ್‌ ರಾಯ್ ಅವರಂಥ ಆಟಗಾರರು ಜಗವನ್ನೇ ಗೆಲ್ಲಬಲ್ಲ ಮನೋಬಲ ಹೊಂದಿದ್ದಾರೆ.

ಸಮಾಗಮ: ಅಂಗವಿಕಲ ಕ್ರಿಕೆಟ್‌ಪಟುಗಳಿಗೆ ವಯಸ್ಸಿನ ಹಂಗಿಲ್ಲ. ಯುವಕ ಅಜಿತ್ ಜಯೇಶ್ವರ್‌ ಅವರಿಗೆ ಇರುವಷ್ಟೇ ಉತ್ಸಾಹ 51ರ ಹರೆಯದ ಡಾ. ಮಹಮ್ಮದ್‌ ನಯೀಮ್‌ ಅಕ್ತರ್‌ ಅವರಲ್ಲೂ ಕಾಣಸಿಗುತ್ತದೆ. ಹಿರಿಯರು, ಕಿರಿಯರಿಗೆ ಪ್ರೇರಕ ಶಕ್ತಿ. ಕಿರಿಯರು ಹಿರಿಯರ ಉತ್ಸಾಹಕ್ಕೆ ಟಾನಿಕ್‌. ಹೀಗಿದೆ ಇವರ ಸಮೀಕರಣ.

‘ಕ್ರಿಕೆಟ್‌ನಿಂದ ಫಿಟ್‌ನೆಸ್‌, ಮಾನಸಿಕ ನೆಮ್ಮದಿ ಸಿಗುತ್ತಿದೆ. ನಮ್ಮಂಥ ಹಿರಿಯರು ಆಡಿದರೆ ಹುಡುಗರು ಇನ್ನಷ್ಟು ಉತ್ಸಾಹದಿಂದ ಅಂಗಣದಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದು ಮಹಮ್ಮದ್‌ ಹೇಳಿದರೆ, ಹಿರಿಯರೊಂದಿಗೆ ಸೇರಿ ಆಡುವಾಗ ಆತ್ಮಬಲ ಹೆಚ್ಚುತ್ತದೆ, ಇಂಥ ಅಪರೂಪದ ಅವಕಾಶ ಒದಗಿಸಲು ಕ್ರೀಡೆಗೆ ಮಾತ್ರ ಸಾಧ್ಯ’ ಎಂದು ಶಹಾಬ್‌ ನುಡಿಯುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.