ADVERTISEMENT

ಸಾಧನೆಗೆ ಸಂದ ಪ್ರಶಸ್ತಿ

ಪ್ರಮೋದ ಜಿ.ಕೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST
ಸಾಧನೆಗೆ ಸಂದ ಪ್ರಶಸ್ತಿ
ಸಾಧನೆಗೆ ಸಂದ ಪ್ರಶಸ್ತಿ   

`ಈಗಿನ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮುಂದೆ ಇರುತ್ತಾರೆ ಎಂದು ಹೇಳಲಾಗದು. ಕೆಲವರು ಆಟದಲ್ಲಿಯೂ ಅಸಾಧಾರಣ ಪ್ರತಿಭೆ ಹೊಂದಿರುತ್ತಾರೆ. ಅವರ ಆಸಕ್ತಿಗೆ ತಕ್ಕ ವೇದಿಕೆ ಒದಗಿಸಿಕೊಡಬೇಕು. ಅಂದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ~

ಹೀಗೆ ಹೇಳುತ್ತಲೇ `ಪ್ರಜಾವಾಣಿ~ಯೊಂದಿಗೆ ಮಾತಿಗೆ ಶುರುವಿಟ್ಟರು ಅನಸೂಯಾ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬಾಗಲೂರು ನವೋದಯ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಕಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.

ತಾವು ಓದುವಾಗ ಕಬಡ್ಡಿ, ಫುಟ್‌ಬಾಲ್, ಆರ್ಚರಿ ಹಾಗೂ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಬಗ್ಗೆ ಅವರು ಆಸಕ್ತಿ ಹೊಂದಿದ್ದರು.ಆದರೂ, ಆರ್ಚರಿ ಬಗ್ಗೆ ವಿಶೇಷ ಆಸಕ್ತಿ.
 
ಪಟಿಯಾಲದಲ್ಲಿ ಆರ್ಚರಿ ಬಗ್ಗೆ ತರಬೇತಿ ಪಡೆದಿರುವ ಬೆಂಗಳೂರಿನವರಾದ ರಾಮಕೃಷ್ಣ ಅವರ ಮೂಲಕ ಈ ಕ್ರೀಡೆಯನ್ನು ಕಲಿತುಕೊಂಡರು.

ಇದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಾನ್ಯತೆ ಸಿಗಬೇಕು ಎನ್ನುವುದು ಈ ಶಿಕ್ಷಕಿಯ ಆಶಯ. ಹರಿಯಾಣ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಸಹ ಕಬಡ್ಡಿ ಹಾಗೂ ಫುಟ್‌ಬಾಲ್‌ನಲ್ಲಿ ಪ್ರತಿನಿಧಿಸಿದ್ದರು.

ವಿದ್ಯಾರ್ಥಿ ದೆಸೆಯಲ್ಲಿ ಕಲಿತುಕೊಂಡ ಕ್ರೀಡೆಯ ಕೌಶಲಗಳನ್ನು ಈಗ ತಮ್ಮ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಎಲ್ಲರ ಗಮನಿಸುವಂತೆ ಸಾಧನೆ ಮಾಡಿದ್ದಾರೆ. ಬದುಕಿಗೆ ಹಾದಿ ಮಾಡಿಕೊಂಡಿದ್ದಾರೆ.

ಈ ಮೊದಲು 2003-04ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ದೈಹಿಕ ಶಿಕ್ಷಕಿ ಪ್ರಶಸ್ತಿ ಸಿಕ್ಕಿತ್ತು. ಮತ್ತೆ ಈಗ 2010-11ರಲ್ಲಿ ದೊರೆತಿದೆ. ಎಸ್‌ಜಿಎಫ್‌ಐ, ಎನ್‌ವಿಎಸ್, ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಸೇರಿದಂತೆ ಇತರ ಕ್ರೀಡಾಕೂಟಗಳಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
 
ಈ ಪರಿಣಾಮವಾಗಿ ಸಾಕಷ್ಟು ಪ್ರಶಸ್ತಿ ಹಾಗೂ ಪದಕಗಳು ಸಹ ಮಡಿಲು ಸೇರಿವೆ. ಅಷ್ಟೇ ಅಲ್ಲ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಳ್ಳಲು ಸಹ ಶಾಲೆಗಳಲ್ಲಿ ಕ್ರೀಡೆಯಲ್ಲಿ ಮಾಡಿದ ಸಾಧನೆಗಳು ವಿದ್ಯಾರ್ಥಿಗಳಿಗೆ ನೆರವಾಗಿವೆ.

ಈ ಎಲ್ಲಾ ಸಾಧನೆಗೆ ಇಂಬು ನೀಡುವಂತೆ, ಎನ್‌ಸಿಸಿ ತರಬೇತಿ (ವೈಮಾನಿಕ) ಸಹ ಕೊಟ್ಟಿದ್ದಾರೆ. ಅಖಿಲ ಭಾರತ ವಾಯು ಸೈನಿಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದೇ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಪುದುಚೇರಿಯ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅನುಸೂಯಾ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

`ಈ ಪ್ರಶಸ್ತಿಗಿಂತ ನನ್ನ ಮಾರ್ಗದರ್ಶನದಲ್ಲಿ ಕಲಿತ ವಿದ್ಯಾರ್ಥಿಗಳು ಭವಿಷ್ಯ ಉತ್ತಮವಾದರೆ, ಅದಕ್ಕಿಂದ ಹೆಚ್ಚಿನ ಪ್ರಶಸ್ತಿ ಇನ್ನೊಂದಿಲ್ಲ. ಕ್ರೀಡೆ ಕೇವಲ ದೈಹಿಕ ಕಸರತ್ತಿಗೆ, ಮನರಂಜನೆಗೆ ಆಗಬಾರದು.

ಅದರಿಂದ ಬದುಕು ರೂಪಿಸಿಕೊಳ್ಳುವಂತಾಗಬೇಕು. ಇದರಿಂದ ಇನ್ನೂ ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಗಮನ ಹರಿಸುತ್ತಾರೆ~ ಎನ್ನುವುದು ಅನಸೂಯಾ ಅವರ ನುಡಿ.

ಕೇವಲ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಸೌಲಭ್ಯಗಳು ಸಿಗುತ್ತವೆ. ಇದರಿಂದ ಗ್ರಾಮೀಣ ಭಾಗದವರಿಗೆ ಪ್ರತಿಭೆ ಇದ್ದರೂ, ತೋರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯು ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ತರಬೇತಿ ನೀಡುವ ಕುರಿತು ಯೋಜನೆ ರೂಪಿಸಲಾಗುತ್ತದೆ. ಅವರಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹ ನೆರವಾಗಬೇಕು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.