ADVERTISEMENT

ಬಿಜೆಪಿಗೆ ಒಲಿದ ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅತಿ ಹೆಚ್ಚು ಸದಸ್ಯರನ್ನು (102) ಹೊಂದಿದ್ದರೂ ಸ್ವಯಂಕೃತ ತಪ್ಪುಗಳಿಂದಾಗಿ ನಾಲ್ಕು ಅವಧಿಯಲ್ಲಿ ಮೇಯರ್‌ ಗಾದಿಯಿಂದ ದೂರವೇ ಉಳಿದಿದ್ದ ಬಿಜೆಪಿ ಈ ಬಾರಿ ಗೆಲುವಿನ ದಡ ಸೇರುವ ತವಕದಲ್ಲಿದೆ. ಕಾಂಗ್ರೆಸ್‌ ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದೆ. ಮೈತ್ರಿಕೂಟದಿಂದ ಆರ್‌.ಎಸ್‌.ಸತ್ಯನಾರಾಯಣ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಮೇಯರ್–ಉಪಮೇಯರ್ ಚುನಾವಣೆಯ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 8:45 IST
Last Updated 1 ಅಕ್ಟೋಬರ್ 2019, 8:45 IST

ಮೇಯರ್ ಹುದ್ದೆಗೆ ಗೌತಮ್: ಬಿಜೆಪಿ ಲಾಜಿಕ್ ವಿವರಿಸಿದ ಅಶ್ವತ್ಥನಾರಾಯಣ

‘ಶಾಸಕ, ಮಂತ್ರಿಗಳಿರುವ ಕ್ಷೇತ್ರದಲ್ಲಿನ ವಾರ್ಡ್‌ಗಳ ಸದಸ್ಯರನ್ನು ಮೇಯರ್ ಹುದ್ದೆಗೆ ಪರಿಗಣಿಸಿಲ್ಲ. ಮಂತ್ರಿಗಳಿಲ್ಲದ ಕ್ಷೇತ್ರದ ವಾರ್ಡ್‌ನ ಸದಸ್ಯರನ್ನು ಪರಿಗಣಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.

ಬಿಜೆಪಿ ಅಭ್ಯರ್ಥಿ ರಾಮಮೋಹನ್ ರಾಜು ಉಪಮೇಯರ್

ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೋಹನ್‌ರಾಜು ಪರ 129 ಹ‍ಾಗೂ ವಿರುದ್ಧವಾಗಿ 110 ಮತಗಳು ಚಲಾವಣೆಯಾಗಿವೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಗಂಗಮ್ಮ ಪರ 112 ಹಾಗೂ ವಿರುದ್ಧವಾಗಿ 129 ಮತ ಚಲಾವಣೆಗಿದೆ.

ಡೆಲ್ಲಿಯಿಂದ ಗಲ್ಲಿವರೆಗೂ ಬಿಜೆಪಿ: ಅಶೋಕ್ 

ದೇಶ, ರಾಜ್ಯ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಆಡಳಿತ ಇರಬೇಕು ಎಂಬ ಬಯಕೆ ಇತ್ತು. ಅದು ಈಗ ಈಡೇರಿದೆ. ಡೆಲ್ಲಿಯಿಂದ ಗಲ್ಲಿವರೆಗೂ ಬಿಜೆಪಿ ಬಾವುಟ ಹಾರುತ್ತಿದೆ ಎಂದು ಕಂದಾಯ ಸಚಿವ, ಚುನಾವಣೆಗೆ ಸರ್ಕಾರದಿಂದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಆರ್. ಅಶೋಕ್ ಹೇಳಿದರು.

ADVERTISEMENT

‘ಬೆಂಗಳೂರಿನ ಅಭಿವೃದ್ಧಿಗೆ ದುಡಿಯುತ್ತೇನೆ’

‘ಮೇಯರ್ ಕನ್ನಡಿಗರಲ್ಲ’ ಎಂದ ವಾಟಾಳ್‌ಗೆ ಸದಾನಂದಗೌಡ ತಿರುಗೇಟು

‘ಎಲ್ಲದರಲ್ಲೂ ಹುಳುಕು ಹುಡುಕಬೇಡಿ.
ಗೌತಮ್ ಕನ್ನಡಿಗರಲ್ಲ ಎಂದು ಹೇಳುವುದು ಸರಿಯಲ್ಲ. ಅವರನ್ನು ಬಹುಮತದಿಂದ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ. ಗೌಡರಿಗೆ ಅನ್ಯಾಯವಾಗಿದೆ, ಲಿಂಗಾಯತರಿಗೆ ಮೋಸವಾಗಿದೆ ಎಂದೆಲ್ಲ ಹೇಳುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಉಪಮೇಯರ್: ಮೈತ್ರಿಯಿಂದ ಗಂಗಮ್ಮ, ಬಿಜೆಪಿಯಿಂದ ರಾಮಮೋಹನ್‌ರಾಜು

ಉಪಮೇಯರ್‌ ಸ್ಥಾನದ ಉಮೇದುವಾರರಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ  ಗಂಗಮ್ಮ ಮತ್ತು ಬಿಜೆಪಿಯಿಂ ರಾಮಮೋಹನ್‌ ರಾಜು ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಉಪ ಮೇಯರ್‌ ಸ್ಥಾನ ಒಲಿಯುವುದು ಬಹುತೇಕ ಖಚಿತ.

ನಿಷ್ಠ ಆರ್‌ಎಸ್‌ಎಸ್‌ ಕಾರ್ಯಕರ್ತ

ಬಿಜೆಪಿ ಬೆಂಗಳೂರು ಕಾರ್ಯದರ್ಶಿಯಾಗಿದ್ದ ಗೌತಮ್ ಜೈನ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್‌ಎಸ್‌ಎಸ್‌ ಹಿನ್ನೆಲೆಯೂ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಗೌತಮ್‌ಕುಮಾರ್ ಜೈನ್ ಪರಿಚಯ

ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಜೈನ್  ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.

ಯಡಿಯೂರಪ್ಪ–ಮೋದಿಗೆ ಒಳ್ಳೇ ಹೆಸರು ತರ್ತೀನಿ

‘ನಮ್ಮ ನಾಯಕರಾದ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರಿಗೆ ಒಳ್ಳೇ ಹೆಸರು ಬರುವಂತೆ ಕೆಲಸ ಮಾಡುತ್ತೇನೆ. ಇದು ನಮ್ಮ ಬೆಂಗಳೂರು, ನಾವು ಚೆನ್ನಾಗಿ ಕಟ್ತೀವಿ’ –ಗೌತಮ್‌ಕುಮಾರ್‌

ಇದು ಪಕ್ಷ ಕೊಟ್ಟ ಸ್ಥಾನ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಾಲಿಕೆ ಸದಸ್ಯನಾಗುವ ಕನಸೇ ನನಗಿರಲಿಲ್ಲ. ಅಂಥದ್ದರಲ್ಲಿ ಪಕ್ಷ–ಸಂಘಟನೆಗೆ ನನಗೆ ಮೇಯರ್‌ ಸ್ಥಾನ ಕೊಟ್ಟಿದೆ. ನಾನು ಕೃತಜ್ಞನಾಗಿರುತ್ತೇನೆ.

ಟ್ರಾಫಿಕ್–ಪ್ಲಾಸ್ಟಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ: ಹೊಸ ಮೇಯರ್ ಘೋಷಣೆ

ಬೆಂಗಳೂರು ನಗರವನ್ನು ಬಾಧಿಸುತ್ತಿರುವ ಪ್ಲಾಸ್ಟಿಕ್ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಬಿಬಿಎಂಪಿ ನೂತನ ಮೇಯರ್ ಆಗಿ ಆಯ್ಕೆಯಾದ ಗೌತಮ್‌ಕುಮಾರ್‌ ಹೇಳಿದರು.

ಗುಜರಾತ್‌ ಮೂಲದ ವ್ಯಕ್ತಿಗೆ ಮೇಯರ್ ಸ್ಥಾನ: ವಾಟಾಳ್ ನಾಗರಾಜ್ ಖಂಡನೆ

ಗುಜರಾತ್ ಮೂಲದ ಗೌತಮ್ ಕುಮಾರ್ ಜೈನ್ ಅವರನ್ನು ಮೇಯರ್ ಮಾಡಿದ ಬಿಜೆಪಿಗೆ ಧಿಕ್ಕಾರ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆವರಣಕ್ಕೆ ಬೆಂಬಲಿಗರೊಂದಿಗೆ ಬಂದ ವಾಟಾಳ್ ನಾಗರಾಜ್ ಭಾವಿ ಮೇಯರ್ ಗೆ ಧಿಕ್ಕಾರ ಎಂದು ಕೂಗಿದರು.

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ

ಬಿಜೆಪಿ ಕಾರ್ಯಕರ್ತರಿಂದ ವಂದೇ ಮಾತರಂ ಘೋಷಣೆ, ಭಾರತ್ ಮಾತಾ ಕಿ ಜೈ ಎನ್ನುತ್ತಿರುವ ಕಾರ್ಯಕರ್ತರು. ಗೌತಮ್ ಕುಮಾರ್ ಜೈನ್ ಗೆ ಜೈ ಎಂಬ ಘೋಷಣೆಯೂ ಮೊಳಗುತ್ತಿದೆ.

ಉಪಮೇಯರ್ ಚುನಾವಣೆ ಪ್ರಕ್ರಿಯೆ ಆರಂಭ

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಗುರುಮೂರ್ತಿ ರೆಡ್ಡಿ ಮತ್ತು ಮಹಾಲಕ್ಷ್ಮೀ ರವೀಂದ್ರ ನಾಮಪತ್ರ ಹಿಂಪಡೆದರು. ಉಪಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ರಾಮಮೋಹನ್‌ರಾಜು ಕಣದಲ್ಲಿದ್ದಾರೆ.

ಗೌತಮ್‌ಕುಮಾರ್‌ ಈಗ ಬಿಬಿಎಂಪಿ ಮೇಯರ್

ಬಿಜೆಪಿಯ ಗೌತಮ್‌ ಕುಮಾರ್ 129 ಮತಗಳು, ಕಾಂಗ್ರೆಸ್‌ನ ಆರ್.ಎಸ್.ಸತ್ಯನಾರಾಯಣ 112 ಮತಗಳನ್ನು ಪಡೆದುಕೊಂಡಿದ್ದಾರೆ.

ಗೌತಮ್‌ಕುಮಾರ್‌ ಈಗ ಬಿಬಿಎಂಪಿ ಮೇಯರ್

ಗೌತಮ್‌ ಕುಮಾರ್ ಪರ 129 ಮತಗಳು ಚಲಾವಣೆಯಾಗಿವೆ. ವಿರುದ್ಧ ಚಲಾವಣೆಯಾದ ಮತಗಳ ಸಂಖ್ಯೆ 110. ಅತಿಹೆಚ್ಚು ಮತ ಪಡೆದ ಗೌತಮ್‌ಕುಮಾರ್ ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಘೋಷಣೆ ಮಾಡಿದರು.

ಗೌತಮ್‌ ಕುಮಾರ್‌ಗೆ ಬಿಜೆಪಿ ನಾಯಕರ ಅಭಿನಂದನೆ

ಬಿಜೆಪಿ ಹಿರಿಯ ನಾಯಕರ ಕೈಕುಲುಕುತ್ತಿರುವ ಗೌತಮ್‌ಕುಮಾರ್.

ಮ್ಯಾಜಿಕ್ ಸಂಖ್ಯೆ 124

ಗೈರು ಹಾಜರಾಗಿರುವವರ ಲೆಕ್ಕ ಹಿಡಿದು ನೋಡಿದರೆ ಇಂದು ಮೇಯರ್, ಉಪಮೇಯರ್ ಸ್ಥಾನಕ್ಕೆ ಮ್ಯಾಜಿಕ್ ಸಂಖ್ಯೆ 124. ಇಂದು ಸಭೆಗೆ ಹಾಜರಾಗಿರುವವರ ಒಟ್ಟು ಸಂಖ್ಯೆ 249. ಬಿಜೆಪಿ 124, ಕಾಂಗ್ರೆಸ್ 100, ಜೆಡಿಎಸ್ 18 ಮತ್ತು ಇತರರು 7 ಸದಸ್ಯರು ಪಾಲ್ಗೊಂಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ ಐವರು ಪಕ್ಷೇತರ ಸದಸ್ಯರು.

ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ ಐವರು ಪಕ್ಷೇತರ ಸದಸ್ಯರು.

ಗೌತಮ್‌ಕುಮಾರ್ ಪರ ಮತ ಚಲಾವಣೆ ಪ್ರಕ್ರಿಯೆ ಆರಂಭ

ಬಿಜೆಪಿ ಉಮೇದುವಾರ ಗೌತಮ್‌ಕುಮಾರ್ ಪರ ಚಲಾವಣೆಯಾದ ಮತಗಳ ವಿವರ ಪಡೆದುಕೊಳ್ಳುತ್ತಿರುವ ಅಧಿಕಾರಿಗಳು.

ಕಾಂಗ್ರೆಸ್‌ನ ಸತ್ಯನಾರಾಯಣ್ ಪರ ಮತದಾನ ಪ್ರಕ್ರಿಯೆ ಪೂರ್ಣ

ಕಾಂಗ್ರೆಸ್‌ನ ಸತ್ಯನಾರಾಯಣ್ ಪರ ಮತದಾನ ಪ್ರಕ್ರಿಯೆ ಪೂರ್ಣ. ಇದೀಗ ವಿರೋಧದ ಮತದಾನ ಪ್ರಕ್ರಿಯೆ ಆರಂಭ. ವಿರೋಧ ವ್ಯಕ್ತಪಡಿಸುವವರಿಂದ ಸಹಿ ಪಡೆದುಕೊಳ್ಳುತ್ತಿರುವ ಸಿಬ್ಬಂದಿ.

‘ಜೆಡಿಎಸ್‌ನ ಇನ್ನಷ್ಟು ಸದಸ್ಯರು ಮತದಾನ ಪ್ರಕ್ರಿಯೆ ಬಹಿಷ್ಕರಿಸಲಿದ್ದಾರೆ’

‘ಜೆಡಿಎಸ್‌ನ ಇನ್ನಷ್ಟು ಸದಸ್ಯರು ಮತದಾನ ಪ್ರಕ್ರಿಯೆ ಬಹಿಷ್ಕರಿಸಲಿದ್ದಾರೆ’ –ಸಭೆಯಿಂದ ಹೊರನಡೆದ ಕಾರ್ಪೊರೇಟರ್ ಮಂಜುಳಾ ಹೇಳಿಕೆ.

ಮತದಾನ ಪ್ರಕ್ರಿಯೆ

ಬಿಬಿಎಂಪಿ ಸಭಾಂಗಣದಲ್ಲಿ ನಡೆಯುತ್ತಿರುವ ಮೇಯರ್‌ ಆಯ್ಕೆ ಮತದಾನ ಪ್ರಕ್ರಿಯೆ.

ಚುನಾವಣೆ ಬಹಿಷ್ಕರಿಸಿದ ಜೆಡಿಎಸ್‌ನ ಇಬ್ಬರು ಸದಸ್ಯರು

ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ಬಿಬಿಎಂಪಿ ಮೇಯರ್–ಉಪಮೇಯರ್ ಚುನಾವಣೆ ಬಹಿಷ್ಕರಿಸಿ ಹೊರ ನಡೆದರು.

ಕಾಂಗ್ರೆಸ್ ಅಭ್ಯರ್ಥಿ ಪರ ಚಲಾವಣೆಯಾದ ಮತಗಳ ಎಣಿಕೆ ಆರಂಭ

ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಪರ ಚಲಾವಣೆಯಾದ ಮತಗಳನ್ನು ಎಣಿಸುತ್ತಿರುವ ಅಧಿಕಾರಿಗಳು.

ಸಹಿ ಪಡೆದುಕೊಳ್ಳುತ್ತಿರುವ ಅಧಿಕಾರಿಗಳು

ಮೇಯರ್ ಉಮೇದುವಾರರ ಪರ ಇರುವವರಿಂದ ಸಹಿ ಪಡೆದುಕೊಳ್ಳುತ್ತಿರುವ ಅಧಿಕಾರಿಗಳು.

ಮ್ಯಾಜಿಕ್ ಸಂಖ್ಯೆ 129

ಬಿಬಿಎಂಪಿ ಚುಕ್ಕಾಣಿ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆ 129. ಯಾವ ಪಕ್ಷಕ್ಕೂ ಅಷ್ಟು ಬಲ ಇಲ್ಲ. ಸದಸ್ಯ ಬಲದ ವಿವರ ಇಂತಿದೆ: ಬಿಜೆಪಿ 125, ಕಾಂಗ್ರೆಸ್ 104, ಜೆಡಿಎಸ್ 21, ಇತರರು 7.

ಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ

ಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಮೊದಲು ಕೈ ಎತ್ತುವ ಮೂಲಕ ಸದಸ್ಯರು ತಮ್ಮ ಬೆಂಬಲ ಸೂಚಿಸಲಿದ್ದಾರೆ. ನಂತರ ಪುಸ್ತಕದಲ್ಲಿ ತಮ್ಮ ಮತ ದಾಖಲಿಸಲಿದ್ದಾರೆ.

ನಾಮಪತ್ರ ಹಿಂಪಡೆದ ಪದ್ಮನಾಭರೆಡ್ಡಿ

ನಾಮಪತ್ರ ಹಿಂಪಡೆದ ಬಿಜೆಪಿಯ ಪದ್ಮನಾಭರೆಡ್ಡಿ.

ಉಪಸ್ಥಿತರಿರುವ ಕಾಂಗ್ರೆಸ್ ಸಂಸದರು

ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ ಉಪಸ್ಥಿತಿ.

ನಾಮಪತ್ರ ಹಿಂಪಡೆಯಲು ಅವಕಾಶ

ನಾಮಪತ್ರ ಹಿಂಪಡೆಯಲು ಎರಡು ನಿಮಿಷಗಳ ಅವಕಾಶವಿದೆ ಎಂದ ಹರ್ಷಗುಪ್ತ.

ಮೂವರ ನಾಮಪತ್ರ ಸರಿಯಿದೆ ಎಂದ ಹರ್ಷಗುಪ್ತ

ಕಾಂಗ್ರೆಸ್ ಉಮೇದುವಾರ ಸತ್ಯನಾರಾಯಣ, ಬಿಜೆಪಿ ಉಮೇದುವಾರರಾದ ಗೌತಮ್ ಜೈನ್ ಮತ್ತು ಪದ್ಮನಾಭರೆಡ್ಡಿ ಅವರ ನಾಮಪತ್ರಗಳು ಸಿಂಧು (ಸರಿಯಿವೆ) ಎಂದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ.

ಕಾಂಗ್ರೆಸ್ ಸಂಸದರು ಗೈರು

ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶ್, ಜೈರಾಮ ರಮೇಶ್, ಕೆ.ಸಿ.ರಾಮಮೂರ್ತಿ ಗೈರು.

ಫಲಿತಾಂಶ ಘೋಷಣೆಗೆ ಕಾಯುತ್ತಿರುವ ಕಾರ್ಯಕರ್ತರು

ಯಾರಾಗುತ್ತಾರೆ ಮೇಯರ್ ಎಂಬ ನಿರೀಕ್ಷೆಯಲ್ಲಿರುವ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರು. ಫಲಿತಾಂಶ ಘೋಷಣೆಗೆ ಕಾಯುತ್ತಿದ್ದಾರೆ.

ಬಿಬಿಎಂಪಿಯಲ್ಲಿ ಬಣ್ಣದ ರಾಜಕೀಯ 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಅದೇ ಹೊತ್ತಲ್ಲೇ ಪಾಲಿಕೆ ಸಭಾಂಗಣದಲ್ಲಿ ಬಣ್ಣದ ರಾಜಕಾರಣವೂ ಕಾಣಿಸಿಕೊಂಡಿದೆ. 

ಕಾಂಗ್ರೆಸ್‌ನ ಕಾರ್ಪೊರೇಟರ್‌ಗಳು ಕೇಸರು, ಬಿಳಿ, ಹಸಿರು ಬಣ್ಣಗಳುಳ್ಳ ತ್ರಿವರ್ಣದ ಶಾಲುಗಳನ್ನು ಹೊದ್ದು ಚುನಾವಣೆಗಾಗಿ ಪಾಲಿಕೆ ಸಭಾಂಗಣಕ್ಕೆ ಆಗಮಿಸಿದರು.

ಶಾಲಿನ ವಿಚಾರದಲ್ಲಿ ಕಾಂಗ್ರೆಸ್‌ ನಡೆಯನ್ನೇ ಅನುಸರಿಸಿದ ಬಿಜೆಪಿ ನಾಯಕರು ಕೂಡಲೇ ಕೇಸರಿ ಬಣ್ಣದ ಶಾಲುಗಳನ್ನು ಎರಡು ಚೀಲಗಳಲ್ಲಿ ತರಿಸಿ ತಮ್ಮೆಲ್ಲ ಕಾರ್ಪೊರೇಟರ್‌ಗಳಿಗೂ ಹಂಚಿದರು. ಸ್ವತಃ ಬಿಜೆಪಿಯ ಉಪಮೇಯರ್ ಅಭ್ಯರ್ಥಿ ರಾಮ್ ಮೋಹನ್ ರಾಜ್ ಅವರೇ ಕೇಸರಿ ಶಾಲುಗಳನ್ಗನು ಬಿಬಿಎಂಪಿ ಕೌನ್ಸಿಲ್ ಸಭಾಂಗಣಕ್ಕೆ ಹೊತ್ತು ತಂದರು. 

ಜೆಡಿಎಸ್‌ ಸದಸ್ಯರು ಹಸಿರು ಬಣ್ಣದ ಶಾಲು ಹೊದ್ದು ಬಂದಿದ್ದರು. 

ಬೇರೆ ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಹರ್ಷಗುಪ್ತ

ಅನರ್ಹ ಶಾಸಕರ ಬೆಂಬಲಿಗರ ಆಕ್ಷೇಪ, ಕಾಂಗ್ರೆಸ್‌ ಸದಸ್ಯರ ಚರ್ಚೆಯ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ.

ಅನರ್ಹ ಶಾಸಕರ ಬೆಂಬಲಿಗರ ಒತ್ತಾಯ

ಮೇಯರ್–ಉಪಮೇಯರ್ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಅನರ್ಹ ಶಾಸಕರ ಬೆಂಬಲಿಗರ ಒತ್ತಾಯ.

ಪಾಲಿಕೆ ಸಭೆಯಲ್ಲಿ ಧ್ವನಿಸಿದ ಶಾಸಕರ ಅನರ್ಹತೆ ಪ್ರಕರಣ

ಪಾಲಿಕೆ ಸಭೆಯಲ್ಲಿ ಧ್ವನಿಸಿದ ಶಾಸಕರ ಅನರ್ಹತೆ ಪ್ರಕರಣ. ‘ನ್ಯಾಯಾಲಯಕ್ಕೆ ಹೋಗಿಯೇ ನ್ಯಾಯ ಪಡೆಯಬೇಕು ಎಂದಿಲ್ಲ’ ಎಂದ ಸದಸ್ಯರು.

ಚುನಾವಣೆ ಪ್ರಕ್ರಿಯೆಗೆ ಮಾತ್ರ ಅವಕಾಶ ಎಂದ ಹರ್ಷಗುಪ್ತ

ಚುನಾವಣೆ ಪ್ರಕ್ರಿಯೆ ಬಿಟ್ಟು ಯಾವುದೇ ಚರ್ಚೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಹರ್ಷಗುಪ್ತ. ನೀವು ಮೊದಲೇ ಚರ್ಚೆ ಮಾಡಬೇಕು ಎನಿಸಿದ್ದರೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಶ್ನಿಸಬೇಕಿತ್ತು.

ಉಮೇದುವಾರರ ಹೆಸರು ಓದಿದ ಹರ್ಷಗುಪ್ತ

ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಸಭೆಯ ಅಧ್ಯಕ್ಷತೆ ವಹಿಸಿ, ಉಮೇದುವಾರರ ಹೆಸರು ಓದಿದರು.

ಪಾಲಿಕೆಗೆ ಬಂದು ಹಿಂದಿರುಗಿದ ಅನರ್ಹ ಶಾಸಕರು

ಅನರ್ಹಗೊಂಡಿರುವ ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ ಪಾಲಿಕೆ ಆವರಣದವರೆಗೆ ಬಂದು ಹಿಂದಿರುಗಿದರು. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರೊಂದಿಗೆ ಬಂದಿದ್ದರು.

ಕೇಸರಿ ಶಾಲು ತಂದ ರಾಮ್‌ಮೋಹನ್ ರಾಜ್

ಬಿಜೆಪಿ ಉಪಮೇಯರ್ ಅಭ್ಯರ್ಥಿ ರಾಮ್ ಮೋಹನ್ ರಾಜ್ ಕೇಸರಿ ಶಾಲುಗಳೊಂದಿಗೆ ಬಿಬಿಎಂಪಿ ಕೌನ್ಸಿಲ್ ಸಭಾಂಗಣ ಪ್ರವೇಶಿಸಿದರು.

ಪಾಲಿಕೆ ಸಭಾಂಗಣದಲ್ಲಿ ಬಣ್ಣದ ರಾಜಕೀಯ

ಕೇಸರಿ ಬಿಳಿ ಹಸಿರು ಬಣ್ಣದ ಶಾಲು ಧರಿಸಿ ಸಭಾಂಗಣಕ್ಕೆ ಬಂದ ಕಾಂಗ್ರೆಸ್ ಸದಸ್ಯರು. ಇದನ್ನು ಕಂಡು ಕೇಸರಿ ಮತ್ತು ಹಸಿರು ಬಣ್ಣದ ಶಾಲನ್ನು ತರಿಸಿ ಹಂಚುತ್ತಿರುವ ಬಿಜೆಪಿ ಶಾಸಕರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೈರು

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೈರು

ಬಂದರು ಬಿಜೆಪಿ ಸಂಸದ, ಶಾಸಕರು

ಸಭಾಂಗಣಕ್ಕೆ ಬಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಪಿ.ಸಿ.ಮೋಹನ್, ಬಿ.ಎನ್.ಬಚ್ಚೇಗೌಡ, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಸಚಿವರಾದ ಸುರೇಶ ಕುಮಾರ್, ಆರ್.ಅಶೋಕ ಉಪಸ್ಥಿತಿ.

ವಿಡಿಯೊ: ಬಿಜೆಪಿ ನಿಲುವು ಸ್ಪಷ್ಟಪಡಿಸಿದ ಆರ್.ಅಶೋಕ್

ಅನರ್ಹ ಶಾಸಕ ಮುನಿರತ್ನಗೆ ಪ್ರವೇಶ ನಿರಾಕರಣೆ

ಎಲೆಕ್ಷನ್ ಪಾಸ್ ಇಲ್ಲದ ಕಾರಣ ರಾಜರಾಜೇಶ್ವರಿನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರಿಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಬಿಬಿಎಂಪಿ ಸಭಾಂಗಣ ಪ್ರವೇಶಿಸಲು ಅವಕಾಶ ಸಿಗಲಿಲ್ಲ.

ಹಾಜರಿ ಖಾತ್ರಿಪಡಿಸಿಕೊಳ್ಳುತ್ತಿರುವ ಅಶೋಕ್

ಬಿಜೆಪಿ ಎಲ್ಲ ಸದಸ್ಯರು ಹಾಜರಿರುವುದನ್ನು ಖಾತರಿ ಪಡಿಸಿಕೊಳ್ಳುತ್ತಿರುವ ಶಾಸಕ ಆರ್.ಅಶೋಕ್.

ಅನರ್ಹರ ಬೆಂಗಲಿಗರು ಗೈರಾಗುವ ಸಾಧ್ಯತೆ

ಕಾಂಗ್ರೆಸ್ ವಿಪ್ ಜಾರಿ ಮಾಡಿರುವುದರಿಂದ ಅನರ್ಹ ಶಾಸಕರ ಬೆಂಬಲಿಗರು ಅವರು ಮತದಾನಕ್ಕೆ ಗೈರಾಗುವ ಸಾಧ್ಯತೆ ಹೆಚ್ಚು ಎನ್ನುವ ವಿಶ್ಲೇಷಣೆ ಚಾಲ್ತಿಯಲ್ಲಿದೆ.

ಏನು ಮಾಡ್ತಾರೆ ಅನರ್ಹರ ಬೆಂಬಲಿಗರು?

ಖಾಸಗಿ ಹೋಟೆಲ್‌ನಲ್ಲಿರುವ ಅನರ್ಹ ಶಾಸಕರ ಬೆಂಬಲಿಗರು ಸಭೆಗೆ ಬರುತ್ತರೋ ಇಲ್ಲವೋ ಎನ್ನುವ ಚರ್ಚೆ ನಡೆದಿದೆ. ಬಾರದೇ ಇದ್ದರೆ ಬಿಜೆಪಿಗೆ ಅನುಕೂಲ.

ಕಾಂಗ್ರೆಸ್‌ಗೆ ಸೋಲುವ ಭೀತಿ: ಆರ್‌.ಅಶೋಕ್

ಬಿಜೆಪಿಯನ್ನು ಆರ್ಎಸ್ಎಸ್ ನಿಯಂತ್ರಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಆರ್.ಅಶೋಕ್, ‘ನಮ್ಮನ್ನು ಪ್ರಜಾಪ್ರಭುತ್ವ ನಿಯಂತ್ರಿಸುತ್ತಿದೆ. ಬಿಬಿಎಂಪಿ ಯಾರ ಸ್ವತ್ತಲ್ಲ. ಸೋಲುವ ಭಯದಿಂದ ಕಾಂಗ್ರೆಸ್‌ನವರು ಈ ರೀತಿ ಮಾತನಾಡುತ್ತಿದ್ದಾರೆ’ ಎಂದರು.

ಗೌತಮ್‌ ಬಿಜೆಪಿ ಮೇಯರ್‌ ಅಭ್ಯರ್ಥಿ: ಗೊಂದಲಗಳಿಗೆ ತೆರೆ ಎಳೆದ ಸಚಿವ ಅಶೋಕ

ಮೇಯರ್‌ ಅಭ್ಯರ್ಥಿ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಗೌತಮ್‌ ಕುಮಾರ್‌ ಅವರೇ ನಮ್ಮ ಅಧಿಕೃತ ಅಭ್ಯರ್ಥಿ ಎಂದು ಸಚಿವ ಆರ್‌. ಅಶೋಕ ಅವರು ಹೇಳಿದ್ದಾರೆ.  

ಮೇಯರ್‌ ಹುದ್ದೆಗೆ ಬಿಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದಾಗಿ ಎದುರಾಗಿದ್ದ ಗೊಂದಳಗಳ ಹಿನ್ನೆಲೆಯಲ್ಲಿ ಮಂಗಳವಾರ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶೋಕ,  ಇಬ್ಬರು ಅಭ್ಯರ್ಥಿಗಳು 

ಇದು ಚುನಾವಣೆ. ಉಮೇದುವಾರಿಕೆಯಲ್ಲಿ ಏನಾದರೂ ಸಮಸ್ಯೆಗಳಾಗಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಾನೇ ಸೂಚನೆ ನೀಡಿದ್ದೆ. ಅದರಂತೆ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಗೌತಮ್‌ ಕುಮಾರ್‌ ಅವರೇ ಎಂದು ಅಶೋಕ ಸ್ಪಷ್ಟಪಡಿಸಿದರು. 

ಕಾರ್ಪೊರೇಟರ್‌ಗಳು, ಶಾಸಕರು, ಸಂಸದರ ಹಲವು ಸುತ್ತುಗಳ ಸಭೆಯ ನಂತರವೇ ನಾವು ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದೇವೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಕಾಂಗ್ರೆಸ್‌ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಹಾಕಿದ್ದೂ ಅಲ್ಲದೇ, ನಮ್ಮಲ್ಲಿ ಚೀಟಿ ಸಂಸ್ಕೃತಿ ಇದೆ ಎಂದು ಹೇಳಿದೆ. ಆದರೆ, ನಮ್ಮಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ಅವರ ಪಕ್ಷದಲ್ಲಿಲ್ಲ ಎಂದು ಅಶೋಕ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಜೆಡಿಎಸ್–ಕಾಂಗ್ರೆಸ್ ಮುಂದುವರಿದ ಮೈತ್ರಿ

ಚುನಾವಣಾಧಿಕಾರಿ ಹರ್ಷಗುಪ್ತ ಆಗಮನ

ಬಿಬಿಎಂಪಿ ಕೌನ್ಸಿಲ್ ಸಭಾಂಗಣಕ್ಕೆ ಬಂದ ಚುನಾವಣಾಧಿಕಾರಿ ಹರ್ಷಗುಪ್ತ

ಬಿಜೆಪಿಯಲ್ಲಿ ಗೊಂದಲವಿಲ್ಲ: ಆರ್‌.ಅಶೋಕ್

ಯಾವುದೇ ಗೊಂದಲ, ಭಿನ್ನಮತ ಇಲ್ಲ. ಬಿಜೆಪಿ ಮೇಯರ್ ಅಭ್ಯರ್ಥಿ ಗೌತಮ್ ಕು‌ಮಾರ್ ಅವರೇ ಮೇಯರ್ ಆಗಲಿದ್ದಾರೆ-  ಸಚಿವ ಆರ್. ಅಶೋಕ್ ಹೇಳಿಕೆ.

ಅನರ್ಹ ಶಾಸಕರ ಬೆಂಬಲಿಗರ ಸಭೆ

ಬಿಜೆಪಿಗೆ ಬೆಂಬಲ ಸೂಚಿಸಿರುವ ನಾಲ್ವರು ಪಕ್ಷೇತರ ಕಾರ್ಪೊರೇಟರ್‌ಗಳು ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಖಾಸಗಿ ಹೋಟೆಲ್ ನಲ್ಲಿದ್ದಾರೆ. ಅನರ್ಹ ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸುತ್ತಿದ್ದಾರೆ.

ವಿಪ್ ಜಾರಿ ಮಾಡಿದ ಜೆಡಿಎಸ್ ಮತ್ತು ಕಾಂಗ್ರೆಸ್

ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್.

ಪದ್ಮಾನಭರೆಡ್ಡಿ ಛೇಂಬರ್‌ನಲ್ಲಿ ಸಭೆ

ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಛೇಂಬರ್‌ನಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಪೊರೇಟರ್‌ಗಳು.

ಬಿಜೆಪಿ ಅಭ್ಯರ್ಥಿಯಾಗಿ ಗೌತಮ್‌ ಕುಮಾರ್‌ ಅಂತಿಮ

ಬಿಜೆಪಿ ಅಭ್ಯರ್ಥಿಯಾಗಿ ಗೌತಮ್‌ ಕುಮಾರ್‌ ಅಂತಿಮ. ಬೆಂಗಳೂರಿನ ಬಿಜೆಪಿ ನಾಯಕರು ಮತ್ತು ಕಾರ್ಪೊರೇಟರ್‌ಗಳು ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಉಪಹಾರ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸಿದ ಬಿಜೆಪಿ.

ಬಿಜೆಪಿಯ ಆರು ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿ: ಪಾಲಿಕೆ ಸದಸ್ಯ ಅಬ್ದುಲ್‌ ವಾಜಿದ್‌ ಬಾಂಬ್‌

ಬಿಜೆಪಿಯ ಆರು ಮಂದಿ ಪಾಲಿಕೆ ಸದಸ್ಯರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಆಡಳಿತ ಪಕ್ಷ ಕಾಂಗ್ರೆಸ್‌ನ ಅಬ್ದುಲ್‌ ವಾಜಿದ್‌ ಅವರು ಬಾಂಬ್‌ ಸಿಡಿಸಿದ್ದಾರೆ.

ಬಿಜೆಪಿ ಒಡೆದು ಆಳುವ ನೀತಿ ಅನುಸರಿಸಿದೆ. ಹೀಗಾಗಿ ಅವರ ಅಭ್ಯರ್ಥಿಯ ಬಗ್ಗೆ ಅಲ್ಲಿನ ಸದಸ್ಯರು ಗೊಂದಲಗೊಂಡಿದ್ದಾರೆ. ಹೀಗಾಗಿ ನಾವು ಮತ್ತೊಮ್ಮೆ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ. ನಮಗೆ ಕೊರತೆಯಾಗಿದ್ದದ್ದು ಎರಡು ವೋಟುಗಳು ಮಾತ್ರ. ಆದರೆ, ಈಗ 6 ಮಂದಿ ಬಿಜೆಪಿ ಸದಸ್ಯರು ನಮ್ಮ ಸಂಪರ್ಕ ಬಂದಿದ್ದಾರೆ ಎಂದಿದ್ದಾರೆ. 

ಕಾಂಗ್ರೆಸ್ ಸಭೆಯಲ್ಲಿ ಶಾಸಕರು

ಸರ್ವಜ್ಞ ನಗರ ಶಾಸಕ ಕೆ.ಜೆ.ಜಾರ್ಜ್‌ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಸಭೆಯಲ್ಲಿ ಬಾಗಿ.

ಕಾಂಗ್ರೆಸ್‌ನಿಂದ ಆರ್‌.ಎಸ್.ಸತ್ಯನಾರಾಯಣ ನಾಮಪತ್ರ

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಆರ್.ಎಸ್. ಸತ್ಯನಾರಾಯಣ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ಕಾರ್ಪೊರೇಟರ್‌ಗಳ ಸಭೆ

ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರ ಛೇಂಬರ್‌ನಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳ ಸಭೆ.

ಮೇಯರ್‌, ಉಮ ಮೇಯರ್‌ ಅಭ್ಯರ್ಥಿಗಳು ಸೂಚಕರು, ಅನುಮೋದಕರು

ಉಮೇದುವಾರರು ಮತ್ತು ಸೂಚಕರು, ಅನುಮೋದಕರು 

ಕಾಂಗ್ರೆಸ್‌ನ ಆರ್‌.ಎಸ್‌ ಸತ್ಯನಾರಾಯಣ ಅವರು ಎರಡು ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಮಂಜುನಾಥ್‌ ರೆಡ್ಡಿ, ಅಬ್ದುಲ್‌ ವಾಜೀದ್‌ ಅವರು ಸೂಚಕರಾಗಿ ಸಹಿ ಮಾಡಿದ್ದರೆ, ಅಂಜನಪ್ಪ ಎಂ ಮತ್ತು ಜಿ ಪದ್ಮಾವತಿ ಅವರು ಅನುಮೋದಕರಾಗಿ ಸಹಿ ಮಾಡಿದ್ದಾರೆ. 

ಬಿಜೆಪಿಯ ಪದ್ಮನಾಭ ರೆಡ್ಡಿ ಅವರೂ ಮೂರು ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಅವರಿಗೆ ವೆಂಕಟೇಶ್‌, ಲೋಕೇಶ್‌ , ಶಿವಕುಮಾರ್‌ ಕೆ. ಅವರು ಸೂಚಕರಾಗಿ ಸಹಿ ಮಾಡಿದ್ದಾರೆ. ಹನುಮಂತಯ್ಯ, ಸಂಪತ್‌ ಕುಮಾರ್‌, ಕೆಂಪೇಗೌಡ ಅವರು ಅನುಮೋದಕರಾಗಿ ಸಹಿ ಮಾಡಿದ್ದಾರೆ. 

ಬಿಜೆಪಿಯ ಗೌತಮ್‌ ಕುಮಾರ್‌ ಅವರು ಉಮೇಶ್‌ ಶೆಟ್ಟಿ, ಎಲ್‌. ಶ್ರೀನಿವಾಸ್‌ ಅವರು ಸೂಚಕರಾಗಿಯೂ, ಮಹಾಲಕ್ಷ್ಮೀ ರವೀಂದ್ರ, ಎಸ್‌ ರಾಜು ಅವರು ಅನುಮೋದಕರಾಗಿ ಸಹಿ ಮಾಡಿದ್ದಾರೆ. 

ಉಪ ಮೇಯರ್‌ ಅಭ್ಯರ್ಥಿಗಳ ಸೂಚಕರು ಅನುಮೋದಕರು  

ಜೆಡಿಎಸ್‌ನ ಗಂಗಮ್ಮ ಅವರು ಎರಡು ಸೆಟ್‌ ನಾಮಪತ್ರ ಸಲ್ಲಿಸಿದ್ದು, ನೇತ್ರಾ ನಾರಾಯಣ್‌ ಮತ್ತು ಉಮ್ಮೆ ಸಲ್ಮಾ ಅವರು ಸೂಚಕರಾಗಿ ಮತ್ತು ಅನುಮೋದಕರಾಗಿ ಇಮ್ರಾನ್‌ ಪಾಷ, ಐಶ್ವರ್ಯ ಬಿ.ಎನ್‌ ಅವರು ಸಹಿ ಮಾಡಿದ್ದಾರೆ. 

ಬಿಜೆಪಿಯ ಗುರುಮೂರ್ತಿ ರೆಡ್ಡಿ ಅವರಿಗೆ ಡಿ.ಎನ್‌ ರಮೇಶ್‌ ಸೂಚಕರಾಗಿದ್ದರೆ, ರಾಜೇಂದ್ರ ಕುಮಾರ್‌ ಅನುಮೋದಕರಾಗಿದ್ದಾರೆ. 

ಮಹಾಲಕ್ಷ್ಮೀ ರವೀಂದ್ರ ಅವರಿಗೆ ಗೋಪಿನಾಥ ರಾಜು ಸೂಚಕರಾಗಿ ಮತ್ತು ಬಿ.ಎಸ್‌ ಸತ್ಯನಾರಾಯಣ ಅನುಮೋದಕರಾಗಿ ಸಹಿ ಮಾಡಿದ್ದಾರೆ. 

ರಾಮಮೋಹನ ರಾಜು ಅವರಿಗೆ ಭಾರತಿ ರಾಮಚಂದ್ರ ಸೂಚಕರಾಗಿದ್ದರೆ,  ಪ್ರಭಾವತಿ ಅನುಮೋದಕರಾಗಿದ್ದಾರೆ. 

ಉಪಮೇಯರ್ ಸ್ಥಾನದ ಉಮೇದುವಾರರು

ಗಂಗಮ್ಮ (ಜೆಡಿಎಸ್), ಗುರುಮೂರ್ತಿ ರೆಡ್ಡಿ, ಮಹಾಲಕ್ಷ್ಮಿ (ಬಿಜೆಪಿ), ರಾಮಮೋಹನರಾಜು (ಬಿಜೆಪಿ)

ಮೇಯರ್ ಸ್ಥಾನಕ್ಕೆ ಮೂವರು ಉಮೇದುವಾರರು

ಆರ್‌.ಎಸ್.ಸತ್ಯನಾರಾಯಣ (ಕಾಂಗ್ರೆಸ್), ಎಂ.ಗೌತಮ್ ಕುಮಾರ್ ಮತ್ತು ಪದ್ಮನಾಭರೆಡ್ಡಿ (ಬಿಜೆಪಿ).

ಬಿಜೆಪಿಯ ರಾಮ ಮೋಹನ್ ರಾಜ್ ಉಪಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ರಾಮ ಮೋಹನ್ ರಾಜ್ ನಾಮಪತ್ರ ಸಲ್ಲಿಕೆ

ಮೇಯರ್‌ ಚುನಾವಣೆ ಈ ವರೆಗೆ...

ಬಿಜೆಪಿಯಿಂದ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಕೆ

ಸಂಘ ಪರಿವಾರದ ಹಿನ್ನೆಲೆ ವ್ಯಕ್ತಿಗೆ ಬಿಜೆಪಿ ಮಣೆ * ಮಹಾಲಕ್ಷ್ಮಿ ಉಪಮೇಯರ್‌ ಅಭ್ಯರ್ಥಿ

ಮೇಯರ್‌ ಸ್ಥಾನ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.