ADVERTISEMENT

ಪೌರತ್ವ ಕಾಯ್ದೆ ಪ್ರತಿಭಟನೆ Live | ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಿರಲಿ: ಹೈಕೋರ್ಟ್‌

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿವೆ. ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಬಂಧನ ಪರ್ವ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದೆಲ್ಲೆಡೆ ಶಾಂತಿಯುತ ವಾತಾವರಣ ನೆಲೆಸಿದ್ದು, ಮಧ್ಯಾಹ್ನದ ನಂತರ ಪ್ರತಿಭಟನೆಗಳ ಕಾವು ಹೆಚ್ಚಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 12:32 IST
Last Updated 20 ಡಿಸೆಂಬರ್ 2019, 12:32 IST

ಬೆಂಗಳೂರಿನಲ್ಲಿ ವಿಧಿಸಿರುವ ನಿಷೇಧಾಜ್ಞೆ ಅಬಾಧಿತ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಪ್ರತಿಭಟನೆಗಳಿಗೆ ನೀಡಿದ್ದ ಅನುಮತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌. 

ಸಿ ಆರ್ ಪಿಸಿ ಕಲಂ 144 ರಡಿ ಹೊರಡಿಸಿರುವ ಆದೇಶದ ಬಗ್ಗೆ ವಿಸ್ತೃತ ವಿಚಾರಣೆ ಅಗತ್ಯ ವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.

"ಅರ್ಜಿದಾರರು  ಪ್ರತಿಭಟನೆಗೆ ಅನುಮತಿ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬೇಕು, ಆ ಅರ್ಜಿಗಳನ್ನು ಮೂರು ದಿನಗಳಲ್ಲಿ ವಿಲೇವಾರಿ ಮಾಡಬೇಕು. ಆಗ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅನುಮತಿ ನೀಡುವ ಮುನ್ನ ಕಾನೂನು ಪ್ರಕಾರ ಪ್ರಕ್ರಿಯೆ ಅನುಸರಿಸಬೇಕು" ಎಂದು ವಿಭಾಗೀಯ ನ್ಯಾಯಪೀಠದ ನಿರ್ದೇಶನ.

ADVERTISEMENT

ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿಕೆ. ನಾಳೆ ರಾತ್ರಿ ನಿಷೇಧಾಜ್ಞೆ ಮುಕ್ತಾಯದ ನಂತರ ಅದನ್ನು ವಿಸ್ತರಣೆ ಮಾಡುವ ಶಂಕೆ ವ್ಯಕ್ತಪಡಿಸಿದ್ದಾರೆ, ಹಾಗಾಗಿ ನಿಷೇಧಾಜ್ಞೆ ಮುಂದುವರಿಸುವುದಾದರೆ ಅಭಿಪ್ರಾಯ ಸಂಗ್ರಹದ ನಂತರ ಆದೇಶ ಮಾಡಬೇಕು ಎಂದು ಹೈಕೋರ್ಟ್‌ ಆದೇಶ.

ಕೇರಳದ ಪತ್ರಕರ್ತರ ಬಿಡುಗಡೆ

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವರದಿ ಮಾಡಲು ಬಂದು ಬಂಧನಕ್ಕೀಡಾಗಿದ್ದ ಕೇರಳದ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ. 

ಸರಕಾರ ಇರುವುದು ಪ್ರಜೆಗಳ ರಕ್ಷಣೆಗೆ: ದೇವೇಗೌಡ ಟ್ವೀಟ್‌

ಮಂಗಳೂರಿನಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಅಮಾಯಕ ಯುವಕರಿಬ್ವರು ಪೊಲೀಸರ ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಸರ್ಕಾರದ ಸಚಿವರುಗಳೇ ಗಲಭೆಗೆ ಕುಮ್ಮಕ್ಕು ಕೊಡುವಂತಹ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ.

ನಾನು ಕೇರಳದಲ್ಲಿ ಚಿಕಿತ್ಸೆಯಲ್ಲಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರಾದ ಬಿಎಂ ಫಾರೂಕ್ ಅವರು ಮಂಗಳೂರಿನಲ್ಲಿದ್ದು ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಿಂದ ಎಲ್ಲ ಮಾಹಿತಿಗಳನ್ನೂ ನನಗೆ ತಿಳಿಸಿದ್ದಾರೆ. ಜನರು ಶಾಂತಿ ಕಾಪಾಡಬೇಕು. ಸರ್ಕಾರ ಕೂಡಾ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಎನ್ ಆರ್ ಸಿ ಮತ್ತು ಸಿಎಎ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಇರುವುದನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಅಧಿಕಾರಿಗಳ ಮೂಲಕ ಮಾಡುವುದು ಬಿಟ್ಟು ಪೊಲೀಸ್ ಬಲ ಪ್ರಯೋಗಿಸಿ ಜನರನ್ನು ಹೆದರಿಸಿ ಸೆಕ್ಷನ್ ವಿಧಿಸಿ ನಾಗರಿಕರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಬೇಡಿ. ಸರಕಾರ ಇರುವುದು ಪ್ರಜೆಗಳ ರಕ್ಷಣೆಗೆ.

ಕಾನೂನು ಶಿಸ್ತು ಪರಿಸ್ಥಿತಿ ಕಾಪಾಡಲು ಆದ್ಯತೆ ನೀಡಿ.ಶಾಂತಿ ಕದಡುವವರನ್ನು ಗುರುತಿಸಿ ಬಂಧಿಸಿ. ಆದರೆ ಅಮಾಯಕರನ್ನು ಕೊಲ್ಲಬೇಡಿ.
ಸಾರ್ವಜನಿಕರು ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ಮೃತರಾದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮೃತರಾದವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸರ್ಕಾರ ಸೂಕ್ತ ಬಂದೋಬಸ್ತ್ ಒದಗಿಸಬೇಕು.

ಪ್ರತಿಭಟನೆಗೆ ಅನುಮತಿ ನಿರಾಕರಣೆ: ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ

ದಾವಣಗೆರೆ: ನಿಷೇಧಾಜ್ಞೆ ನಡುವೆಯೂ ಪೌರತ್ವ (ತಿದ್ದುಪಡಿ) ವಿರೋಧಿಸಿ ಇಲ್ಲಿನ ‘ಸಂವಿಧಾನ ಉಳಿಸಿ ವೇದಿಕೆ’ಯಿಂದ ಆಜಾದ್‌ನಗರ ಠಾಣೆ ಎದುರು ಶಾಂತಿಯುತ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಡೆಸು ಉದ್ದೇಶದಿಂದ ಅನುಮತಿ ಪಡೆಯಲು ಮುಸ್ಲಿಂ ಸಮಾಜದ ಮುಖಂಡರು ಠಾಣೆಗೆ ಬಂದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಠಾಣೆಯ ಎದುರೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಬಂದು ಪೊಲೀಸ್ ಬಂದೋಬಸ್ತ್‌ ಕೈಗೊಂಡರು.

ಮಧ್ಯಾಹ್ನದ ವೇಳೆ ಠಾಣೆಯ ಎದುರೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಜಿಲ್ಲಾಧಿಕಾರಿ ಬರುವವರೆಗೂ ಠಾಣೆಯ ಎದುರೇ ಕಾದು ಕುಳಿತರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಂತೆ ಪೊಲೀಸರು ಠಾಣೆಯ ಗೇಟಿನ ಎದುರು ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಕಾರರನ್ನು ನಿಯಂತ್ರಿಸಿದರು.

‘ಈ ದೇಶ ನಮ್ಮದು, ಸ್ವಾಂತಂತ್ರ್ಯ ಬೇಕು’ ‘ನಮ್ಮಲ್ಲಿ ಯಾವ ಧರ್ಮದ ರಕ್ತವೂ ಅಲ್ಲ. ಮಾನವ ಕೆಂಪು ರಕ್ತ ಒಂದೇ’, ‘ಹಿಂದೂ –ಮುಸ್ಲಿಂ ಶತ್ರುಗಳಲ್ಲ’ ಎಂದು ರಾಷ್ಟ್ರಧ್ವಜ ಪ್ರದರ್ಶಿಸಿ ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿ, ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅನುಮತಿ ಸಾಧ್ಯವಿಲ್ಲ. ನಿಷೇಧಾಜ್ಞೆ ಮುಗಿದ ನಂತರ ಎಸ್‌ಪಿಯವರಿಗೆ ಮನವಿ ನೀಡಿ. ಶಾಂತಿಯುತವಾಗಿ ಸ್ಪಂದಿಸಿದಕ್ಕೆ ಮುಸ್ಲಿಂ ಸಮಾಜದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಆ ವೇಳೆ ಜಿಲ್ಲಾಧಿಕಾರಿ ರಾಷ್ಟ್ರಗೀತೆ ಹಾಡಲು ಹೇಳಿದರು. ಎಲ್ಲರೂ ರಾಷ್ಟ್ರಗೀತೆಗೆ ಧ್ವನಿಗೂಡಿಸಿದರು. ನಂತರ ಶಾಂತಿಯುತವಾಗಿ ಮನೆಗೆ ತೆರಳಿದರು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಪ್ರತಿ ಹೋರಾಟಗಳನ್ನೂ ತಡೆಯಲು ಸರ್ಕಾರಕ್ಕೆ ಸಾಧ್ಯವಿದೆಯೇ? ಹೈಕೋರ್ಟ್‌ ಪ್ರಶ್ನೆ

ರಾಜ್ಯದಲ್ಲಿ ಸೆಕ್ಷನ್‌ 144 ಜಾರಿ ಮಾಡಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್‌, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. 
‘ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳಿಗೆ ಅವಕಾಶ ನೀಡುವ ಸರ್ಕಾರ ರಾತ್ರೋರಾತ್ರಿ ಅವಕಾಶ ನಿರಾಕರಿಸಿರುವುದು ಏಕೆ.  ಪ್ರತಿಭಟನೆಗೆ ನೀಡಿರುವ ಅವಕಾಶವನ್ನು ಸೆಕ್ಷನ್‌ 144 ಜಾರಿಯಾಗುತ್ತಲೇ ರದ್ದು ಮಾಡಲು ಸಾಧ್ಯವೇ?  ಶಾಲೆಯ ವಿದ್ಯಾರ್ಥಿಗಳನ್ನೂ ನೀವು ಠಾಣೆಗಳಿಗೆ ಕರೆದೊಯ್ಯುವಿರೇ?  ಎಲ್ಲ ಪ್ರತಿಭಟನೆಗಳೂ ಶಾಂತಿ ಭಂಗ ಉಂಟು ಮಾಡುತ್ತವೆ ಎಂದು ಸರ್ಕಾರವೇನಾದರೂ ಭಾವಿಸಿಕೊಂಡಿದೆಯೇ?  ಪ್ರತಿ ಹೋರಾಟಗಳನ್ನೂ ತಡೆಯಲು ಸರ್ಕಾರಕ್ಕೆ ಸಾಧ್ಯವಿದೆಯೇ? ಪ್ರತಿಭಟನೆಗೆ ನೀಡಿದ ಅವಕಾಶವನ್ನು ಏಕಾಏಕಿ ರದ್ದು ಮಾಡಲು ಹೇಗೆ ಸಾಧ್ಯ? ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ಅವರು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. 

ಕೇರಳ ಪತ್ರಕರ್ತರ ಬಂಧನ ಕುರಿತು ಬಿಎಸ್‌ವೈಗೆ ಪತ್ರ ಬರೆದ ಪಿಣರಾಯಿ ವಿಜಯನ್‌

ಪ್ರತಿಭಟನೆಯ ವರದಿ ಮಾಡಲು ಮಂಗಳೂರಿಗೆ ಬಂದಿದ್ದ ಕೇರಳದ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದರ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.  

ಕೇರಳ ಪತ್ರಕರ್ತರ ಬಂಧನದ ವಿಚಾರದಲ್ಲಿ ತಾವು ಕೂಡಲೇ ಮಧ್ಯಪ್ರವೇಶ ಮಾಡಬೇಕು. ಆದಷ್ಟು ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಆ ಮೂಲಕ ಅವರ ಕರ್ತವ್ಯ ನಿಭಾಯಿಸಲು ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. 

ಹೋರಾಟದ ಸ್ಥಳಕ್ಕೇ ತೆರಳಿ ಮನವಿ ಸ್ವೀಕರಿಸಿದ ಮಂಡ್ಯ ಜಿಲ್ಲಾಧಿಕಾರಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೆರವಣಿ ನಡೆಸಲು ನಿರ್ಧರಿಸಿದ್ದ ಮುಸ್ಲಿಂ ಮುಖಂಡರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್‌ ಅವರು ಅನುಮತಿ ನಿರಾಕರಿಸಿದರು. ಆದರೆ,  ಹೋರಾಟ ನಡೆಯುತ್ತಿದ್ದ ಮಂಡ್ಯ ಈದ್ಗಾ ಮೈದಾನಕ್ಕೇ ತೆರಳಿದ ಜಿಲ್ಲಾಧಿಕಾರಿ ಅಲ್ಲಿಯೇ ಅವರ ಮನವಿ ಸ್ವೀಕರಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. 

ಪ್ರತಿಭಟನೆಯಲ್ಲಿ ಮೃತಪಟ್ಟಿದ್ದವರ ಶವಗಳು ಕುಟುಂಬಸ್ಥರಿಗೆ ಹಸ್ತಾಂತರ

ಬಿಎಸ್‌ವೈ ತಮ್ಮ ಹೋರಾಟದ ಹಿನ್ನೆಲೆ ಮರೆತು ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ

ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಪರೀಕ್ಷೆ ಪೂರ್ಣ; ಇಂದೇ ಅಂತ್ಯಕ್ರಿಯೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟ ನೌಸೀನ್ (23) ಮತ್ತು ಜಲೀಲ್ ಕುದ್ರೋಳಿ (49) ಶವಪರೀಕ್ಷೆಗೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 

ಇವತ್ತೇ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕುಟುಂಬದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಪೊಲೀಸರು ಯಾವುದೇ ನಿರ್ಧಾರ ತಿಳಿಸಿಲ್ಲ. ಕುದ್ರೋಳಿಯ ಮಸೀದಿಯಲ್ಲಿ ನೌಸೀನ್‌ ಅಂತ್ಯಕ್ರಿಯೆ ಹಾಗೂ ಬಂದರ್ ಕಂದಕ್‌ ಮಸೀದಿಯಲ್ಲಿ ಜಲೀಲ್‌ ಅಂತ್ಯಕ್ರಿಯೆ ನಡೆಯಲಿದೆ. 

ಭದ್ರತೆ ನೆರಳಲ್ಲಿ ಪ್ರಾರ್ಥನೆ

ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆ ಬಳಿಯ ಮಸೀದಿ ಬಳಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದವರಿಗೆ ಪೊಲೀಸರು ಭದ್ರತೆ ಒದಗಿಸಿದ ದೃಶ್ಯ. 

ಪ್ರಾರ್ಥನೆಗೆ ನಿರ್ಬಂಧವಿಲ್ಲ, ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ: ಅಲೋಕ್‌ ಕುಮಾರ್‌ 

ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಹಿರಿಯ ಅಧಿಕಾರಿಗಳನ್ನು ಸ್ಥಳೀಯ ಪೊಲೀಸರ ನೆರವಿಗಾಗಿ ರಾಜ್ಯದ ವಿವಿಧ ಕಡೆಗಳಿಗೆ ಕಳುಹಿಸಲಾಗಿದೆ. ಪ್ರಾರ್ಥನೆ ಸಲ್ಲಿಕೆಗೆ ಎಲ್ಲಿಯೂ ನಿರ್ಬಂಧನೆಗಳಿಲ್ಲ. ಆದರೆ, ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. 

ಅನರ್ಹ ಅಧಿಕಾರ ಮದದಿಂದ ಹೋರಾಟದ ಹಿನ್ನೆಲೆಯನ್ನೇ ಮರೆತ ಬಿಎಸ್‌ವೈ: ಎಚ್‌ಡಿಕೆ ಚಾಟಿ 

ಸರ್ಕಾರವೇ ಮುಂದೆ ನಿಂತು ಹೋರಾಟಗಾರರನ್ನು ಕೊಂದಿದೆ: ಕುಮಾರಸ್ವಾಮಿ ಟ್ವೀಟ್‌

ಕೊಡಗು ಜಿಲ್ಲೆಯಲ್ಲೂ ನಿಷೇದಾಜ್ಞೆ ಜಾರಿ

ನಮಾಜ್‌ ಮಗಿಸಿದವರಿಗೆ ಮನೆಗೆ ಕಳುಹಿಸಿದ ಪೊಲೀಸರು

ಬೆಂಗಳೂರು: ಇಲ್ಲಿನ ಕೆ.ಆರ್‌. ಮಾರುಕಟ್ಟೆ ಬಳಿಯ ಜಾಮಾ ಮಸೀದಿಯಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಶುಕ್ರವಾರದ ನಮಾಜ್‌ ನಡೆಯಿತು.

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನಮಾಜ್‌ ಮುಗಿಸಿದವರು, ತಕ್ಷಣ ಅಲ್ಲಿಂದ ಹೊರಡುವಂತೆ ಪೊಲೀಸರು ಸೂಚಿಸುತ್ತಿದ್ದರು.

ಪ್ರಚೋದನೆ ಆಗುತ್ತಿರುವುದು ಕಾಂಗ್ರೇಸಿಗರ ಭಾಷಣದಿಂದ, ನಿಷೇಧಾಜ್ಞೆಯಿಂದಲ್ಲ: ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕಾಂಗ್ರೆಸ್‌ ಪಕ್ಷದ ಮುಖಂಡರು ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ರಾಜಕೀಯ ನೆಲೆಯನ್ನು ದೇಶದಾದ್ಯಂತ ಕಳೆದುಕೊಂಡ ಮೇಲೆ ಹತಾಶರಾಗಿರುವ ಕಾಂಗ್ರೆಸ್‌ ಪೌರತ್ವ ತಿದ್ದುಪಡಿ ಕಾಯ್ದೆಯ ಅನ್ನು ತಿರುಚಿ ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತಿದ್ದಾರೆ. ಅದರಲ್ಲಿಯೂ ಅಲ್ಪಸಂಖ್ಯಾತರಲ್ಲಿ ಭಯವನ್ನು ಹುಟ್ಟಿಸುವ ಕೆಲಸವನ್ನು ದೇಶದೆಲ್ಲೆಡೆ ಮಾಡುತ್ತಿದೆ. ಹಾಗೆಯೇ ಕರ್ನಾಟಕದಲ್ಲಿಯೂ ಮಾಡುತ್ತಿದೆ’ ಎಂದರು.

ಕಾಯ್ದೆ ಜಾರಿಯಾದ ನಂತರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 144 ಜಾರಿ ಮಾಡಿದ್ದೇವೆ. ಪ್ರಚೋದನೆ ಆಗುತ್ತಿರುವುದು ಕಾಂಗ್ರೆಸ್‌ನ ಕೆಲವು ಮುಖಂಡರ ಭಾಷಣದಿಂದಲೇ ಹೊರತು ನಿಷೇಧಾಜ್ಞೆಯಿಂದ ಅಲ್ಲ. ಹಿಂಸಾಚಾರದ ಹೊಣೆಯನ್ನು ವಿರೋಧ ಪಕ್ಷಗಳೇ ಹೊರಬೇಕು’ ಎಂದು ತಿಳಿಸಿದರು.

ಹಕ್ಕುಗಳನ್ನು ಮೊಟಕುಗೊಳಿಸಿ ರಾಜ್ಯವನ್ನು ಮತ್ತೊಂದು ಕಾಶ್ಮೀರವನ್ನಾಗಿಸುತ್ತಿದೆ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

ಬೆಂಗಳೂರು: ‘ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂವಿಧಾನದಲ್ಲಿನ ಎಲ್ಲಾ ಹಕ್ಕುಗಳನ್ನು ಮೊಟಕು ಮಾಡಿ ಕರ್ನಾಟಕವನ್ನು ಮತ್ತೊಂದು ಕಾಶ್ಮೀರವನ್ನಾಗಿ ಮಾಡುತ್ತಿದೆ. ದಕ್ಷಿಣ ಕನ್ನಡದ ಸ್ಥಿತಿಯನ್ನು ವೀಕ್ಷಿಸಲು ಹೋಗಿದ್ದ ನಮ್ಮ ಪಕ್ಷದ ಮುಖಂಡರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದು, ವಶಕ್ಕೆ ಪಡೆದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ

ಕಾಂಗ್ರೆಸ್ ನಾಯಕರ ಮಂಗಳೂರು ಭೇಟಿಗೆ ಅನುಮತಿ ನಿರಾಕರಣೆ

ಮಂಗಳೂರು: ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ನಿರಾಕರಿಸಿದ ಪೊಲೀಸರು. ಈ ಮೊದಲು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದ ಇತರ ಕಾಂಗ್ರೆಸ್ ನಾಯಕರನ್ನೂ ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ತಡೆದರು. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್, ಉಗ್ರಪ್ಪ, ಐವಾನ್ ಡಿಸೋಜಾ ಸೇರಿ ಆರು ನಾಯಕರನ್ನು ಒಳಗೊಂಡ ಕಾಂಗ್ರೆಸ್‌ ನಿಯೋಗವನ್ನು ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲಾಯಿತು. ಬಳಿಕ ಮತ್ತೆ ವಿಮಾನ ನಿಲ್ದಾಣಕ್ಕೆ ಕರೆತಂದು ಪೊಲೀಸರು ವಶದಲ್ಲಿರಿಸಿಕೊಂಡಿದ್ದಾರೆ. 

'ನಮ್ಮನ್ನು ಬಂಧಿಸಿದ್ದರೆ ಕೋರ್ಟ್‌ಗೆ ಹಾಜರು ಪಡಿಸಿ..' – ವಿ.ಎಸ್‌.ಉಗ್ರಪ್ಪ, ಕಾಂಗ್ರೆಸ್‌ ಮುಖಂಡ

ಗಲಭೆಗೆ ಕಾಂಗ್ರೆಸ್‌ ಹೊಣೆ: ಪ್ರತಾಪ ಸಿಂಹ ಆರೋಪ

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುವ ಹೆಸರಿನಲ್ಲಿ ರಾಜ್ಯದಾದ್ಯಂತ ಗಲಭೆ ಸೃಷ್ಟಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಇಬ್ಬರ ಸಾವಿಗೆ ಶಾಸಕ ಯು.ಟಿ.ಖಾದರ್‌ ನೇರ ಹೊಣೆ ಎಂದು ಸಂಸದ ಪ್ರತಾಪ ಸಿಂಹ ಆರೊಪಿಸಿದರು.

ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಖಾದರ್‌ ಅವರು ‘ರಾಜ್ಯದಾದ್ಯಂತ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇದು ಅವರ ಬೆಂಬಲಿಗರಿಗೆ ಗಲಭೆ ನಡೆಸಲು ಕುಮ್ಮಕ್ಕು ಕೊಟ್ಟಂತಾಯಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶ–ಸಂವಿಧಾನ ಕಾಪಾಡಬೇಕಾದ್ದು ನಮ್ಮ ಕರ್ತವ್ಯ, ಧರ್ಮ: ಡಿಕೆಶಿ

ಬೆಂಗಳೂರು: ಈ ದೇಶವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಸಂವಿಧಾನವನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಧರ್ಮ ಎಂದು ಕಾಂಗ್ರೆಸ್ ನಾಯಕ ಸಿ.ಟಿ.ರವಿ ಹೇಳಿದರು.

ದೇಶವೇ ನನಗೆ ಮುಖ್ಯ. ಸಮಾಜದ ನಂಬಿಕೆ ಉಳಿಸಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತೀನಿ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ಎಲ್ಲರಲ್ಲಿ ವಿನಂತಿಸುತ್ತೇನೆ ಎಂದರು.

ಮಂಗಳೂರು ಗೋಲಿಬಾರ್ ಅಮಾನವೀಯ ಘಟನೆ: ಸಿದ್ದರಾಮಯ್ಯ

ಬೆಂಗಳೂರು: ಮಂಗಳೂರಿನಲ್ಲಿ ನಿನ್ನೆ ನಡೆದದ್ದು ಅಮಾನವೀಯ ಘಟನೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ವಿನಾಕಾರಣ ಗುಂಡು ಹಾರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರತಿಭಟನೆ ಹತ್ತಿಕ್ಕುವ ಅಧಿಕಾರವನ್ನು ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಇವತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಧರ್ಮ–ಜಾತಿಗಳವರೂ ಪ್ರತಿಭಟಿಸ್ತಾ ಇದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿರುವ ಅಮಿತ್ ಶಾ ಅವರೇ ರಾಜ್ಯಸಭೆಯಲ್ಲಿ ಮಾತನಾಡುವಾಗ ಇದನ್ನು ‘ವಿವಾದಾತ್ಮಕ ಕಾನೂನು’ ಎಂದು ಹೇಳಿದ್ದಾರೆ ಎಂದು ನೆನಪಿಸಿಕೊಂಡರು.

ಒಂದು ಕಡೆ ಯಡಿಯೂರಪ್ಪ ಗುಂಡು ಹಾರಿಸಬೇಡಿ ಅಂತ ಹೇಳಿದ್ದೇನೆ ಅಂತಾರೆ. ಅವರ ಆದೇಶ ಇದ್ರೂ ಪೊಲೀಸರು ಗುಂಡು ಹಾರಿಸ್ತಾರೆ ಅಂದ್ರೆ ಏನು? ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅವರ ಆದೇಶಕ್ಕೆ ಪೊಲೀಸರು ಕಿಮ್ಮತ್ತು ಕೊಡ್ತಿಲ್ಲ. ಯಡಿಯೂರಪ್ಪ ಸುಳ್ಳು ಹೇಳುತ್ತಿರಬೇಕು ಅಥವಾ ಅವರ ಮಾತನ್ನು ಪೊಲೀಸರು ಕೇಳುತ್ತಿಲ್ಲ ಎನ್ನಬೇಕು ಎಂದರು.

ನನ್ನ ಪ್ರಕಾರ ಸರ್ಕಾರದ ಗಮನಕ್ಕೆ ತಾರದೆ ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಇವರ ಉದ್ದೇಶವೇನು ಅಂದರೆ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವ ಸುರೇಶ್ ಆಂಗಡಿ ‘ಕಂಡಲ್ಲಿ ಗುಂಡಿಕ್ಕಿ’ ಅಂತ ಹೇಳ್ತಾರೆ. ಇದೆಂಥ ಆದೇಶ ಎಂದು ಪ್ರಶ್ನಿಸಿದರು.

ಜನರ ಹಕ್ಕು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದು. ಅಮಾನವೀಯವಾಗಿ ಇಬ್ಬರು ಅಮಾಯಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಹೈಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರ ಸಂವಿಧಾನ ಬಾಹಿರವಾಗಿ ಕೆಲಸ ಮಾಡ್ತಿದೆ. ಇದರ ಹಿಂದೆ ಇರುವವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂದು ದೂರಿದರು.

ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು

ಬೆಂಗಳೂರು ಕೆ.ಆರ್‌.ಮಾರುಕಟ್ಟೆಯಲ್ಲಿರುವ ಎಸ್‌ಜೆಪಿ ರಸ್ತೆ ಮಸೀದಿ ಎದುರು ಪೊಲೀಸ್ ಬಂದೋಬಸ್ತ್

ಬೆಂಗಳೂರು: ಬಹುತೇಕ ಶಾಂತ, ಬಿಗಿ ಬಂದೋಬಸ್ತ್

ಬೆಂಗಳೂರು: ನಗರದ ಟೌನ್‌ ಹಾಲ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಟೌನ್‌ಹಾಲ್ ಬಳಿ 244ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಕಲ್ಲಿನ ಏಟು ಬೀಳದಂತೆ ತಡೆಯುವ ಕೇನ್ ಶಿಲ್ಡ್ ,ವಾಟರ್ ಜೆಟ್ ವೆಹಿಕಲ್, 10 ಕ್ಕೂ ಹೆಚ್ಚು ಮೀಸಲು ವಾಹನಗಳು ಸ್ಥಳದಲ್ಲಿವೆ. ಪ್ರತಿ ಪೊಲೀಸರಿಗೂ ಲಾಠಿ, ಬಾಡಿ ಪ್ರೊಟೆಕ್ಟ್   ಜಾಕೆಟ್ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಟರ್ನೆಟ್ ಕಟ್

ಗೋಲಿಬಾರ್: ತನಿಖೆಗೆ ಐವಾನ್ ಡಿಸೋಜಾ ಆಗ್ರಹ

ಗೋಲಿಬಾರ್‌ ಬಗ್ಗೆ ತನಿಖೆಯಾಗಬೇಕು. ಕಾನೂನಿನ ಸುವ್ಯವಸ್ಥೆ ಕಾಪಾಡುಲು ನಾವು ಪೊಲೀಸರೊಂದಿಗೆ ಸಹಕರಿಸುತ್ತೇವೆ. ಬೇರೆ ರಾಜ್ಯಗಳಿಂದ ಜನ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗೆ ಬರುತ್ತಿದ್ದರೆ ಅವರನ್ನು ಪೊಲೀಸರು ತಡೆಯಲಿ ಎಂದು ಕಾಂಗ್ರೆಸ್ ಮುಖಂಡ ಐವನ್‌ ಡಿಸೋಜಾ ತಿಳಿಸಿದರು.

ಇದು ಧರ್ಮಾತೀತ ಪ್ರತಿಭಟನೆ: ಜಮೀರ್ ಅಹಮದ್

ಬೆಂಗಳೂರು: ಇದು ಎಲ್ಲ ಭಾರತೀಯರ ಪ್ರತಿಭಟನೆ. ಇದರಲ್ಲಿ ಜಾತಿ–ಧರ್ಮ ತರಬೇಡಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ವಿನಂತಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಇಲ್ಲೇ ಹುಟ್ಟಿದವರು. ಆದರೆ ಈಗ ನಿಮ್ಮ ಪೌರತ್ವ ಸಾಬೀತುಪಡಿಸಿ ಎಂದರೆ ಹೇಗೆ ಸಾಧ್ಯ? ನನ್ನ ಜನ್ಮದಿನಾಂಕದ ಮಾಹಿತಿಯೇ ಸರಿಯಾಗಿ ಇಲ್ಲ. ಇನ್ನು ನನ್ನ ಅಪ್ಪ–ತಾತನ ವಿವರ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಹಿಂದೂ–ಮುಸ್ಲಿಮರು ಅಣ್ಣತಮ್ಮಂದಿರಂತೆ ಬಾಳ್ತಿದ್ದೇವೆ. ನಮ್ಮ ನಡುವೆ ಜಾತಿ–ಧರ್ಮ ತರಬೇಡಿ. ರಾಜಕೀಯ ಲಾಭಕ್ಕಾಗಿ ಸಮಾಜ ಹಾಳುಮಾಡಬೇಡಿ ಎಂದು ವಿನಂತಿಸಿದರು.

ಕಾಂಗ್ರೆಸ್ ನಾಯಕರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಮೃತರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಮಂಗಳೂರು: 12ರಿಂದ 2ರವರೆಗೆ ಕರ್ಫ್ಯೂ ಸಡಿಲಿಕೆ

ಮಂಗಳೂರು: ಶುಕ್ರವಾರದ ನಮಾಜ್‌ಗಾಗಿ ನಗರದಲ್ಲಿ ಮಧ್ಯಾಹ್ನ 12ರಿಂದ 2ರವರೆಗೆ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿನ್ನೆ ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಪರೀಕ್ಷೆ ಆರಂಭವಾಗಿದೆ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಪೊಲೀಸ್ ಕಮಿಷನರ್ ಹರ್ಷ ನೇತೃತ್ವದಲ್ಲಿ ಶವಪರೀಕ್ಷೆ ನಡೆಯುತ್ತಿದೆ.

ಶವಾಗಾರದ ರಸ್ತೆಯನ್ನು ಪೊಲೀಸರು ಸಂಚಾರ ನಿರ್ಬಂಧ ವಿಧಿಸಿದ್ದಾರೆ. ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಮೊಹಿದ್ದೀನ್ ಸೇರಿ ಹಲವು ನಾಯಕರು ಈಗಾಗಲೇ ಆಸ್ಪತ್ರೆ ಆವರಣಕ್ಕೆ ಬಂದಿದ್ದಾರೆ.

ಮೃತರ ಕುಟುಂಬದವರು ದಕ್ಷಿಣ ಕನ್ನಡ ಸೆಂಟ್ರಲ್ ಮುಸ್ಲಿಂ ಕಮಿಟಿ ನಾಯಕರೊಂದಿಗೆ ಮರಣೋತ್ತರ ಪರೀಕ್ಷೆಗೆ ಬಂದಿದ್ದಾರೆ.

ಗೋಲೀಬಾರ್‌ಗೆ ಯಡಿಯೂರಪ್ಪ, ಬೊಮ್ಮಾಯಿ ಹೊಣೆ: ಕಾಂಗ್ರೆಸ್

ಮಂಗಳೂರು: ಗೋಲೀಬಾರ್ ನಿನ್ನೆ ಮೃತಪಟ್ಟ ಇಬ್ಬರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಆರೋಪಿಸಿತು.

ಕಾಂಗ್ರೆಸ್ ಜಿಲ್ಲಾ ಘಟದ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಮತ್ತು ಮಾಜಿ ಸಚಿವ ರಮಾನಾಥ ರೈ ಸುದ್ದಿಗೋಷ್ಠಿ ನಡೆಸಿ, ಪೊಲೀಸರ ವೈಫಲ್ಯದಿಂದಲೇ ಗೋಲೀಬಾರ್‌ನಂಥ ಅನಪೇಕ್ಷಿತ ಬೆಳವಣಿಗೆ ನಡೆಯಿತು ಎಂದರು.

‘ಗೋಲೀಬಾರ್‌ ನಡೆಸುವಂಥ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರಲಿಲ್ಲ. ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಮಂಗಳೂರಿಗಿಂತಲೂ ಹೆಚ್ಚು ಜನರು ಸೇರಿದ್ದ ಕಡೆಗಳಲ್ಲಿಯೇ ಪೊಲೀಸರು ಪ್ರತಿಭಟನೆ ನಿಯಂತ್ರಿಸಿದ್ದಾರೆ. ಆದರೆ ಇಲ್ಲಿನ ಪೊಲೀಸರಿಗೆ ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು. 

ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಪ್ರತಿಭಟನೆ ನಡೆಸುವುದಾಗಿ ಮೊದಲೇ ಮಾಹಿತಿ ನೀಡಲಾಗಿತ್ತು. ಕೊನೆಗಳಿಗೆಯಲ್ಲಿ ಪೊಲೀಸರು ಮಾಹಿತಿ ನಿರಾಕರಿಸಿದ್ದರು. ನಿಷೇಧಾಜ್ಞೆ ಹೇರಿರುವ ಮಾಹಿತಿ ಇಲ್ಲದೆ ಜನರು ಪ್ರತಿಭಟನೆಗಾಗಿ ಬೀದಿಗಳಿದಿದ್ದರು ಎಂದು ಹೇಳಿದರು.

ಗೋಲೀಬಾರ್ ನಂತರವೂ ಪೊಲೀಸರ ದೌರ್ಜನ್ಯ ಮುಂದುವರಿದಿದೆ. ಮೃತದೇಹ ಇರಿಸಿರುವ ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿದ ಪೊಲೀಸರು ಐಸಿಯು ಸಮೀಪವೂ ಅಶ್ರುವಾಯು ಸಿಡಿಸಿ ಜನರಿಗೆ ತೊಂದರೆ. ಕರ್ಫ್ಯೂ ಹೆಸರಿನಲ್ಲಿ ಜನರ ಬದುಕಿಗೆ ಹಾನಿ ಮಾಡಿದ್ದಾರೆ. ಇದು ಖಂಡನೀಯ ಎಂದರು.

ಮಂಗಳೂರಿನ ಗೋಲೀಬಾರ್ ಮತ್ತು ಇಬ್ಬರು ಅಮಾಯಕರ ಸಾವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇರ ಹೊಣೆ ಎಂದು ನುಡಿದರು.

ಮಂಗಳೂರು: ಮರಣೋತ್ತರ ಪರೀಕ್ಷೆ ಆರಂಭ

ಮಂಗಳೂರು: ನಿನ್ನೆ ಗೋಲೀಬಾರ್‌ನಲ್ಲಿ ಮೃತಪಟ್ಟ ನೌಸೀನ್ ಮತ್ತು ಜಲೀಲ್ ಅವರ ಪಾರ್ಥಿವ ಶರೀರಗಳ ಮರಣೋತ್ತರ ಪರೀಕ್ಷೆ ಆರಂಭ.

ಮಂಗಳೂರಿನಲ್ಲಿ ನಾಳೆ ಸಿಪಿಐ ಪ್ರತಿಭಟನೆ

ಮಂಗಳೂರಿನಲ್ಲಿ ಪೊಲೀಸರು ವಿಧಿಸಿರುವ ಕರ್ಫ್ಯೂ ಆದೇಶವನ್ನು ಶಾಂತವಾಗಿಯೇ ಉಲ್ಲಂಘಿಸುವುದಾಗಿ ಸಿಪಿಐ ನಾಯಕ ವಿನಯ್ ವಿಸ್ವಂ ಹೇಳಿದ್ದಾರೆ.

ನಾಳೆ ನಾನು ಸಿಪಿಐ ಮತ್ತು ಇತರ ಎಡಪಕ್ಷಗಳ ನಾಯಕರೊಂದಿಗೆ ಮಂಗಳೂರು ತೆರಳುತ್ತಿದ್ದೇನೆ. ಶಾಂತರೀತಿಯಲ್ಲೇ ಪ್ರತಿಭಟನೆ ನಡೆಸಿ, ಕರ್ಫ್ಯೂ ಆದೇಶ ಉಲ್ಲಂಘಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ದೇಶವು ಇಲ್ಲಿನ ಜನರಿಗೆ ಸೇರಿದ್ದು, ನಾವು ಇದನ್ನು ಹಿಂದುತ್ವ ಅವತರಣಿಕೆಯ ಪಾಕಿಸ್ತಾನ ಆಗಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಬಸ್ ಮೇಲೆ ಕಲ್ಲುತೂರಾಟ

ಬೆಳ್ತಂಗಡಿಯ ಪುಂಜಾಲಕಟ್ಟೆ ಹಾಗೂ ಉಪ್ಪಿನಂಗಡಿಯಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ರಾಜ್ಯದ ಸ್ಥಿತಿಗತಿ ಮಾಹಿತಿ ಪಡೆದ ಅಮಿತ್ ಶಾ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ ಮಾಹಿತಿ ನೀಡಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿವಿಧ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದಾರೆ. ಎಲ್ಲ ನಾಯಕರೂ ಸಹಕರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಗತ್ಯವಿರುವ ಸ್ಥಳಕ್ಕೆ ಕಳುಹಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕು. ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಅವರು ಮನವಿ ಮಾಡಿದರು.

ಚಿಕ್ಕಮಗಳೂರಿನಲ್ಲೂ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಪೌರತ್ವ ವಿಚಾರ: ಚರ್ಚೆಗೆ ಸಿದ್ಧ ಎಂದ ಸಿ.ಟಿ.ರವಿ

ಬೆಂಗಳೂರು: ‘ಚರ್ಚೆಗೆ ನಾವು ಸಿದ್ಧರಿದ್ದೇವೆ. ಚಳವಳಿಗಳನ್ನು ಹತ್ತಿಕ್ಕುವುದಿಲ್ಲ. ಆದರೆ ಹಿಂಸಾಚಾರಕ್ಕೆ ನಮ್ಮ ಸರ್ಕಾರ ಅವಕಾಶಕೊಡುವುದಿಲ್ಲ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಪ್ರಕಾರ ಕಾಯ್ದೆ ಆಗೋದು ಬೀದಿ ಜಗಳದಲ್ಲಿ ಅಲ್ಲ. ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯ ಮೂಲಕ ಕಾಯ್ದೆಗಳು ರೂಪುಗೊಳ್ಳುತ್ತವೆ. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತ ಮಾನವೀಯತೆ ಮೆರೆದಿದೆ’ ಎಂದು ವಿವರಿಸಿದರು.

‘ಈ ದೇಶದ ಯಾವುದೇ ವ್ಯಕ್ತಿಯ ಪೌರತ್ವವನ್ನು ಸರ್ಕಾರ ಕಿತ್ತುಕೊಂಡಿಲ್ಲ. ಭಾರತವನ್ನು ತನ್ನ ನೆಲ ಎಂದು ಆಯ್ಕೆ ಮಾಡಿಕೊಂಡಿರುವವರೆಲ್ಲರೂ ಭಾರತೀಯರೇ ಆಗಿದ್ದಾರೆ, ಆಗಿರುತ್ತಾರೆ’ ಎಂದು ಹೇಳಿದರು.

‘ನಮ್ಮ ರಾಜ್ಯದಲ್ಲಿ ಕೆಲವರು ಪೌರತ್ವ ಕಿತ್ತುಕೊಂಡಿದೆ ಎಂದು ಇಲ್ಲದ ವಿಚಾರ ಮಾತನಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರ ಹಕ್ಕನ್ನೂ ನಾವು ಕಿತ್ತುಕೊಂಡಿಲ್ಲ. ಚರ್ಚೆಗೆ ನಾವು ತಯಾರಿದ್ದೇವೆ. ಚಳವಳಿಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಹಿಂಸಾಚಾರಕ್ಕೆ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ಮಂಗಳೂರಿಗೆ ತೆರಳಲು ಕಾಂಗ್ರೆಸ್ ನಾಯಕರ ಸಿದ್ಧತೆ

ಬೆಂಗಳೂರು: ವಿ.ಎಸ್.ಉಗ್ರಪ್ಪ, ರಮೇಶ್‌ ಕುಮಾರ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಲು ಸಿದ್ಧರಾಗಿದ್ದಾರೆ. 

ಎಸ್‌.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ, ನಜೀರ್ ಅಹಮದ್ ನಿಯೋಗದಲ್ಲಿ ಇದ್ದಾರೆ.

ಮಂಗಳೂರಿನಲ್ಲಿ ಸ್ಥಳೀಯರನ್ನು ಭೇಟಿಯಾಗಿ ವಸ್ತುಸ್ಥಿತಿಯ ಮಾಹಿತಿ ಸಂಗ್ರಹಿಸುವುದು ಈ ನಿಯೋಗ ಭೇಟಿಯ ಉದ್ದೇಶ ಎಂದು ಹೇಳಲಾಗಿದೆ.

ಮಂಗಳೂರು ಸೇರಿದಂತೆ ದೇಶದ ವಿವಿಧೆಡೆ ಇಂಟರ್ನೆಟ್‌ ಕಟ್

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಸೂಚನೆ ಮೇರೆಗೆ ಇಂಟರ್ನೆಟ್‌ ಸೇವೆಯನ್ನು ಕಡಿತಗೊಳಿಸಲಾಗಿದೆ.

ರಾಜಧಾನಿ ಲಖನೌ ಸೇರಿದಂತೆ ಉತ್ತರ ಪ್ರದೇಶ ರಾಜ್ಯದ 10 ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸೇವೆ  ಕಡಿತಗೊಳಿಸಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಉತ್ತರ ಪ್ರದೇಶದಲ್ಲಿ ಖಾಸಗಿ ವಾಹಿನಿಗಳ ಸುದ್ದಿ ಪ್ರಸಾರಕ್ಕೂ ಕಡಿವಾಣ ಬಿದ್ದಿದೆ.

ಅಸ್ಸಾಂ ಮತ್ತು ಮೇಘಾಲಯದಲ್ಲಿ ಇಂಟರ್ನೆಟ್‌ ಕಡಿತ ಮುಂದುವರಿದಿದೆ. ದೆಹಲಿಯಲ್ಲಿ ಮಾತ್ರ ಇಂಟರ್ನೆಟ್ ಸೇವೆಗಳು ಪುನರರಾಂಭಗೊಂಡಿವೆ.

ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಪರೀಕ್ಷೆಗೆ ಸಿದ್ಧತೆ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟ ನೌಸೀನ್ (23) ಮತ್ತು ಜಲೀಲ್ ಕುದ್ರೋಳಿ (49) ಅವರ ಶವಪರೀಕ್ಷೆಗೆ ಪೊಲೀಸರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಶವಪರೀಕ್ಷಾ ಕೊಠಡಿಗಳು ಮೃತದೇಹಗಳನ್ನು ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ. ಆಸ್ಪತ್ರೆ ಸುತ್ತಮುತ್ತ ಬಿಗಿ ಬಂದೋಬಸ್ತ್ ಹಾಕಲಾಗಿದ್ದು ಎಲ್ಲೆಲ್ಲೂ ಖಾಕಿಧಾರಿಗಳೇ ಕಂಡು ಬರುತ್ತಿದ್ದಾರೆ.

ಶವಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಅನಂತರ ಪೊಲೀಸ್ ಭದ್ರತೆಯಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸುವ ಸಾಧ್ಯತೆ ಬಗ್ಗೆಯೂ ಪೊಲೀಸರು ಚಿಂತನೆ ನಡೆಸಿದ್ದಾರೆ.

ಮಂಗಳೂರಿನಲ್ಲಿ ಕರ್ಫ್ಯೂ ಇರುವುದರಿಂದ ಜನಜೀವನ ಸ್ಥಗಿತಗೊಂಡಿದೆ. ಜನರು ರಸ್ತೆಗಳಲ್ಲಿ ಸಂಚರಿಸಲು ಪೊಲೀಸರು ಅವಕಾಶ ಕೊಡುತ್ತಿಲ್ಲ.

ಮಂಗಳೂರು: ಬಸ್ ಸಂಚಾರ ಸ್ಥಗಿತ

ಮಂಗಳೂರು: ಪೊಲೀಸರ ಸೂಚನೆ ಮತ್ತು ಸಾರ್ವಜನಿಕ ಸುರಕ್ಷೆ ದೃಷ್ಟಿಯಿಂದ ಮಂಗಳೂರಿನ 1, 2 ಮತ್ತು 3ನೇ ಘಟಕಗಳ ಬಸ್‌ ಸಂಚಾರ ನಿಲ್ಲಿಸಲಾಗಿದೆ. ದೂರ ಪ್ರಯಾಣದ ಬಸ್‌ಗಳ ಸಂಚಾರದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸರ ಸಲಹೆ ಪಡೆದು ತೀರ್ಮಾನಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿಯೇ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಮಂಗಳೂರು ನಗರದಲ್ಲಿ ಕರ್ಫ್ಯೂ ವಿಧಿಸಿರುವುದರಿಂದ ಬಸ್ ಮತ್ತು ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಮಾತಿನ ಮೇಲೆ ನಿಯಂತ್ರಣವಿರಲಿ: ಯಡಿಯೂರಪ್ಪ

ಬೆಂಗಳೂರು: ಸಮಾಜದಲ್ಲಿ ಶಾಂತಿ ನೆಲೆಸಬೇಕು. ಇದು ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವರು ಮತ್ತು ಶಾಸಕರಿಗೆ ಕಿವಿ ಹಿಂಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಮಾತಿನ ಮೇಲೆ ನಿಯಂತ್ರಣವಿರಲಿ, ಮತೀಯ ಭಾವನೆ ಕೆರಳಿಸುವ ಹೇಳಿಕೆ ಕೊಡಬೇಡಿ. ಬಾಯಿಗೆ ಬಂದಂತೆ ಮಾತನಾಡಬೇಡಿ’ ಎಂದು ಯಡಿಯೂರಪ್ಪ ಮಾರ್ಗದರ್ಶಿ ಸೂತ್ರಗಳನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

ಮಂಗಳೂರಿಗೆ ನಾಳೆ ಯಡಿಯೂರಪ್ಪ ಭೇಟಿ ನೀಡುವ ಸಾಧ್ಯತೆ ಇದೆ.

ವೆನ್ಲಾಕ್ ಆಸ್ಪತ್ರೆ ಗೆ ನುಗ್ಗಿದ 50 ಜನರ ಬಂಧನ

ಪತ್ರಕರ್ತರ ಸೋಗಿನಲ್ಲಿ ವೆನ್ಲಾಕ್ ಆಸ್ಪತ್ರೆ ಗೆ ನುಗ್ಗಿದ 50 ಜನರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದರು. ನಿನ್ನೆ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ‘ಮಾರಕಾಸ್ತ್ರಗಳನ್ನು ಹೊಂದಿದ್ದ ಅವರನ್ನು ಕೇರಳದವರು ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಶಾಂತಿ ಕಾಪಾಡಿ ಎಂದ ಸೂಪರ್‌ಸ್ಟಾರ್

ಖಾದರ್ ವಿರುದ್ಧ ಕ್ರಮಕ್ಕೆ ಸಂತೋಷ್ ಒತ್ತಾಯ

ಬೆಂಗಳೂರು: ಐಐಎಂಬಿ ವಿದ್ಯಾರ್ಥಿ, ಶಿಕ್ಷಕರ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ

ಇಬ್ಬರ ಬಲಿ ಯಾಕಾಗಿ? ಸರ್ಕಾರಕ್ಕೆ ಎಚ್‌ಡಿಕೆ ಪ್ರಶ್ನೆ

ಕಾಯ್ದೆ ಜಾರಿ ಖಚಿತ ಎಂದ ನಡ್ಡಾ

ಅಘೋಷಿತ ತುರ್ತುಸ್ಥಿತಿ: ವಿರೋಧ ಪಕ್ಷ ಕಳವಳ

ಬಂಧನಕ್ಕೆ ತಡೆ: ದೆಹಲಿ ಹೈಕೋರ್ಟ್ ನಿರಾಕರಣೆ

ಸಂವಾದವೇ ಪ್ರಜಾಪ್ರಭುತ್ವದ ಲಕ್ಷಣ: ಎಚ್‌ಡಿಕೆ, ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.