ADVERTISEMENT

ಪೌರತ್ವ ಕಾಯ್ದೆ ಪ್ರತಿಭಟನೆ| ಮಂಗಳೂರಿನಲ್ಲಿ 20 ಪೊಲೀಸರಿಗೆ ಗಾಯ, ಇಬ್ಬರು ನಾಗರಿಕರು ಐಸಿಯುನಲ್ಲಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:42 IST
Last Updated 19 ಡಿಸೆಂಬರ್ 2019, 14:42 IST

ಮಂಗಳೂರಿನಲ್ಲಿ 20 ಪೊಲೀಸರು, ಇಬ್ಬರು ನಾಗರಿಕರಿಗೆ ಗಾಯ

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆಯಲ್ಲಿ ಜರುಗಿದ ಹಿಂಸಾಚಾರದಲ್ಲಿ 20 ಪೊಲೀಸರು ಹಾಗೂ  ಇಬ್ಬರು ನಾಗರಿಕರಿಗೆ ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ. 

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಾಳೆ (ಶನಿವಾರ) ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಬೆಂಗಳೂರಿನಲ್ಲಿ IIMB ವಿದ್ಯಾರ್ಥಿಗಳ ಪ್ರತಿಭಟನೆ 

ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ಬನ್ನೇರುಘಟ್ಟ ರಸ್ತೆಯಲ್ಲಿ IIMB ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಾಲೇಜು ಆವರಣದ ಹೊರಗೆ ಪ್ರತಿಭಟನೆ ನಡೆಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಆವರಣದೊಳಗೆ ಕುಳಿತು, ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಪಾದರಕ್ಷೆ ವಾಪಸ್ಸು ಪಡೆಯದಿರಲು ವಿದ್ಯಾರ್ಥಿಗಳ ನಿರ್ಧಾರ ಮಾಡಿದ್ದಾರೆ. ಪ್ರತಿಭಟನೆಗೆ ನಿರ್ಬಂಧಿಸಿದ್ದರಿಂದ ಈ ವಿನೂತನ ಪ್ರತಿಭಟನೆ ನಡೆಸಲಾಯಿತು ಎನ್ನಲಾಗಿದೆ.

ADVERTISEMENT

 ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ನಡುವೆ  ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನೆ ವಾಪಸ್ಸು ಪಡೆಯಲು ಆಡಳಿತ ಮಂಡಳಿ ಒತ್ತಡ ಹಾಕುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮದ ಬೆದರಿಕೆ ಹಾಕಲಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಉದ್ರಿಕ್ತ ವಾತಾವರಣ, ಕರ್ಫ್ಯೂ 

ಮಂಗಳೂರು: ನಗರದಲ್ಲಿ ಉದ್ರಿಕ್ತ ವಾತಾವರಣ ಮುಂದುವರಿದಿದ್ದು, ಹಂಪನಕಟ್ಟೆ, ಬಂದರು ಸೇರಿದಂತೆ ಉಪನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಮಂಗಳೂರು ಉತ್ತರ, ದಕ್ಷಿಣ, ಪೂರ್ವ, ಬರ್ಕೆ ಮತ್ತು ಉರ್ವ ಠಾಣೆ ವ್ಯಾಪ್ತಿಯಲ್ಲಿ 20 ರಂದು ಮಧ್ಯರಾತ್ರಿವರೆಗೆ ಕರ್ಫ್ಯೂ ವಿಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪ್ರತಿಭಟನೆಯಿಂದ ಹಿಂದೆ ಸರಿಯಬೇಡಿ–ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವವವರೆಗೂ ಪ್ರತಿಭಟನೆಯನ್ನು ಮುಂದುವರೆಸಿ, ಯಾವುದೇ ಕಾರಣಕ್ಕೂ ‍ಪ್ರತಿಭಟನೆಯಿಂದ ಹಿಂದೆ ಸರಿಯಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಮುಂಬೈನ ಕ್ರಾಂತಿ ಮೈದಾನದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಪೊಲೀಸರು ವ್ಯಾಪಕ ಬಂದೋ ಬಸ್ತ್‌ ಮಾಡಿದ್ದಾರೆ. 

ಮಹಾರಾಷ್ಟ್ರದಲ್ಲಿ ಪೌರತ್ವ ಕಾಯ್ದೆ ವಿರೋದಿಸಿ ಪ್ರತಿಭಟನೆಗಳು ನಡೆಯುತ್ತಿದ್ದು ಮುಂಬೈ, ನಾಗಪುರ ಸೇರಿದಂತೆ ಹಲವು ಕಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರೋದಿಸಿ ಪ್ರತಿಭಟನಾ ನಡೆಸುವವರನ್ನು ಪೊಲೀಸರು ಇಲ್ಲಿನ ಸುರ್ಜೆವಾಲ್‌ ಕ್ರೀಡಾಂಗಣದಲ್ಲಿ ಬಂಧಿಸಿದ್ದಾರೆ. ಪ್ರತಿಭಟನಾಕಾರರಿಗೆ ಪೊಲೀಸರು ಹಣ್ಣುಗಳನ್ನು ನೀಡಿದರು

ಬೆಂಗಳೂರು: ಚದುರಿದ ಪ್ರತಿಭಟನಾಕಾರರು. ಸಂಚಾರ ಸಹಜ ಸ್ಥಿತಿಗೆ ಮರಳಲು ಇನ್ನೂ ಸಮಯ ಬೇಕು.

ಬೆಂಗಳೂರು: ಚದುರಿದ ಪ್ರತಿಭಟನಾಕಾರರು. ಸಂಚಾರ ಸಹಜ ಸ್ಥಿತಿಗೆ ಮರಳಲು ಇನ್ನೂ ಸಮಯ ಬೇಕು.

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಪೌರತ್ವ ಕಾಯ್ದೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ವಾಹನಗಳಿಗೆ ಮತ್ತು ಪೊಲೀಸ್‌ ಠಾಣೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ದೆಹಲಿಯ ಹಲವು ಕಡೆ  ಮೊಬೈಲ್ ನೆಟ್‌ವರ್ಕ್‌ ಕಡಿತ

ಸರ್ಕಾರದ ಸೂಚನೆ ಮೇರೆಗೆ ಮೊಬೈಲ್ ನೆಟ್‌ವರ್ಕ್‌ ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಏರ್‌ಟೆಲ್. ರಾಷ್ಟ್ರ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರಣದಿಂದಾಗಿ ಮೊಬೈಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ರಾಮಚಂದ್ರ ಗುಹಾ ಬಂಧನಕ್ಕೆ ಮಮತಾ ಖಂಡನೆ

ಇತಿಹಾಸಕಾರ ರಾಮಚಂದ್ರ ಗುಹಾ ಅವರ ಬಂಧನವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ.

‘ಈ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಭಯವಿದೆ. ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಗಳ ಬಗ್ಗೆ ಖ್ಯಾತ ಇತಿಹಾಸಕಾರರೊಬ್ಬರು ಗಾಂಧಿ ಚಿತ್ರ ಹಿಡಿದು ಮಾಧ್ಯಮಗಳ ಎದುರು ಮಾತನಾಡುವುದರ ಬಗ್ಗೆಯೂ ಈ ಸರ್ಕಾರಕ್ಕೆ ಭಯವಿದೆ. ರಾಮಚಂದ್ರ ಗುಹಾ ಬಂಧನವನ್ನು ನಾನು ಖಂಡಿಸುತ್ತೇನೆ. ನನ್ನ ಸಂಪೂರ್ಣ ಬೆಂಬಲ ಗುಹಾ ಅವರಿಗೆ ಇದೆ’ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಮಾನ ಹಾರಾಟ ರದ್ದುಪಡಿಸಿದ ಇಂಡಿಗೊ

ನವದೆಹಲಿ: ಟ್ರಾಫಿಕ್‌ ಜಾಮ್‌ನಿಂದ ಕಂಗಾಲಾಗಿರುವ ದೆಹಲಿಯಲ್ಲಿ ವಿಮಾನಗಳು ಹೊರಡುವ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಲು ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಇಂಡಿಗೊ 19 ವಿಮಾನಗಳನ್ನು ರದ್ದುಪಡಿಸಿದೆ.

ಬೆಂಗಳೂರು: ಪೊಲೀಸ್ ವಶದಲ್ಲಿದ್ದ 200 ಮಂದಿ ಬಿಡುಗಡೆ

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದ 200ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆಡುಗೋಡಿ ಠಾಣಾ ವ್ಯಾಪ್ತಿಯ ಕಲ್ಯಾಣ ಮಂಟಪದಲ್ಲಿ ಇರಿಸಿದ್ದ 126, ಆಡುಗೋಡಿ ಠಾಣೆಯಲ್ಲಿ ಇರಿಸಿದ್ದ 24 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿಯಲ್ಲಿ 10 ಕಿ.ಮೀ. ಉದ್ದಕ್ಕೆ ವಾಹನಗಳ ಸಾಲು

ನವದೆಹಲಿ: ಮುಂಜಾನೆಯಿಂದಲೇ ಪ್ರತಿಭಟನೆಯ ಕಾವು ಜೋರಾಗಿತ್ತು. ದೆಹಲಿ–ಗುರುಗ್ರಾಮ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ವೇ ರಸ್ತೆಯಲ್ಲಿ ಸುಮಾರು 10 ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದವು.

ಪೊಲೀಸ್ ವಶಕ್ಕೆ ಪ್ರಶಾಂತ್ ಭೂಷಣ್, ಹರ್ಷ ಮಂದಿರ್‌

ನವದೆಹಲಿ: ಪೊಲೀಸ್ ವಶಕ್ಕೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದಿರ್‌ ಬಂಧನ. ‘ಸಂವಿಧಾನ್ ಜಿಂದಾಬಾದ್’ ಘೋಷಣೆ ಕೂಗುತ್ತಾ ಪೊಲೀಸ್ ವಾಹನ ಏರಿದ ಪ್ರತಿಭಟನಾನಿರತರು.

ಮಂಗಳೂರಿನಲ್ಲಿ ಪ್ರತಿಭಟನೆಗೆ ಯತ್ನ: ಲಘು ಲಾಠಿ ಪ್ರಹಾರ

ಮಂಗಳೂರು: ನಿಷೇಧಾಜ್ಞೆ ಮಧ್ಯೆ ಪೌರತ್ವ‌ ತಿದ್ದುಪಡಿ‌ ಕಾಯ್ದೆ ವಿರೋಧಿಸಿ‌ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿಯಿಂದ ಜಿಲ್ಲಾಧಿಕಾರಿ‌ ಕಚೇರಿವರೆಗೆ ಪ್ರತಿಭಟನೆ ನಡೆಸಲು ಕೆಲವರು ಯತ್ನಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಅನುಮತಿ ಇಲ್ಲದೇ‌ ಪ್ರತಿಭಟನೆ ನಡೆಸುವಂತಿಲ್ಲ ಎಂದು ಈಗಾಗಲೇ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದು, ಏಕಾಏಕಿ ಪ್ರತಿಭಟನೆಗೆ ಯತ್ನಿಸಿದ್ದರಿಂದ ‌ಈ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅದೆಷ್ಟೂ ಕೂಗ್ತಾರೋ ಕೂಗಲಿ ಬಿಡಿ...

ಬೆಂಗಳೂರು: ಪ್ರತಿಭಟನಾನಿರತರನ್ನು ಚದುರಿಸುವ ವಿಚಾರದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್ ತನ್ವೀರ್ ಅಹ್ಮದ್‌ ಹೀಗೆ ಹೇಳಿದರು.

‘ಗಂಟಲು ಕಟ್ಟುವವರೆಗೆ ಘೋಷಣೆಗಳನ್ನು ಕೂಗಿಕೊಳ್ಳಲಿ ಬಿಡಿ. ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಮನವೊಲಿಸಲು ಪ್ರಯತ್ನಪಟ್ಟಷ್ಟೂ ಅವರ ಉದ್ಧಟತನ ಹೆಚ್ಚಾಗುತ್ತಿದೆ’ ಎಂದರು.

ಬೆಂಗಳೂರು: ಮಾರ್ಕೆಟ್ ರಸ್ತೆಯಲ್ಲಿ ಸಂಚಾರ ನಿಷೇಧ

ಬೆಂಗಳೂರು: ಕೆ.ಆರ್.ಮಾರ್ಕೆಟ್, ಎಸ್‌ಪಿ ರಸ್ತೆಗಳಲ್ಲಿ ಸಂಚಾರ ನಿಷೇಧಿಸಿದ ಪೊಲೀಸರು. ಜೆ.ಸಿ.ರಸ್ತೆಯಲ್ಲಿ ವಾಹನಗಳು ದಟ್ಟೈಸಿದ್ದು ನಿಧಾನಗತಿಯಲ್ಲಿ ಸಂಚರಿಸುತ್ತಿವೆ.

ಹುಬ್ಬಳ್ಳಿ: ಕ್ರೀಡಾಂಗಣಕ್ಕೆ ಪೊಲೀಸ್ ಕಮಿಷನರ್ ಭೇಟಿ

ಹುಬ್ಬಳ್ಳಿ: ರಣಜಿ ಪಂದ್ಯದ ಸ್ಥಿತಿ ಗತಿ ಬಗ್ಗೆ ಪರಿಶೀಲಿಸಲು  ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಕ್ರೀಡಾಂಗಣಕ್ಕೆ ಬಂದಿದ್ದರು.

ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಸುತ್ತಮುತ್ತಲೂ ಹಿಂದಿನ ಎರಡು ದಿನಗಳಿಗಿಂತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆಯಿಂದಲೂ  ಪಂದ್ಯ ಸರಾಗವಾಗಿ ನಡೆದಿದೆ. ಕಮಿಷನರ್ ಆಟಗಾರರ ಕೊಠಡಿ, ಪ್ರೆಸ್ ಬಾಕ್ಸ್ ಗೆ ಭೇಟಿ‌ ನೀಡಿದರು.

ಮಂಡ್ಯದಲ್ಲಿ ಪ್ರತಿಭಟನೆ: ಬಂಧನ

ಮಂಡ್ಯ: ನಿಷೇಧಾಜ್ಞೆ ನಡುವೆಯೂ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಸಿಐಟಿಯು, ಸಿಪಿಐ (ಎಂ), ದಸಂಸ ಸೇರಿ ವಿವಿಧ ಸಂಘಟನೆಗಳ ಸದಸ್ಯರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ಮುಂದಾದರು. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.

ಮೈಸೂರಿನಲ್ಲಿ ನಿಷೇಧಾಜ್ಞೆಗೆ ಖಂಡನೆ: ಕಮಿಷನರ್ ಜತೆ ಚರ್ಚೆ


ಮೈಸೂರು: ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ಕಮಿಷನರ್ ಕೆ.ಟಿ.ಬಾಲಕೃಷ್ಣ ಅವರಿಗೆ ಡಿ.24 ರಂದು ಪ್ರತಿಭಟನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಮನವಿ ಪರಿಶೀಲಿಸಿ ನಂತರ‌ ಅನುಮತಿ ನೀಡುವುದಾಗಿ ಕಮಿಷನರ್ ಭರವಸೆ ನೀಡಿದರು.

ಎಸ್.ಆರ್.ಹಿರೇಮಠ ಮಾತನಾಡಿ, ಮೊದಲು ಪ್ರತಿಭಟನೆಗೆ ಅನುಮತಿ ನೀಡಿ ನಂತರ ವಾಪಸ್ ತೆಗೆದುಕೊಂಡಿದ್ದು ಸರಿಯಲ್ಲ ಎಂದು ಖಂಡಿಸಿದರು.

ಹೋರಾಟಗಾರರಾದ ಎಸ್.ಆರ್.ಹಿರೇಮಠ, ಚಂದ್ರಶೇಖರ ಮೇಟಿ, ಬಡಗಲಪುರ ನಾಗೇಂದ್ರ ಇತರರು ಇದ್ದರು.

ತುಮಕೂರಿನಲ್ಲಿ ಪ್ರತಿಭಟನೆಗೆ ಯತ್ನ: ಗುಂಪು ಚದುರಿಸಿದ ಪೊಲೀಸರು

ತುಮಕೂರು: ಪೌರತ್ವ(ತಿದ್ದುಪಡಿ) ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯ ಹಾಗೂ ಪ್ರಗತಿಪರ ಸಂಘಟಗಳು ತುಮಕೂರಿನಲ್ಲಿ ನಿಷೇದಾಜ್ಞೆ ನಡುವೆಯೂ ಪ್ರತಿಭಟನೆಗೆ ಯತ್ನಿಸಿದ್ದು, ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೇ ಗುಂಪನ್ನು ಚದುರಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ವಚ್ಛತೆ ಕಾಪಾಡಲು ಯತ್ನ

ಬೆಂಗಳೂರು: ಟೌನ್‌ಹಾಲ್ ಆವರಣದಲ್ಲಿದ್ದ ನೀರಿನ ಬಾಟಲಿ ಮತ್ತು ಇತರ ಕಸವನ್ನು ಹೆಕ್ಕುವ ಮೂಲಕ ಕೆಲವರು ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಗಮನ ಸೆಳೆದರು.

ಪ್ರತಿಭಟನೆ ಬಿಸಿ: ಟ್ರಾಫಿಕ್ ಜಾಂ

ಪ್ರತಿಭಟನೆ ನಡೆಯುತ್ತಿರುವುದರಿಂದ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಉದ್ದನೆಯ ವಾಹನಗಳ ಸಾಲಿನಲ್ಲಿ ಸಿಲುಕಿರುವ ಸವಾರರು ಹೇಗೆ ಪಾರಾಗುವುದು ಎಂದು ತೋಚದೆ ಕಂಗಾಲಾಗಿದ್ದಾರೆ.

ವಿಡಿಯೊ | ಕಲಬುರ್ಗಿ ಬೆಳವಣಿಗೆ ಕುರಿತು ಕಮಿಷನರ್ ನಾಗರಾಜ್‌ ಮಾಹಿತಿ

ವಿಡಿಯೊ | ಕಲಬುರ್ಗಿಯಲ್ಲಿ ಪ್ರತಿಭಟನೆ

ವಿಡಿಯೊ | ಬೆಂಗಳೂರಿನಲ್ಲಿ ಪೊಲೀಸ್ ವಶಕ್ಕೆ ಪ್ರತಿಭಟನಾನಿರತರು

ಬೆಂಗಳೂರಿನಲ್ಲಿ ಪ್ರತಿಭಟನೆ

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಮತ್ತು ಹಡ್ಸನ್ ವೃತ್ತಗಳಲ್ಲಿ ಭಾರಿ ಜನಸಂದಣಿ ಕಂಡು ಬಂತು. ಸಂಚಾರ ಅಸ್ತವ್ಯಸ್ತಗೊಂಡಿತ್ತು. (ಪ್ರಜಾವಾಣಿ ಚಿತ್ರ: ಅನೂಪ್ ಆರ್.ತಿಪ್ಪೇಸ್ವಾಮಿ)

ಕಲಬುರ್ಗಿಯಲ್ಲಿ ಪ್ರತಿಭಟನೆ

ಕಲಬುರ್ಗಿ: ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಪೀಪಲ್ಸ್ ಫೋರಂ ನೇತೃತ್ವದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ‌ಕರೆ ನೀಡಿದ್ದ ಬಂದ್ ಮತ್ತು ಪ್ರತಿಭಟನೆ ಅಂಗವಾಗಿ ನಗರದ ಜಗತ್ ವೃತ್ತದಲ್ಲಿ ಭಾರಿ ಜನಸ್ತೋಮ ಸೇರಿತ್ತು.

ಪ್ರತಿಭಟನಾನಿರತರು ವೃತ್ತದಲ್ಲಿಯೇ ನಮಾಜ್ ಮಾಡಿದರು.

ಮತ್ತೊಂದೆಡೆ ನಗರದ ಸರ್ದಾರ್ ವಲ್ಲಭಭಾಯಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ‌ನಡೆಸಲು‌ ಮುಂದಾದ ಸಿಪಿಐ, ಸಿಪಿಐ (ಎಂ) ಹಾಗೂ ಎಸ್‌ಯುಸಿಐ (ಸಿ) ಪಕ್ಷದ ಮುಖಂಡರನ್ನು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ವಶಕ್ಕೆ ‌ಪಡೆದರು.

ನಿಷೇಧಾಜ್ಞೆ ನಡುವೆಯೂ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿಷೇಧಾಜ್ಞೆ ನಡುವೆಯೂ ನಗರದಲ್ಲಿ ಪ್ರತಿಭಟನೆಗಳು ನಡೆದಿವೆ. ಇಲ್ಲಿನ ಮಿಲಾದ್ ಬಾಗ್‌ನಲ್ಲಿ ಎಸ್‌ಡಿಪಿಐ ಹಾಗೂ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ  ನೂರಾರು ಮಂದಿ ಸೇರಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವಾಪಸ್ ಪಡೆಯಬೇಕು ಎಂದು ಪೊಲೀಸರು ಸೂಚನೆ ನೀಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಪೊಲೀಸ್ ವಶಕ್ಕೆ ಪ್ರತಿಭಟನಾಕಾರರು

ಕರ್ನಾಟಕ ಸೇರಿ ಎಲ್ಲ ರಾಜ್ಯಗಳಿಗೂ ಪೌರತ್ವ ಕಾಯ್ದೆ ಅನ್ವಯ: ಯಡಿಯೂರಪ್ಪ

ದಯವಿಟ್ಟು ಎಲ್ಲರೂ ಶಾಂತವಾಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಕೋರಿಕೆ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಶಾಂತವಾಗಿರಿ ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ, ಮುಖಂಡರಿಗೆ ಮತ್ತು ಜನರಿಗೆ ಕೋರಿಕೊಳ್ಳುತ್ತೇನೆ. ಈ ಕಾಯ್ದೆಯಿಂದ ದೇಶದಲ್ಲಿರುವ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಅನ್ವಯವಾಗುವುದು ಬೇರೆ ದೇಶಗಳಿಂದ ಬಂದು ಇಲ್ಲಿ ನೆಲೆಸಿರುವವರಿಗೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ದೆಹಲಿಯ ಕೆಲವೆಡೆ ಏರ್‌ಟೆಲ್‌ ಎಸ್‌ಎಂಎಸ್‌, ಇಂಟರ್‌ನೆಟ್ ಸೇವೆ ಸ್ಥಗಿತ

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದೆಹಲಿಯ ಕೆಲವು ಪ್ರದೇಶಗಳಲ್ಲಿ ಏರ್‌ಟೆಲ್‌ ತನ್ನ ಎಸ್‌ಎಂಎಸ್‌ ಮತ್ತು ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿದೆ.

ಬೆಂಗಳೂರು: ಮೈಸೂರ್‌ ಬ್ಯಾಂಕ್‌, ಟೌನ್‌ಹಾಲ್ ವೃತ್ತದ ಬಳಿ ಪ್ರತಿಭಟನೆ

ಬಳ್ಳಾರಿ: 38 ಮಂದಿ ವಶಕ್ಕೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗಡಿಗಿ‌ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 38 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ರಾಮರಾವ್ ತಿಳಿಸಿದರು.

ಪ್ರತಿಭಟನೆ ನಿಯಂತ್ರಿಸಲು ನಿಷೇಧಾಜ್ಞೆ ಜಾರಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಶಾಸಕಿ ಸೌಮ್ಯಾ ರೆಡ್ಡಿ, ಪಿಯುಸಿಎಲ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗುರುವಾರ ಹೈಕೋರ್ಟ್‌ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿ ಅರ್ಜಿಗಳನ್ನು ತುರ್ತಾಗಿ ವಿಚಾರಣೆಗೆ ಅಂಗೀಕರಿಸುವಂತೆ ಮನವಿ ಮಾಡಿದರು.

ಶುಕ್ರವಾರ (ಡಿ.20) ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವುದಾಗಿ ನ್ಯಾಯಪೀಠ ಹೇಳಿದೆ.

ರಾಯಚೂರು: ಹೋರಾಟ ಮುಂದೂಡಿಕೆ

ಪೌರತ್ವ ಕಾಯ್ದೆ ವಿರೋಧಿಸಿ ಎಸ್‌ಯುಸಿಐ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಪ್ರಜಾತಂತ್ರ ವ್ಯವಸ್ಥೆ ವಿರುದ್ಧವಾಗಿ 144 ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರತಿಭಟನೆಯನ್ನು ಅನಿರ್ಧಿಷ್ಟಾವಧಿ ಮುಂದಕ್ಕೆ ಹಾಕಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಇನ್ನುಳಿದ ಎಡಪಕ್ಷಗಳು, ಮುಸ್ಲಿಂ ಹಾಗೂ ದಲಿತಪರ ಸಂಘಟನೆಗಳು ಪ್ರತಿಭಟನೆಯನ್ನು ಕೈಬಿಟ್ಟಿದ್ದು, ಮಧ್ಯಾಹ್ನ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿಲ್ಲ ಎಂಧು ಪೂರ್ವ ಸೂಚನೆ ನೀಡಿದ್ದಾರೆ. ಜನಜೀವನ ಎಂದಿನಂತೆ ಮುಂದುವರಿದಿದೆ.

ಹೊಸಪೇಟೆ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ನಿಷೇಧಾಜ್ಞೆ ನಡುವೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಸಿಪಿಎಂ ಹಾಗೂ ಡಿವೈಎಫ್‌ಐ ಕಾರ್ಯಕರ್ತರನ್ನು ಗುರುವಾರ ಹೊಸಪೇಟೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು.

ನಂತರ ಚಿತ್ತವಾಡ್ಗಿ ಠಾಣೆಗೆ ಕರೆದೊಯ್ದರು. ನಗರದ ಶ್ರಮಿಕ ಭವನದ ಎದುರು ಇನ್ನಷ್ಟೇ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಸೇರಿದ್ದರು. ವಿಷಯ ಗೊತ್ತಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಅವರನ್ನೂ ವಶಕ್ಕೆ ಪಡೆದರು.

ಬೆಂಗಳೂರು: ಶಿವಾಜಿನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿರುವ ಶಿವಾಜಿನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಹಿನ್ನೆಲೆಯಲ್ಲಿ ನಗರದಾದ್ಯಂತ ಸೆಕ್ಷನ್ 144  ಜಾರಿ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶವೆಂಬ ಕಾರಣಕ್ಕೆ ಇಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

ಶಿವಾಜಿನಗರ ಬಸ್ ನಿಲ್ದಾಣ, ರಸ್ಸೆಲ್ ಮಾರ್ಕೆಟ್, ಇಂಡಿಯನ್ ಎಕ್ಸ್ ಪ್ರೆಸ್, ಎಸ್‍ಕೆಪಿ ದರ್ಗಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕೆಎಸ್‍ಆರ್ ಪಿ, ಸಿಎಆರ್ ಸೇರಿದಂತೆ ಸ್ಥಳೀಯ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.

ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಶಿವಾಜಿನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಕೈಗೊಳ್ಳಲಾಗುವ ಸಾಧ್ಯತೆ ಇದೆ.

ರಾಮನಗರ: ನಿಷೇಧಾಜ್ಞೆ ಜಾರಿ

ರಾಮನಗರ: ಪೌರತ್ವ ತಿದ್ದುಪಡಿ‌ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಇದೇ 21ರವರೆಗೆ ಜಿಲ್ಲೆಯಾದ್ಯಂತ  ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶ ಹೊರಡಿಸಿದ್ದಾರೆ.

ಪ್ರತಿಭಟನಾಕಾರರ ವಶ: ಬೇಸರದಿಂದ ಟ್ವೀಟ್‌ ಮಾಡಿದ ಬಯೋಕಾನ್‌ ಮುಖ್ಯಸ್ಥೆ

ಇದು ನಿಜಕ್ಕೂ ಆಘಾತಕಾರಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡಿಲ್ಲ ಎಂಬುದನ್ನು ಪ್ರತಿಫಲಿಸುತ್ತಿದೆ. ಶಾಂತಿಯುತ ಪ್ರತಿಭಟನೆಯನ್ನು ಈ ರೀತಿಯಾಗಿ ಹತ್ತಿಕ್ಕಬಾರದು ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಶಾ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು: ರಾಮಚಂದ್ರ ಗುಹಾ, ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ, ನಿಷೇಧಾಜ್ಞೆ ಉಲ್ಲಂಘಿಸಿ ಬೆಂಗಳೂರಿನ ಟೌನ್ ಹಾಲ್‌ ಎದುರು ಪ್ರತಿಭಟನೆ ನಡೆಸಿದ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಟೌನ್ ಹಾಲ್ ಎದುರು ಘೋಷಣೆಗಳನ್ನು ಕೂಗಿದ ವಿವಿಧ ಸಂಘಟನೆಗಳ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು.

ಪ್ರತಿಭಟನೆಯ ವೇಳೆ ಗಲಭೆ, ವಾಹನ ದಟ್ಟಣೆ, ಹಿಂಸಾಚಾರ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಗುರುವಾರದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. 

ನಗರದ ಟೌನ್ ಹಾಲ್, ಸ್ವಾತಂತ್ರ್ಯ ಉದ್ಯಾನ, ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ಪ್ರತಿಭಟನೆ ಸಂಭವನೀಯ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.

ಪೌರತ್ವ ಕಾಯ್ದೆ ತಿದ್ದುಪಡಿ 2019 ಹಾಗೂ ಎನ್‌ಆರ್‌ಸಿ ವಿರೋಧಿಸಿ ಎಡಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ನಿಷೇಧಾಜ್ಞೆ ಉಲ್ಲಂಘಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿವೆ.

ಮುಸ್ಲಿಮರ ರಕ್ಷಣೆ ನಮ್ಮ ಕರ್ತವ್ಯ: ಯಡಿಯೂರಪ್ಪ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ಯು.ಟಿ.ಖಾದರ್‌ ಅಂತಹವರಿಂದ ಪ್ರತಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಮುಸ್ಲಿಮರ ಹಿತರಕ್ಷಣೆ ನಮ್ಮ ಕರ್ತವ್ಯ. ದಯವಿಟ್ಟು ಎಲ್ಲರೂ ಶಾಂತಿಯನ್ನು ಕಾಪಾಡಿ. ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಬೆಂಬಲ ನೀಡುವುದು ಮುಂದುವರಿಸಿದರೆ, ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ– ಮುಖ್ಯಮಂತ್ರಿ ಯಡಿಯೂರಪ್ಪ

ಮೈಸೂರು ಬ್ಯಾಂಕ್‌ ವೃತ್ತದ ಬಳಿ ನಿಯೋಜನೆಯಾಗಿರುವ ಪೊಲೀಸರು

ಬೆಂಗಳೂರು: ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ

ನಿಷೇಧಾಜ್ಞೆ ಉಲ್ಲಂಘಿಸಿ ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಕಾರರು ಮತ್ತು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. 

ಪೊಲೀಸರು ಪ್ರತಿಭಟನೆಕಾರನ್ನು ಬಲವಂತವಾಗಿ ವಶಕ್ಕೆ ಪಡೆದರು. ಕೆಲ ಪ್ರತಿಭಟನಕಾರರು ಬಿಎಂಟಿಸಿ ಬಸ್‌ಗೆ ಅಡ್ಡವಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ಕಾಯ್ದೆ ವಿರೋಧಿಸಿ ಘೋಷಣೆಯನ್ನು ಕೂಗುತ್ತಿದ್ದರು.

ಕಲಬುರ್ಗಿ: ಪ್ರತಿಭಟನಾಕಾರರನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಅಡ್ಡಿ

ಕಲಬುರ್ಗಿ ಬಂದ್ ಪ್ರಯುಕ್ತ ಮೆರವಣಿಗೆ ನಡೆಸಲು ಮುಂದಾದ ಪೀಪಲ್ಸ್ ಫೋರಂ ಪ್ರತಿಭಟನಾಕಾರರನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ತಡೆ ಒಡ್ಡಿದರು.

ಇದರಿಂದ ಅಸಹಾಯಕರಾದ ಪೊಲೀಸರು ಪೀಪಲ್ಸ್ ಫೋರಂ ಪ್ರಮುಖರನ್ನು ಬಿಡುಗಡೆ ‌ಮಾಡಿದರು. ನೆಹರೂ ಗಂಜ್‌ನಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಯಿತು.

ಹಾಸನ: ಜಿಲ್ಲೆಯಲ್ಲಿ ನಿಷೇಧಾಜ್ಞೆ ನಡುವೆಯೂ ವಿವಿಧ ಸಂಘಟನೆಗಳು ಹಾಸನದ ಹೇಮಾವತಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. 

ಹುಬ್ಬಳ್ಳಿ: ಹೋರಾಟ ನಿರತರನ್ನು ವಶ ಪಡಿಸಿಕೊಂಡ ಪೊಲೀಸರು

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ನಿಷೇಧಾಜ್ಞೆ ಮಧ್ಯೆಯೂ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಸುಮಾರು 20 ಜನ ಮುಖಂಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಿದರು.

ಪ್ರತಿಭಟನೆಗೆ ಮುಂದಾದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಕ್ಷಣ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಹೊಸ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಸಿದ್ದು ತೇಜಿ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ವಿಜಯ ಗುಂಟ್ರಾಳ, ಮಹೇಶ ಪತ್ತಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಯ್ದೆ ವಿರೋಧಿಸಿ ರಸ್ತೆಗಿಳಿದ ಪ್ರತಿಭಟನಾಕಾರರು; ಪೊಲೀಸ್‌ ವಶ

ಕಲಬುರ್ಗಿ: ನಿಷೇಧಾಜ್ಞೆ ‌ಮಧ್ಯೆಯೂ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಕಲಬುರ್ಗಿಯ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಪೀಪಲ್ಸ್ ಫೋರಂ ನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಪೀಪಲ್ಸ್ ಫೋರಂನಿಂದ ಕಲಬುರ್ಗಿ ಬಂದ್ ಗೆ ಕರೆ ನೀಡಲಾಗಿತ್ತು. ಅದನ್ನು ತಡೆಯಲು ಬುಧವಾರ ರಾತ್ರಿಯಿಂದಲೇ ನಿಷೇಧಾಜ್ಞೆ ವಿಧಿಸಲಾಗಿದ್ದು, ಡಿ 21ರವರೆಗೆ ಜಾರಿಯಲ್ಲಿರುತ್ತದೆ.

ವಿಸ್ತಾರಾ ಏರ್‌ಲೈನ್ಸ್‌ ಪ್ರಯಾಣಿಕರಿಗೆ ಅನುಕೂಲ

ಸಂಚಾರ ದಟ್ಟಣೆಯಲ್ಲಿ ಸಿಲುಕಿ, ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದ ಪ್ರಯಾಣಿಕರಿಗೆ ನಂತರದ ವಿಮಾನಗಳಲ್ಲಿ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ವಿಸ್ತಾರಾ ಏರ್ ಲೈನ್ಸ್‌ನ ಹಿರಿಯ ಅಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದ್ದಾರೆ.
'ಇಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತರ ನಗರಗಳಿಗೆ ಟಿಕೆಟ್ ಬುಕ್ ಮಾಡಿದ್ದವರು ಅದನ್ನು ರದ್ದುಪಡಿಸಿದರೆ ಕ್ಯಾನ್ಸಲೇಶನ್ ಚಾರ್ಜ್ ಇರುವುದಿಲ್ಲ. ಉಚಿತವಾಗಿ ದಿನಾಂಕ ಮತ್ತು ಅವಧಿ ಬದಲಾವಣೆಗೂ ಅವಕಾಶ ಕಲ್ಪಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ: ರಣಜಿ ಪಂದ್ಯಕ್ಕಿಲ್ಲ ತೊಂದರೆ

ಮೂರು ದಿನ ಭಾರತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ಇದರ ಪರಿಣಾಮ ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯಕ್ಕೆ ಆಗಿಲ್ಲ.

ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಸುತ್ತಮುತ್ತಲೂ ಹಿಂದಿನ ಎರಡು ದಿನಗಳಿಗಿಂತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆಯಿಂದ ಪಂದ್ಯ ಸೂಸುತ್ರವಾಗಿ ನಡೆದಿದೆ. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಅವರು ಇಂದು ಮಧ್ಯಾಹ್ನ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕೆಎಸ್‌ಸಿಎ ಪದಾಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.

ದೆಹಲಿ ಪ್ರವೇಶಿಸುತ್ತಿರುವ ಎಲ್ಲ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಮ್ಯುನಿಸ್ಟ್ ಪಕ್ಷವು ಇಂದು ಮಧ್ಯಾಹ್ನ 12 ಗಂಟೆಗೆ ಮಂಡಿ ಹೌಸ್‌ನಿಂದ ಜಂತರ್ ಮಂತರ್‌ವರೆಗೆ ಪ್ರತಿಭಟನಾ ಮೆರವಣಿಗೆಗೆ ಕರೆ‌ ನೀಡಿತ್ತು. ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.‌ ಆದರೆ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಪೊಲೀಸರು ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿರುವುದರಿಂದ ಟ್ರಾಫಿಕ್ ಜಾಂ ಉಂಟಾಗಿರುವ ಬಗ್ಗೆ ಗುರುಗ್ರಾಮದ ಟ್ರಾಫಿಕ್ ಪೊಲೀಸರು ಜನರನ್ನು ಎಚ್ಚರಿಸಿದ್ದಾರೆ.

ಕೆಂಪುಕೋಟೆ ಬಳಿ ನಿಷೇಧಾಜ್ಞೆ ಜಾರಿ ಇದ್ದರೂ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ನಿಯೋಜಿತ ಸಮಯ 12ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಸ್ವರಾಜ್‌ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಸ್ಪಷ್ಟನೆ ನೀಡಿದ್ದಾರೆ.

<

ದೆಹಲಿಯ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಹಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಈ ಕುರಿತು ಟ್ವೀಟ್  ಮಾಡಿರುವ ಇಂಡಿಗೊ ಏರ್‌ಲೈನ್ಸ್‌, ‘ದೆಹಲಿ–ಗುಡಗಾಂವ್‌ ಹೆದ್ದಾರಿಯಲ್ಲಿ ಟ್ರಾಫಿಕ್‌ ಹೆಚ್ಚಿದ್ದು, ಪ್ರಯಾಣಿಕರು ಮುಂಚಿತವಾಗಿಯೇ ಯೋಜನೆ ಮಾಡಿಕೊಂಡು ಹೊರಟಿ’ ಎಂದು ಸಲಹೆ ನೀಡಿದೆ.

ದೆಹಲಿಯ 13 ಮೆಟ್ರೊ ನಿಲ್ದಾಣ ಬಂದ್‌

ಪ್ರತಿಭಟನೆಯ ಕಾರಣ ದೆಹಲಿಯ 13 ಮೆಟ್ರೊ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಕ್‌, ಜಸೋಲಾ ವಿಹಾರ್‌ ಶಹೀನ್‌ ಬಾಗ್‌ ಮತ್ತು ಮುನಿರ್ಕಾ, ಲಾಲ್‌ ಕಿಲಾ, ಜಾಮಾ ಮಸೀದಿ, ಚಾಂದಿನಿ ಚೌಕ್‌ ಮತ್ತು ವಿಶ್ವವಿದ್ಯಾಲಯ ನಿಲ್ದಾಣಗಳಲ್ಲಿ ರೈಲು ನಿಲ್ಲುವುದಿಲ್ಲ ಎಂದು ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್‌ ಹೇಳಿದೆ,

ದೆಹಲಿ ಕೆಂಪು ಕೋಟೆ ಬಳಿ ಸೆಕ್ಷನ್‌ 144 ಜಾರಿ

ಮಧ್ಯಾಹ್ನ 12 ಗಂಟೆಗೆ ದೆಹಲಿಯ ಕೆಂಪುಕೋಟೆಯಿಂದ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿರುವುದರಿಂದ ಕೆಂಪುಕೋಟೆ ಬಳಿ 144 ಜಾರಿ ಮಾಡಲಾಗಿದೆ.

ಚಾಮರಾಜನಗರದಲ್ಲಿ ನಿಷೇಧಾಜ್ಞೆ ಜಾರಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆ 6ರಿಂದ 21ರ ರಾತ್ರಿ 10ಗಂಟೆಯ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.