ADVERTISEMENT

ಆಳ–ಅಗಲ: ಜಮ್ಮು–ಕಾಶ್ಮೀರದ ಜನತಂತ್ರದ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:50 IST
Last Updated 25 ಡಿಸೆಂಬರ್ 2020, 20:50 IST
ಡಿಡಿಸಿ ಚುನಾವಣೆಯಲ್ಲಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿರುವುದು –ಸಂಗ್ರಹ ಚಿತ್ರ– ಪಿಟಿಐ
ಡಿಡಿಸಿ ಚುನಾವಣೆಯಲ್ಲಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿರುವುದು –ಸಂಗ್ರಹ ಚಿತ್ರ– ಪಿಟಿಐ   

ಜಮ್ಮು–ಕಾಶ್ಮೀರದಲ್ಲಿ ಈಚೆಗೆ ನಡೆದ ಡಿಡಿಸಿ ಚುನಾವಣೆಗಳು ಗುಪ್ಕಾರ್‌‌ ಒಕ್ಕೂಟದಷ್ಟೇ, ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೂ ಮಹತ್ವದ್ದಾಗಿದ್ದವು. ಬಿಜೆಪಿಗೆ ಇದು ತನ್ನ ತೀರ್ಮಾನಕ್ಕೆ ಮುದ್ರೆಯೊತ್ತುವ ಚುನಾವಣೆಯಾಗಿದ್ದರೆ, ಕೇಂದ್ರವು ಚುನಾವಣೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ನಿಲುವನ್ನು ಸಾಬೀತುಪಡಿಸುವ ಉಮೇದಿನಲ್ಲಿತ್ತು. ಜಮ್ಮು–ಕಾಶ್ಮೀರದ ರಾಜಕೀಯ ಚಟುವಟಿಕೆಗಳು ಹಳಿಗೆ ಬರಲಿವೆ ಎಂಬ ಸೂಚನೆ ಈ ಚುನಾವಣೆಯಿಂದ ಲಭಿಸಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

***

ಡಿಡಿಸಿ ಎಂಬ ಹೊಸ ವ್ಯವಸ್ಥೆ
ಜಿಲ್ಲಾ ಅಭಿವೃದ್ಧಿ ಮಂಡಳಿಗಳು ಜಮ್ಮು–ಕಾಶ್ಮೀರದ ಅಭಿವೃದ್ಧಿಗೆ ವೇಗವರ್ಧಕಗಳಾಗಿ ಕೆಲಸ ಮಾಡಲಿವೆ ಎಂದು ಸರ್ಕಾರ ಹೇಳಿದೆ. ಈ ಮಂಡಳಿಗಳಿಗೆ ವಿಶೇಷವಾದ ಅಧಿಕಾರ ಇಲ್ಲದಿದ್ದರೂ, ಕೆಳಹಂತದ ಸ್ಥಳೀಯಾಡಳಿತದ ಸಹಯೋಗದಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಹೊಣೆಯನ್ನು ಇವುಗಳಿಗೆ ನೀಡಲಾಗಿದೆ. ಜನಪ್ರತಿನಿಧಿಗಳೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಿದ್ದಾರೆ ಎಂಬುದು ಹೊಸ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ.

ADVERTISEMENT

* 1989ರ ಜಮ್ಮು ಕಾಶ್ಮೀರ ಪಂಚಾಯಿತಿರಾಜ್‌ ಕಾಯ್ದೆ ಹಾಗೂ 1996ರ ಜಮ್ಮು ಕಾಶ್ಮೀರ ಪಂಚಾಯಿತಿರಾಜ್‌ ಕಾನೂನುಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿ, ಸರ್ಕಾರವು ಕಳೆದ ಅಕ್ಟೋಬರ್‌ ತಿಂಗಳಲ್ಲಿ ‘ಜಿಲ್ಲಾ ಅಭಿವೃದ್ಧಿ ಮಂಡಳಿ’ (ಡಿಡಿಸಿ) ಹಾಗೂ ‘ಜಿಲ್ಲಾ ಯೋಜನಾ ಸಮಿತಿ’ಗಳನ್ನು ರಚಿಸಿತು. ಈವರೆಗೂ ಅಸ್ತಿತ್ವದಲ್ಲಿದ್ದ ‘ಜಿಲ್ಲಾ ಯೋಜನೆ ಹಾಗೂ ಅಭಿವೃದ್ಧಿ ಮಂಡಳಿ’ಗೆ (ಡಿಡಿಬಿ) ಬದಲಾಗಿ ಇನ್ನು ಇವು ಕಾರ್ಯನಿರ್ವಹಿಸಲಿವೆ.

* ಪ್ರತಿ ಜಿಲ್ಲೆಯಿಂದ ಚುನಾವಣೆಯ ಮೂಲಕ ಡಿಡಿಸಿಗೆ 14 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ಜಿಲ್ಲೆಯ ವ್ಯಾಪ್ತಿಗೆ ಬರುವ ಶಾಸಕರು ಹಾಗೂ ಬ್ಲಾಕ್‌ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರು ಡಿಡಿಸಿಯ ಸದಸ್ಯರಾಗಿರುತ್ತಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯು ಈ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ. ಡಿಡಿಸಿಯ ಅವಧಿ ಐದು ವರ್ಷದ್ದಾಗಿದೆ

* ಹಿಂದೆ ಜಿಲ್ಲಾಧಿಕಾರಿಗಳು ರೂಪಿಸಿದ ಯೋಜನೆಗಳಿಗೆ ಡಿಡಿಬಿಗಳು ಅನುಮೋದನೆ ನೀಡುತ್ತಿದ್ದವು. ಹೊಸ ವ್ಯವಸ್ಥೆಯಲ್ಲಿ, ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಹೊಣೆಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡಲಾಗಿದೆ. ಈ ಕಾರ್ಯವು ಮೂರು ಹಂತಗಳ ಸ್ಥಳೀಯ ಆಡಳಿತದ ಸಹಯೋಗದಿಂದ ನಡೆಯಬೇಕಾಗುತ್ತದೆ.

* ಡಿಡಿಸಿಯ ಜತೆಯಲ್ಲೇ ಪ್ರತಿ ಜಿಲ್ಲೆಯಲ್ಲೂ ಒಂದು ಜಿಲ್ಲಾ ಯೋಜನಾ ಸಮಿತಿಯನ್ನು (ಡಿಪಿಸಿ) ರಚಿಸಲಾಗುವುದು. ಇದರಲ್ಲಿ ಶಾಸಕರು ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಸಂಸದರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯ ಆರ್ಥಿಕ, ಸಾಮಾಜಿಕ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಈ ಮಂಡಳಿಯ ಹೊಣೆ

* ‘ಹಿಂದಿನ ಸರ್ಕಾರಗಳು ನಿಷ್ಕ್ರಿಯಗೊಳಿಸಿದ್ದ ಮೂರು ಹಂತದ ಸ್ಥಳೀಯಾಡಳಿತವನ್ನು ಮತ್ತೆ ಬಲಪಡಿಸುವುದು ಈ ಬದಲಾವಣೆಯ ಉದ್ದೇಶ’ ಎಂದು ಸರ್ಕಾರ ಹೇಳಿದೆ.

ಬಿಜೆಪಿಗೆ ಭರವಸೆ
ಜಮ್ಮು ಕಾಶ್ಮೀರದಲ್ಲಿ ನಡೆದ ಡಿಡಿಸಿ ಚುನಾವಣೆಯಲ್ಲಿ 75 ಸ್ಥಾನಗಳನ್ನು ಪಡೆದ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ‘ಇದು ಪಕ್ಷಕ್ಕೆ ಸಿಕ್ಕ ಬಹುದೊಡ್ಡ ಗೆಲುವು, ಅಷ್ಟೇ ಅಲ್ಲ ಭರವಸೆ ಮತ್ತು ಪ್ರಜಾಪ್ರಭುತ್ವಕ್ಕೆ ಲಭಿಸಿದ ಗೆಲುವು’ ಎಂದು ಬಿಜೆಪಿ ಹೇಳಿಕೊಂಡಿದೆ.

‘ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲಾಗದೆ ಎಲ್ಲಾ ಪಕ್ಷಗಳು ಸೇರಿಕೊಂಡು ‘ಗುಪ್ಕಾರ್‌ ಕೂಟ’ ರಚಿಸಿಕೊಂಡವು. ನ್ಯಾಷನಲ್‌ ಕಾನ್ಫರೆನ್ಸ್, ಪಿಡಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪಡೆದ ಒಟ್ಟು ಮತಗಳಿಗಿಂತ ಹೆಚ್ಚು ಮತಗಳು ಬಿಜೆಪಿಗೆ ಬಂದಿವೆ. ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಗಳಿಸಿದ ಮತಪ್ರಮಾಣವನ್ನು ಒಟ್ಟುಮಾಡಿದರೆ ಅದು ಶೇ 52ಕ್ಕಿಂತ ಸ್ವಲ್ಪ ಹೆಚ್ಚಾಗುತ್ತದೆ. ಗುಪ್ಕಾರ್‌ ಕೂಟವು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂಬುದಕ್ಕೆ ಇವೆಲ್ಲವೂ ಸ್ಪಷ್ಟ ನಿದರ್ಶನಗಳು’ ಎಂದು ಬಿಜೆಪಿಯ ಮುಖಂಡ, ಕೇಂದ್ರ ಸಚಿವ ರವಿಶಂಕರಪ್ರಸಾದ್‌ ಹೇಳಿದ್ದಾರೆ.

‘ಕೇಂದ್ರದ ನಿಲುವಿಗೆ ತಿರಸ್ಕಾರ’
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೆಲವು ತಿಂಗಳ ಬಳಿಕ, ಕಳೆದ ಅಕ್ಟೋಬರ್‌ನಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರ ಗುಪ್ಕಾರ್‌ನಲ್ಲಿರುವ ನಿವಾಸದಲ್ಲಿ ಎಲ್ಲಾ ಸ್ಥಳೀಯ ಪಕ್ಷಗಳು ಹಾಗೂ ಕೆಲವು ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದನ್ನು ವಿರೋಧಿಸುವುದು ಮತ್ತು ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವ ವಿಚಾರವಾಗಿ ಅಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಇದನ್ನು ‘ಗುಪ್ಕಾರ್‌‌ ಘೋಷಣೆ’ಗಳೆಂದು ಕರೆಯಲಾಯಿತು.

ಈ ಪಕ್ಷಗಳು ‘ಗುಪ್ಕಾರ್‌ ಕೂಟ’ ರಚಿಸಿ ಡಿಸಿಸಿ ಚುನಾವಣೆಯನ್ನು ಎದುರಿಸಿದವು. ‘370ನೇ ವಿಧಿಯನ್ನು ರದ್ದು ಮಾಡಿರುವ ಕೇಂದ್ರದ ಕ್ರಮವನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ’ ಎಂದು ಗುಪ್ಕಾರ್‌ ಕೂಟವು ವಾದಿಸಿದೆ.

‘ಆಕ್ಷೇಪಗಳಿಗೆ ಉತ್ತರ’
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ವಾಪಸ್ ಪಡೆದ ನಂತರ ನಡೆದ ಮೊದಲ ಚುನಾವಣೆ ಇದು. 2019ರ ಆಗಸ್ಟ್‌ನಲ್ಲಿ ವಿಶೇಷಾಧಿಕಾರವನ್ನು ವಾಪಸ್ ಪಡೆದುದರ ವಿರುದ್ಧ ಪಾಕಿಸ್ತಾನವೂ ಸೇರಿದಂತೆ ಕೆಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಚುನಾವಣೆಯು ಪಾಕಿಸ್ತಾನವು ಎತ್ತಿದ್ದ ಆಕ್ಷೇಪಕ್ಕೆ ಉತ್ತರ. ವಿಶೇಷಾಧಿಕಾರ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಜನರು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಕಾಶ್ಮೀರದ ಜನರು ಸ್ಥಳೀಯ ಪಕ್ಷಗಳಿಗೇ ಆದ್ಯತೆ ನೀಡಿವೆ ಎಂದು ಪಿಎಜಿಡಿ ಮೈತ್ರಿಪಕ್ಷಗಳು ಹೇಳುತ್ತಿವೆ. ಯಾವುದೇ ಹಿಂಸಾಚಾರವಿಲ್ಲದೆ ಚುನಾವಣೆ ನಡೆದಿರುವುದು, ಜನರು ಭಾರತೀಯತೆಯನ್ನು ಒಪ್ಪಿಕೊಂಡಿದ್ದಾರೆ ಎಂಬುದರ ಸೂಚನೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇಪ್ಪತ್ತರಲ್ಲಿ ಆರು ಜಿಲ್ಲೆಗಳ ಸಾರಥ್ಯ ಬಿಜೆಪಿಗೆ:ಪಿಎಜಿಡಿ ಪ್ರಾಬಲ್ಯ
ಜಮ್ಮು-ಕಾಶ್ಮೀರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿದ್ದರೂ, ಬಹುತೇಕ ಮತಗಳು ಜಮ್ಮು ಪ್ರಾಂತ್ಯದಲ್ಲಿ ಚಲಾವಣೆಯಾಗಿವೆ. ಆದರೂ, ಈ ಪ್ರಾಂತ್ಯದಲ್ಲಿ ಎಲ್ಲಾ ಸ್ಥಾನಗಳಲ್ಲಿ ಆರಿಸಿಬರಲು ಬಿಜೆಪಿ ವಿಫಲವಾಗಿದೆ. ಜಮ್ಮು ಪ್ರಾಂತ್ಯದಲ್ಲಿನ 140 ಸ್ಥಾನಗಳಲ್ಲಿ 73 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಆರಿಸಿಬಂದಿದೆ. ಉಳಿಕೆ 67 ಸ್ಥಾನಗಳು ಬಿಜೆಪಿಯೇತರ ಪಕ್ಷಗಳು ಮತ್ತು ಪಕ್ಷೇತರರು ಆರಿಸಿಬಂದಿದ್ದಾರೆ. ಕಾಶ್ಮೀರ ಪ್ರಾಂತ್ಯದ 140 ಸ್ಥಾನಗಳಲ್ಲಿ ಬಿಜೆಪಿ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಟ್ಟಾರೆ ಫಲಿತಾಂಶ ಮತ್ತು ಡಿಡಿಸಿಯ ಚುಕ್ಕಾಣಿ ಹಿಡಿದಿರುವ ಪಕ್ಷವನ್ನು ಗಣನೆಗೆ ತೆಗೆದುಕೊಂಡರೆ, ಪಿಎಜಿಡಿ ಗೆಲುವು ಸಾಧಿಸಿರುವುದು ತಿಳಿಯುತ್ತದೆ

20: ಒಟ್ಟು ಡಿಡಿಸಿಗಳ ಸಂಖ್ಯೆ
12: ಪಿಎಜಿಡಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಡಿಡಿಸಿಗಳು
6: ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಡಿಡಿಸಿಗಳು
2: ಪಕ್ಷೇತರರ ಪ್ರಾಬಲ್ಯವಿರುವ ಡಿಡಿಸಿಗಳು

ಜಮ್ಮು ಪ್ರಾಂತ್ಯ
ಜಮ್ಮು: ಬಿಜೆಪಿ
ರಿಯಾಸಿ: ಬಿಜೆಪಿ
ದೋದಾ: ಬಿಜೆಪಿ
ಕಠುವಾ: ಬಿಜೆಪಿ
ರಂಬನ್: ಪಿಎಜಿಡಿ+ಕಾಂಗ್ರೆಸ್
ಕಿಸ್ತ್ವಾರ್: ಪಿಎಜಿಡಿ+ಕಾಂಗ್ರೆಸ್
ಪೂಂಚ್: ಪಕ್ಷೇತರರು
ರಾಜೌರಿ:ಪಿಎಜಿಡಿ+ಕಾಂಗ್ರೆಸ್
ಉಧಂಪುರ: ಬಿಜೆಪಿ
ಸಾಂಬ: ಬಿಜೆಪಿ

10:ಜಮ್ಮು ಪ್ರಾಂತ್ಯದಲ್ಲಿರುವ ಡಿಡಿಸಿಗಳು
6: ಬಿಜೆಪಿ ಗೆದ್ದಿರುವ ಡಿಡಿಸಿಗಳು
3: ಪಿಎಜಿಡಿ ಗೆದ್ದಿರುವ ಡಿಡಿಸಿಗಳು
1: ಪಕ್ಷೇತರರ ಪ್ರಾಬಲ್ಯವಿರುವ ಡಿಡಿಸಿ

* ಬಿಜೆಪಿ ಪ್ರಾಬಲ್ಯವಿದ್ದ ಮೂರು ಜಿಲ್ಲೆಗಳಲ್ಲಿ ಪಿಎಜಿಡಿ ಮಿತ್ರಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದು, ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ.
* ರಾಜೌರಿ, ದೋದಾ ಜಿಲ್ಲೆಗಳಲ್ಲಿ ಬಿಜೆಪಿಯ ಹಿಡಿತ ಕಮ್ಮಿಯಾಗಿದೆ.
* ಮೂರು ಜಿಲ್ಲೆಗಳಲ್ಲಿ ಪಿಎಜಿಡಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧ್ಯಕ್ಷ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಪಿಎಜಿಡಿಗೆ ಕಾಂಗ್ರೆಸ್‌ನ ಬೆಂಬಲ ಅನಿವಾರ್ಯ. ಈ ಮೂರೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ‘ಕಿಂಗ್ ಮೇಕರ್’ ಆಗಿ ಹೊರಹೊಮ್ಮಿದೆ.
* ಬಿಜೆಪಿ ಪ್ರಾಬಲ್ಯವಿದ್ದ ಪೂಂಚ್‌ ಜಿಲ್ಲೆಯಲ್ಲಿ ಪಕ್ಷೇತರರು ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಪಕ್ಷೇತರರನ್ನು ತನ್ನತ್ತ ಸೆಳೆಯಲು ಬಿಜೆಪಿ ಮತ್ತು ಪಿಎಜಿಡಿ ಯತ್ನಿಸುತ್ತಿವೆ. ಆದರೆ ಪಕ್ಷೇತರರು ಬಿಜೆಪಿ ಸೇರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಕಾಶ್ಮೀರ ಪ್ರಾಂತ್ಯ
ಅನಂತನಾಗ್: ಪಿಎಜಿಡಿ
ಕುಲ್ಗಾಂ: ಪಿಎಜಿಡಿ
ಪುಲ್ವಾಮಾ: ಪಿಎಜಿಡಿ
ಶೋಪಿಯಾನ್: ಪಿಎಜಿಡಿ
ಬುಡಗಾಂವ್: ಪಿಎಜಿಡಿ
ಶ್ರೀನಗರ: ಪಕ್ಷೇತರರು
ಗಂಧೇರಬಲ್: ಪಿಎಜಿಡಿ
ಬಂಡಿಪೋರಾ: ಪಿಎಜಿಡಿ
ಬಾರಾಮುಲ್ಲಾ: ಪಿಎಜಿಡಿ
ಕುಪ್ವಾರಾ: ಪಿಎಜಿಡಿ

10: ಕಾಶ್ಮೀರ ಪ್ರಾಂತ್ಯದಲ್ಲಿರುವ ಡಿಡಿಸಿಗಳು
9: ಪಿಎಜಿಡಿ ಗೆದ್ದಿರುವ ಡಿಡಿಸಿಗಳು
1: ಪಕ್ಷೇತರರ ಪ್ರಾಬಲ್ಯವಿರುವ ಡಿಡಿಸಿ

* ಕಾಶ್ಮೀರ ಪ್ರಾಂತ್ಯದ ಒಂಬತ್ತು ಜಿಲ್ಲೆಗಳ ಡಿಡಿಸಿಯಲ್ಲಿ ಪಿಎಜಿಡಿ ಬಹುಮತ ಗಳಿಸಿದೆ. ಒಂಬತ್ತೂ ಜಿಲ್ಲೆಗಳಲ್ಲಿ ಪಿಎಜಿಡಿ ಅಧಿಕಾರ ಚುಕ್ಕಾಣಿ ಇಡಿಯಲಿದೆ.
* ಶ್ರೀನಗರದಲ್ಲಿ ಅಪ್ನಾ ಪಾರ್ಟಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದಿರುವ ಪಕ್ಷ ಎನಿಸಿಕೊಂಡಿದೆ. ಆದರೆ 14ರಲ್ಲಿ 7 ಸ್ಥಾನಗಳಲ್ಲಿ ಪಕ್ಷೇತರರು ಆರಿಸಿಬಂದಿದ್ದಾರೆ. ಇವರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಮತ್ತು ಪಿಎಜಿಡಿ ಯತ್ನಿಸುತ್ತಿವೆ. ಪಕ್ಷೇತರರು ಪಿಎಜಿಡಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು.

ಆಧಾರ: ಜಮ್ಮು-ಕಾಶ್ಮೀರ ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.