ADVERTISEMENT

ಗಂಗಾ ಕಲ್ಯಾಣ ಯೋಜನೆ: ಅಧಿಕಾರಿಗಳದ್ದೇ ಅಟಾಟೋಪ

ಮಂಜುನಾಥ್ ಹೆಬ್ಬಾರ್‌
Published 9 ಮಾರ್ಚ್ 2019, 19:38 IST
Last Updated 9 ಮಾರ್ಚ್ 2019, 19:38 IST
   

ಬೆಂಗಳೂರು: ಬರಡು ನೆಲದಲ್ಲಿ ‘ಗಂಗೆ’ಯನ್ನು ಕಾಣಬೇಕು ಎಂಬ ಮಹದಾಸೆಯಿಂದ ಅನ್ನದಾತರು ಪಡುವ ‘ಭಗೀರಥ’ ಪ್ರಯತ್ನಕ್ಕೆ ಅಧಿಕಾರಿಗಳು ಅಡಿಗಡಿಗೂ ಪೀಡಿಸುತ್ತಾರೆ. ಕೊಳವೆಬಾವಿ ಕೊರೆಸುವ ವೇಳೆಗೆ ಅವರು ಸುಸ್ತಾಗಿ ಹೋಗುತ್ತಾರೆ. ಸರ್ಕಾರಿ ಸೌಲಭ್ಯದ ಸಹವಾಸವೇ ಬೇಡ ಎಂಬ ಭಾವನೆಗೆ ಸಾಕಷ್ಟು ಮಂದಿ ಬಂದಿರುತ್ತಾರೆ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರದ್ದು ಒಂದು ಮುಖವಾದರೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಫಲಾನುಭವಿಗಳಿಗೆ ನೀಡುವ ತೊಂದರೆ ಮತ್ತೊಂದು ಬಗೆಯದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ರಾಜ್ಯ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ನಿಗಮ, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಸಿಕ್ಕ ಉದಾಹರಣೆ ಕಡಿಮೆ.

ಬಾದಾಮಿ ತಾಲ್ಲೂಕಿನ ರೈತರೊಬ್ಬರು ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದ್ದರು. 'ನಮ್ಮ ಬೋರ್‌ವೆಲ್‌ಗೆ ಕರೆಂಟ್‌ ಕೊಡಿಸಿ, ಪುಣ್ಯ ಕಟ್ಟಿಕೊಳ್ಳಿ, ರೈತನ ನೋವು ನಿಮಗೆ ಕಾಣಿಸುತ್ತಿಲ್ಲವೇ?' ಎಂದು ಮುತ್ತಲಗೇರಿ ಗ್ರಾಮದ ರೈತ ಟೋಪಣ್ಣ ಹಳ್ಳಿ ಪ್ರಶ್ನಿಸಿದ್ದರು. ಜತೆಗೆ, ಹೊಲದ ಬಳಿ ಎಸೆದಿರುವ ವಿದ್ಯುತ್‌ ಕಂಬಗಳ ವಿಡಿಯೊ ಪ್ರಕಟಿಸಿದ್ದರು.

ತಮ್ಮ ಎರಡು ಎಕರೆ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ 2017ರ ಫೆಬ್ರುವರಿಯಲ್ಲಿ ಕೊಳವೆಬಾವಿ ಕೊರೆಸಿದ್ದರು. ಹೆಸ್ಕಾಂನವರು ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ, ನಾನಾ ಕಾರಣ ನೀಡಿ ಅಧಿಕಾರಿಗಳ ವಿದ್ಯುತ್‌ ಸಂಪರ್ಕಕ್ಕೆ ವಿಳಂಬ ಮಾಡಿದ್ದರು. ಟಿ.ಸಿ. ಅಳವಡಿಸುವಂತೆ ಜಿಲ್ಲಾಧಿಕಾರಿ ಅವರಿಗೂ ಟೋಪಣ್ಣ ಮನವಿ ಮಾಡಿದ್ದರು. ಸ್ಪಂದನೆ ಸಿಗದ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆ ಬಳಿಕ ಅಧಿಕಾರಿಗಳು ಸ್ಪಂದಿಸಿದ್ದರು.

ರೈತರ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ ಒಂದು ತಿಂಗಳಿನೊಳಗೆ ಮೋಟಾರ್ ಪಂಪು ಅಳವಡಿಸಿ ವಿದ್ಯುತ್ ಸಂಪರ್ಕ ಕೊಡಬೇಕು ಎಂಬ ನಿಯಮ ಇದೆ. ಆದರೆ, ಈ ಅವಧಿಯಲ್ಲಿ ಪಂಪ್‌ಸೆಟ್‌, ಪೈಪ್‌ ನೀಡಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು ಉದಾಹರಣೆ ಕಡಿಮೆ.

ಈ ಯೋಜನೆ ಅನ್ನದಾತರ ಬದಲು ಅಧಿಕಾರಿಗಳ, ಗುತ್ತಿಗೆದಾರರ ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪಗಳು ಇವೆ. ಬಯಲುಸೀಮೆಯ ಜಿಲ್ಲೆಗಳಲ್ಲಿ 500ರಿಂದ 1 ಸಾವಿರ ಅಡಿಯವರೆಗೆ, ಕರಾವಳಿ ಜಿಲ್ಲೆಗಳಲ್ಲಿ 300 ರಿಂದ 500 ಅಡಿವರೆಗೆ ಮತ್ತು ಮಲೆನಾಡು ಜಿಲ್ಲೆಗಳಲ್ಲಿ 50 ಅಡಿವರೆಗೆ ಬೋರ್‌ವೆಲ್‌ ಕೊರೆಸಬಹುದು. ಬೋರ್‌ವೆಲ್‌ ಅರ್ಧ ಕೊರೆದ ಬಳಿಕ ಗುತ್ತಿಗೆದಾರರು ತಗಾದೆ ತೆಗೆಯುತ್ತಾರೆ. ನಿಗಮ ಅನುಮತಿ ನೀಡಿದಷ್ಟು ಆಳ ಕೊರೆದಿದ್ದೇವೆ ಎಂಬ ನೆಪ ಹೇಳುತ್ತಾರೆ. ಕೆಲಸ ಮುಂದುವರಿಸಬೇಕಾದರೆ ಫಲಾನುಭವಿಗಳೇ ಹಣ ಪಾವತಿಸಬೇಕು ಎಂದೂ ಒತ್ತಡ ಹೇರುತ್ತಾರೆ. ಫಲಾನುಭವಿಗಳು ಅನ್ಯ ದಾರಿ ಕಾಣದೆ ಹಣ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಫಲಾನುಭವಿಗಳಿಗೆ ವಿತರಣೆ ಮಾಡುವ ಕೊಳವೆಬಾವಿಗಳ ಪರಿಕರಗಳು ಸಾಕಷ್ಟು ಕಳಪೆಗುಣಮಟ್ಟದಿಂದ ಕೂಡಿದ್ದು, ಈ ಯೋಜನೆಗೆ ಬಳಸುವ ಹಣವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ಹಾಕಿದರೆ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂಬುದು ಬಹುತೇಕ ರೈತರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.