ADVERTISEMENT

ಒಳನೋಟ: ಬಿಬಿಎಂಪಿಯಲ್ಲಿ ನೆಪಕ್ಕಷ್ಟೇ ಕೆಲಸ– ಕಮಿಷನ್‌ಗೆ ಪಾಶ

ಕಾರ್ಯಾದೇಶಕ್ಕೂ ಮುನ್ನವೇ ಮುಗಿಯುವ ಕಾಮಗಾರಿ!

ಮಂಜುನಾಥ್ ಹೆಬ್ಬಾರ್‌
Published 11 ಡಿಸೆಂಬರ್ 2021, 20:49 IST
Last Updated 11 ಡಿಸೆಂಬರ್ 2021, 20:49 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಮೂಲಸೌಕರ್ಯ ಕಾಮಗಾರಿಯ ಅಂದಾಜುಪಟ್ಟಿಯಲ್ಲಿ ಉಲ್ಲೇಖಿಸುವ ಸ್ಥಳವೇ ಬೇರೆ, ಕಾಮಗಾರಿ ಅನುಷ್ಠಾನಗೊಳಿಸುವ ಸ್ಥಳವೇ ಬೇರೆ. ಅಂದಾಜುಪಟ್ಟಿಯಲ್ಲಿ ನಮೂದಿಸುವ ಸಾಮಗ್ರಿಯೇ ಒಂದು, ಬಳಸುವುದೇ ಮತ್ತೊಂದು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾಮಗಾರಿ ವೇಳೆ ಪಾಲಿಕೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಡೆಸುವ ಭ್ರಷ್ಟಾಚಾರದ ಒಂದು ಮಾದರಿ ಇದು.

‘ಕಳೆದ ಐದು ವರ್ಷಗಳಲ್ಲಿ ‍ಪಾಲಿಕೆಯ ವ್ಯಾಪ್ತಿಯಲ್ಲಿ 11,283.05 ಕಿಲೋಮೀಟರ್ ಉದ್ದದ ರಸ್ತೆಗಳ ಕಾಮಗಾರಿಗೆ ₹ 20,060 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ನಗರದ ವ್ಯಾಪ್ತಿಯಲ್ಲಿ ಸಂಪೂರ್ಣ ದೋಷರಹಿತವಾಗಿರುವ 1 ಕಿ.ಮೀ. ರಸ್ತೆ ಕೂಡ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿವೇಶನದಲ್ಲೇ ಹೇಳಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ 1 ಕಿ.ಮೀ. ಉದ್ದದಷ್ಟಾದರೂ ಬಿರುಕು ರಹಿತ, ಗುಂಡಿಗಳಿಲ್ಲದ, ಉಬ್ಬು ಮತ್ತು ತಗ್ಗುಗಳಿಲ್ಲದ, ದೋಷರಹಿತ ರಸ್ತೆ ಸಿಗುವುದೇ ಇಲ್ಲ. ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳ ನೈಜ ಬಣ್ಣ ಬಯಲಾಗಿದೆ.

ADVERTISEMENT

ಮಳೆಗಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು, ಪ್ರವಾಹ ಪರಿಹಾರ ಮುಂತಾದ ಕಾಮಗಾರಿಗಳನ್ನು ಟೆಂಡರ್‌ ಕರೆಯದೆಯೇ ತರಾತುರಿಯಲ್ಲಿ ನಡೆಸಬೇಕಾಗುತ್ತದೆ. ಅಧಿಕಾರಿಗಳು ಅಕ್ರಮ ನಡೆಸುವುದಕ್ಕೆ ಇಂತಹ ‘ತುರ್ತು ಕಾಮಗಾರಿ’ಗಳು ವರದಾನವಾಗಿವೆ. ತುರ್ತು ಕಾಮಗಾರಿಗಳಿಗೆ ದರ ಪಟ್ಟಿಯನ್ನು ಅನ್ವಯಿಸುವಾಗ ಅಧಿಕಾರಿಗಳು ನಾನಾ ರೀತಿಯ ‘ಆಟ’ ಆಡುತ್ತಾರೆ.

ತುರ್ತು ಕಾಮಗಾರಿ ಕೈಗೆತ್ತಿಕೊಂಡ ಬಳಿಕ ಅದರ ಬಿಲ್‌ ತಯಾರಿಸುವಾಗ ಯಾವ ಕಾಲದಲ್ಲಿ ಕಾಮಗಾರಿ ನಡೆಸಲಾಗಿದೆಯೋ ಅದೇ ಅವಧಿಯ ದರ ಪಟ್ಟಿಯನ್ನು ಪರಿಗಣಿಸಬೇಕು. ಆದರೆ, ರಸ್ತೆ ಗುಂಡಿ ಮುಚ್ಚಿ ಸ್ವಲ್ಪ ಸಮಯದ ನಂತರ ಎಂಜಿನಿಯರ್‌ಗಳು ಬಿಲ್‌ ತಯಾರಿಸಿದ ಉದಾಹರಣೆಗಳು ಸಾಕಷ್ಟಿವೆ. ಕಾಮಗಾರಿ ನಡೆದಾಗ ಜಾರಿಯಲ್ಲಿದ್ದ ದರ ಪಟ್ಟಿಯ ಬದಲು ಬಿಲ್‌ ತಯಾರಿಸಿದ ಅವಧಿಯ ದರ ಪಟ್ಟಿ ಪ್ರಕಾರ ಮೊತ್ತಗಳನ್ನು ನಮೂದಿಸಿದ್ದೂ ಉಂಟು.

ಕಾಮಗಾರಿ ಅನುಷ್ಠಾನಕ್ಕಾಗಿ ಟೆಂಡರ್‌ ಮೂಲಕ ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಿ, ಕಾರ್ಯಾದೇಶ ನೀಡುವುದು ವಾಡಿಕೆ. ಆದರೆ, ಪಾಲಿಕೆಯಲ್ಲಿ ಕೆಲವು ಪವಾಡಗಳು ನಡೆಯುತ್ತವೆ. ಇಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಮುನ್ನವೇ ಕಾರ್ಯಾದೇಶ ನೀಡಲಾಗುತ್ತದೆ. ಕಾರ್ಯಾದೇಶ ನೀಡುವುದಕ್ಕೆ ಮುನ್ನವೇ ಕಾಮಗಾರಿಯೂ ಪೂರ್ಣಗೊಳ್ಳುತ್ತದೆ!

ಒಂದೇ ಜಾಬ್‌ ಕೋಡ್‌ನಲ್ಲಿ ಎರಡು ಬೇರೆ ಬೇರೆ ಕಾಮಗಾರಿಗಳಿಗೆ ಬಿಲ್‌ ಪಾವತಿ ಮಾಡಲು ಅವಕಾಶ ಇಲ್ಲ. ಆದರೆ, ಬಿಬಿಎಂಪಿಯ ‘ಪ್ರಚಂಡ ಅಧಿಕಾರಿ’ಗಳು ಇದನ್ನೂ ಕೂಡ ಸಾಧ್ಯವಾಗಿಸಬಲ್ಲರು. ಒಂದೇ ಜಾಬ್‌ ಕೋಡ್‌ನಲ್ಲಿ ಎರಡೆರಡು ಕಾಮಗಾರಿಗಳನ್ನು ನಡೆಸಿದ್ದಲ್ಲದೇ, ಅವೆರಡಕ್ಕೂ ಬಿಬಿಎಂಪಿ ಎಂಜಿನಿಯರ್‌ಗಳು ಹಣ ಬಿಡುಗಡೆ ಮಾಡಿಸಿ ಹಗರಣ ನಡೆಸಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ವರ್ಷಗಳಲ್ಲಿ ರಸ್ತೆ ಡಾಂಬರೀಕರಣದ ವೆಚ್ಚ

ವರ್ಷ; ವೆಚ್ಚ (₹ ಕೋಟಿಗಳಲ್ಲಿ)

2015–16; 1,678.45

2016–17; 4,876.22

2017–18; 2,830.51

2018–19;3,029.44

2019–20;5,371.73

2020–21;1,788.31

2021–22;435.33

ಒಟ್ಟು; 20,060.02

ನಾಗಮೋಹನದಾಸ್‌ ಸಮಿತಿ ವರದಿ: 3 ವರ್ಷವಾದರೂ ಕ್ರಮವಿಲ್ಲ

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿಯು, ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ 239 ಎಂಜಿನಿಯರ್‌ಗಳು ಹಾಗೂ 514 ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ವರದಿ ಸಲ್ಲಿಕೆಯಾಗಿ ಮೂರು ವರ್ಷ ಕಳೆದರೂ ಯಾರ ವಿರುದ್ಧವೂ ಕ್ರಮ ಆಗಿಲ್ಲ.

ಕೆಆರ್‌ಐಡಿಎಲ್‌ ಕರಾಮತ್ತು

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌)
ಇ–ಪ್ರೊಕ್ಯೂರ್‌ಮೆಂಟ್‌ ನಿಯಮ ಅನ್ವಯ ಆಗುವುದಿಲ್ಲ. ಕಾಮಗಾರಿ ನಡೆಸಲು ಟೆಂಡರ್‌ ಅಗತ್ಯವೂ ಇಲ್ಲ. 4ಜಿ ವಿನಾಯಿತಿ ಎಂಬ ‘ಒಳ’ಮಾರ್ಗ ಇರುವ ಕಾರಣ ಕಾಮಗಾರಿಗಳ ‘ಅಪಾಯಕಾರಿ ವೇಗ’ಕ್ಕೆ ಯಾವುದೇ ತಡೆಯೂ ಇಲ್ಲ.

ಕಸ ಎತ್ತುವುದರಿಂದ, ಮೋರಿ ಮುಚ್ಚುವುದರಿಂದ ಹಿಡಿದು ಕುಡಿಯುವ ನೀರು ಘಟಕಗಳ ಸ್ಥಾ‍ಪನೆ, ರಸ್ತೆಗಳ ಹಾಗೂ ಕಟ್ಟಡಗಳ ನಿರ್ಮಾಣ ಸೇರಿದಂತೆ ಎಲ್ಲ ಬಗೆಯ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ನಡೆಸುತ್ತದೆ. ಹಾಗಂತ ಎಲ್ಲ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಸಂಸ್ಥೆಯಿದು ಎಂದು ಭಾವಿಸಿದರೆ ಅದು ತಪ್ಪು. ಸಾವಿರಾರು ಕೋಟಿ ಮೊತ್ತದ ಕಾಮಗಾರಿ ನಡೆಸುವಷ್ಟು ತಜ್ಞ ಸಿಬ್ಬಂದಿ ನಿಗಮದ ಬಳಿ ಇಲ್ಲವೇ ಇಲ್ಲ. ತಾನು ಗುತ್ತಿಗೆ ಪಡೆದ ಕಾಮಗಾರಿಗಳನ್ನು ಅದು ಬೇಕಾದವರಿಗೆ ಉಪಗುತ್ತಿಗೆ ನೀಡುತ್ತದೆ. ನಗರದ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಇದು ‘ಇಷ್ಟದ’ ನಿಗಮ. ಹಿಂಬಾಲಕರಿಗೆ ಸುಲಭದಲ್ಲಿ ಗುತ್ತಿಗೆ ಕೊಡಿಸಲು ಆಗುತ್ತದೆ ಎಂಬ ಕಾರಣಕ್ಕೆ ಶಾಸಕರು ಹಾಗೂ ಪಾಲಿಕೆ ಸದಸ್ಯರು ಕೆಆರ್‌ಐಡಿಎಲ್‌ಗೆ ಕೆಲಸ ವಹಿಸಲು ದುಂಬಾಲು ಬೀಳುತ್ತಾರೆ. ಕೆಲಸ ನಡೆಸದೆಯೇ ದುಡ್ಡು ಹೊಡೆಯಬಹುದು ಎಂಬುದೇ ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.