ADVERTISEMENT

ಒಳನೋಟ: ಶುದ್ಧ ನೀರು ಎಂಬುದೇ ಮರೀಚಿಕೆ

ಮನೆ ಮನೆಗೆ ಕಲುಷಿತ ನೀರೇ ಪೂರೈಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 21:27 IST
Last Updated 2 ಜುಲೈ 2022, 21:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ರಾಜಧಾನಿಯ ಮಗ್ಗುಲಲ್ಲೇ ಇರುವ ರಾಮನಗರದ 10 ವಾರ್ಡ್‌ಗಳಿಗೆ ಇಂದಿಗೂ ಅರ್ಕಾವತಿ ನದಿ ನೀರನ್ನು ನೇರವಾಗಿ ಪೂರೈಸಲಾಗುತ್ತಿದೆ. ಈ ನೀರು ಕುಡಿಯುವುದಿರಲಿ, ದಿನಬಳಕೆಗೂ ಯೋಗ್ಯವಲ್ಲ ಎಂದು ಪ್ರಯೋಗಾಲಯಗಳು ವರದಿ ನೀಡಿವೆ. ಆದರೂ, ‘ನಿತ್ಯ ನೀರು ಸಿಕ್ಕರೆ ಸಾಕು’ ಎನ್ನುವ ಪರಿಸ್ಥಿತಿಯಲ್ಲಿ ಜನರಿದ್ದಾರೆ.

‘ಜನರಿಗೆ ನೀರು ಪೂರೈಕೆ ಮಾಡಿ, ಕುಡಿಯಲು ಬಳಸಬೇಡಿ ಎಂದು ರಾಮನಗರದಲ್ಲಿ ನಗರಸಭೆಯವರೇ ಪ್ರಚಾರ ಮಾಡುತ್ತಾರೆ. ಕಲುಷಿತಗೊಂಡ ನದಿ ನೀರನ್ನು ಕನಿಷ್ಠ ಶುದ್ಧೀಕರಣ ಮಾಡುವ ಗೋಜಿಗೂ ಹೋಗಿಲ್ಲ. ಜನ ಒಂದು ಲೀಟರ್‌ ನೀರಿಗೂ ಕ್ಯಾನ್‌ ಹಿಡಿದು ಶುದ್ಧ ಘಟಕಗಳಿಗೆ ಅಲೆಯುವ ಪರಿಸ್ಥಿತಿ ಇದೆ’ ಎಂದು ರಾಮನಗರದ ನಿವಾಸಿ ಕಿರಣ್‌ ಅವರು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಕೆ.ಸಿ. (ಕೋರಮಂಗಲ– ಚಲ್ಲಘಟ್ಟ) ವ್ಯಾಲಿ ಮೂಲಕ ಚಿತ್ರಾವತಿ ನದಿಗೆ ಸೇರುವ ಕೊಳಕು ನೀರೇ ಇಲ್ಲಿ ಮನೆಗಳಿಗೆ ಪೂರೈಕೆ ಆಗುತ್ತಿದೆ. ಈ ರಾಡಿ (ಕದಡಿದ) ನೀರನ್ನೇ ಇಲ್ಲಿನ 23 ವಾರ್ಡುಗಳಿಗೆ ಸರಬರಾಜು ಮಾಡಲಾಗುತ್ತಿದೆ.

ADVERTISEMENT

ನಗರ ಸ್ಥಳೀಯ ಸಂಸ್ಥೆಗಳು ನೀರಿನ ಗುಣಮಟ್ಟ ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಬಯಲುಸೀಮೆಯ ಕೆಲ ಪಟ್ಟಣಗಳಲ್ಲಿ ಶೇ 60ರಿಂದ 70 ಪ್ರಮಾಣದ ಫ್ಲೋರೈಡ್‌ಯುಕ್ತ ನೀರು ಸರಬರಾಜು ಆಗುತ್ತಿದೆ. ಇದರಿಂದ ಸಾಮಾನ್ಯ ಅನಾರೋಗ್ಯದ ಜೊತೆಗೆ ಫ್ಲೊರೋಸಿಸ್‌ನಂತಹ ಕಾಯಿಲೆಗಳೂ ಜನರಿಗೆ ಕಾಡುತ್ತಿದೆ.

ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಫ್ಲೋರೈಡ್ ಯುಕ್ತ ನೀರನ್ನು ಕುಡಿದು ಹಲವರು ಅಂಗವಿಕಲರಾಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ತಪಾಸಣೆ ನಡೆಸಿ ವರದಿ ನೀಡಿದೆ. ಆದರೂ ಪರಿಸ್ಥಿತಿ ಈಗಲೂ ಅಷ್ಟೇನೂ ಸುಧಾರಿಸಿಲ್ಲ.

ರಾಜ್ಯದ ವಿವಿಧೆಡೆ ಶುದ್ಧ ನೀರಿನ ಘಟಕಗಳಿದ್ದರೂ ಅವುಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಅಲ್ಲಿ ಸಿಗುವ ನೀರಿನ ಶುದ್ಧತೆ ಪ್ರಮಾಣವನ್ನೂ ಅಳೆಯಲಾಗುತ್ತಿಲ್ಲ. ಕಾಲಕಾಲಕ್ಕೆ ಫಿಲ್ಟರ್‌ಗಳ ಬದಲಾವಣೆ ಆಗುತ್ತಿಲ್ಲ. ಪರಿಸ್ಥಿತಿ ಸುಧಾರಿಸುತ್ತಿಲ್ಲ.

ನೀರಿನ ಗುಣಮಟ್ಟ ತಪಾಸಣೆ ಹೇಗೆ?

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ನೀರಿನ ಗುಣಮಟ್ಟ ಪರಿಶೀಲನೆಗೆ ಹಲವು ಮಾನದಂಡ ಅನುಸರಿಸುತ್ತಿದೆ. ತೊರೆಕಾಡನಹಳ್ಳಿಯಿಂದ ಬೆಂಗಳೂರಿನ ಮನೆಗಳಿಗೆ ತಲುಪುವವರೆಗೆ ನೀರನ್ನು ಹಲವು ಬಾರಿ ಪರೀಕ್ಷಿಸಲಾಗುತ್ತದೆ.

‘ಶುದ್ಧ ನೀರಿನ ಪಿ.ಎಚ್. ಗುಣಮಟ್ಟ 6.5 ರಿಂದ 7.5ರ ಒಳಗೆ ಇರಬೇಕು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಬೇಕು. ಕ್ಲೋರೈಡ್‌, ಫ್ಲೋರೈಡ್‌, ಕಬ್ಬಿಣ ಮೊದಲಾದ ರಾಸಾಯನಿಕಗಳು ಸುರಕ್ಷಿತ ಪ್ರಮಾಣದಲ್ಲಿ ಇರಬೇಕು’ ಎಂಬ ನಿಯಮ ಇದೆ.

‘ನದಿ ಮೂಲದಿಂದ ಮನೆಮನೆಗೆ ನೀರು ಪೂರೈಸುವ ಮುನ್ನ ಭಾರತೀಯ ಮಾನದಂಡಗಳ ಮಂಡಳಿಯ (ಬಿಐಎಸ್‌) ಮಾನದಂಡಗಳ ಪ್ರಕಾರ, 68 ಬಗೆಯ ಮಾಪನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ ಶೇ 95ರಷ್ಟು ಪರೀಕ್ಷೆಯಲ್ಲಿ ಪ್ರಮಾಣೀಕರಿಸಿದರೆ ಮಾತ್ರ ಅದು ಕುಡಿಯಲು ಯೋಗ್ಯ. ಸದ್ಯ ಬಿಡಬ್ಲ್ಯುಎಸ್‌ಎಸ್‌ಬಿ ವ್ಯಾಪ್ತಿಯಲ್ಲಿ ಇಂತಹ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ’ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ನಿವೃತ್ತ ಮುಖ್ಯ ಎಂಜಿನಿಯರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

‘ಉಳಿದ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇಲ್ಲ. ನೀರಿನ ಶುದ್ಧತೆ ಕಾಪಾಡುವುದು ಜಲಮಂಡಳಿ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಕರ್ತವ್ಯ’ ಎಂದೂ ಅವರು ತಿಳಿಸಿದ್ದಾರೆ.


‘ಅಂಗವೈಕಲ್ಯ ಸಮಸ್ಯೆ’

‘ಫ್ಲೋರೈಡ್, ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವ ನೀರು ಕುಡಿದು ಬಹಳಷ್ಟು ಜನರು ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಕಾಲುಗಳು ಡೊಂಕು, ಮೂಳೆಗಳು ಪೊಳ್ಳು ಮತ್ತು ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಕೀಲುನೋವು, ಕಿಡ್ನಿಯಲ್ಲಿ ಹರಳು, ಗರ್ಭಪಾತ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ’ ಎಂದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.