ADVERTISEMENT

ಒಳನೋಟ | ಜೀವ ನದಿಗಳಿಗೇ ಕುತ್ತು

ಉದಯ ಯು.
Published 29 ಫೆಬ್ರುವರಿ 2020, 19:45 IST
Last Updated 29 ಫೆಬ್ರುವರಿ 2020, 19:45 IST
ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಬಿದ್ದ ಬಟ್ಟೆಗಳ ರಾಶಿ –ಪ್ರಜಾವಾಣಿ ಚಿತ್ರ: ಬಿ.ಆರ್. ಸವಿತಾ
ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಬಿದ್ದ ಬಟ್ಟೆಗಳ ರಾಶಿ –ಪ್ರಜಾವಾಣಿ ಚಿತ್ರ: ಬಿ.ಆರ್. ಸವಿತಾ   
""

ಬೆಂಗಳೂರು: ಒಂದೊಮ್ಮೆ ಜಲವೆಂದರೆ ದೇವತೆ ಯಂತೆಯೇ ಕಾಣುತ್ತಿದ್ದ ಜನ ಸಮುದಾಯವೇ ಈಗೀಗ ನದಿಗಳನ್ನು ‘ಪಾಪನಾಶಿನಿ’ ಎಂದು ಕರೆಯುವ ಮೂಲಕ ವಸತಿ ಪ್ರದೇಶಗಳ ಹೊಲಸನ್ನೆಲ್ಲ ಈ ಜಲಮೂಲಗಳಿಗೇ ಸಾಗಹಾಕುತ್ತಿದೆ. ನದಿ ದಂಡೆಗಳ ಮೇಲಿನ ಕಾರ್ಖಾನೆಗಳು ಸಹ ರಾಸಾಯನಿಕವನ್ನು ಅದೇ ನದಿಗಳಿಗೆ ತಂದು ಸುರಿಯುತ್ತಿವೆ. ಹೀಗಾಗಿಜನರು ಕುಡಿಯಲು ಅವಲಂಬಿಸಿರುವ ಕೆಲವು ನದಿಗಳ ನೀರು ಕುಡಿಯಲು ಬಿಡಿ, ಮುಟ್ಟಲೂ ಯೋಗ್ಯವಾಗಿಲ್ಲ!

ನಗರ ಮತ್ತು ಪಟ್ಟಣಗಳಿಗೆ ಸಾಮಾನ್ಯವಾಗಿ ಸಮೀಪದ ನದಿ, ಅಣೆಕಟ್ಟೆ ಅಥವಾ ಕೆರೆಗಳಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಇಂಥ ಜಲಮೂಲಗಳು ಮಲಿನವಾಗದಂತೆ ನೋಡಿ ಕೊಳ್ಳುವುದು ಆಡಳಿತ ಮತ್ತು ಜನಸಾಮಾನ್ಯರ ಆದ್ಯತೆಯಾಗಬೇಕಿತ್ತು. ಆದರೆ ಜನರಾಗಲಿ, ಆಡಳಿತ ವಾಗಲಿ ಈ ದಿಕ್ಕಿನಲ್ಲಿ ಯೋಚನೆಯನ್ನೇ ಮಾಡಿಲ್ಲ. ಪರಿಣಾಮ ನಮ್ಮ ನದಿಗಳು ನಗರದ ಕಸ–ಕಲ್ಮಶಗಳ ಜತೆಗೆ, ಒಳಚರಂಡಿಗಳು ತಂದು ಸುರಿದಿದ್ದೆಲ್ಲವನ್ನೂ ಸೇರಿಸಿಕೊಂಡು ಹರಿಯುತ್ತಿವೆ. ಒಂದರ್ಥದಲ್ಲಿ ನಾವು ತ್ಯಜಿಸಿದ್ದನ್ನೇ ಮತ್ತೆ ಕುಡಿಯಬೇಕಾದ ಅನಿವಾರ್ಯ ಸ್ಥಿತಿ ಈಗ ಒದಗಿಬಂದಿದೆ.

ಜಲಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಗಂಗಾ ನದಿಯಿಂದ ಆರಂಭಿಸಿ, ತಮಿಳುನಾಡಿನ ಪಾಲಾರ್‌ ನದಿಯವರೆಗಿನ ವಿಚಾರವಾಗಿ ನ್ಯಾಯಾಲಯಗಳು ಹತ್ತಾರು ತೀರ್ಪು ಗಳನ್ನು ನೀಡಿವೆ. ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ–1974 ಅಡಿ ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ರಚಿಸಲಾಗಿದೆ. ಈ ಯಾವ ಕ್ರಮವೂ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದಂತೆ ಕಾಣಿಸುತ್ತಿಲ್ಲ.

ADVERTISEMENT

ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯವರು (ಸಿಪಿಸಿಬಿ) 2018ರಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ, ನಮ್ಮ ದೇಶದ ಅರ್ಧದಷ್ಟು ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಇದರ ಬಗ್ಗೆ ನಮ್ಮ ಸರ್ಕಾರಗಳು, ಸಂಬಂಧಪಟ್ಟ ಪ್ರಾಧಿಕಾರ, ಮಂಡಳಿಗಳು ತಲೆಕೆಡಿಸಿಕೊಂಡಿಲ್ಲ ಎಂದು ವರದಿ ಹೇಳಿದೆ.

2008–12ರವರೆಗಿನ ಅವಧಿಯಲ್ಲಿ ಸಿಪಿಸಿಬಿಯು 28 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಿಯುವ ಒಟ್ಟು 275 ನದಿಗಳ ಅಧ್ಯಯನ ನಡೆಸಿತ್ತು. ಈ ಅಧ್ಯಯನದ ವರದಿಯನ್ನು 2015ರಲ್ಲಿ ಪ್ರಕಟಿಸಿತ್ತು. ಈ ನದಿಗಳ 302 ಪ್ರದೇಶಗಳಲ್ಲಿ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂದು ವರದಿ ಹೇಳಿತ್ತು.

2016–2017ರಲ್ಲಿ ದೇಶದ 30 ರಾಜ್ಯ/ಕೇಂದ್ರಾ ಡಳಿತ ಪ್ರದೇಶಗಳ ಒಟ್ಟಾರೆ 323 ನದಿಗಳ ನೀರಿನ ಅಧ್ಯಯನ ನಡೆಸಿದ ಮಂಡಳಿಯು 2018ರಲ್ಲಿ ವರದಿಯನ್ನು ಪ್ರಕಟಿಸಿದೆ. ಈ ವರದಿಯು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ದೇಶದ 351 ಕಡೆಗಳಲ್ಲಿ ನದಿಗಳ ನೀರು ಅತ್ಯಂತ ಮಲಿನವಾಗಿದೆ ಎಂದು ಹೇಳಿದೆ. ಅದರಲ್ಲಿ ಕರ್ನಾಟಕದ 17 ನದಿಗಳೂ ಸೇರಿವೆ.

ನದಿಗಳ ಮಾಲಿನ್ಯ ಹೆಚ್ಚುತ್ತಿರುವುದರ ಕಡೆಗೆ ಮಾಧ್ಯಮಗಳು ಗಮನ ಸೆಳೆದ ಬಳಿಕ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) 2018ರಲ್ಲಿ ಕೆಲವು ಸೂಚನೆಗಳನ್ನು ನೀಡಿತ್ತು. ಆದರೆ, ಸರ್ಕಾರಗಳು ಅವುಗಳಿಗೆ ಅಷ್ಟೊಂದು ಮಹತ್ವ ನೀಡಿಲ್ಲ ಎಂಬುದು ಸಿಪಿಸಿಬಿಯ ಇತ್ತೀಚಿನ ವರದಿ ಸ್ಪಷ್ಟಪಡಿಸಿದೆ.

ಮಾಲಿನ್ಯ ತಡೆಗೆ ಕಾಲಮಿತಿಯ ಕ್ರಿಯಾ ಯೋಜನೆ ತಯಾರಿಸಬೇಕು ಮತ್ತು ಅದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ನ್ಯಾಯಮಂಡಳಿ ಸೂಚಿ ಸಿತ್ತು. ಅದರಂತೆ ಮಂಡಳಿಗಳು ಕ್ರಿಯಾ ಯೋಜನೆಗಳನ್ನು ತಯಾರಿಸಿದರೂ ಸರ್ಕಾರಗಳು ಅದಕ್ಕೆ ಅಗತ್ಯವಾದ ಆರ್ಥಿಕ ಮತ್ತು ಇತರ ಬೆಂಬಲವನ್ನು ನೀಡದ ಕಾರಣ ಯಾವುದೂ ಕಾರ್ಯಗತವಾಗಲಿಲ್ಲ.

ಹೊಸ ಆದೇಶದ ಪ್ರಕಾರ, 2021ರ ಮಾರ್ಚ್‌ ಅಂತ್ಯದೊಳಗೆ ಒಳಚರಂಡಿಯ ನೀರು ನೇರವಾಗಿ ನದಿಗೆ ಸೇರುವುದನ್ನು ನೂರರಷ್ಟು ತಡೆಗಟ್ಟಬೇಕು. ಲೋಪ ವಾದರೆ ಸಂಬಂಧಪಟ್ಟ ಮಂಡಳಿಯು ನದಿಗೆ ಸೇರುವ ಪ್ರತಿ ಒಳಚರಂಡಿಗೆ ತಿಂಗಳಿಗೆ ₹ 5 ಲಕ್ಷದಂತೆ ದಂಡ ಪಾವತಿಸಬೇಕು. ಶುದ್ಧೀಕರಣ ಘಟಕಗಳು ಈ ಅವಧಿಯೊಳಗೆ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಆಗದಿದ್ದರೆ ತಿಂಗಳಿಗೆ ₹ 10 ಲಕ್ಷ ದಂಡ ಕಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.