ADVERTISEMENT

ಒಳನೋಟ: ಮಳೆಯಲ್ಲಿ ಕರಗುವ ‘ಮಾಲಿನ್ಯ’

ಜಲ ಮಾಲಿನ್ಯದ ಬಗ್ಗೆ ಸಾಕಷ್ಟು ದೂರು ಬಂದಿದ್ದರೂ, ಕಠಿಣ ಕ್ರಮ ಕೈಗೊಂಡಿದ್ದು ವಿರಳ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 20:26 IST
Last Updated 15 ಜನವರಿ 2022, 20:26 IST
ತೋಕೂರು ಹಳ್ಳದಲ್ಲಿ ಈ ಹಿಂದೆ ಹರಿದಿದ್ದ ತ್ಯಾಜ್ಯ
ತೋಕೂರು ಹಳ್ಳದಲ್ಲಿ ಈ ಹಿಂದೆ ಹರಿದಿದ್ದ ತ್ಯಾಜ್ಯ   

ಮಂಗಳೂರು: ಅಭಿವೃದ್ಧಿ ಯೋಜನೆಗಳನ್ನು ಪರಿಸರ ಮತ್ತು ಪ್ರಾದೇಶಿಕ ವೈಶಿಷ್ಟ್ಯ, ವೈವಿಧ್ಯಕ್ಕೆ ಅನುಗುಣವಾಗಿ ರೂಪಿಸಿದರೆ ಮಾತ್ರ ನಿಜಾರ್ಥದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಗೆ ತೆರಬೇಕಾದ ಬೆಲೆ ದುಬಾರಿಯಾಗುತ್ತದೆ ಎಂಬುದಕ್ಕೆ ದಕ್ಷಿಣ ಕನ್ನಡ ಕರಾವಳಿಯ ಪರಿಸರ ಸಾಕ್ಷಿಯಾಗುತ್ತಿದೆ.

ಸುಮಾರು ಮೂರೂವರೆ ದಶಕದಿಂದ ಈ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿಯು ಪರಿಸರಕ್ಕಾಗಲಿ, ಕರಾವಳಿಯ ವೈಶಿಷ್ಟ್ಯ–ವೈವಿಧ್ಯಕ್ಕಾಗಲಿ ಪೂರಕವಾಗಿಲ್ಲ ಎಂಬುದನ್ನು ಸ್ಥಳೀಯರು ಈಗ ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ಆದರೆ ಅಭಿವೃದ್ಧಿಯ ಮಂತ್ರ ಜಪಿಸುವವರಿಗೆ ಇದು ಇನ್ನೂ ಅರ್ಥವಾಗುತ್ತಿಲ್ಲ ಎಂಬುದು ಪರಿಸರಪ್ರೇಮಿಗಳ ಅಳಲಾಗಿದೆ.

ವಿಶಾಲ ಕಡಲತೀರ, ಹಚ್ಚ ಹಸಿರಿನ ಬೆಟ್ಟಗುಡ್ಡಗಳು, ತುಂಬಿ ಹರಿಯುವ ನದಿಗಳಿಂದ ಕೂಡಿದ ಕರಾವಳಿಯು ಈಗ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿದೆ. ನದಿಗಳಷ್ಟೇ ಅಲ್ಲ, ಸಮುದ್ರ, ಗಾಳಿ ಎಲ್ಲವೂ ಮಲಿನವಾಗಿದೆ. ಕೈಗಾರಿಕೆಗಳ ಜಿಡ್ಡು, ರಾಸಾಯನಿಕ, ತೈಲ ಸಮುದ್ರ ಸೇರಿ ಮೀನಿನ ಸಂತತಿ ಕ್ಷೀಣಿಸುತ್ತಿದೆ ಎಂದು ಮೀನುಗಾರರು ದೂರುತ್ತಾರೆ.

ADVERTISEMENT

ನದಿಗಳ ನೀರು, ವಿಶೇಷವಾಗಿ ಕೈಗಾರಿಕಾ ಪ್ರದೇಶದ ಪಕ್ಕದಲ್ಲೇ ಹರಿಯುವ ಫಲ್ಗುಣಿ ನದಿಯ ನೀರು ಬಳಕೆಗೂ ಯೋಗ್ಯವಲ್ಲ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. 2021ರ ಜನವರಿ ತಿಂಗಳಲ್ಲಿ ಫಲ್ಗುಣಿ ನದಿಯ ಅಕ್ಕಪಕ್ಕದ ಊರುಗಳ ತೆರೆದ ಬಾವಿಗಳ ನೀರು ಕಲುಷಿತಗೊಂಡ ಕಾರಣ ನದಿಯ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ಆರಂಭವಾಗಿತ್ತು. ತೈಲ ಸಂಸ್ಕರಣಾ ಸಂಸ್ಥೆ ಎಂಆರ್‌ಪಿಎಲ್‌ನಿಂದ ಕಪ್ಪು ತ್ಯಾಜ್ಯವು ನದಿಗೆ ಸೇರುತ್ತಿದೆ ಎಂದು ವರದಿಯಾಯಿತು. ಈ ಸಂಸ್ಥೆಯ ವಿರುದ್ಧವೂ ಆಗ ಪ್ರತಿಭಟನೆ ಜೋರಾಗಿಯೇ ನಡೆದಿತ್ತು.

ಅಧ್ಯಯನ– ಎಚ್ಚರಿಕೆ

ಗುರುಪುರ ಭಾಗದಲ್ಲಿ ಫಲ್ಗುಣಿ ನದಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದು ಸಮುದ್ರ ಹಿನ್ನೀರಿನ ಪ್ರದೇಶವೂ ಹೌದು. ಇದರ ಜಲಾನಯನ ಪ್ರದೇಶದಲ್ಲೇ ಕೈಗಾರಿಕೆಗಳು ವ್ಯಾಪಿಸಿಕೊಂಡಿವೆ.‌

‘ಇದು ಶುದ್ಧ ನದಿ ನೀರಿನ ಪ್ರದೇಶವಲ್ಲ. ಅದು ಸಮುದ್ರದ ಹಿನ್ನೀರು. ಹೀಗಾಗಿ, ನದಿಯ ನೀರಿನ ಶುದ್ಧತೆಯ ಗುಣಮಟ್ಟದ ಜೊತೆ ಇಲ್ಲಿಯ ನೀರನ್ನು ಹೋಲಿಸಲು ಸಾಧ್ಯವಿಲ್ಲ. ಇಲ್ಲಿ ಸಮುದ್ರದ ಏರಿಳಿತಕ್ಕೆ ಅನುಗುಣವಾಗಿ ನೀರಿನ ಗುಣಮಟ್ಟದಲ್ಲಿ ವ್ಯತ್ಯಯವಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್.

ಈ ಭಾಗದ ನದಿ ನೀರಿನ ಗುಣಮಟ್ಟದ ಬಗ್ಗೆ ಹಿಂದೆ ಅಧ್ಯಯನ ನಡೆಸಿದ್ದ ಮಂಗಳೂರಿನ ಫ್ರಾನ್ಸಿಸ್ ಅಂದ್ರಾದೆ ಅವರು, ‘ಭಾರಿ ಮಳೆ ಬೀಳುವ (ವಾರ್ಷಿಕ ವಾಡಿಕೆ 375–400 ಸೆಂ.ಮೀ.) ಕರಾವಳಿಯಲ್ಲಿ ಬೇಸಿಗೆ (ಮುಂಗಾರು ಪೂರ್ವ) ಮತ್ತು ಮಳೆಗಾಲದದಲ್ಲಿ (ಮುಂಗಾರು) ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸ ಇರುತ್ತದೆ. ಬೇಸಿಗೆಯಲ್ಲಿ ರಾಸಾಯನಿಕ ಅಥವಾ ಮಾಲಿನ್ಯ ಪ್ರಮಾಣ ಹೆಚ್ಚಿದ್ದರೂ, ಮಳೆ ನೀರಿನೊಂದಿಗೆ ಅದು ಸೇರಿಕೊಳ್ಳುತ್ತದೆ’ ಎಂದು ದಾಖಲಿಸಿದ್ದಾರೆ.

ಈ ಪ್ರದೇಶದ ಜಲಗುಣಮಟ್ಟ ಬಗ್ಗೆ ಈ ಹಿಂದೆ ಅಧ್ಯಯನ ನಡೆಸಿದ್ದ ಪರಿಸರ ತಜ್ಞರಾದ ಫ್ರಾನ್ಸಿಸ್ ಅಂದ್ರಾದೆ, ಎಚ್‌.ಬಿ. ಅರವಿಂದ ಹಾಗೂ ಇ.ಟಿ. ಪುಟ್ಟಯ್ಯ ಅವರ ತಂಡವು, ‘ವೇಗದ ಕೈಗಾರಿಕೀಕರಣ ಹಾಗೂ ಎಸ್‌ಇಝೆಡ್‌ನಿಂದಾಗಿ ಇಲ್ಲಿನ ನೀರಿನಲ್ಲಿರುವ ಭೌತ–ರಾಸಾಯನಿಕ ಗುಣಲಕ್ಷಣಗಳು ವ್ಯತ್ಯಯಗೊಳ್ಳುತ್ತಿದ್ದು, ಕರಾವಳಿಯ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಹೆಜ್ಜೆಗಳನ್ನು ಇಡಬೇಕಾಗಿದೆ’ ಎಂದು ಎಚ್ಚರಿಸಿದ್ದಾರೆ.

‘ಮಾಲಿನ್ಯವು ಜಲಮೂಲಗಳನ್ನು ಸೇರುತ್ತಿದೆ. ವಿಶೇಷವಾಗಿ ಕೈಗಾರಿಕೆಗಳ ತೈಲ, ರಾಸಾಯನಿಕ, ಕೀಟನಾಶಕ, ಬೂದಿಯ ಅಂಶಗಳು ಸೇರುತ್ತಿವೆ. ಅದರೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ತ್ಯಾಜ್ಯ, ಇತರ ತ್ಯಾಜ್ಯಗಳೂ ಸೇರುತ್ತಿವೆ. ಜೈವಿಕ ವಿಘಟನೀಯವಲ್ಲದ ವಸ್ತುಗಳೂ ಇವೆ ಎಂಬುದು ಅಧ್ಯಯನದಿಂದ ಕಂಡುಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ಮಾನದಂಡಕ್ಕಿಂತ ಅಪಾಯಕಾರಿ ಮಟ್ಟದತ್ತ ‘ಮಾಲಿನ್ಯ’ ಹೆಜ್ಜೆ ಇಡುವುದು ಗಮನಿಸಬಹುದಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಜನಪ್ರತಿನಿಧಿಗಳ ಭರವಸೆಯಲ್ಲಿ, ಕೈಗಾರಿಕಾ ಸಂಸ್ಥೆಗಳು ನೀಡುವ ಮಾಹಿತಿಯಲ್ಲಿ ಯಾವುದೇ ‘ಮಾಲಿನ್ಯ’ ಕಂಡು ಬರುವುದಿಲ್ಲ. ಏಕೆಂದರೆ, ಮಾಲಿನ್ಯಕ್ಕೆ ಬಲಿಯಾಗುವವರು ಸಾಮಾನ್ಯ ಜನರು.

ಹೋರಾಟದ ಹಾದಿ

* 2016ರ ಬೇಸಿಗೆಯಲ್ಲಿ ಫಲ್ಗುಣಿಗೆ ಸೇರುವ ತೋಕೂರು ಹಳ್ಳದಲ್ಲಿ ನೀರು ಮಲಿನಗೊಂಡಿತ್ತು.ಮರವೂರು ಅಣೆಕಟ್ಟೆಯ ತಳ ಭಾಗದಿಂದ ತೋಕೂರು ಪರಿಸರದವರೆಗೆ ನೀರು ಮಲಿನವಾಗಿರುವ ದೂರುಗಳು ಬಂದಿದ್ದವು. ಜಲಚರಗಳು ಸತ್ತು ದುರ್ನಾತ ಬೀರಿತ್ತು. ಸ್ಥಳೀಯರು ‘ಫಲ್ಗುಣಿ ಉಳಿಸಿ’ ಅಭಿಯಾನ ನಡೆಸಿದ್ದರು.

* 2017ರ ಬೇಸಿಗೆಯ ಕೊನೆಯ ದಿನಗಳಲ್ಲಿ ಫಲ್ಗುಣಿ ಮಲಿನವಾಗಿತ್ತು.

* 2018 ಆಗಸ್ಟ್‌ನಲ್ಲಿತೈಲ ಸಾಗಣೆ ಮಾಡುವ ಪೈಪ್‌ಲೈನ್‌ನಲ್ಲಿ ಸೋರಿಕೆಯಾದ ಆರೋಪಗಳು ಬಂದವು. ಹೋರಾಟಗಾರರು ಎಂಆರ್‌ಪಿಎಲ್‌ನತ್ತ ಬೆರಳು ತೋರಿಸಿದರು. 2020ರವರೆಗೂ ಸ್ಥಳೀಯರು ಆಗಾಗ ಹೋರಾಟ ಮಾಡುತ್ತಲೇ ಇದ್ದರು.

* ಟ್ಯಾಂಕ್ ಸ್ವಚ್ಛತೆ, ಆಕಸ್ಮಿಕವಾಗಿ ಹರಿದ ತ್ಯಾಜ್ಯ, ಹವಾಮಾನ ವ್ಯತ್ಯಯ ಕಾರಣ ತೈಲ ಹೊರಸೂಸುವಿಕೆ... ಎಂಬಿತ್ಯಾದಿ ಸಬೂಬುಗಳನ್ನು ಅಧಿಕಾರಿಗಳು ನೀಡುತ್ತಿದ್ದರು.

* 2021ರಲ್ಲಿ ನದಿಯ ಮಾಲಿನ್ಯ ಹಾಗೂ ಈ ಭಾಗದ ಜನರ ಸಮಸ್ಯೆಗಳನ್ನು ಕುರಿತ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದವು.

* ಮಾಧ್ಯಮ ವರದಿಗಳನ್ನು ಆಧರಿಸಿ, ಮತ್ತು ಜೋಕಟ್ಟೆಯಲ್ಲಿರುವ ಕೈಗಾರಿಕಾ ಸಂಸ್ಥೆಯಿಂದ ಸ್ಥಳೀಯ ಹೊಳೆ ಮತ್ತು ಫಲ್ಗುಣಿ ನದಿಗೆ ರಾಸಾಯನಿಕ ಮಿಶ್ರಿತ ತ್ಯಾಜ್ಯ ಸೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತವು, 2021ರ ಅಕ್ಟೋಬರ್‌ನಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿತು.

* ಜಲಮೂಲ ಕಲುಷಿತಗೊಳ್ಳುತ್ತಿರುವ ಬಗ್ಗೆ ವಸ್ತುಸ್ಥಿತಿಯ ವರದಿ ಮತ್ತು ಅದರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಮಂಗಳೂರು ತಹಶೀಲ್ದಾರ್,ಕೆಎಸ್‌ಪಿಸಿಬಿಯ ಹಿರಿಯ ಪರಿಸರ ಅಧಿಕಾರಿ, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿತು.

* ಮಾಲಿನ್ಯ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು, ‘ಅಪಾಯಕಾರಿ ತ್ಯಾಜ್ಯವು ಜಲಮೂಲಗಳಿಗೆ ಸೇರದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಹೀಗಾಗಿ, ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಿದರು.

* ನೋಟಿಸ್‌ಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ‘ಘಟನಾ ಸ್ಥಳಕ್ಕೆ ಕೆಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿ.30ರಂದು ವರದಿ ನೀಡಿರುವ ಮಂಡಳಿಯು ‘ಆ ಪ್ರದೇಶದಲ್ಲಿ ತೈಲ ಬಲೆ (oil trap) ಹಾಕಲಾಗಿದೆ, ನೀರಿನ ಹೊಂಡವನ್ನು ಸ್ವಚ್ಛಗೊಳಿಸಲಾಗಿದೆ. ನೀರಿನಲ್ಲಿ ತೈಲದ ಹಾಗೂ ಹಾನಿಕಾರಕ ಅಂಶ ಪತ್ತೆಯಾಗಿಲ್ಲ’ ಎಂದು ಪ್ರಯೋಗಾಲಯದ ವರದಿ ಲಗತ್ತಿಸಿದೆ.

- ಮುನೀರ್ ಕಾಟಿಪಳ್ಳ, ಹೋರಾಟಗಾರ

ಕೆಲವು ಕೈಗಾರಿಕೆಗಳು ತ್ಯಾಜ್ಯವನ್ನು ನದಿ, ಸಮುದ್ರಕ್ಕೆ ಬಿಟ್ಟ ಕಾರಣ ಪರಿಸರಕ್ಕೆ ಹಾನಿಯಾದ ಬಗ್ಗೆ ದೂರುಗಳಿವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ.

- ಕೋಟ ಶ್ರೀನಿವಾಸ ಪೂಜಾರಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.