ADVERTISEMENT

ಆಹಾ... ಅಡುಗೆ: ಹರಿವೆ ಸೊಪ್ಪಿನ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಪತ್ರೊಡೆ
ಬೇಕಾಗುವ ಪದಾರ್ಥ: ಮೂರು ಬಟ್ಟಲು ಸಣ್ಣಗೆ ಹೆಚ್ಚಿದ ಸೊಪ್ಪು, ಎರಡು ಬಟ್ಟಲು ಬೆಳ್ತಿಗೆ ಅಕ್ಕಿ ತರಿ, ಎರಡು ಬಟ್ಟಲು ತೆಂಗಿನಕಾಯಿ ತುರಿ, ಎರಡು ಚಮಚ ಉದ್ದಿನ ಬೇಳೆ, ಎರಡು ಚಮಚ ಕಡಲೆ ಬೇಳೆ, ಎರಡು ಚಮಚ ದನಿಯ, ಒಂದು ಚಮಚ ಜೀರಿಗೆ, ಎಂಟು ಹತ್ತು ಒಣಮೆಣಸು, ಮೂರು ಚಮಚ ಗಟ್ಟಿ ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ.

ಮಾಡುವ ವಿಧಾನ: ಅಕ್ಕಿ ತರಿಯನ್ನು ತೊಳೆದು ಅರ್ಧ ಗಂಟೆ ನೆನೆಸಿಡಿ. ಉದ್ದಿನ ಬೇಳೆ, ಕಡಲೆ ಬೇಳೆ ಒಣಮೆಣಸನ್ನು ತೆಂಗಿನ ಎಣ್ಣೆಯಲ್ಲಿ ಹುರಿದು, ಅವುಗಳೊಂದಿಗೆ ಕಾಯಿತುರಿ, ಜೀರಿಗೆ ದನಿಯ, ಉಪ್ಪು, ಬೆಲ್ಲ, ಹುಣಸೆ ರಸ ಎಲ್ಲಾ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅಕ್ಕಿ ತರಿಯಲ್ಲಿದ್ದ ನೀರನ್ನು ಬಸೆದು ಅದಕ್ಕೆ ಸೊಪ್ಪು ಅರೆದ ಪದಾರ್ಥ ಸೇರಿಸಿ ಕಲೆಸಿ, ಇದನ್ನು ಇಡ್ಲಿ ತಟ್ಟೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ. ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕಿ, ಉದ್ದಿನ ಬೇಳೆ, ಸಾಸಿವೆ ಇಂಗು ಶೇಂಗಬೀಜ ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಬೆಂದ ಇಡ್ಲಿ ಪುಡಿಮಾಡಿ ಹಾಕಿ ಕಲಿಸಿ ಕಾಯಿತುರಿಯಂದ ಅಲಂಕರಿಸಿ. ರುಚಿಯಾದ ಕೆಂಪು ಹರಿವೆ ಸೊಪ್ಪಿನ ಪತ್ರೊಡೆ ಸಿದ್ಧ.

ಸಾಸಿಮೆ
ಬೇಕಾಗುವ ಪದಾರ್ಥ: ಒಂದು ಬಟ್ಟಲು ಸಣ್ಣಗೆ ಹೆಚ್ಚಿದ ಸೊಪ್ಪು, ಒಂದು ಬಟ್ಟಲು ತುರಿದ ತೆಂಗಿನ ಕಾಯಿ, ಐದಾರು ಹಸಿಮೆಣಸು, ಒಂದು ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ.

ಮಾಡುವ ವಿಧಾನ: ತೆಂಗಿನ ಕಾಯಿತುರಿ, ಮಾವಿನ ಕಾಯಿ, ಹಸಿಮೆಣಸು ಒಂದು ಚಮಚ ಸಾಸಿವೆಯೊಡನೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ಮೂರು ಚಮಚ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಇಂಗು, ಒಣಮೆಣಸು ಹಾಕಿ ಒಗ್ಗರಣೆ ಮಾಡಬೇಕು. ಇದಕ್ಕೆ ಹೆಚ್ಚಿದ ಸೊಪ್ಪನ್ನು ಹಾಕಿ ಬಾಡಿಸಬೇಕು. ಆನಂತರ ಸ್ವಲ್ಪ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಸೊಪ್ಪನ್ನು ಐದು ನಿಮಿಷ ಬೇಯಿಸಿಕೊಳ್ಳಬೇಕು. ಆಮೇಲೆ ಉಪ್ಪು, ಬೆಲ್ಲ ಅರೆದ ಮಸಾಲೆ ಹಾಕಿ. ಒಂದು ಕುದಿ ಬಂದ ನಂತರ ಕೆಳಗಿಳಿಸಬೇಕು. ರುಚಿಯಾದ ಸಾಸಿಮೆ ಚಪಾತಿ, ದೋಸೆ ಮತ್ತು ಅನ್ನದೊಂದಿಗೂ ಕಲಸಿ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.