ADVERTISEMENT

ಎಳ್ಳಿನ ಹೋಳಿಗೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಸಿಹಿ ಎಳ್ಳಿನ ಹೋಳಿಗೆ
ಬೇಕಾಗುವ ಸಾಮಾನು:
ಬಿಳಿ ಎಳ್ಳು 1 ಕಪ್, ಶೇಂಗಾ 1 ಕಪ್, ಒಣ ಕೊಬ್ಬರಿ ಅರ್ಧ ಕಪ್, ಬೆಲ್ಲ 2 ಕಪ್, ಮೈದಾ ಹಿಟ್ಟು ಅಥವಾ ಗೋದಿ ಹಿಟ್ಟು ಒಂದೂವರೆ ಕಪ್.

ಮಾಡುವ ವಿಧಾನ: ಬಿಳಿ ಎಳ್ಳು, ಒಣ ಕೊಬ್ಬರಿ, ಶೇಂಗಾ ಇವುಗಳನ್ನು ಬೇರೆ ಬೇರೆಯಾಗಿ ಚೆನ್ನಾಗಿ ಹುರಿದುಕೊಂಡು, ಒಟ್ಟಿಗೆ ಪುಡಿ ಮಾಡಿ. ಅದಕ್ಕೆ ಬೆಲ್ಲವನ್ನು ಸೇರಿಸಿ ಕಲಿಸಿದರೆ `ಹುದು~ ತಯಾರಾಗುವುದು. ಮೈದಾ ಹಿಟ್ಟು ಅಥವಾ ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ತರಹ ಕಲಿಸಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಹಿಟ್ಟಿನ ಎರಡು ಬಿಲ್ಲೆಗಳ ನಡುವೆ ತಯಾರಿಸಿದ ಹುದು ಇಟ್ಟು ಮುಚ್ಚಿ ಚೆನ್ನಾಗಿ ಲಟ್ಟಿಸಿ, ಕಾಯ್ದ ಹಂಚಿನ ಮೇಲೆ ಎಣ್ಣೆ ಹಚ್ಚಿ ಎರಡೂ ಕಡೆ ಬೇಯಿಸಿ. ಹೋಳಿಗೆ ಮೇಲೆ ತುಪ್ಪ ಹಾಕಿಕೊಂಡು ತಿನ್ನಿರಿ.

ಖಾರದ ಎಳ್ಳಿನ ಹೋಳಿಗೆ
ಬೇಕಾಗುವ ಸಾಮಾನು:
ಬಿಳಿ ಎಳ್ಳು 1 ಕಪ್, ಶೇಂಗಾ 1 ಕಪ್, ಒಣ ಕೊಬ್ಬರಿ ಅರ್ಧ ಕಪ್, ಮೈದಾ ಹಿಟ್ಟು ಅಥವಾ ಗೋದಿ ಹಿಟ್ಟು ಒಂದೂವರೆ ಕಪ್, ಖಾರದ ಪುಡಿ 2 ಚಮಚ, ಜೀರಿಗೆ, ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಿಳಿ ಎಳ್ಳು, ಒಣ ಕೊಬ್ಬರಿ, ಶೇಂಗಾ ಇವುಗಳನ್ನು ಬೇರೆ ಬೇರೆಯಾಗಿ ಚೆನ್ನಾಗಿ ಹುರಿದುಕೊಂಡು, ಒಟ್ಟಿಗೆ ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ಖಾರದ ಪುಡಿ, ಜೀರಿಗೆ, ಇಂಗು, ಉಪ್ಪು ಸೇರಿಸಿ `ಹುದು~ ತಯಾರಿಸಿಕೊಳ್ಳಿ. ಮೇಲೆ ಹೇಳಿದಂತೆ ಸಿಹಿ ಹುದು ಬದಲು ಖಾರದ ಹುದು ಹಾಕಿ ಹೋಳಿಗೆ ಲಟ್ಟಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.