ಪಂಚೆಯುಟ್ಟು, ತಲೆಗೆ ರುಮಾಲು ಸುತ್ತಿದ್ದ ಪಾಕತಜ್ಞರ ಬಳಿ ತಟ್ಟೆ ಹಿಡಿದ ಜನ ಸಾಲುಗಟ್ಟಿ ನಿಂತಿದ್ದರು. ಬಾಣಸಿಗ ಮಾತ್ರ ಮಾತಿಲ್ಲದೆ, ಅತಿಯಾದ ಖಾರದ ಪುಡಿ, ರುಚಿಗೆ ತಕ್ಕ ಮಸಾಲೆ ಬೆರೆಸಿ ಕಾದ ಹಂಚಿನ ಮೇಲೆ `ಲಿವರ್ ಸಾಲ್ಮೊನ್~ ಮೀನಿನ ತುಂಡುಗಳನ್ನು ಸುಡುತ್ತಿದ್ದರು.
ಬೆಂಗಳೂರಿನ ಐಬಿಸ್‌ನಲ್ಲಿ ಏರ್ಪಡಿಸಿದ್ದ ಆಂಧ್ರ ಪ್ರದೇಶ ಅಹಾರೋತ್ಸವ ಊಟವನ್ನು ಸವಿಯಲು ಕೈಯಲ್ಲಿ ನೀರಿನ ಬಾಟಲಿ ಜೊತೆಗೆ ಖಾಲಿ ತಟ್ಟೆ ಹಿಡಿದು ಮೂಗರಳಿಸಿಕೊಂಡು ಹಸಿದು ನಿಂತಿದ್ದರು.
`ಸರ್ಜಾಪುರ ರಸ್ತೆಯಲ್ಲಿರುವ ಐಬಿಸ್ ಹೋಟೆಲ್ ಮಾ.25ರವರೆಗೆ ಆಂಧ್ರ ಆಹಾರೋತ್ಸವ ಆಯೋಜಿಸಿದೆ.
ಆಂಧ್ರ ಆಹಾರ ಎಂದಾಕ್ಷಣ ಹೈದರಾಬಾದ್ ಬಿರಿಯಾನಿ ಎನ್ನುತ್ತಾರೆ. ಆದರೆ ಅದಷ್ಟೇ ಅಲ್ಲದೇ ಇಲ್ಲಿ ಅನೇಕ ಆಹಾರಗಳು ಆಯಾ ಪ್ರದೇಶಕ್ಕೆ ತಕ್ಕಂತೆ ವಿಶಿಷ್ಟವಾಗಿವೆ. ರಾಯಲಸೀಮೆ, ಕರಾವಳಿ ಆಂಧ್ರ, ತೆಲಾಂಗಣ ಪ್ರದೇಶಗಳ ಜನರ ಆಹಾರ ವಿಭಿನ್ನವಾಗಿದೆ ಎಂಬುದನ್ನು ತಿಳಿಸಲು ಈ ಆಹಾರೋತ್ಸವ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ರೆಸ್ಟೋರೆಂಟ್ ವ್ಯವಸ್ಥಾಪಕ ವೀನಿತ್ ಕುಮಾರ್.
ವಿಸ್ತೀರ್ಣದಲ್ಲಿ ನಾಲ್ಕನೇ ಅತೀ ದೊಡ್ಡ ರಾಜ್ಯವಾಗಿರುವ ಆಂಧ್ರ ಪ್ರದೇಶದ ಆಹಾರ ಪದ್ಧತಿಯಲ್ಲೂ ವೈವಿಧ್ಯತೆಯಿದೆ. ಬತ್ತ ಇಲ್ಲಿನ ಪ್ರಮುಖ ಆಹಾರ ಬೆಳೆ. ಹಾಗಾಗಿ ಅಕ್ಕಿಯಿಂದ ಮಾಡಿದ ಆಹಾರ ಇಲ್ಲಿ ಹೆಚ್ಚಾಗಿ ಗಮನಸೆಳೆಯಿತು.
ಕಲಸಿದ ಅಕ್ಕಿ ಹಿಟ್ಟು ಮತ್ತು ಹೆಸರು ಕಾಳು ಹಿಟ್ಟಿನಿಂದ ಮಾಡಿದ ಪೆಸರಟ್ಟು (ದೋಸೆ) ಹಾಗೂ ಮೀನಪಟ್ಟು (ಉದ್ದಿನಬೇಳೆ ದೋಸೆ)ತಿನ್ನಲು ಸಾಲುಗಟ್ಟಿ ನಿಲ್ಲುತ್ತಿದ್ದರು..
ಹದಿನಾಲ್ಕನೇ ಶತಮಾನದಲ್ಲಿ ಹೈದರಾಬಾದ್ ಪ್ರವೇಶಿಸಿದ ಮುಸ್ಲಿಮರಿಂದಾಗಿ ಹೈದರಾಬಾದ್‌ನ ಆಹಾರ ಪದ್ಧತಿ ಮೇಲೆ ಪ್ರಭಾವ ಬೀರಿತು. ಬಹುತೇಕ ಊಟದಲ್ಲಿ ಮಾಂಸವನ್ನೇ ಬಳಸಲಾಗುತ್ತದೆ. ಅತಿಯಾದ ಮಸಾಲೆ ಹಾಗೂ ತುಪ್ಪವನ್ನು ಬಳಸಿ ಮಾಡುವ ಇಲ್ಲಿನ ಆಹಾರ ರುಚಿಕರವೂ ಸುಗಂಧಯುಕ್ತವಾಗಿರುತ್ತದೆ.
ಐಬಿಸ್ ರೆಸ್ಟೋರೆಂಟ್ ಪ್ರತಿ ತಿಂಗಳು ಒಂದೊಂದು ರಾಜ್ಯದ ಆಹಾರೋತ್ಸವವನ್ನು ಆಯೋಜಿಸುತ್ತದೆ. ಉದ್ಯಾನನಗರಿಯಲ್ಲಿ ನೆಲೆಸಿರುವವರಿಗೆ ಆಯಾ ರಾಜ್ಯದ ವಿಶೇಷ ಪಾಕವನ್ನು ಊಣಬಡಿಸುವ ಉದ್ದೇಶ ಹೊಂದಿದೆ.
ಮಾರ್ಚ್‌ನಲ್ಲಿ ಆಂಧ್ರ ಫುಡ್ ಫೆಸ್ಟಿವಲ್ ಆಯೋಜಿಸಿದ್ದು, ದಕ್ಷಿಣ ಭಾರತೀಯರಿಗೆ ವಿಶೇಷ ರುಚಿಯನ್ನು ಪರಿಚಯಿಸುತ್ತಿದೆ. ಅದಕ್ಕಾಗಿ ಆಂಧ್ರದ ಶೆಫ್ ಕೈಲಾಶ್ ಗುಂಡಪಲ್ಲಿ ಅವರು ಪ್ರಾದೇಶಿಕ ಆಹಾರ ವೈವಿಧ್ಯವನ್ನು ಮೂಲರುಚಿಯಲ್ಲಿ ಉಣಬಡಿಸಲಿದ್ದಾರೆ.
ತೆರಿಗೆ ಹೊರತುಪಡಿಸಿ ರೂ 499ಕ್ಕೆ ಬಫೆ ಮಾದರಿಯಲ್ಲಿ ಅನಿಯಮಿತ ಆಹಾರವನ್ನು ಐಬಿಸ್ ನೀಡಲಿದೆ. ಇಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಆಹಾರಗಳಿವೆ.
ಪೆರಗು ಪುಂಗುಲು, ಗುಂಟೂರು ಸಲಾಡ್, ರಾಜಮಂಡ್ರಿ ಕ್ಯಾರೆಟ್, ಬೀನ್ಸ್ ಸಂಬಾರು, ಕ್ಯಾರೆಟ್ ಸಲಾಡ್ ಹಾಗೂ ಉಲ್ವಾ ಚಾರು, ಪುಳಿಯೊಗರೆ ಜೊತೆಗೆ ಬಗೆಬಗೆಯ ಚಟ್ನಿಪುಡಿ, ಕೊತ್ತು ಪರೋಟ, ಉಪ್ಪಿನಕಾಯಿಗಳು ಸಸ್ಯಾಹಾರಿ ಆಹಾರ ಪ್ರಿಯರ ಬಾಯಿರುಚಿ ತಣಿಸುತ್ತಿವೆ.
ಇನ್ನೂ ಮಾಂಸಾಹಾರಿಗಳಿಗಾಗಿ ಎಳೆ ಕುರಿಮಾಂಸದ ಮಸಾಲೆ, ಗುಂಗುರು ಮಾಂಸಂ, ಮಿರಪ್ಪಕಾಯಿ ಕೋಡಿ (ಕೋಳಿ ಮಾಂಸ) ಹಾಗೂ ಮೀನಿನ ಖಾದ್ಯಗಳಿವೆ. ಊಟವಾದ ಮೇಲೆ ಹೊಟ್ಟೆಭಾರವೆನಿಸಿ, ನಿದ್ದೆ ತೂಗಿದರೆ, ರುಚಿಯಾದ ಇರಾನಿ ಟೀ ಆಸ್ವಾದಿಸಬಹುದು. ತಾಜಾತನದ ಅನುಭವ ದೊರೆಯುತ್ತದೆ. ಸಂಜೆ 7ರಿಂದ ರಾತ್ರಿ11ರವರೆಗೆ ಆಂಧ್ರ ಹಬ್ಬದೂಟ ಸವಿಯಬಹುದು.
ಸ್ಥಳ: ಐಬಿಸ್ ಟೆಕ್‌ಪಾರ್ಕ್, ಇಂಟೆಲ್ ಕ್ಯಾಂಪಸ್ ಎದುರು, ಸರ್ಜಾಪುರ ಔಟರ್ ರಿಂಗ್ ರೋಡ್.
ಮಾಹಿತಿಗೆ: 6670 0600
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.