ADVERTISEMENT

ಕಡುಗಪ್ಪಿನ ಏಡಿ ಖಾದ್ಯ

ಹರವು ಸ್ಫೂರ್ತಿ
Published 11 ಆಗಸ್ಟ್ 2017, 19:30 IST
Last Updated 11 ಆಗಸ್ಟ್ 2017, 19:30 IST
ಕಡುಗಪ್ಪಿನ ಏಡಿ ಖಾದ್ಯ
ಕಡುಗಪ್ಪಿನ ಏಡಿ ಖಾದ್ಯ   

ಏಡಿ ಇಡ್ಲಿ

ಬೇಕಾಗುವ ಸಾಮಗ್ರಿಗಳು: ದೊಡ್ಡ ಏಡಿ ನಾಲ್ಕು, ಅಕ್ಕಿ ನುಚ್ಚು ಒಂದು ಬಟ್ಟಲು, ಮೊಸರು ಒಂದು ಬಟ್ಟಲು, ಹಸಿ ಬಟಾಣಿ 5 ಚಮಚ, ಕ್ಯಾರೆಟ್ ತುರಿ 5 ಚಮಚ, ವೃತ್ತಾಕಾರದಲ್ಲಿ ಕತ್ತರಿಸಿದ ಟೊಮೆಟೊ ಒಂದು, ತೆಂಗಿನಕಾಯಿ ತುರಿ ಅರ್ಧ ಬಟ್ಟಲು, ಸಬ್ಬಕ್ಕಿ ಸೊಪ್ಪು, ಕೊತ್ತಂಬರಿ ಸೊಪ್ಪು. ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನ ಕಾಯಿ. ಗೋಡಂಬಿ. ಚಿಟಕಿ ಸೋಡಾ.

ಒಗ್ಗರಣೆ: ಕಡಲೆ ಬೇಳೆ, ಉದ್ದಿನ ಬೇಳೆ, ಸಣ್ಣಗೆ ಹಚ್ಚಿದ ಸೊಪ್ಪು, ಹಸಿಮೆಣಸಿನ ಕಾಯಿ, ತೆಂಗಿನ ತುರಿ, ಗೋಡಂಬಿ, ಬಟಾಣಿ ಇಷ್ಟನ್ನು ಎಣ್ಣೆಯಲ್ಲಿ ನಿಧಾನವಾಗಿ ಹುರಿಯಿರಿ. ನಸುಗೆಂಪಾದರೆ ಸಾಕು. ಹೆಚ್ಚು ಹುರಿಯುವ ಹಾಗಿಲ್ಲ. ಇದಕ್ಕೆ ಅಕ್ಕಿ ನುಚ್ಚನ್ನು ಸೇರಿಸಿ ಎರಡು ನಿಮಿಷ ಬಿಸಿ ಮಾಡಿ ಒಲೆಯಿಂದ ಕೆಳಗಿಳಿಸಿ.

ADVERTISEMENT

ಮಾಡುವ ವಿಧಾನ: ಏಡಿ ಕಾಲುಗಳು ಮುಳುಗುವಷ್ಟು ನೀರು ಸೇರಿಸಿ, ಬೇಯಿಸುವ ಮುನ್ನ ಕಾಲುಗಳನ್ನು ಸ್ವಲ್ಪ ಒಡೆದು ನೀರಿನೊಂದಿಗೆ ಹಾಕಿ, ಇದರಿಂದ ಏಡಿ ಕಾಲುಗಳು ಸಿಡಿಯುವುದಿಲ್ಲ. ಸುವಾಸನೆಗೆ ಈ ನೀರಿನೊಂದಿಗೆ ಒಂದು ಸಣ್ಣ ತುಂಡು ಚೆಕ್ಕೆ ಹಾಕಿ, ರುಚಿಗೆ ಉಪ್ಪು ಸೇರಿಸಿ. 10 ನಿಮಿಷದ ನಂತರ ಏಡಿಯನ್ನು ನೀರಿನಿಂದ ಹೊರತೆಗೆದು ತಣ್ಣಗಾಗಲು ಬಿಡಿ. ನಂತರ ಇದರ ಮಾಂಸವನ್ನು ಬಿಡಿಸಿಕೊಳ್ಳಿ.

ಒಂದು ಪಾತ್ರೆಯಲ್ಲಿ ಹುರಿದ ಅಕ್ಕಿನುಚ್ಚು, ಏಡಿ ಮಾಂಸವನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ (ಅಕ್ಕಿ ನುಚ್ಚು, ಏಡಿ ಮಾಂಸ, ಮೊಸರು ಈ ಮೂರು ಸಮಪ್ರಮಾಣದಲ್ಲಿ ಇರಬೇಕು). ಈ ಮಿಶ್ರಣವನ್ನು ಹೆಚ್ಚು ಹೊತ್ತು ಇಟ್ಟರೆ ಇಡ್ಲಿ ಗಟ್ಟಿಯಾಗುತ್ತದೆ. ಮೊಸರಿನೊಂದಿಗೆ ಮಿಶ್ರಣ ಮಾಡಿದ ತಕ್ಷಣವೇ ಇಡ್ಲಿ ತಯಾರಿಸಬೇಕು. ಇಡ್ಲಿ ತಟ್ಟೆಯಲ್ಲಿ ಮಿಶ್ರಣವನ್ನು ಹಾಕಿನ ನಂತರ ಟೊಮೆಟೊ ತುಂಡನ್ನು ಮೇಲೆ ಅಲಂಕಾರಕ್ಕೆ ಇಡಿ. ನಂತರ ಹಬೆಯಲ್ಲಿ ಬೇಯಿಸಿ.

ಏಡಿ ಹೊಟ್ಟೆ ಸೂಪ್

ಬೇಕಾಗುವ ಸಾಮಗ್ರಿಗಳು: ಏಡಿ ಹೊಟ್ಟೆ ನಾಲ್ಕು, ಬೆಣ್ಣೆ, ಹಾಲಿನ ಕ್ರೀಂ, ನಿಂಬೆಹಣ್ಣು, ಹಸಿ ಮೆಣಸಿನಕಾಯಿ, ತೆಂಗಿನಕಾಯಿ ಹಾಲು, ಜೋಳ– ನಾಲ್ಕು ಚಮಚ, ಕ್ರೀಂ ಚೀಸ್, ಈರುಳ್ಳಿ ಹೂ. ಈರುಳ್ಳಿ.

ಮಾಡುವ ವಿಧಾನ: ಏಡಿಯ ಹೊಟ್ಟೆಗಳನ್ನು ನೀರಿನಲ್ಲಿ ಬೇಯಿಸಿ, ಅದೇ ನೀರಿನೊಂದಿಗೆ ಬ್ಲೆಂಡ್‌ ಮಾಡಿಕೊಳ್ಳಿ, ಇದನ್ನು ಸೋಸಿಕೊಳ್ಳಿ.

ಪಾತ್ರೆಯಲ್ಲಿ ಬೆಣ್ಣೆ ಹಾಕಿ ಒಂದು ಚಮಚ ಈರುಳ್ಳಿ ತುಂಡು, ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ. ಇದಕ್ಕೆ ಬೇಯಿಸಿದ ಜೋಳವನ್ನು ಸೇರಿಸಿ ಬಾಡಿಸಿ. ನಂತರ ಏಡಿ ರಸವನ್ನು ಇದಕ್ಕೆ ಸೇರಿಸಿ, ಎರಡು ಚಮಚ ಹಾಲಿನ ಕ್ರೀಂ, ತೆಂಗಿನಕಾಯಿ ಹಾಲು, ರುಚಿಗೆ ಉಪ್ಪು ಸೇರಿಸಿ ಬೇಯಿಸಿ. ಒಂದು ಕುದಿ ಬಂದ ನಂತರ ಕ್ರೀಂ ಚೀಸ್ ಸೇರಿಸಿ. ಬಡಿಸುವಾಗ ರುಚಿಗೆ ನಿಂಬೆ ರಸ ಸೇರಿಸಿ, ಈರುಳ್ಳಿ ಹೂವಿಂದ ಅಲಂಕರಿಸಿ. ಚೀಸ್ ಹಾಗೂ ಗಾರ್ಲಿಕ್‌ ಬ್ರೆಡ್‌ನೊಂದಿಗೆ ಈ ಸೂಪ್‌ ತಿನ್ನುವುದಾದರೆ ಸ್ವಲ್ಪ ಗಟ್ಟಿಯಾಗಿ ಬೇಯಿಸಿಕೊಳ್ಳಿ.

ಏಡಿ ಸಟ್ಟಕೆಂಡ

ಬೇಕಾಗುವ ಸಾಮಗ್ರಿಗಳು: ಏಡಿ ದೊಡ್ಡದು ಎರಡು (ಕಾಲು ಹೊಟ್ಟೆ ಸೇರಿ), ಬೆಳ್ಳುಳ್ಳಿ –2, ಹಸಿ ಮೆಣಸಿನಕಾಯಿ–2, ಕಲ್ಲುಪ್ಪು ಒಂದು ಚಮಚ, ರಾಜಿ (ಸಣ್ಣ) ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಬಟನ್ ಅಣಬೆ, ಕರಿ ಮೆಣಸಿನಕಾಳು ಒಂದು ಚಮಚ, ಬೆಣ್ಣೆ ಸ್ವಲ್ಪ. ಬೆಣ್ಣೆ ಕಲ್ಲು ದೊಡ್ಡದು 5. ಅಥವ ಬಾರ್ಬಿಕ್ಯು ಒಲೆ.

ಮಾಡುವ ವಿಧಾನ: ಏಡಿ ಸಟ್ಟಕೆಂಡ ಮಾಡಲು ಕೆಂಡ ಸಿದ್ಧ ಮಾಡಬೇಕು. ಈ ಕೆಂಡದ ಮೇಲೆ ಬೆಣ್ಣೆ ಕಲ್ಲುಗಳನ್ನು ಜೋಡಿಸಿ ಇದು ಬಿಸಿಯಾಗಲು ಬಿಡಿ.

ಏಡಿಯ ಕಾಲು, ಹೊಟ್ಟೆ ಭಾಗವನ್ನು ಸ್ವಲ್ಪ ಮುರಿದು ಮಸಾಲೆ ಒಳ ಹೋಗಲು ಅವಕಾಶ ಮಾಡಿ. ಈರುಳ್ಳಿ ಬಿಟ್ಟು ಮೇಲಿನ ಪದಾರ್ಥಗಳನ್ನು ಕಲ್ಲಿನಿಂದ ಜಜ್ಜಿ ಪೇಸ್ಟ್‌ ಮಾಡಿಕೊಳ್ಳಿ. ಈ ಮಸಾಲೆ ಪೇಸ್ಟ್‌ ಅನ್ನು ತರಕಾರಿ ಹಾಗೂ ಏಡಿಯೊಂದಿಗೆ ಬೇರೆ ಬೇರೆ ಪಾತ್ರಯಲ್ಲಿ ಮಿಶ್ರಣ ಮಾಡಿ ಅರ್ಧಗಂಟೆ ನೆನೆಯಲು ಬಿಡಿ. ಇದು ನೆನೆಯುವ ವೇಳೆ. ಕಲ್ಲುಗಳು ಬಿಸಿಯಾಗಿರುತ್ತವೆ. ತಂಡೂರ್‌ ಮಾಡುವ ಕಡ್ಡಿಯಲ್ಲಿ ತರಕಾರಿಗಳನ್ನು ಸಿಕ್ಕಿಸಿ ಸುಡಲು ಸಿದ್ದ ಮಾಡಿಕೊಳ್ಳಿ. ಕಲ್ಲಿನ ಮೇಲೆ ಏಡಿ ಮತ್ತು ತರಕಾರಿ ತುಂಡುಗಳನ್ನು ಇಟ್ಟು ಸುಡಬೇಕು. ಕೆಂಡದಲ್ಲಿ ಬೇಯಿಸುವುದರಿಂದ ಇದು ತುಂಬಾ ನಿಧಾನವಾಗಿ ಬೇಯುತ್ತದೆ. ಒಂದು ಗಂಟೆವರೆಗೆ ಬೇಯಿಸಬೇಕು. ಒಣಗಿದಂತೆ ಬೆಣ್ಣೆ ಹಚ್ಚುತ್ತಾ ಸುಡಬೇಕು. ಬಾರ್ಬಿಕ್ಯು ಒಲೆಯಲ್ಲಿ ಸುಡುವುದಾದರೆ ಅರ್ಧ ಗಂಟೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.