ADVERTISEMENT

ಗಾನ, ಪಾನ, ಆಸ್ವಾದನಾ...

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಪಾಪ್‌ ಮ್ಯೂಸಿಕ್‌ನ ಅಬ್ಬರ ರೆಸ್ಟೋರೆಂಟ್‌ನ ಗೋಡೆ ದಾಟಿ ಆಚೆಬದಿಯ ರಸ್ತೆವರೆಗೂ ಕೇಳಿಸುತ್ತಿರುತ್ತದೆ. ಪಾಪ್‌ ಸಂಗೀತ ಕಿವಿಗೆ ಬಿದ್ದ ತಕ್ಷಣ ದೇಹ ಅರಿವಿಲ್ಲದಂತೆಯೇ ಸಣ್ಣದಾಗಿ ಕುಣಿಯುವ ಮೂಲಕ ಸಂಗೀತಕ್ಕೆ ಸ್ಪಂದಿಸುತ್ತದೆ. ಅಷ್ಟರಲ್ಲಿ, ರೆಸ್ಟೋರೆಂಟ್‌ ಬಾಗಿಲಿಗೆ ಬಂದಿರುತ್ತೀರಿ. ಬಾಗಿಲಿಗೆ ಬಂದು ನಿಂತ ಮೇಲೆ, ಒಳಕ್ಕೆ ಹೋಗಲು ನಿಮಗೆ ಮೂರು ದಾರಿಗಳು ಎದುರಾಗುತ್ತವೆ. ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೂ ಅದು ನಿಮ್ಮನ್ನು ರೆಸ್ಟೋರೆಂಟ್‌ನ ಹೃದಯ ಭಾಗಕ್ಕೆ ಕರೆದೊಯ್ಯುತ್ತದೆ. ರೆಸ್ಟೋರಾ ಒಳಗಿನ ಮಬ್ಬುಗತ್ತಲಿಗೆ ಕಣ್ಣುಗಳು ಹೊಂದಿಕೊಳ್ಳತೊಡಗಿದಂತೆ ಸಂಗೀತದಬ್ಬರ ಜಾಸ್ತಿಯಾಗಿರುತ್ತದೆ.

ಮೊದಲಿಗೆ ಬಿಎಂಟಿಸಿ ಬಸ್‌ಗಳ ಸೀಟ್‌ನಂತಿರುವ ಬಿಳಿ ಬಣ್ಣದ ಕುಷನ್‌ಗಳು ನೆಲದ ಮೇಲೆ ಹಾಕಿರುವುದು ಕಾಣಿಸುತ್ತದೆ. ಅವುಗಳ ಮುಂದೊಂದು ಪುಟಾಣಿ ಟೇಬಲ್‌. ಅದರ ಮೇಲೆ ಗಾಜಿನ ಲೋಟದೊಳು ಹೊತ್ತಿಸಿಟ್ಟ ಮೋಂಬತ್ತಿ ಸಣ್ಣಗೆ ಉರಿಯುತ್ತಿರುತ್ತದೆ. ಬಾರ್‌ ಮೆನು ಆ ಗಾಜಿನ ಲೋಟವನ್ನು ಸುತ್ತುವರಿದಿರುವುದರಿಂದ ಮೋಬಂತ್ತಿ ಬೆಳಕು ಒಂಥರಾ ಆಕರ್ಷಕವಾಗಿ ಕಾಣಿಸುತ್ತದೆ. ಅಲ್ಲಿರುವ ಟೇಬಲ್‌ಗಳಲ್ಲಿ ಇಷ್ಟವಾದುದನ್ನು ಆಯ್ಕೆ ಮಾಡಿ ಕುಳಿತುಕೊಳ್ಳಬಹುದು.

ದರೆ, ಅಲ್ಲಿ ನಾವು ಕುರ್ಚಿ ಮೇಲೆ ಕೂತಂತೆ ಕೂರಲಾಗುವುದಿಲ್ಲ. ಬದಲಾಗಿ, ಚಕ್ಕಂಬಕ್ಕಳ ಹಾಕಿ ಕೂರಬೇಕು. ಅಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದವರಿಗಾಗಿ ಟೇಬಲ್‌ಗಳ ಆಯ್ಕೆಯಂತೂ ಇದ್ದೇ ಇದೆ. ಇವೆಲ್ಲವನ್ನೂ ಗಮನಿಸುವಷ್ಟರಲ್ಲಿ ನಿಮಗೆ ಅಲ್ಲಿ ಕುಳಿತು ಹರಟುತ್ತಾ, ಬಿಯರ್‌ ಹೀರುತ್ತಾ, ಖಾದ್ಯಗಳನ್ನು ಸವಿಯುತ್ತಿರುವ ಹುಡುಗ ಹುಡುಗಿಯರು ಕಣ್ಣಿಗೆ ಬೀಳುತ್ತಾರೆ. ಅಂದಹಾಗೆ, ಇದು ಪ್ಯಾಲೇಸ್‌ ಕ್ರಾಸ್‌ ರಸ್ತೆಯಲ್ಲಿರುವ ಒಪಸ್‌ ಪಬ್‌ ಮತ್ತು ರೆಸ್ಟೋರೆಂಟ್‌ ಒಳಗಿನ ಬೆಡಗು.

ತುಸು ಭಿನ್ನ ವಿನ್ಯಾಸದಿಂದ ಮೈದಳೆದಿರುವ ಈ ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡುವುದೆಂದರೆ ಒಂದು ಸಂಗೀತ ಸಂಜೆ ಸವಿದಂತೆ. ಡಿಜೆ ನೈಟ್‌ಗಳಲ್ಲಿರುವ ಅಬ್ಬರ, ಕುಡಿತ, ಕುಣಿತ ಎಲ್ಲಕ್ಕೂ ಇಲ್ಲಿ ಅವಕಾಶವಿದೆ. ಇಲ್ಲಿನ ಮೆಡಿಟರೇನಿಯನ್‌ ಹಾಗೂ ಯುರೋಪಿಯನ್‌ ರುಚಿಯ ಖಾದ್ಯಗಳು ಗ್ರಾಹಕರ ಹೊಟ್ಟೆಯನ್ನು ಭರ್ತಿಯಾಗಿಸಿವುದರ ಜತೆಗೆ ಸಂಗೀತ ಕೇಳುವ ಆಸೆಯನ್ನು ನೀಗಿಸುತ್ತವೆ. ಒಪಸ್‌ನಲ್ಲಿ ಊಟ ಮಾಡುತ್ತಾ ಕುಣಿಯಬಹುದು ಅಥವಾ ಕುಣಿಯುತ್ತಲೇ ಊಟ ಮಾಡಬಹುದು. ಗೆಳೆಯ ಗೆಳತಿಯರು ಪರಸ್ಪರ ಚುಂಬಿಸಿಕೊಳ್ಳುತ್ತಾ, ಅಪ್ಪಿ ಕುಣಿಯಲು ಇಲ್ಲಿ ಯಾರ ಅಡ್ಡಿಯಿಲ್ಲ. ಅಂದಹಾಗೆ, ಒಪಸ್‌ನಲ್ಲೀಗ ಕ್ರಿಸ್‌ಮಸ್‌ ಸಡಗರ ಗರಿಗೆದರಿದೆ.
ದಕ್ಕೆ ತಕ್ಕಂತೆ ಇಲ್ಲಿ ತಿಂಗಳಪೂರ್ತಿ ಕ್ರಿಸ್‌ಮಸ್‌ ಮೆನುವಿನ ರುಚಿಯನ್ನು ಗ್ರಾಹಕರು ಸವಿಯಬಹುದು.

ಕ್ರಿಸ್‌ಮಸ್‌ಗೆ ವಿಶೇಷ ಖಾದ್ಯಗಳು
ತಿಂಗಳಿಡೀ ಕ್ರಿಸ್‌ಮಸ್‌ ಗುಂಗು ತುಂಬುವ ಸಲುವಾಗಿ ಒಪಸ್‌ ರುಚಿಕಟ್ಟಾದ ವಿಶೇಷ ಖಾದ್ಯಗಳನ್ನು ಪರಿಚಯಿಸಿದೆ. ಸಿಗಡಿ, ಚಿಕನ್‌, ಪೋರ್ಕ್‌, ಮಟನ್‌ ಹೀಗೆ ವಿವಿಧ ಬಗೆಯ ಖಾದ್ಯಗಳು ಇಲ್ಲಿ ಗ್ರಾಹಕರಿಗೆ ಲಭ್ಯವಿದೆ. ಸ್ಟಾರ್ಟರ್ಸ್‌ನಲ್ಲಿ ಗ್ರಾಹಕರಿಗೆ ಹನ್ನೊಂದು ಬಗೆಯ ಕ್ರಿಸ್‌ಮಸ್‌ ಖಾದ್ಯಗಳಿದ್ದರೆ, ಒಪಸ್‌ ಸ್ಪೆಷಲ್ ಮೆನುವಿನಲ್ಲಿ 15ಬಗೆಯ ಸ್ಟಾರ್ಟರ್ಸ್‌ಗಳ ಆಯ್ಕೆ ಇದೆ. ಮುಖ್ಯಮೆನುವಿನಲ್ಲಿ ಎಂಟು ಖಾದ್ಯಗಳನ್ನು ಪರಿಚಯಿಸಲಾಗಿದೆ. ‘ಕ್ರಿಸ್‌ಮಸ್‌ ಹಬ್ಬದ ರಂಗನ್ನು ತಿಂಗಳು ಪೂರ್ತಿ ಆಚರಿಸಬೇಕು ಎಂಬುದು ನಮ್ಮ ಉದ್ದೇಶ. ಈ ಕಾರಣಕ್ಕಾಗಿಯೇ ಕ್ರಿಸ್‌ಮಸ್‌ ಮೆನು ಸಿದ್ಧಪಡಿಸಿದ್ದೇವೆ. ಈ ಮೆನು ಡಿ.31ರವರೆಗೆ ಗ್ರಾಹಕರಿಗೆ ಲಭ್ಯ. ಇದರ ಜತೆಗೆ ರೆಗ್ಯುಲರ್‌ ಮೆನು ಕೂಡ ಇರುತ್ತದೆ. ಅಲ್ಲದೇ, ಪ್ರತಿ ಭಾನುವಾರ ಅನಿಯಮಿತ ಮದ್ಯ ಒದಗಿಸುವ ಸಂಡೇ ಬ್ರಂಚ್‌ ಸಹ ಪರಿಚಯಿಸಲಾಗಿದೆ. ಕೇಕ್‌ ಇಲ್ಲದೇ ಕ್ರಿಸ್‌ಮಸ್‌ ಹಬ್ಬ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ, ಡೆಸರ್ಟ್‌ನಲ್ಲಿ ಮೂರು ವಿಶೇಷ ರುಚಿಯ ಕೇಕ್‌ಗಳನ್ನು ಪರಿಚಯಿಸಿದ್ದೇವೆ’ ಎಂದು ವಿವರಣೆ ನೀಡಿದರು ಒಪಸ್‌ನ ಮುಖ್ಯ ಬಾಣಸಿಗ ಡೇನಿಯಲ್‌ ಸೆಲ್ವರಾಜ್‌.

ಕಾಕ್‌ಟೇಲ್‌ ಗಮ್ಮತ್ತು
ಆಹಾರೋತ್ಸವ ಕುರಿತು ಮಾಹಿತಿ ನೀಡುವ ವೇಳೆಯೇ ಡ್ಯಾನಿಯಲ್‌ ಸ್ಟಾರ್ಟರ್ಸ್‌ಗೆ ಆರ್ಡರ್‌ ಮಾಡಿದರು. ವೇಟರ್‌ ಸಿಗಡಿ ಮತ್ತು ಕುರಿ ಮಾಂಸದ ಖಾದ್ಯ ತಂದಿಟ್ಟರು. ಗರಿಗರಿಯಾಗಿ ಎಣ್ಣೆಯಲ್ಲಿ ಕರಿದಿದ್ದ ಸಿಗಡಿ ಖಾದ್ಯ ಮೇಲ್ಭಾಗವನ್ನು ಖಾರದ ಪುಡಿ ಮತ್ತು ಒಗ್ಗರಣೆ ಮಾಡಿದ್ದ ಕರಿಬೇವಿನ ತುಣುಕುಗಳು ಅಲಂಕರಿಸಿದ್ದವು. ಒಂದು ಟೈಗರ್‌ ಪ್ರಾನ್‌ ಎತ್ತಿಕೊಂಡು ಇಡಿಯಾಗಿ ಬಾಯೊಳಗಿಟ್ಟು ಜಗಿಯತೊಡಗಿದಾಗ ನಾಲಗೆ ಮೇಲಿನ ರುಚಿಯ ಮೊಗ್ಗುಗಳು ಪಟಪಟನೆ ಅರಳಿದವು. ಖಾರವಾಗಿ, ಗರಿಗರಿಯಾಗಿದ್ದ ಸಿಗಡಿ ತುಣುಕುಗಳೆಲ್ಲಾ ಕ್ಷಣಹೊತ್ತಲ್ಲೇ ಹೊಟ್ಟೆ ಸೇರಿದವು. ನಂತರ, ಮಟನ್‌ ಕಬಾಬ್‌ ಸವಿಯಲು ತಿಳಿಸಿದರು ಡ್ಯಾನಿಯಲ್‌. ಹೆಚ್ಚಿಟ್ಟ ನಿಂಬೆ ಹಣ್ಣನ್ನು ಕಬಾಬ್‌ ಮೇಲೆ ಹದವಾಗಿ ಹಿಂಡಿ, ಅದರ ಮೇಲೆ ಒಂದಷ್ಟು ಈರುಳ್ಳಿ ಉದುರಿಸಿಕೊಂಡು ಕಬಾಬ್‌ ಸವಿದೆವು. ರುಚಿ ಚೆನ್ನಾಗಿತ್ತು.

ಅಂದಹಾಗೆ, ಕ್ರಿಸ್‌ಮೆಸ್‌ ಮೆನುವಿನ ಊಟದ ಗಮ್ಮತ್ತನ್ನು ಹೆಚ್ಚಿಸುವ ಸಲುವಾಗಿ ಒಪಸ್‌ ‘ವಿಂಟರ್‌ ಕಾಕ್‌ಟೇಲ್‌’ ಸಹ ಪರಿಚಯಿಸಿದೆ. ಹತ್ತು, ಹದಿನೈದು ವರ್ಷ ಹಳೆಯದಾದ ಮದ್ಯದ ರುಚಿ ಹೀರುವ ಅವಕಾಶವೂ ಇಲ್ಲಿದೆ.

ಬಿಯರ್‌–ಮ್ಯೂಸಿಕ್‌ ಒಂದೆಡೆ ಇದ್ರೆ ಲೈಫ್‌ ಸೂಪರ್‌ ಅನ್ನುವುದು ಇಂದಿನ ಯುವಜನತೆಯ ಮಂತ್ರ. ಒಂದೇ ಸ್ಥಳದಲ್ಲಿ ಸಂಗೀತ, ರುಚಿಯಾದ ಊಟ, ಮಗ್‌ಗಟ್ಟಲೇ ಬಿಯರ್‌ ಹೀರುವ ಉತ್ಸಾಹವಿದ್ದವರು ಓಪಸ್‌ಗೆ ಭೇಟಿ ನೀಡಬಹುದು. ಸ್ಥಳ: ಒಪಸ್‌, ನಂ.4, 1ನೇ ಮುಖ್ಯರಸ್ತೆ, ಚಕ್ರವರ್ತಿ ಲೇಔಟ್‌, ಪ್ಯಾಲೇಸ್‌ ಕ್ರಾಸ್‌ ರಸ್ತೆ. ಟೇಬಲ್‌ ಕಾಯ್ದಿರಿಸಲು:
080 2344 2580.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.