ADVERTISEMENT

ಪಾನ್ ಮಸಾಲಾ ಚಾಟ್ಸ್‌ನ ಹೊಸರುಚಿ

ವಿದ್ಯಾಶ್ರೀ ಎಸ್.
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಪಾನ್‌ ಚಾಟ್‌
ಪಾನ್‌ ಚಾಟ್‌   

ಪಾನ್‌ ಚಾಟ್‌, ಫ್ಲೋಟಿಂಗ್‌ ಪಾನಿಪೂರಿ, ಸ್ಪೈರಲ್‌ ಆಲೂ ಫ್ರೈ, ಮಂಗೋಲಿಯನ್‌ ಪಾವ್‌ಬಾಜಿ... ಹೀಗೆ ದಕ್ಷಿಣ ಮತ್ತು ಉತ್ತರ ಭಾರತದ ವೈವಿಧ್ಯ ಚಾಟ್‌ಗಳನ್ನು ಮಾಡಿ ಆಹಾರ ಪ್ರಿಯರ ಜಿಹ್ವೆ ತಣಿಸುವವರು ನಾಗರಾಜ್‌.

ಇಪ್ಪತ್ತೈದು ವರ್ಷಗಳಿಂದ ಪೂರಿ ಮಾಡುವ ಉದ್ಯೋಗದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಹೇಗೂ ಚೆನ್ನಾಗಿ ಅಡುಗೆ ಮಾಡುತ್ತೇನೆ, ಇನ್ನೊಂದು ಹೆಜ್ಜೆ ಮುಂದೆ ಹೋಗೊಣ ಎಂದು ಎಂಟು ವರ್ಷಗಳಿಂದ ‘ಬೆನಕಾ ಕ್ಯಾಟರಿಂಗ್‌’ ಪ್ರಾರಂಭಿಸಿದರು.

ಮೊನ್ನೆಯಷ್ಟೇ ಮದುವೆ ಯೊಂದಕ್ಕೆ ಹೋಗಿದ್ದಾಗ ವೀಳ್ಯದೆಲೆ ಮಸಾಲೆ, ಪಾನ್‌ ಪಾಪಡ್‌ ತಿಂದು ಬಾಯಿ ಚಪ್ಪರಿಸುವಂತಾಯಿತು, ಈ ಸವಿರುಚಿಯ ರಹಸ್ಯ ಅರಿಯಲು ಹೋದಾಗ ಅದು ನಾಗರಾಜ್‌ ಕೈಚಳಕ ಎಂಬುದು ತಿಳಿಯಿತು.

ADVERTISEMENT

(ದಹಿ ಪೂರಿ)

ವಿಭಿನ್ನವಾದ ಚಾಟ್‌ಗಳನ್ನು ಮಾಡುವುದು ಇವರ ಶೈಲಿ. ಹೀಗೆ ಸವಿಯಾದ ಅಡುಗೆ ಮಾಡಲು ಇವರು ಎಲ್ಲಿಯೂ ತರಬೇತಿ ಪಡೆದಿಲ್ಲ. ಕಂಡಿದ್ದನ್ನು, ತಿಂದಿದ್ದನ್ನು ಪ್ರಯೋಗಕ್ಕೆ ಇಳಿಸಿಯೇ ಹಲವು ಬಗೆಯ ಖಾದ್ಯ ತಯಾರಿಸುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಸಮಾರಂಭಗಳಲ್ಲಿ ಇವರ ಅಡುಗೆ ರುಚಿ ಸವಿದವರು, ವಾವ್‌! ಎಂದು ಇವರ ಕೈರುಚಿಯ ಗುಣಗಾನ ಮಾಡುತ್ತಾರೆ.

ದಕ್ಷಿಣ ಮತ್ತು ಉತ್ತರ ಭಾರತದ ಜೊತೆಗೆ ಚೈನೀಸ್‌ ಚಾಟ್‌ಗಳನ್ನು ತಯಾರಿಸುವುದರಲ್ಲಿಯೂ ಇವರು ಸಿದ್ಧಹಸ್ತರು. ಫ್ಲೋಟಿಂಗ್‌ ಪಾನಿಪೂರಿ, ಸಾಬುದಾನಿ ಪಾನಿಪೂರಿ, ಕಠೋರಿ ಚಾಟ್‌, ಪಾನ್‌ ಚಾಟ್‌, ಪಾಸ್ತಾ, ಪಿಜ್ಜಾ, ಸ್ಪೈರಲ್‌ ಆಲೂ ಫ್ರೈ, ಮಸಾಲ ಪೂರಿ, ಗೋಬಿ ಮಂಚೂರಿ, ಮಂಗೋಲಿಯನ್‌ ಪಾವ್‌ಬಾಜಿ, ಸ್ವೀಟ್‌ ಕಾರ್ನ್‌ ಮಂಚೂರಿ, ಮೆಕ್ಸಿಕನ್‌, ಇಟಾಲಿಯನ್‌ ನ್ಯೂಡಲ್ಸ್‌... ಹೀಗೆ ಹಲವು ಸ್ವಾದಿಷ್ಟ ಚಾಟ್ಸ್   ತಯಾರಿಸುತ್ತಾರೆ.

ಸಾಮಾನ್ಯವಾಗಿ ಪಾವ್ ಬಾಜಿಯನ್ನು ಅಲೂಗಡ್ಡೆಯಿಂದ ಮಾಡುತ್ತಾರೆ. ಆದರೆ ಇವರು ಇಟಾಲಿಯನ್‌ ತರಕಾರಿಯನ್ನೆಲ್ಲ ಬಳಸಿ ಮಾಡುವುದು ವಿಶೇಷ.

‘ಚಾಟ್ಸ್‌ಗಳಲ್ಲಿ ಹೊಸತನ್ನು ಮಾಡುವುದು ನಮ್ಮ ಪ್ಲಸ್‌ ಪಾಯಿಂಟ್‌. ಪಾನ್‌ಚಾಟ್‌ ಮಾಡುವವರು ನಗರದಲ್ಲಿ ತೀರಾ ಕಡಿಮೆ. ಅಡುಗೆಯಲ್ಲಿ ಪ್ರಯೋಗ ಮಾಡುವುದೆಂದರೆ ನನಗೆ ಇಷ್ಟ. ಹೊಸ ಬಗೆಯ ತಿನಿಸನ್ನು ಮನೆಯಲ್ಲಿ ಮೊದಲು ಮಾಡುತ್ತೇನೆ. ಅವರಿಗೆ ಇಷ್ಟವಾದರೆ ಆ ಶೈಲಿಯನ್ನು ಮುಂದುವರೆಸುತ್ತೇನೆ’ ಎನ್ನುತ್ತಾರೆ ನಾಗರಾಜ್‌.

‘ಮೊದಲು ಪೂರಿ ಮಾಡಿ ಹೋಲ್‌ಸೇಲ್‌ ಮಾರಾಟ ಮಾತ್ರವೇ ಮಾಡುತ್ತಿದ್ದೆ. ಎಷ್ಟು ದಿನ ಎಣ್ಣೆ ಮುಂದೆ ಕೂರುವುದು, ಒಂದು ಮೆಟ್ಟಿಲು ಏರೋಣ ಎಂದು ಕ್ಯಾಟರಿಂಗ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

(ಸಾಬುದಾನಿ ಪೂರಿ)

ವೀಳ್ಯದೆಲೆಯನ್ನು ತುಪ್ಪದಲ್ಲಿ ಕರಿದು ಅದಕ್ಕೆ ಜೋಳದ ಹಿಟ್ಟು ಮತ್ತು ತೆಳುವಾಗಿ ಮೈದಾ ಸವರಿ ಅದರ ಮೇಲೆ ತುರಿದ ಬೀಟ್‌ರೂಟ್‌, ಕ್ಯಾರೆಟ್‌ ತುರಿಯನ್ನು ಉದುರಿಸಿ ಖಾರ ಚಟ್ನಿ ಜೊತೆ ಸವಿಯಲು ಕೊಡುವ ವೀಳ್ಯದೆಲೆಯ ಮಸಾಲೆ ರುಚಿ ಮೊಗ್ಗುಗಳನ್ನು ಅರಳಿಸುತ್ತದೆ. ಇದೇ ರೀತಿ ಮೊಸರು ಮತ್ತು ಕಾರಾ ಬೂಂದಿಯನ್ನು ಸೇರಿಸಿ ಮಾಡುವ ದಹಿ ವೀಳ್ಯದೆಲೆಯ ಚಾಟ್‌ ತಿನ್ನಲು ರುಚಿಯಾಗಿರುತ್ತದೆ. ಹೆಸರುಕಾಳು, ಬಟಾಣಿ, ಆಲೂಗಡ್ಡೆ, ಬ್ರೆಡ್‌, ಅವಲಕ್ಕಿ, ಓಂಕಾಳು, ಸೇವ್‌ ಮತ್ತು ಮಿಕ್ಸರ್‌ ಹಾಕಿ ಮಾಡುವ ಪಾಕೊಡಿಯನ್‌ ಉಂಡೆಯ ಪರಿಮಳ ಹಸಿವನ್ನು ಹೆಚ್ಚಿಸುತ್ತದೆ.

‘ಕೊಳಚೆ ಪ್ರದೇಶಗಳಲ್ಲಿ ಪೂರಿ ಮಾಡುತ್ತಾರೆ ಎಂಬ ಸುದ್ದಿಗಳು ವಾಹಿನಿಗಳಲ್ಲಿ ಬರುತ್ತಲೇ ಇರುತ್ತವೆ. ಇದರಿಂದ ಜನ ಪಾನಿಪೂರಿ ತಿನ್ನಲು ಭಯ ಪಡುತ್ತಾರೆ. ಆದರೆ ನಾವಿಲ್ಲಿ ರುಚಿಗೆ ಆದ್ಯತೆ ನೀಡುತ್ತೇವೆ. ನಾವು ಮಾಡಿದ್ದನ್ನು, ನಾವು ತಿನ್ನಬೇಕು, ಎನ್ನುವುದು ನಮ್ಮ ಉದ್ದೇಶ. ಹಾಗಾಗಿ ರುಚಿಯಾಗಿ ಅಡುಗೆ ಮಾಡುತ್ತೇವೆ’ ಎನ್ನತ್ತಾರೆ ನಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.