ADVERTISEMENT

ಭಾಕರ್ ಝುಣಕಾ, ಫ್ರ್ಯಾಂಕಿ ಸವಿ

ಎಸ್.ರಶ್ಮಿ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಅಮ್ಮ ಅಳಕೊಂತ ಈರುಳ್ಳಿ ಹೆಚ್ಚುತ್ತಿದ್ದರಾ..? ಹೆಚ್ಚುವಾಗ ಅಳ್ತಿದ್ರಾ..? ಹೆಚ್ಚಿದ್ದಕ್ಕೆ ಕಣ್ಣೀರು ಬರ್ತಿತ್ತಾ? ಇಷ್ಟು ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿಯೇ ಅಮ್ಮ ಮಾತ್ರ, ಝುಣಕಾ ಮಾಡಲು ಒಗ್ಗರಣೆಗೆ ಇಟ್ಟಿರುತ್ತಿದ್ದರು. ಈರುಳ್ಳಿ ಒಗ್ಗರಣೆಗೆ ಕರಿಬೇವು ಹಾಕಿ, ಅದರ ಘಮ ಮನೆ ತುಂಬುವ ಮುನ್ನವೇ ಹುಣಸೇ ಹುಳಿ ಹಿಂಡಿ, ಹಿಟ್ಟು ಹಾಕಿ ಕಲಕುತ್ತಿದ್ದರು. ಉದುರುದುರು ಝುಣಕಾ ರೆಡಿ ಆಗಿರುತ್ತಿತ್ತು. ಹುಳಿಖಾರದ ಝುಣಕಾ ಮಾಡಿಟ್ಟು, ರೊಟ್ಟಿಗೆ ಹಂಚಿಡುತ್ತಿದ್ದರು. ಹಿಟ್ಟು ನಾದುವುದರಲ್ಲಿ ಬಿಸಿ ಹಂಚಿನೊಳಗೆ ಹಸಿ ಸೇಂಗಾ ಮೈಕೆಂಪು ಮಾಡಿಕೊಳ್ಳುತ್ತಿದ್ದವು.

ಅಲ್ಲಿಗೆ ಅಂದಿನ ಮೆನು ತಯಾರ್ ರೊಟ್ಟಿ ಝುಣಕಾ.. ಮಹಾರಾಷ್ಟ್ರದ ಅತಿ ಮುಖ್ಯ ಆಹಾರ ಭಾಕರ್ ಝುಣಕಾ ಸಿದ್ಧವಾಗಿರುತಿತ್ತು.

ಇನ್ನೇನು ಬಿಸಿರೊಟ್ಟಿಯಗಲದಲ್ಲಿ ಅರಳುತ್ತಲೇ ಕರಗುವ ಬೆಣ್ಣೆ ಮುದ್ದೆ... ಅದರ ಮೇಲೆ ಹಸಿಕೊಬ್ಬರಿ, ಎಳ್ಳು ಹಾಗೂ ಕೊತ್ತಂಬರಿ ಅಲಂಕಾರದ ಝುಣಕಾ, ಅದರ ಮೇಲೆ ಹುರಿದ ಸೇಂಗಾ ಎಲ್ಲವನ್ನೂ ಸುರಳಿ ಸುತ್ತಿ ಹಸಿ ಈರುಳ್ಳಿ ಸೊಪ್ಪಿನಿಂದ ಕಟ್ಟು ಕಟ್ಟಿ ಕೈಗಿಟ್ಟರೆ... ಆಹಾ...ಹಾ..
ಅಡುಗೆಮನೆಯಿಂದ ಅಂಗಳಕ್ಕಿಳಿಯುತ್ತಿತ್ತು ಸವಾರಿ. ಆಕಾಶ ನೋಡುತ್ತ ಬಿಳಿರೊಟ್ಟಿಯೊಳಗಿನ ತಿಳಿ ಹಳದಿ ಬಣ್ಣದ ಅಥವಾ ಕಡುಕೆಂಪು ಬಣ್ಣದ ಝುಣಕಾ, ಹಸಿರು ಕೊತ್ತಂಬರಿ ಸೊಪ್ಪು, ಬಿಳಿ ಕೊಬ್ಬರಿಯ ಬಣ್ಣ.. ನಡುನಡುವೆ ಬಾಯಾಡಿಸಲು ಸಿಗುವ ಹುರಿದ ಸೇಂಗಾ... ಏನದು ಸುರಳಿ... ?

ADVERTISEMENT

ದೂರದೂರಿಗೆ ಹೋಗುವಾಗಲೂ ಕೆಡದ ಖಾದ್ಯ ಎಂದು ಝಣಕಾ ಕಟ್ಟುವುದು ಯಾವಾಗಲೂ ರೂಢಿಯೊಳಗುತ್ತಮ ಬುತ್ತಿ ಎಂಬುದು ಮಾತಿದೆ.

ಆದರೆ ಮೆಟ್ರೊನಗರಿ ಬೆಂಗಳೂರಿಗೂ ಮಹಾರಾಷ್ಟ್ರದ ಭಾಕರ್ ಝಣಕಾಗೂ ಎತ್ತಣದಿಂದೆತ್ತಣದ ಸಂಬಂಧವಯ್ಯಾ..? ಎನ್ನಬೇಡಿ.. ಇದೆ.

ಬಲು ನಿಕಟವಾದ ಸಂಬಂಧವೇ ಇದೆ. ಬ್ರಿಗೇಡ್ ರಸ್ತೆ, ಕಮರ್ಷಿಯಲ್ ರಸ್ತೆಯ ಸಫೀನಾ ಪ್ಲಾಜಾಗಳಲ್ಲಿ ಹೊರಗಡೆ ಬಿಸಿಬಿಸಿ ಫ್ರ್ಯಾಂಕಿ ಮಾರುತ್ತಾರೆ. ಆ ಫ್ರ್ಯಾಂಕಿ ಸವಿದಾಗಲೆಲ್ಲ ದೇಸಿ ಮನ ಈ ರೊಟ್ಟಿ ಝುಣಕಾದ ಸವಿ ನೆನಪಿಸಿಕೊಳ್ಳುತ್ತದೆ.

ಜೋಳದ ರೊಟ್ಟಿಯ ಬದಲು ಆಟ್ಟಾದ ಪರಾಠಾಗಳು ಇಲ್ಲಿಯ ಕಾವಲಿಯ ಮೇಲೆ ಮೈ ಸುಟ್ಟುಕೊಳ್ಳುತ್ತವೆ. ಝಣಕಾ ಸಹ ಆಲೂಗಡ್ಡೆಯ ಮಿಶ್ರಣದೊಂದಿಗೆ ತನ್ನ ಸ್ವರೂಪ ಬದಲಿಸಿಕೊಂಡಿದೆ. ಬೆಣ್ಣೆಯ ಬದಲು ಚೀಜ್ ತುರಿ ಫ್ರ್ಯಾಂಕಿಯೊಳಗೆ ತೂರಿಕೊಳ್ಳುತ್ತದೆ.

ಹುಣಸೇತೊಕ್ಕಿನ ಬದಲು ಟ್ಯಾಂಜಿ ಕ್ರೀಮ್, ಬೆಲ್ಲದ ಬದಲು ಮೀಠಾ ಚಟ್ನಿ, ಹಸಿ ಈರುಳ್ಳಿ ಜೊತೆಗೆ ಕ್ಯಾಬೇಜ್ ಎಲೆಗಳೂ ಈ ಸುರಳಿಯೊಳಗೆ ಸೇರುತ್ತವೆ.

ಬಾಯೊಳಗಿಟ್ಟರೆ ಅದೇ ಹುಳಿ ಖಾರದ ಸವಿಯ ಜೊತೆಗೆ ಹಸಿ ಈರುಳ್ಳಿಯ ಖಾರ, ಕರಕರ ಎಲ್ಲವೂ... ಆದರೂ ಆ ರುಚಿಗೇನೋ ಕೊರತೆ ಇದೆ. ಅಥವಾ ... ಆ ರುಚಿಯೇ ಮಾರ್ಪಾಡಾಗುತ್ತ ತನ್ನ ರುಚಿಯನ್ನೇ ಕಳೆದುಕೊಂಡಿದೆಯೇ..?

ಭಾಕರ್ ಝುಣಕಾ ಲೋ ಕ್ಯಾಲರಿಯ ಕಾಂಬಿನೇಷನ್. ಬೆಣ್ಣೆ ಇದ್ದರೂ ತುಪ್ಪ ಅಥವಾ ಎಣ್ಣೆಗಿಂತ ಕಡಿಮೆ ಕ್ಯಾಲರಿ ಇರುತ್ತದೆ. ಆದರೆ ಇಲ್ಲಿ ಆಲೂಗಡ್ಡೆ ಇರುವುದಿಲ್ಲ.

ಫ್ರ್ಯಾಂಕಿ ಬಗ್ಗೆ ಇದೇ ಮಾತು ಹೇಳುವ ಹಾಗಿಲ್ಲ. ಫ್ರ್ಯಾಂಕಿಯನ್ನು ಅಲ್ಲಗಳೆಯುವ ವಾದವೂ ಇದಲ್ಲ.
ದೇಸಿ ಸುಂದರಿ ತನ್ನ ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತನ್ನತನವನ್ನೇ ಕಳೆದುಕೊಳ್ಳುವ ಬಗೆ ಇದು ಎನ್ನುತ್ತಾರೆ ಸಫೀನಾ ಪ್ಲಾಜಾಗೆ ಮೇಳಗಳಲ್ಲಿ ಕಾಲಾಡಿಸಲು ಬರುವ ಮುಂಬೈ ಮೂಲದ ನಿತಿನ್ ಗೋಯೆಲ್.

ತಾಯಿ-ಪ್ರೇಯಸಿ

ಲಾತುರ್‌ನಲ್ಲಿ ಓದಿ ಬೆಳೆದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನೀಲೇಶ್ ಪಾಠಕ್ ಮಾತೇ ಬೇರೆ.  ಭಾಕರ್ ಝುಣಕಾ ತಾಯಿ ಇದ್ದಂತೆ. ಮೃದುವಾದ ವಾತ್ಸಲ್ಯದ ಅನುಭೂತಿ ಅದು. ರೊಟ್ಟಿ ತಿಂದು ಕೈ ಒರೆಸಲು ಅಮ್ಮನ ಕಾಟನ್ ಸೀರೆಯ ಸೆರಗು ಸಾಕು.

ಆದರೆ ಫ್ರ್ಯಾಂಕಿ ಪ್ರೇಯಸಿ ಇದ್ದಂತೆ. ಅಲ್ಲಿ ಹೊಟ್ಟೆ ತುಂಬುವ ತುತ್ತು. ಇದು ಹಸಿವನ್ನು ಉದ್ದೀಪಿಸುವ ಮತ್ತು. ಅಲ್ಲಿಯ ಹುಳಿ ನಾಲಗೆ ಚಪ್ಪರಿಸುವಂತಿರುತ್ತದೆ. ಇಲ್ಲಿಯ ಹುಳಿ ಹಾಗಲ್ಲ. ಅದು ರೊಟ್ಟಿ, ಇದು ಪರಾಠಾ... ರೊಟ್ಟಿಗೇನೋ ಪ್ರಸಾಧನಗಳ ಲೇಪ ಇದ್ದಂಗಿದೆ. ಅಲ್ಲಿ ಅಮ್ಮನ ವಾತ್ಸಲ್ಯದ ಸೆರಗಿದೆ. ಇಲ್ಲಿ ಬಳಸಿ ಬಿಸಾಡುವ ಟಿಶ್ಯೂ ಇದೆ. ಹಾಗಾಗಿ ಇದೊಂಥರ ಪ್ರೇಯಸಿ ಇದ್ದಂತೆ.

ಈ ಇಂಪೋರ್ಟೆಡ್ ಭಾಕರ್ ಝುಣಕಾ ನಗರದ ನಾಲಗೆಯ ರುಚಿಕಣಗಳಿಗೆ ತೃಪ್ತಿಯೇನೋ ನೀಡುತ್ತದೆ. ಆದರೆ ಭಾಕರ್ ಝುಣಕಾದ ಸವಿ ಮಾತ್ರ ಸಿಗುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.