ADVERTISEMENT

ರುಚಿಗೊಪ್ಪುವ ಬಸಳೆಸೊಪ್ಪಿನ ತಿನಿಸುಗಳು

ಹೇಮಮಾಲಾ ಬಿ.
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ರುಚಿಗೊಪ್ಪುವ  ಬಸಳೆಸೊಪ್ಪಿನ ತಿನಿಸುಗಳು
ರುಚಿಗೊಪ್ಪುವ ಬಸಳೆಸೊಪ್ಪಿನ ತಿನಿಸುಗಳು   

ಬಸಳೆ-ಹುರುಳಿಕಾಳಿನ ಸಾಂಬಾರು

ಬೇಕಾಗುವ ಸಾಮಗ್ರಿಗಳು: ಬಸಳೆಸೊಪ್ಪು ಹೆಚ್ಚಿದ್ದು – 3ಕಪ್‌, ಹುರುಳಿಕಾಳು – 1/2ಕಪ್‌, ತೆಂಗಿನಕಾಯಿತುರಿ – ಅರ್ಧ ಕಪ್‌, ಹುಣಸೆಹಣ್ಣು – ಗೋಲಿ ಗಾತ್ರದ್ದು, ಉಪ್ಪು – ರುಚಿಗೆ, ಬೆಲ್ಲ – ಸಣ್ಣ ತುಂಡು, ಅರಿಶಿಣಪುಡಿ – ಚಿಟಿಕೆ.

ಮಸಾಲೆಗೆ: ಬ್ಯಾಡಗಿ ಮೆಣಸಿನಕಾಯಿ – 6, ಕೊತ್ತಂಬರಿ – 2ಚಮಚ, ತೊಗರಿಬೇಳೆ – 1ಚಮಚ, ಉದ್ದಿನಬೇಳೆ – 1ಚಮಚ, ಜೀರಿಗೆ – 1/2ಚಮಚ, ಮೆಂತ್ಯ – 1/4ಚಮಚ, ಇಂಗು – ಚಿಟಿಕೆ

ADVERTISEMENT

ಒಗ್ಗರಣೆಗೆ: ಎಣ್ಣೆ – 1ಚಮಚ, ಸಾಸಿವೆ, ಒಣಮೆಣಸಿನಕಾಯಿ – 1, ಸ್ವಲ್ಪ ಕರಿಬೇವಿನಸೊಪ್ಪು/ಬೆಳ್ಳುಳ್ಳಿ ಎಸಳುಗಳು.

ತಯಾರಿಸುವ ವಿಧಾನ: ಮೊದಲು ನೆನೆಸಿದ ಹುರುಳಿಕಾಳುಗಳನ್ನು ಕುಕ್ಕರಿನಲ್ಲಿ ಬೇಯಿಸಿ. ಬೆಂದ ಹುರುಳಿಕಾಳು, ಹೆಚ್ಚಿದ ಬಸಳೆಸೊಪ್ಪು, ಚಿಟಿಕೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ - ಇವಿಷ್ಟನ್ನು ಸೇರಿಸಿ ಪುನಃ ಬೇಯಿಸಿ. ಮಸಾಲೆ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಂಡು, ತೆಂಗಿನಕಾಯಿತುರಿಯ ಜೊತೆಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೇಯಿಸಿದ ಸೊಪ್ಪು-ಕಾಳುಗಳ ಮಿಶ್ರಣಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ. ಬೇಕಿದ್ದಷ್ಟು ನೀರು, ಉಪ್ಪು ಸೇರಿಸಿ ಸಾಂಬಾರಿನ ಹದಕ್ಕೆ ಕುದಿಸಿ. ಆಯ್ಕೆಗೆ ತಕ್ಕಂತೆ ಬೆಳ್ಳುಳ್ಳಿ ಹಾಕಿ ಅಥವಾ ಹಾಕದೆ ಒಗ್ಗರಣೆ ಮಾಡಿದಾಗ ಬಸಳೆ-ಹುರುಳಿಕಾಳಿನ ಸಾಂಬಾರು ತಯಾರಾಗುತ್ತದೆ. ಅನ್ನ ಅಥವಾ ಚಪಾತಿಯೊಂದಿಗೆ ಈ ಸಾಂಬಾರು ರುಚಿಯಾಗಿರುತ್ತದೆ.

**

ಬಸಳೆ ಸೊಪ್ಪಿನ ಬಸ್ಸಾರು

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಬಸಳೆಸೊಪ್ಪು – 2ಕಪ್, ತೊಗರಿಬೇಳೆ – 1/2ಕಪ್‌, ಅರಿಶಿಣಪುಡಿ – ಚಿಟಿಕೆ, ಈರುಳ್ಳಿ – 1, ಟೊಮೆಟೊ – 1, ಹುಣಸೆಹಣ್ಣು – ಗೋಲಿ ಗಾತ್ರದ್ದು, ತೆಂಗಿನಕಾಯಿತುರಿ – 1ಚಮಚ, ಶುಂಠಿ – 1ಚಮಚ, ಬೆಳ್ಳುಳ್ಳಿ – 5ರಿಂದ6 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ,

ಮಸಾಲೆಗೆ: ಕಾಳುಮೆಣಸು – 2ಚಮಚ, ಧನಿಯಾ – 1ಚಮಚ , ಉದ್ದಿನಬೇಳೆ – 1ಚಮಚ, ಜೀರಿಗೆ – 1/2ಚಮಚ, ಮೆಂತ್ಯ – 1/4ಚಮಚ

ಒಗ್ಗರಣೆಗೆ: ಎಣ್ಣೆ – 1ಚಮಚ, ಸಾಸಿವೆ,  ಒಣಮೆಣಸಿನಕಾಯಿ – 1  ಕರಿಬೇವಿನಸೊಪ್ಪು/ಬೆಳ್ಳುಳ್ಳಿ ಎಸಳುಗಳು – ಸ್ವಲ್ಪ

ತಯಾರಿಸುವ ವಿಧಾನ: ಹೆಚ್ಚಿದ ಬಸಳೆಸೊಪ್ಪು, ಈರುಳ್ಳಿ, ಟೊಮೆಟೊ, ಚಿಟಿಕೆ ಅರಿಶಿಣಪುಟಿ, ಹುಣಸೆಹಣ್ಣಿನ ರಸ – ಇವಿಷ್ಟನ್ನು ಕುಕ್ಕರಿನಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ, ಬೆಂದ ಮಿಶ್ರಣವನ್ನು ಎಗ್ ಬೀಟರ್ ಅಥವಾ ಸೌಟಿನಲ್ಲಿ ಮಸೆಯಿರಿ. ಮಸಾಲೆ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಂಡು, ತೆಂಗಿನಕಾಯಿ ತುರಿ, ಶುಂಠಿ ಮತ್ತು ಬೆಳ್ಳುಳ್ಳಿಯ ಜೊತೆಗೆ ಸೇರಿಸಿ ರುಬ್ಬಿಕೊಳ್ಳಿ. ಮಸೆದ ಸೊಪ್ಪಿಗೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಬೇಕಾದರೆ ನೀರು ಸೇರಿಸಿ ಸಾಂಬಾರಿನ ಹದಕ್ಕೆ ಕುದಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ, ಸಾಸಿವೆ-ಬೆಳ್ಳುಳ್ಳಿ ಒಗ್ಗರಣೆ ಮಾಡಿದರೆ ಬಸಳೆ ಸೊಪ್ಪಿನ ಮಸ್ಸಾರು ಸಿದ್ಧ. ಇದು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ.

**

ಬಸಳೆಸೊಪ್ಪಿನ ತಂಬುಳಿ

ಬೇಕಾಗುವ ಸಾಮಗ್ರಿಗಳು: ಬಸಳೆಸೊಪ್ಪು – 10ಎಲೆಗಳು, ಜೀರಿಗೆ – 1ಚಮಚ, ಕಾಳುಮೆಣಸು – 1ಚಮಚ, ಹಸಿಮೆಣಸು – 1, ತೆಂಗಿನಕಾಯಿತುರಿ – 4ಚಮಚ, ತುಪ್ಪ– 1ಚಮಚ, ಮಜ್ಜಿಗೆ – ನಾಲ್ಕು ಸೌಟು, ಉಪ್ಪು – ರುಚಿಗೆ.

ಒಗ್ಗರಣೆಗೆ: ಸ್ವಲ್ಪ ಎಣ್ಣೆ , ಸಾಸಿವೆ, ಉದ್ದಿನಬೇಳೆ, ಒಣಮೆಣಸು ಒಂದು, ಕರಿಬೇವಿನ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ಸಣ್ಣಗೆ ಹೆಚ್ಚಿ ತುಪ್ಪವನ್ನು ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ಬಾಡಿಸಿ. ಬಾಡಿಸಿದ ಬಸಳೆಸೊಪ್ಪು, ತೆಂಗಿನಕಾಯಿತುರಿ, ಜೀರಿಗೆ, ಕಾಳುಮೆಣಸು, ಖಾರ ಬೇಕಿದ್ದರೆ ಹಸಿರುಮೆಣಸಿನಕಾಯಿ ಇವಿಷ್ಟನ್ನು ನುಣ್ಣಗೆ ರುಬ್ಬಿ. ಇದಕ್ಕೆ 4 ಸೌಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕರಿಬೇವಿನ ಒಗ್ಗರಣೆ ಕೊಟ್ಟರೆ ಬಸಳೆಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ. ಈ ತಂಬುಳಿಯು ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ. ಹೊಟ್ಟೆಗೆ ತಂಪು. ಹಸಿ ಬಸಳೆಸೊಪ್ಪಿನಲ್ಲಿ ಸ್ವಲ್ಪ ಲೋಳೆ ಇರುವುದರಿಂದ ಇದರ ಅಡುಗೆಯನ್ನು ಮಾಡಲು ಹಿಂಜರಿಯುವವರೂ ಇದ್ದಾರೆ. ಆದರೆ ಬಸಳೆಸೊಪ್ಪಿನ ಲೋಳೆಯ ಅಂಶವು ಬೆಂದ ಮೇಲೆ ಇರುವುದಿಲ್ಲ. ಇದರ ರುಚಿ ಸುಮಾರಾಗಿ ಪಾಲಾಕ್‌ಸೊಪ್ಪಿನಂತೆಯೇ ಇರುತ್ತದೆ. ಹಾಗಾಗಿ, ಪಾಲಾಕ್‌ಸೊಪ್ಪನ್ನು ಬಳಸಿ ಮಾಡಬಹುದಾದ ಎಲ್ಲ ಆಧುನಿಕ ಅಡುಗೆಗಳನ್ನು ಬಸಳೆಸೊಪ್ಪಿನಿಂದಲೂ ತಯಾರಿಸಬಹುದು. ಉದಾ: ಬಸಳೆಸೊಪ್ಪಿನ ಪನೀರ್ ಮಸಾಲಾ, ರೈಸ್ ಭಾತ್, ಪರಾಠಾ, ಇತ್ಯಾದಿ

**

ಬಸಳೆಸೊಪ್ಪಿನ ಪತ್ರೊಡೆ

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಬಸಳೆಸೊಪ್ಪು – 4ಕಪ್‌, ಕುಸುಬಲಕ್ಕಿ – 2ಕಪ್‌, ತೆಂಗಿನಕಾಯಿತುರಿ – 2ಚಮಚ, ಹುಣಸೆಹಣ್ಣು – ಗೋಲಿ ಗಾತ್ರ, ಬ್ಯಾಡಗಿ ಮೆಣಸು – 6, ಕೊತ್ತಂಬರಿ – 2ಚಮಚ, ಉದ್ದಿನಬೇಳೆ – 2ಚಮಚ, ಜೀರಿಗೆ – 1/2ಚಮಚ, ಇಂಗು – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕುಸುಬಲಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನೀರನ್ನು ಬಸಿದಿಟ್ಟುಕೊಳ್ಳಿ. ಮಸಾಲೆ ವಸ್ತುಗಳನ್ನು ಹುರಿದಿಟ್ಟುಕೊಳ್ಳಿ. ನೆನೆಸಿದ ಅಕ್ಕಿ, ಹುರಿದ ಮಸಾಲೆ, ತೆಂಗಿನಕಾಯಿತುರಿ, ಹುಣಸೆಹಣ್ಣು – ಇಷ್ಟನ್ನು ಸೇರಿಸಿ ಮಿಕ್ಸಿಯಲ್ಲಿ ಇಡ್ಲಿಹಿಟ್ಟಿನ ಹದಕ್ಕೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹೆಚ್ಚಿದ ಬಸಳೆಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಈ ಹಿಟ್ಟನ್ನು ಬಾಳೆಯ ಎಲೆಯಲ್ಲಿ ಮಡಚಿ ಹಬೆಯಲ್ಲಿ ಬೇಯಿಸುವುದು ಸಾಂಪ್ರದಾಯಿಕ ವಿಧಾನ. ಬಾಳೆಯ ಎಲೆಯಲ್ಲಿ ಬೇಯಿಸಿದ ಪತ್ರೊಡೆಗೆ ವಿಶಿಷ್ಟ ಪರಿಮಳ ಬರುತ್ತದೆ. ಬಾಳೆಯ ಎಲೆಯ ಅನುಕೂಲವಿಲ್ಲದಿದ್ದರೆ, ಸಾದಾ ಇಡ್ಲಿಯಂತೆಯೂ ಬೇಯಿಸಬಹುದು.

ಬಿಸಿ-ಬಿಸಿ ಪತ್ರೊಡೆಗೆ ತೆಂಗಿನೆಣ್ಣೆ, ತುಪ್ಪ, ಚಟ್ನಿ,ಜೋನಿಬೆಲ್ಲ – ಹೀಗೆ ಅವರವರ ಆಯ್ಕೆಗೆ ತಕ್ಕಂತೆ ಸಿಹಿ ಅಥವಾ ಖಾರದ ನೆಂಚಿಕೆಯೊಂದಿಗೆ ಬೆಳಗಿನ ಉಪಾಹಾರಕ್ಕೆ ತಿನ್ನಲು ರುಚಿಯಾಗಿರುತ್ತದೆ. ಬೆಂದ ಪತ್ರೊಡೆಯನ್ನು ಪುಡಿ ಮಾಡಿ, ಕಾಯಿ-ಬೆಲ್ಲ ಸೇರಿಸಿ ಒಗ್ಗರಣೆ ಮಾಡಿದರೂ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.