ADVERTISEMENT

ಹೇಮಂತ ಋತುವಿನಲ್ಲಿ ಆಹಾರ

ಮಂಜುಶ್ರೀ ಎಂ.ಕಡಕೋಳ
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST
ಹೇಮಂತ ಋತುವಿನಲ್ಲಿ ಆಹಾರ
ಹೇಮಂತ ಋತುವಿನಲ್ಲಿ ಆಹಾರ   

ಚಿಕ್ಕ ಹಗಲು, ಸುದೀರ್ಘ ರಾತ್ರಿಯ ಚಳಿಗಾಲದಲ್ಲಿ ಚಳಿರಾಯ ಮೈಮುದುಡುವಂತೆ ಮಾಡುತ್ತಿದ್ದರೆ ರುಚಿ ರುಚಿಯಾದ ಆಹಾರವನ್ನು ನಾಲಿಗೆ ಬಯಸುತ್ತದೆ. ಮೈಮನಕ್ಕಷ್ಟೇ ಅಲ್ಲ ಜಿಹ್ವಾ ಚಾಪಲ್ಯಕ್ಕೂ ಮುದನೀಡುವ ಕಾಲವಿದು. ಚುಮುಚುಮು ಚಳಿಗೆ ಬಿಸಿಬಿಸಿಯಾದ ಆಹಾರ ಸೇವಿಸುವುದರ ಸುಖದ ಮುಂದೆ ಮತ್ಯಾವ ಸುಖವೂ ಬೇಡ ಅನ್ನಿಸುವುದು ಸಹಜ.

ನವೆಂಬರ್‌ನಿಂದ ಜನವರಿವರೆಗೆ ಕಾಡುವ ಹೇಮಂತ ಋತುವಿನಲ್ಲಿ ನಿರ್ದಿಷ್ಟವಾದ ಆಹಾರ ಸೇವಿಸಿದಲ್ಲಿ ಚಳಿಗಾಲ ಮೈ–ಮನದ ಆರೋಗ್ಯಕ್ಕೆ ಹಿತಕಾರಿಯಾಗಬಲ್ಲದು ಎನ್ನುತ್ತಾರೆ ವೈದ್ಯರು. ಅಂತೆಯೇ ಚಳಿಗಾಲದಲ್ಲಿ ಆಚರಿಸುವ ಆಹಾರ ಕ್ರಮವನ್ನು ಆಯುರ್ವೇದ ಚಳಿಗಾಲದ ಚರ್ಯೆ ಎಂತಲೂ ಹೇಳುತ್ತದೆ.

ಚಳಿಗಾಲದಲ್ಲಿ ಶರೀರದ ಶಾಖ ಹೆಚ್ಚು ಹೊರಗೆ ಹೋಗದ ಕಾರಣ, ಜಠರಾಗ್ನಿಯು ವೃದ್ಧಿಯಾಗಿ ಜೀರ್ಣಶಕ್ತಿ ಹೆಚ್ಚುತ್ತದೆ. ಹಾಗಾಗಿ, ದೇಹಕ್ಕೆ ಗಟ್ಟಿ ಪದಾರ್ಥ, ಪುಷ್ಟಿ ನೀಡುವ ಆಹಾರದ ಅಗತ್ಯವಿರುತ್ತದೆ. ಲಘು ಆಹಾರದಿಂದ ಶರೀರವು ಕ್ಷಯವಾಗಿ ವಾತ ವೃದ್ಧಿಯಾಗುವುದು ಎನ್ನುತ್ತಾರೆ ಡಾ.ನಾಗೇಂದ್ರ ಆಚಾರ್ಯ.

ADVERTISEMENT

ಚಳಿಗಾಲದಲ್ಲಿ ಮುಖ್ಯವಾಗಿ ಜಿಡ್ಡು, ಸಿಹಿ–ಹುಳಿ ಮತ್ತು ಲವಣ ರಸಗಳಿಂದ ಕೂಡಿರುವ ಆಹಾರ ದೇಹಕ್ಕೆ ಹಿತ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಕಬ್ಬು, ಬೆಲ್ಲ, ಸಕ್ಕರೆ, ಉದ್ದು ಮತ್ತು ನವಧಾನ್ಯಗಳ ಆಹಾರದಿಂದ ದೇಹ ಶಕ್ತಿದಾಯಕವಾಗುತ್ತದೆ. ಈ ಋತುವಿನಲ್ಲಿ ಪ್ರಕೃತಿಸಹಜವಾಗಿ ದೊರೆಯುವ ಹಣ್ಣು, ತರಕಾರಿ, ಸೊಪ್ಪುಗಳನ್ನು ಬಳಸುವುದು ದೇಹಾರೋಗ್ಯಕ್ಕೆ ಒಳಿತು ಎಂಬುದು ಅವರ ಸಲಹೆ.

ಮಾಂಸಾಹಾರಿಗಳು ಚಿಕನ್, ಮಟನ್‌ ಖಾದ್ಯ ಮತ್ತು ಸೂಪ್‌, ಮೀನಿನ ಖಾದ್ಯ ಸೇವಿಸುವುದರಿಂದ ದೇಹವನ್ನು ಬೆಚ್ಚಗಿಡಬಹುದು. ಮೊಟ್ಟೆ ಸೇವನೆಯೂ ದೇಹಕ್ಕೆ ಅಗತ್ಯ. ಜೀರ್ಣಶಕ್ತಿ ಹೆಚ್ಚುವುದರಿಂದ ಧಾರಾಳವಾಗಿ ಮಾಂಸ ಮತ್ತು ಗೆಡ್ಡೆ ಗೆಣಸುಗಳನ್ನು ಸೇವಿಸಬಹುದು. ಗೋಧಿಯಿಂದ ತಯಾರಾದ ಆಹಾರ ಕೂಡಾ ಚಳಿಗಾಲದಲ್ಲಿ ಹಿತಕಾರಿ ಎನ್ನುತ್ತಾರೆ ಡಾ.ವಿನುತಾ ಕಿರಣ್.

ಹೊಸ ಅಕ್ಕಿ ಬಳಸಲು ಚಳಿಗಾಲ ಉತ್ತಮ. ಚಳಿ ಹೆಚ್ಚೆಂದು ಕೆಲವರು ಕಡಿಮೆ ನೀರು ಕುಡಿಯುತ್ತಾರೆ. ಆದರೆ, ತಿಂದ ಆಹಾರ ಜೀರ್ಣವಾಗಲು ಹೇರಳವಾಗಿ ನೀರು ಕುಡಿಯಬೇಕು. ಬಿಸಿನೀರು ಕುಡಿಯುವುದು ಸೂಕ್ತ. ತಂಪು ಪಾನೀಯಗಳ ಸೇವನೆಯಿಂದ ವಾತ–ಕಫ ಹೆಚ್ಚುತ್ತದೆ. ಹಾಗಾಗಿ, ಇಂಥ ಪಾನೀಯ ಮತ್ತು ಆಹಾರವನ್ನು ವರ್ಜಿಸಬೇಕು ಎಂದು ವಿವರಿಸುತ್ತಾರೆ ಅವರು.

ಸಾಮಾನ್ಯವಾಗಿ ಚಳಿಗಾಲದಲ್ಲಿ ಕಿತ್ತಳೆ ತಿಂದರೆ ಶೀತವಾಗುತ್ತದೆ ಎಂದು ಕೆಲವರು ಈ ಹಣ್ಣನ್ನು ತಿನ್ನುವುದೇ ಇಲ್ಲ. ಆದರೆ, ಇದು ತಪ್ಪು. ಕಿತ್ತಳೆ ಮತ್ತು ಈ ಜಾತಿಗೆ ಸೇರಿದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಿಂದ ಶೀತ, ಕೆಮ್ಮುಬಾಧೆಯನ್ನು ಕಡಿಮೆ ಮಾಡಬಹುದು. ಅಂತೆಯೇ ನೆಲಗಡಲೆಯನ್ನು ಹುರಿದು, ಬೇಯಿಸಿ ಇಲ್ಲವೇ ಹಸಿಯಾಗಿಯೇ ತಿನ್ನಬಹುದು. ಇದು ದೇಹವನ್ನು ಬೆಚ್ಚಗಿಡಲು ಸಹಕಾರಿ. ಮೂಳೆಗಳ ಆರೋಗ್ಯಕ್ಕಾಗಿ ಪೇರಲ ಹಣ್ಣು, ದೇಹಕ್ಕೆ ಅಗತ್ಯವಾದ ಬಿ, ಸಿ, ಡಿ ಮತ್ತು ಕೆ ವಿಟಮಿನ್‌ಗಾಗಿ ಕ್ಯಾರೆಟ್ ಸೇವಿಸಬಹುದು ಎನ್ನುತ್ತಾರೆ ಡಾ.ವಿನುತಾ.

ಹಾಲು ಹಾಗೂ ತುಪ್ಪದಿಂದ ತಯಾರಿಸಿದ ಬೂದುಗುಂಬಳದ ಹಲ್ವಾ, ಸೋರೆಕಾಯಿ ಹಲ್ವಾ, ಪಾಯಸಗಳೂ ಈ ಋತುವಿನಲ್ಲಿ ಉತ್ತಮ. ದೇಹದ ಶಾಖ ಹೆಚ್ಚಿಸುವ ನುಗ್ಗೇಕಾಯಿ, ಹೀರೆಕಾಯಿ, ತೊಂಡೆಕಾಯಿ, ಪಪ್ಪಾಯಿ ಹಣ್ಣು, ಪಾಲಕ್, ಮೆಂತ್ಯ, ಸಬ್ಬಸಿಗೆ, ದಂಟು, ಹರಿವೆ ಸೊಪ್ಪುಗಳನ್ನು ಹೇಮಂತ ಋತುವಿನಲ್ಲಿ ಧಾರಾಳವಾಗಿ ಸೇವಿಸಬಹುದು. ಬೆಲ್ಲ, ಕಬ್ಬು, ಆಲೂಗಡ್ಡೆ, ಬಾಳೆದಿಂಡು, ಬೀಟ್‌ರೂಟ್‌, ಮೂಲಂಗಿ ಚಳಿಗಾಲದ ಆಹಾರದ ಪಟ್ಟಿಯಲ್ಲಿ ಅವಶ್ಯವಾಗಿರಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.